Homeಕರ್ನಾಟಕಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಅನುಷ್ಠಾನ: ಶ್ರೀನಿವಾಸ ಪೂಜಾರಿ

ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಅನುಷ್ಠಾನ: ಶ್ರೀನಿವಾಸ ಪೂಜಾರಿ

- Advertisement -
- Advertisement -

ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ (ಮತಾಂತರ ನಿಷೇಧ ಕಾಯ್ದೆ) ಜಾರಿಗೆ ಮೇಲ್ಮನೆಯಲ್ಲಿ ಬಹುಮತ ದೊರೆಯದ ಕಾರಣ, ಸಚಿವ ಸಂಪುಟದಲ್ಲಿ ಈ ಕುರಿತು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಾಯ್ದೆ ಅನುಷ್ಠಾನಗೊಳಿಸುತ್ತೇವೆ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಂಗಳೂರಿನಲ್ಲಿ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿರುವ ಅವರು, “ಕೆಳಮನೆಯಲ್ಲಿ ಕಾಯ್ದೆಗೆ ಬಹುಮತ ದೊರೆತಿದ್ದು, ಅದನ್ನು ಮಂಡಿಸಲಾಗಿದೆ. ಮೇಲ್ಮನೆಯಲ್ಲಿ ಬಹುಮತ ದೊರೆಯದ ಕಾರಣ ಪ್ರಜಾಪ್ರಭುತ್ವದಲ್ಲಿ ಬಹುಮತ ಪಡೆದು, ಜನವರಿ ವೇಳೆಗೆ ಮೇಲ್ಮನೆಯಲ್ಲಿ ಕಾಯ್ದೆ ಮಂಡಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಈ ಕಾಯ್ದೆ ಎಲ್ಲಾ ಧರ್ಮ, ಜಾತಿ, ಪಕ್ಷದವರಿಗೂ ಅನ್ವಯಿಸುತ್ತದೆ. ಹಾಗಾಗಿ ಅದನ್ನು ಪ್ರತಿಯೊಬ್ಬರೂ ಹೆಮ್ಮೆಯಿಂದ ಸ್ವಾಗತಿಸಬೇಕು. ವಿರೋಧಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕಾಯ್ದೆಯನ್ನು ವಿರೋಧಿಸುವವರು ರಾಜಕೀಯ ಕಾರಣಗಳಿಗಾಗಿ ಮಾತ್ರ ವಿರೋಧಿಸುತ್ತಾರೆ. ಆದರೆ ಮಾನಸಿಕವಾಗಿ ಅವರಿಗೂ ಈ ಕಾಯ್ದೆಗೆ ಒಪ್ಪಿಗೆ ಇದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ವಿವಾದಿತ ಮತಾಂತರ ನಿಷೇಧ ಮಸೂದೆಯನ್ನು ಕೊನೆಗೂ ವಿಧಾನ ಪರಿಷತ್‌ನಲ್ಲಿ ಮಂಡಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅದು ವಿಧಾನ ಸಭೆಯಲ್ಲಿ ಅಂಗೀಕಾರವಾಗಿದ್ದರೂ ಪರಿಷತ್‌ನಲ್ಲಿ ಮಂಡನೆಯಾಗದ ಕಾರಣ ಕಾಯ್ದೆಯಾಗಿ ರೂಪುಗೊಳ್ಳಲು ಸಾಧ್ಯವಿಲ್ಲ. 6 ತಿಂಗಳ ಒಳಗಾಗಿ ಪರಿಷತ್‌ನಲ್ಲಿ ಮಂಡನೆಯಾಗಿ, ಬಹುಮತದಿಂದ ಅಂಗೀಕಾರಗೊಂಡು, ರಾಜ್ಯಪಾಲರ ಸಹಿಯ ನಂತರವಷ್ಟೇ ಕಾಯ್ದೆಯಾಗಲು ಸಾಧ್ಯ. ಹೀಗಿರುವಾಗ ಸರ್ಕಾರ ಸರ್ಕಾರದ ಮುಂದಿನ ನಡೆಯೇನು ಎಂಬ ಪ್ರಶ್ನೆ ಎದ್ದಿದೆ.

ಸರ್ಕಾರವು ಅದನ್ನು ಪರಿಷತ್‌ನಲ್ಲಿ ಮಂಡಿಸದಿರಲು ಮುಖ್ಯ ಕಾರಣ ಬಹುಮತದ ಕೊರತೆ. ಅಲ್ಲದೆ ಪಕ್ಷದಲ್ಲಿನ ಕೆಲವರ ವಿರೋಧ ಸಹ ಸರ್ಕಾರಕ್ಕೆ ತಲೆನೋವಾಗಿದೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ಸದಸ್ಯರನ್ನು ನೆಚ್ಚಿಕೊಂಡು ಮಸೂದೆ ಮಂಡಿಸಿದರೆ ಸೋಲಾಗಬಹುದೆಂಬ ಕಾರಣಕ್ಕೆ ಮಂಡನೆ ಮಾಡಿಲ್ಲ. ಬದಲಿಗೆ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಹೇಳಿ ಅಧಿವೇಶನ ಅಂತ್ಯಗೊಳಿಸಲಾಗಿದೆ.

ಸದನದ ಕೊನೆ ದಿನ ಉಪಸಭಾಪತಿ ಪ್ರಾಣೇಶ್‌ ಮತ್ತು ಬಿಜೆಪಿ ಸದಸ್ಯರಾದ ರುದ್ರೇಗೌಡರವರು ಬೆಳಗಾವಿಯಿಂದ ಹೊರಟು ದಾವಣಗೆರೆ ತಲುಪಿದ್ದರು. ಅವರು ತುರ್ತಾಗಿ ವಾಪಸ್ ಬೆಳಗಾವಿಯ ಸುವರ್ಣ ಸೌಧಕ್ಕೆ ಬರುವಂತೆ ಸೂಚಿಸಲಾಗಿತ್ತು. ಅವರು ಬರುವಿಕೆಗಾಗಿ ಆಡಳಿತ ಪಕ್ಷ ಕಾಯುತ್ತಿತ್ತು. ಅದೇ ಸಂದರ್ಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಅಧಿವೇಶನ ಆರಂಭಿಸುವಂತೆ ಸಭಾಪತಿ ಕೊಠಡಿಗೆ ತೆರಳಿ ಒತ್ತಾಯಿಸುತ್ತಿದ್ದರು. ಆದರೆ ಸಮಯ ಮೀರುತ್ತಿತ್ತು. ಇನ್ನೊಂದೆಡೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್‌ರವರು ಬಹಿರಂಗವಾಗಿಯೇ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬಹುಮತವಿಲ್ಲದಿದ್ದಾಗ ಮಸೂದೆ ಮಂಡಿಸಿ ಅದಕ್ಕೆ ಸೋಲಾಗುವುದರಿಂದ ತಪ್ಪಿಸಿಕೊಳ್ಳಲು ಸರ್ಕಾರ ಹಿಂತೆಗೆದುಕೊಂಡಿದೆ.

ಸುಗ್ರೀವಾಜ್ಞೆ ಮೂಲಕ ಜಾರಿ?

ಮತಾಂತರ ನಿಷೇಧ ಮಸೂದೆಯ ಕುರಿತು ಪ್ರತಿಪಕ್ಷ ಕಾಂಗ್ರೆಸ್ ಮತ್ತು ನೂರಾರು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಆದರೆ ಸರ್ಕಾರ ಏನಾದರೂ ಮಾಡಿ ಅದನ್ನು ಜಾರಿಗೊಳಿಸಿಯೇ ಸಿದ್ದ ಎಂದು ಹಠ ಹಿಡಿದಿದೆ. ಮುಂದಿನ ಅಧಿವೇಶನ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆಯಿದೆ. ಅಲ್ಲಿಯವರೆಗೂ ಕಾಯದ ಸರ್ಕಾರ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿ ರಾಜ್ಯಪಾಲರ ಒಪ್ಪಿಗೆ ಪಡೆದಲ್ಲಿ ಕಾಯ್ದೆಯ ಅಂಶಗಳನ್ನು ಹೀಗಿನಿಂದಲೇ ಜಾರಿಗೊಳಿಸಬಹುದು ಎಂಬ ಚರ್ಚೆಗಳಾಗಿವೆ. ಸಚಿವ ಪೂಜಾರಿಯವರ ಹೇಳಿಕೆ ಈ ಚರ್ಚೆಯ ಹಿನ್ನೆಲೆಯಲ್ಲಿ ಹೊರಬಿದ್ದಿದೆ. ಆದರೆ 6 ತಿಂಗಳೊಳಗೆ ಸದನದಲ್ಲಿ ಮಂಡಿಸಿ ಬಹುಮತದಿಂದ ಅಂಗೀಕರಿಸಬೇಕಾಗುತ್ತದೆ.

ಮುಂದಿನ ಅಧಿವೇಶನದಲ್ಲಿ ಮಂಡನೆ

ಮುಂದಿನ ವಿಧಾನ ಪರಿಷತ್ ಅಧಿವೇಶನದಲ್ಲಿ ಮಂಡಿಸಿ ಹೇಗಾದರೂ ಬಹುಮತವನ್ನು ಒಟ್ಟುಗೂಡಿಸಿ ಮಸೂದೆಯನ್ನು ಪಾಸ್ ಮಾಡುವುದು ಸರ್ಕಾರದ ಎರಡನೇ ಆಯ್ಕೆಯಾಗಿದೆ. ಸದ್ಯ ಬಿಜೆಪಿಗೆ ವಿಧಾನ ಪರಿಷತ್‌ನಲ್ಲಿ ಬಹುಮತಕ್ಕೆ ಸದ್ಯ ಒಬ್ಬ ಸದಸ್ಯರ ಕೊರತೆಯಿದೆ. ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿತಯಾಗಿ ಜಯ ಗಳಿಸಿದ್ದಾರೆ. ಅವರನ್ನು ಬಿಜೆಪಿ ತನ್ನೆಡೆಗೆ ಸೆಳೆದುಕೊಳ್ಳುವ ಕಸರತ್ತು ಮಾಡಬಹುದು. ಇಲ್ಲವೇ ಕೆಲ ಜೆಡಿಎಸ್ ಸದಸ್ಯರನ್ನು ಮನವೊಲಿಸುವ ಕೆಲಸ ಮಾಡಬಹುದು.

ಪ್ರತಿಪಕ್ಷ ಕಾಂಗ್ರೆಸ್ ಕಾರ್ಯತಂತ್ರ

ಸದ್ಯಕ್ಕೆ ವಿಧಾನಪರಿಷತ್‌ನಲ್ಲಿ ಮಸೂದೆ ಜಾರಿಯಾಗದಂತೆ ತಡೆಯುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಅದು ಸಹ ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತ ಸಿಗದಂತೆ ನೋಡಿಕೊಳ್ಳುವ ಕಾರ್ಯತಂತ್ರ ರೂಪಿಸಲಿದೆ. ಪಕ್ಷೇತರ ಶಾಸಕರನ್ನು ತನ್ನೆಡೆಗೆ ಸೆಳೆದುಕೊಳ್ಳುವುದು, ಜೆಡಿಎಸ್ ಮೇಲೆ ಒತ್ತಡ ತರುವುದು ಸೇರಿ ಹಲವು ಮಾರ್ಗಗಳನ್ನು ಅನುಸರಿಸಬಹುದಾಗಿದೆ.

ಜನಾಭಿಪ್ರಾಯ

ಈ ಮಸೂದೆಯನ್ನು ನೂರಾರು ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿವೆ. ಅವು ಮತ್ತಷ್ಟು ಜನಾಭಿಪ್ರಾಯ ರೂಪಿಸುವ ಮೂಲಕ ಮಸೂದೆ ಜಾರಿಯಾಗದಂತೆ ಸರ್ಕಾರದ ಮೇಲೆ ಒತ್ತಡ ತರುವ ಸಾಧ್ಯತೆಯು ಇದೆ.


ಇದನ್ನೂ ಓದಿರಿ: ‘ಮತಾಂತರದ ತಂತ್ರ’ ಎಂದು ಆರೋಪಿಸಿ ಸಾಂತಕ್ಲಾಸ್‌ ಪ್ರತಿಕೃತಿ ದಹಿಸಿದ ಬಲಪಂಥೀಯರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಆಡಳಿತದ 10 ವರ್ಷಗಳಲ್ಲಿ ‘ED’ ದಾಳಿಗಳಲ್ಲಿ ಹೆಚ್ಚಳ: ವರದಿ

0
ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ ಮತ್ತು, ಆಸ್ತಿಮುಟ್ಟುಗೋಲು ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಬಿಜೆಪಿ ಸರಕಾರ 'ಇಡಿ' ಮತ್ತು ಸಿಬಿಐಯಂತಹ ಸರಕಾರಿ ಸಂಸ್ಥೆಗಳನ್ನು ಪ್ರತಿಪಕ್ಷಗಳ...