Homeಅಂಕಣಗಳುಎಲೆಮರೆಎಲೆಮರೆ 45: ಫೇಸ್‌ಬುಕ್‌ನಲ್ಲಿ ಆಕರ್ಷಕವಾಗಿ ನಮ್ಮೂರಿನ ಇತಿಹಾಸ ಹೇಳುವ ಧರ್ಮೇಂದ್ರಕುಮಾರ್!

ಎಲೆಮರೆ 45: ಫೇಸ್‌ಬುಕ್‌ನಲ್ಲಿ ಆಕರ್ಷಕವಾಗಿ ನಮ್ಮೂರಿನ ಇತಿಹಾಸ ಹೇಳುವ ಧರ್ಮೇಂದ್ರಕುಮಾರ್!

ಇವರ ಇತಿಹಾಸದ ತಿಳಿವು ಆರೋಗ್ಯಕರವಾಗಿದೆ. ಮತೀಯ ಚರಿತ್ರೆ ಕಟ್ಟುವಿಕೆ ಬಗ್ಗೆ ಎಚ್ಚರವಿದೆ. ಇವರು ಮೈಸೂರನ್ನು ಆಳಿದ ಹೈದರಾಲಿ, ಟಿಪ್ಪು ಕುರಿತಂತೆ ಅತ್ಯಂತ ಅಭಿಮಾನವನ್ನು ಹೊಂದಿದ್ದಾರೆ. ಈ ಅಭಿಮಾನ ಕುರುಡಲ್ಲ ಅವರ ಗಂಭೀರ ಅಧ್ಯಯನದಿಂದ ಬಂದುದು.

- Advertisement -
- Advertisement -

ಎಲೆಮರೆ 45: 

  • ಅರುಣ್ ಜೋಳದ ಕೂಡ್ಲಿಗಿ

ನಮಸ್ಕಾರ ಸ್ನೇಹಿತರೆ, ಸುಂದರ ಸೋಮವಾರದ ಶುಭೋದಯ, ಎಲ್ಲರೂ ಲೈಫ್‌ನ ಎಂಜಾಯ್ ಮಾಡ್ತಿದಿರಿ ಅಂತ ಅನ್ಕೊಂಡಿದಿನಿ, ಇವತ್ತು ಮತ್ತೊಂದು ಐತಿಹಾಸಿಕವಾದ, ರೋಚಕವಾದ ಜಾಗಕ್ಕೆ ಕರಕೊಂಡ್ ಬಂದಿದಿನಿ, ಬನ್ನಿ ಇದರ ವಿಶೇಷ ಏನು ಅಂತ ಹೇಳತೀನಿ, ಎಂದು ಹೇಳುತ್ತಲೇ, ಮೊಬೈಲ್ ಕ್ಯಾಮರಾ ಜೂಮ್ ಮಾಡ್ತಾ ಕ್ಲೋಸ್‌ಅಪ್‌ಲ್ಲಿ ಐತಿಹಾಸಿಕ ಕುರುಹೊಂದನ್ನ ತೋರಿಸ್ತಾ ಚರಿತ್ರೆ ಹೇಳೋಕೆ ಶುರು ಮಾಡ್ತಾರೆ. ಐದರಿಂದ ಹತ್ತು ನಿಮಿಷದ ವಿಡಿಯೋವನ್ನು ಒಂದೆರಡು ಗಂಟೆಯೊಳಗೆ ಐದಾರು ನೂರು ಜನ ನೋಡಿ, ಲೈಕು, ಕಮೆಂಟು, ಶೇರ್ ಮಾಡುತ್ತಾರೆ. ಹೀಗೆ ಕ್ಲಾಸ್ ರೂಮಲ್ಲಿ ಉಸಿರುಕಟ್ಟಿದ ‘ಇತಿಹಾಸ’ದ ಪಾಠಗಳನ್ನು ಬಯಲಿನಲ್ಲಿ ಜನಪ್ರಿಯಗೊಳಿಸಿದವರು ಧರ್ಮೇಂದ್ರಕುಮಾರ್ ಅರೇನಹಳ್ಳಿ. ನೀವು ಫೇಸ್‌ಬುಕ್ ಬಳಕೆದಾರರಾಗಿದ್ದರೆ, ಸಾಮಾನ್ಯವಾಗಿ ಮೈಸೂರಿನ ಕಥೆಗಳು ಪೇಜಲ್ಲಿ ಇವರ ಇತಿಹಾಸದ ಪಾಠಗಳನ್ನು ಕೇಳಿರುತ್ತೀರಿ. ಕೆ.ಆರ್.ಮಾರ್ಕೆಟ್ ಬಗೆಗೆ ಆರಂಭವಾದ ಇವರ ಪಯಣ ಈಚಿನ ಬೆಂಗಳೂರು ಸಮೀಪದ ಐತಿಹಾಸಿಕ ಬಿಸಗೂರನ್ನು ಪರಿಚಯಿಸುವ ತನಕ ಅವರ ಫೇಸ್‌ಬುಕ್ ಪೇಜಲ್ಲಿ ಎಂಬತ್ತು ವೀಡಿಯೋಗಳಿವೆ.

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಧರ್ಮೇಂದ್ರ ಅವರು ಹಲವು ವರ್ಷಗಳ ಕಾಲ ಸೌದಿ, ದುಬೈ ಒಳಗೊಂಡಂತೆ ಗಲ್ಫ್ ಕಂಟ್ರಿಯಲ್ಲಿ ದುಡಿದು, 2013 ರಲ್ಲಿ ಬೆಂಗಳೂರಿಗೆ ಬಂದು ಕೆಲಸ ಶುರುಮಾಡಿದರು. ಇದೀಗ ಸ್ವಂತ ಕಾಂಟ್ರಾಕ್ಟರ್. ಧರ್ಮೇಂದ್ರ ಅವರ ತಂದೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಅರೇನಹಳ್ಳಿಯವರಾದರೂ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಹತ್ತಿರ ಧರ್ಮೇಂದ್ರ ಅವರ ತಾತ ಡಾಕ್ಟರ್ ಆಗಿದ್ದ ಕಾರಣ ಮಹಾರಾಜರು ವೈದ್ಯರಿಗಾಗಿ ಕೊಟ್ಟ ಮನೆ ಈಗಲೂ ಮೈಸೂರಲ್ಲಿದೆ. ಈ ಮನೆಯಲ್ಲಿ ಧರ್ಮೇಂದ್ರ ಆಡಿ ಬೆಳೆಯುತ್ತಾರೆ. ಇವರು ಇತಿಹಾಸದ ಕುರಿತಂತೆ ಅಕಾಡೆಮಿಕ್ ಅಧ್ಯಯನ ಮಾಡಿದವರಲ್ಲ, ತಮ್ಮ ಹವ್ಯಾಸಕ್ಕಾಗಿ ಇತಿಹಾಸ ಓದಿದವರು. ಇದೀಗ ವಿಶ್ವವಿದ್ಯಾಲಯಗಳ ಯಾವ ಅಕಾಡೆಮಿಕ್ ಇತಿಹಾಸ ತಜ್ಞರಿಗೆ ಕಡಿಮೆ ಇಲ್ಲದಂತೆ ನೆನಪಿನಿಂದಲೆ ಕರ್ನಾಟಕ ಇತಿಹಾಸದ ಹಲವು ಸಂಗತಿಗಳ ಬಗ್ಗೆ ನಿರರ್ಗಳವಾಗಿ ಚರ್ಚಿಸುತ್ತಾರೆ.

ನಾಡ ಪ್ರಭು… ಆಧುನಿಕ ಬೆಂಗಳೂರಿನ ಜನಕ… ಧರ್ಮಭೀರು ಹಿರಿಯ ಕೆಂಪೇಗೌಡರನ್ನು ಅತ್ಯಂತ ಪ್ರೀತಿ ಗೌರವಾದರಗಳಿಂದ ನೆನೆಯುತ್ತಾ…

Posted by ಮೈಸೂರಿನ ಕಥೆಗಳು – Mysoorina Kathe galu on Saturday, June 27, 2020

ಧರ್ಮೇಂದ್ರ ಅವರು ಸೋಷಿಯಲ್ ಮೀಡಿಯಾದ ಪ್ರವೃತ್ತಿಯನ್ನು ಚೆನ್ನಾಗಿ ಗ್ರಹಿಸಿದ್ದಾರೆ. ಆದರೆ ಆ ಐದಾರು ನಿಮಿಷದ ವೀಡಿಯೋ ಮಾಡಲು ಅವರು ಪಡುವ ಶ್ರಮ ಹಲವಾರು ಗಂಟೆಗಳದ್ದು, ಕೆಲವೊಮ್ಮೆ ಹಲವಾರು ದಿನಗಳದ್ದೂ ಕೂಡ. ಆರಂಭಕ್ಕೆ ರೋಚಕವಾಗಿ ಕುತೂಹಲ ಕೆರಳಿಸಿ, ಅತೀವ ಆಸಕ್ತಿ ಮೂಡಿಸಿ, ನಿಧಾನಕ್ಕೆ ಚರಿತ್ರೆಯ ಒಂದೊಂದೆ ಪೊರೆಬಿಚ್ಚುತ್ತಾರೆ. ವಿಡೀಯೋದ ಆರಂಭದ ರೋಚಕತೆ ನೋಡುಗರು
ಸ್ಕ್ರಾಲ್ ಮಾಡದಂತೆ ತಡೆಯುತ್ತದೆ. ಈ ಅರ್ಥದಲ್ಲಿ ಇತಿಹಾಸವನ್ನು ಡಿಟೆಕ್ಟಿವ್ ಮಾದರಿಯಲ್ಲಿ ನಿರೂಪಿಸುತ್ತಾರೆ. ಶಾಸನದ ಪಠ್ಯಗಳನ್ನು ಹೊರತುಪಡಿಸಿ ಯಾವುದೇ ಟಿಪ್ಪಣಿಗಳನ್ನು ಹಿಡಿಯದೆ, ನೆನಪಿನಿಂದಲೇ ವಿವರಿಸುತ್ತಾರೆ. ಇದು ಧರ್ಮೇಂದ್ರ ಅವರ ಪೂರ್ವಸಿದ್ಧತೆ ಮತ್ತು ಪರಿಶ್ರಮವನ್ನು ತೋರಿಸುತ್ತೆ. ನಿರೂಪಣೆಯ ಬಾಡಿಲಾಂಗ್ವೇಜ್ ಕೂಡ ವಿಶಿಷ್ಟವಾಗಿದೆ. ಇತಿಹಾಸದ ದಾಖಲೆಗಳನ್ನು ಕೇಳುಗರಿಗೆ ಲೋಡ್ ಮಾಡಬಾರದು ಎನ್ನುತ್ತಾರೆ. ಈ ಇತಿಹಾಸದ ವೀಡಿಯೋ ನೋಡಿದ ಜನರು ಕುತೂಹಲದಿಂದ ಹೆಚ್ಚು ತಿಳಿಯಲು ಧರ್ಮೇಂದ್ರ ಅವರಿಗೆ ಮೆಸೇಜ್ ಮಾಡಿದರೆ, ಮೂಲ ಆಕರಗಳ ಬಗ್ಗೆ ತಿಳಿಸಿ, ಇತಿಹಾಸದ ಓದಿಗೆ ಪ್ರೇರೇಪಿಸುತ್ತಾರೆ. ಹೀಗಾಗಿ ಈ ಪುಟ್ಟಪುಟ್ಟ ವೀಡಿಯೋಗಳು ಜನಸಾಮಾನ್ಯರಲ್ಲಿ ತಮ್ಮ ಸುತ್ತಮುತ್ತಣ ಚರಿತ್ರೆಯ ಬಗ್ಗೆ ಕುತೂಹಲವನ್ನು ಮೂಡಿಸುತ್ತವೆ. ಈ ಅರ್ಥದಲ್ಲಿ ಧರ್ಮೇಂದ್ರ ಅವರು ಬಯಲು ಆಲಯದ ಇತಿಹಾಸದ ಮೇಷ್ಟ್ರು.

ಬೆಂಜಮಿನ್ ಲೂಯಿಸ್ ರೈಸ್ ಅವರನ್ನು ಧರ್ಮೇಂದ್ರ ಅವರು ಹೆಡ್ ಮಾಸ್ಟರ್ ಎಂದೇ
ಕರೆಯುತ್ತಾರೆ. ರೈಸ್ ಅವರ ಶಾಸನ ಅಧ್ಯಯನಗಳನ್ನು ಓದಿಕೊಂಡಿದ್ದಾರೆ. ಇತಿಹಾಸದ ಆಕರಗಳ ಬಗ್ಗೆ, ಶಾಸನಗಳ ಬಗ್ಗೆ, ವಾಸ್ತುಶೈಲಿಯ ಬಗ್ಗೆ ಸೂಕ್ಷ್ಮವಾದ ತಿಳಿವಳಿಕೆಯಿದೆ.
ಗೆಜೆಟಿಯರ್, ಶಾಸನ ಸಂಪುಟಗಳು, ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್, ಮಿಥಿಕ್ ಸೊಸೈಟಿ ಮುಂತಾದೆಡೆ ನಿರಂತರವಾಗಿ ಆಕರಗಳಿಗಾಗಿ ತಡಕಾಡುತ್ತಾರೆ. ಇವರು ಇತಿಹಾಸವನ್ನು ಇಂಟರ್‌ನೆಟ್ ಪೂರ್ವ ಮತ್ತು ನಂತರದ ಚರಿತ್ರೆ ಎಂದು ವಿಭಾಗಿಸುತ್ತಾರೆ. ಅಂತರ್ಜಾಲದ ನೆರವಿನಿಂದ ವಿಶೇಷವಾಗಿ ಬ್ರಿಟಿಷ್ ಆಡಳಿತದ ದಾಖಲೆಗಳನ್ನು ಬ್ರಿಟಿಷ್ ಲೈಬ್ರರಿ, ಮುಂತಾದ ವೆಬ್‌ಸೈಟುಗಳಿಂದ ಡೌನ್‌ಲೋಡ್ ಮಾಡಬಹುದು. ಹಿಂದೆ ಇಂಗ್ಲೆಂಡಿಗೆ ಹೋಗಿ ಬ್ರಿಟಿಷ್ ದಾಖಲೆಗಳನ್ನು ಸಾಮಾನ್ಯರು ಓದೋಕೆ,
ಪರಿಶೀಲಿಸೋಕೆ ಆಗುತ್ತಿರಲಿಲ್ಲ. ಆದರೆ ಇಂದು ಬ್ರಿಟಿಷರ ಎಲ್ಲಾ ದಾಖಲೆಗಳನ್ನು ಕೆಲವು ವೆಬ್‌ಸೈಟುಗಳಿಗೆ ಹಣ ಕಟ್ಟಿಯಾದರೂ ಪಡೆಯಬಹುದಾಗಿದೆ, ಹಾಗಾಗಿ ನನ್ನಂಥವರು ಇತಿಹಾಸದ ಬಗ್ಗೆ ತಿಳಿದುಕೊಂಡು ಮಾತನಾಡಲು ಸಾಧ್ಯವಾಗಿದೆ ಎನ್ನುತ್ತಾರೆ.

ನಾಗರಹಾವು ಸಿನೆಮಾದಲ್ಲಿ ಒನಕೆ ಓಬವ್ವ ಹೈದರನ ಸೈನಿಕರಿಂದ ವೀರಮರಣವನ್ನಪ್ಪುತ್ತಾಳೆ. ಆದರೆ ವಾಸ್ತವವಾಗಿ ಓಬವ್ವ ಈ ಯುದ್ಧದ ನಂತರವೂ ಹಲವು ಕಾಲ ಬದುಕಿ ಸಹಜವಾಗಿ ಸಾಯುತ್ತಾಳೆ. ಇದು ಬಹುತೇಕರಿಗೆ ಗೊತ್ತಿಲ್ಲ. ಹೀಗಾಗಿ ಜನರನ್ನು ಸಿನಿಮಾ ಇತಿಹಾಸಪ್ರಜ್ಞೆಯಿಂದ ಹೊರತರಬೇಕು ಎನ್ನುವುದು ಧರ್ಮೇಂದ್ರ ಅವರ ಕಾಳಜಿಯಾಗಿದೆ. ಇವರ ವಿವರಣೆಗಳಲ್ಲಿ ಕರ್ನಾಟಕದ ರಾಜಮಹಾರಾಜರುಗಳ ಚರಿತ್ರೆ ಇದ್ದರೂ, ಸ್ಥಳೀಯ ಚರಿತ್ರೆಯ ಬಗ್ಗೆ ಅರಿವು ಮೂಡಿಸುತ್ತಾರೆ. ಅಂತೆಯೇ ಹೆಚ್ಚು ಚರ್ಚೆಗೊಳಪಡದ ಸಂಗತಿಗಳನ್ನು ಹೆಕ್ಕಿ ತೆಗೆದು ಅಚ್ಚರಿ ಮೂಡಿಸುತ್ತಾರೆ. ಹಾಗಾಗಿ ಸ್ಥಳೀಯ ಪಾಳೆಯಗಾರ, ಮಹಾಸತಿ, ವೀರರ ಬಗ್ಗೆ, ಶಾಸನ ಕವಿಗಳ ಬಗ್ಗೆ, ರಾಜಪರಿವಾರದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿದ್ದವರ ಬಗ್ಗೆ, ಈಗಾಗಲೆ ಜನಪ್ರಿಯಗೊಂಡ ಇತಿಹಾಸದ ಸುಳ್ಳುಗಳ ಬಗ್ಗೆ, ಸಾಮಾನ್ಯರ ಅಸಮಾನ್ಯ ಸಾಧನೆಗಳ ಬಗ್ಗೆ ಗಮನ ಸೆಳೆಯುತ್ತಾರೆ. ಪ್ರತಿ ಊರಿಗೊಂದು ಚರಿತ್ರೆಯಿದೆ. ಈ ಚರಿತ್ರೆಯನ್ನು ತಿಳಿದು, ಆ ಆಕರಗಳನ್ನು ಸಂರಕ್ಷಿಸಬೇಕು ಎನ್ನುವುದು ಇವರ ವೀಡಿಯೋಗಳ ಬಹುಮುಖ್ಯ ಕಾಳಜಿ.

ಮೈಸೂರು ಸಂಸ್ಥಾನದ ಇತಿಹಾಸ…ಮೊದಲನೇ ವಿಶ್ವ ಮಹಾ ಯುದ್ಧ… ರಾಜರ್ಷಿ ನಾಲ್ವಡಿಯವರ ಮೇಲಣ ಇಸ್ರೇಲಿಗಳ ಪ್ರೀತಿ ಗೌರವ… ಕರ್ನಲ್ ಲಿಂಗರಾಜ ಅರಸು… ಕರ್ನಲ್ ದೇಸಿರಾಜ ಅರಸು….

Posted by ಮೈಸೂರಿನ ಕಥೆಗಳು – Mysoorina Kathe galu on Sunday, August 4, 2019

ಇವರ ಇತಿಹಾಸದ ತಿಳಿವು ಆರೋಗ್ಯಕರವಾಗಿದೆ. ಮತೀಯ ಚರಿತ್ರೆ ಕಟ್ಟುವಿಕೆ ಬಗ್ಗೆ ಎಚ್ಚರವಿದೆ. ಇವರು ಮೈಸೂರನ್ನು ಆಳಿದ ಹೈದರಾಲಿ, ಟಿಪ್ಪು ಕುರಿತಂತೆ ಅತ್ಯಂತ ಅಭಿಮಾನವನ್ನು ಹೊಂದಿದ್ದಾರೆ. ಈ ಅಭಿಮಾನ ಕುರುಡಲ್ಲ ಅವರ ಗಂಭೀರ ಅಧ್ಯಯನದಿಂದ ಬಂದುದು. ನಮ್ಮ ಆಸ್ಥಾನದ ಚರಿತ್ರೆಕಾರರು ಬಹುಪಾಲು ರಾಜರನ್ನು ಮೆಚ್ಚಿಸುವ ಚರಿತ್ರೆ ಕಟ್ಟಿದ್ದಾರೆ, ಆದರೆ ಬ್ರಿಟಿಷ್ ಇತಿಹಾಸಕಾರರು ನೈಜವಾಗಿ ದಾಖಲಿಸಿದ್ದಾರೆ ಎನ್ನುತ್ತಾರೆ. ಬ್ರಿಟಿಷರು ದೋಚಿದ್ದು ಭಾರತದ ಜನಸಾಮಾನ್ಯರನ್ನು ಕೊಳ್ಳೆಹೊಡೆದು ಸಂಪತ್ತನ್ನು ಗುಡ್ಡೆಹಾಕಿಕೊಂಡಿದ್ದ ರಾಜರುಗಳನ್ನೇ ಹೊರತು, ನೇರವಾಗಿ ಜನಸಾಮಾನ್ಯರನ್ನಲ್ಲ ಎನ್ನುತ್ತಾರೆ. ಬ್ರಿಟಿಷರು ದೋಚಿದ್ದಷ್ಟೇ ಅಲ್ಲ. ಈ ದೇಶಕ್ಕೆ ಕೊಟ್ಟ ಕೊಡುಗೆಗಳೂ ಅಪಾರ. ನಾವು ನೋಡಿದ ಬ್ರಿಟಿಷರೆಂಬ ನಾಣ್ಯಕ್ಕೆ ಮತ್ತೊಂದು ಮುಖವೂ ಇದೆ ಎನ್ನುವುದು ಧರ್ಮೇಂದ್ರ ಅವರ ನಿಲುವು.

ಮೈಸೂರಿನ ಅರಮನೆಯ ಆವರಣದಲ್ಲಿ ಆಡಿ ಬೆಳೆದ ಇವರಿಗೆ ಸಹಜವಾಗಿ ಮೈಸೂರಿನ ಚರಿತ್ರೆಯ ಜತೆ ಒಂದು ಆಸಕ್ತಿ ಬೆಳೆಯುತ್ತದೆ. ಈ ಹುಡುಕಾಟ ಕರ್ನಾಟಕ ಚರಿತ್ರೆಯ ಬೇರೆ ಬೇರೆ ಸಂಗತಿಗಳ ಜತೆ ತಳಕು ಹಾಕಿಕೊಳ್ಳುತ್ತದೆ. ಮೈಸೂರಿನ ಕುರಿತಂತೆ ‘ಮರೆತುಹೋದ ಮೈಸೂರಿನ ಪುಟಗಳು’ ಎನ್ನುವ ಪುಸ್ತಕವನ್ನೂ ಪ್ರಕಟಿಸಿದ್ದಾರೆ. ಇದಾದನಂತರ ಓದುಗರು ಕಡಿಮೆಯಾಗಿದ್ದಾರೆ, ಯಾಕೆ ಸೋಷಿಯಲ್ ಮೀಡಿಯಾದವನ್ನು ಬಳಸಬಾರದು ಎಂದು ಆರಂಭಿಸಿದ ಪ್ರಯೋಗ ಇದೀಗ ಜನಮೆಚ್ಚಿನ ಕಾರ್ಯಕ್ರಮವಾಗಿ ಬದಲಾಗಿದೆ. ಈ ಹವ್ಯಾಸಕ್ಕಾಗಿ ಖರ್ಚಾದ ಸ್ವಂತ ದುಡಿಮೆಯ ಹಣದ ಲೆಕ್ಕವಿಟ್ಟಿಲ್ಲ. ಮನೆಯವರು ಇದಕ್ಕೆ ತಕರಾರು ತೆಗೆಯದೆ ಪ್ರೋತ್ಸಾಹಿಸಿ ಹುರಿದುಂಬಿಸಿದ್ದಾರೆ. ಧರ್ಮೇಂದ್ರ ಅವರು ಇದೀಗ ಹೆಂಡತಿ ಸುನೀತ, ಸಾಫ್ಟ್‌ವೇರ್ ಎಂಜಿನಿಯರ್ ಆದ ಮಗಳು ಭುವನೇಶ್ವರಿ ಅವರೊಂದಿಗೆ ಬೆಂಗಳೂರಿನಲ್ಲಿ ಮಲ್ಲತಳ್ಳಿಯಲ್ಲಿ ನೆಲೆಸಿದ್ದಾರೆ. ಬಹುಪಾಲು ಜಡ್ಡುಗಟ್ಟಿದ ವಿಶ್ವವಿದ್ಯಾಲಯಗಳ ಇತಿಹಾಸ, ಶಾಸನ, ಪುರಾತತ್ವ ವಿಭಾಗಗಳ ಪ್ರಾಧ್ಯಾಪಕರುಗಳು, ಸಂಶೋಧನ ವಿದ್ಯಾರ್ಥಿಗಳು ಧರ್ಮೇಂದ್ರ ಅವರಿಂದ ಹೊಸ ಚೈತನ್ಯ ಪಡೆಯಬೇಕಾಗಿದೆ. ಇವರ ಪುಟಿಯುವ ಜೀವನೋತ್ಸಾಹ ಮತ್ತಷ್ಟು ಚೈತನ್ಯದಾಯಕವಾಗಿರಲಿ ಎಂದು ಪತ್ರಿಕೆ ಶುಭ ಹಾರೈಸುತ್ತದೆ.

ಅವರ ಯೂಟ್ಯೂಬ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

ಅವರ ಫೇಸ್ಬುಕ್ ಪೇಜ್‌ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...