ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 6 ಸಾವಿರಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅವರಿಗೆ ಗೊತ್ತಿಲ್ಲದಂತೆ ಅಳಿಸಲು ಪ್ರಯತ್ನಿಸಿರುವುದು ಚರ್ಚೆಯಲ್ಲಿರುವಾಗಲೇ, ಮತದಾರರ ಪಟ್ಟಿಯ ಪರಿಷ್ಕರಣೆಯ ವಿಷಯದಲ್ಲಿ ಕೇಂದ್ರ ಬಿಂದುವಾಗಿರುವ ಬಿಹಾರದಲ್ಲೂ, ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬಿಹಾರದ ಢಾಕಾ ಕ್ಷೇತ್ರದಲ್ಲಿ ಸುಮಾರು 80,000 ಮುಸ್ಲಿಂ ಮತದಾರರನ್ನು ‘ಭಾರತೀಯ ನಾಗರಿಕರಲ್ಲ’ ಎಂದು ಸುಳ್ಳು ಹೇಳುವ ಮೂಲಕ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪದೇ ಪದೇ ಪ್ರಯತ್ನಗಳು ನಡೆದಿರುವುದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ.
ಮತದಾರರ ಹೆಸರುಗಳನ್ನು ಅಳಿಸಲು ಒಂದು ಅರ್ಜಿಯನ್ನು ಬಿಜೆಪಿಯ ರಾಜ್ಯ ಪ್ರಧಾನ ಕಚೇರಿಯ ಲೆಟರ್‌ಹೆಡ್‌ನಲ್ಲಿ ಸಲ್ಲಿಸಲಾಗಿದೆ ಮತ್ತು ಇನ್ನೊಂದು ಅರ್ಜಿಯನ್ನು ಬಿಜೆಪಿಯ ಢಾಕಾ ಶಾಸಕರ ಆಪ್ತ ಸಹಾಯಕನ ಹೆಸರಿನಲ್ಲಿ ಸಲ್ಲಿಸಲಾಗಿದೆ ಎಂದು ರಿಪೋರ್ಟರ್ಸ್ ಕಲೆಕ್ಟಿವ್ ಹೇಳಿದೆ.
ಮುಸ್ಲಿಂ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಭಾರತೀಯ ಚುನಾವಣಾ ಆಯೋಗದ ಜಿಲ್ಲಾ ಅಧಿಕಾರಿ (ಇಆರ್‌ಒ) ಮತ್ತು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಗೆ ಔಪಚಾರಿಕ ಲಿಖಿತ ಅರ್ಜಿಗಳನ್ನು ಸಲ್ಲಿಸಲಾಗಿದೆ.
“ಢಾಕಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರನ್ನು ಸಾಮೂಹಿಕವಾಗಿ ಪ್ರತ್ಯೇಕಿಸಿ, ಅವರ ಹೆಸರನ್ನು ಅಳಿಸಲು ವ್ಯವಸ್ಥಿತ ಮತ್ತು ಉದ್ದೇಶಿತ ಪ್ರಯತ್ನ ನಡೆದಿದೆ ಎಂದು ಕಂಡುಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಸುಳ್ಳು ಮಾಹಿತಿಯನ್ನು ಒದಗಿಸುವ ಮೂಲಕ ಮತದಾರರ ಪಟ್ಟಿಗಳನ್ನು ತಿರುಚುವ ಇಂತಹ ಪ್ರಯತ್ನಗಳು ಅಪರಾಧವಾಗಿದೆ. ಆದರೆ, ಢಾಕಾದಲ್ಲಿ ನಾಗರಿಕರ ದೊಡ್ಡ ಪ್ರಮಾಣದ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸಿದವರ ವಿರುದ್ಧ ಭಾರತೀಯ ಚುನಾವಣಾ ಆಯೋಗದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ದಿ ರಿಪೋರ್ಟರ್ಸ್ ಕಲೆಕ್ಟಿವ್ ವರದಿಯಲ್ಲಿ ಹೇಳಿದೆ.
ಬಿಜೆಪಿ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಸಲು ಪ್ರಯತ್ನಿಸುತ್ತಿದೆ ಎಂದು ತಿಳಿದ ಕೆಲವು ಮುಸ್ಲಿಂ ನಾಗರಿಕರು ಆತಂಕದಲ್ಲಿ ಬದುಕುತ್ತಿದ್ದಾರೆ. ಅವರನ್ನು ಭಾರತೀಯ ನಾಗರಿಕರಲ್ಲ ಘೋಷಿಸುವ ಪ್ರಯತ್ನದ ಬಗ್ಗೆ ಅನೇಕರಿಗೆ ತಿಳಿದಿಲ್ಲ ಎಂದು ಕಲೆಕ್ಟಿವ್ ತಿಳಿಸಿದೆ.
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಗಡಿ ಕ್ಷೇತ್ರವಾದ ಢಾಕಾದಲ್ಲಿ, 2020ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಚಲಾವಣೆಯಾದ 2.08 ಲಕ್ಷ ಮತಗಳಲ್ಲಿ 10,114 ಮತಗಳ ಅಂತರದಿಂದ ಆರ್‌ಜೆಡಿಯನ್ನು ಸೋಲಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು.
ಪ್ರಬಲ ಪೈಪೋಟಿ ಇರುವ ಕ್ಷೇತ್ರದಲ್ಲಿ ಕೆಲವು ಸಾವಿರ ಮತಗಳ ತಪ್ಪಾದ ಅಳಿಸುವಿಕೆಗಳು ಕೂಡ ಫಲಿತಾಂಶವನ್ನು ಗಮನಾರ್ಹವಾಗಿ ಬದಲಾಯಿಸಬಹುದು ಎಂಬುದನ್ನು ಗಮನಿಸುವುದು ಮುಖ್ಯ ಎಂದು ಕಲೆಕ್ಟಿವ್ ಹೇಳಿದೆ.
ಢಾಕಾದಲ್ಲಿ ನಡೆದ ಪ್ರಯತ್ನಗಳು ಅಂತಿಮ ಮತದಾರರ ಪಟ್ಟಿಯಿಂದ ಸುಮಾರು 40% ಅರ್ಹ ಮತದಾರರನ್ನು ತೆಗೆದುಹಾಕುವ ಗುರಿಯನ್ನು ಹೊಂದಿದ್ದವು. ಇದು ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಂಚನೆ ನಡೆಸಲು ಹೇಗೆ ಪ್ರಯತ್ನಿಸಲಾಯಿತು ಎಂಬುದನ್ನು ವಿವರಿಸುತ್ತದೆ.
ಬಿಜೆಪಿಯು ಜಿಲ್ಲಾ ಚುನಾವಣಾ ನೋಂದಣಿ ಅಧಿಕಾರಿ, ಭಾರತೀಯ ಚುನಾವಣಾ ಆಯೋಗದ ಜಿಲ್ಲಾ ಪ್ರತಿನಿಧಿಗೆ ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿದ್ದೇವೆ. ಬಿಜೆಪಿ ಅಳಿಸಲು ಪ್ರಯತ್ನಿಸಿದ ಪ್ರತಿಯೊಬ್ಬ ಮತದಾರರೂ ಮುಸ್ಲಿಮರಾಗಿದ್ದರು ಎಂದು ಕಲೆಕ್ಟಿವ್ ಹೇಳಿದೆ.
ಪ್ರತಿಯೊಂದು ಅರ್ಜಿಗೂ ಬಿಜೆಪಿ ಪರವಾಗಿ ಅದರ ಬೂತ್ ಮಟ್ಟದ ಏಜೆಂಟ್ (ಬಿಎಲ್‌ಎ) ಸಹಿ ಹಾಕಿದ್ದರು. ಅದರಲ್ಲಿ ಅವರು, “ನಾನು ಒದಗಿಸಿದ ಮಾಹಿತಿಯು ನನಗೆ ನೀಡಲಾದ ಮತದಾರರ ಪಟ್ಟಿಯ ಪರಿಶೀಲನೆಯ ಆಧಾರದ ಸರಿಯಾಗಿದೆ ಎಂದು ಈ ಮೂಲಕ ಘೋಷಿಸುತ್ತೇನೆ. ಸುಳ್ಳು ಘೋಷಣೆ ಮಾಡುದರ ಕುರಿತ 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 31ರ ದಂಡದ ನಿಬಂಧನೆಗಳ ಬಗ್ಗೆ ನನಗೆ ತಿಳಿದಿದೆ” ಎಂದು ಹೇಳಿದ್ದರು.
ಸೆಕ್ಷನ್ 31ರ ಪ್ರಕಾರ, ಮತದಾರರ ಪಟ್ಟಿಯಲ್ಲಿ ತಪ್ಪು ಅಥವಾ ಕಾನೂನುಬಾಹಿರವಾಗಿ ಯಾವುದೇ ಬದಲಾವಣೆಗಳನ್ನು ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ಬಿಜೆಪಿಯ ಬೂತ್ ಮಟ್ಟದ ಏಜೆಂಟ್ (ಬಿಎಲ್‌ಎ ) ಮತದಾರರ ಹೆಸರನ್ನು ತೆಗೆದು ಹಾಕಲು ಅರ್ಜಿಯಲ್ಲಿ ಯಾವುದೇ ಕಾರಣಗಳನ್ನು ನೀಡಿಲ್ಲ. ಅರ್ಜಿಯಲ್ಲಿ ಕಾರಣಗಳನ್ನು ನಮೂದಿಸುವುದು ಕಡ್ಡಾಯವಾಗಿದೆ. ಹದಿಮೂರು ದಿನಗಳ ಅವಧಿಯಲ್ಲಿ 130 ಹೆಸರುಗಳನ್ನು ಅಳಿಸಲು ಮನವಿ ಮಾಡಲಾಗಿದೆ ಎಂದು ಕಲೆಕ್ಟಿವ್ ತಿಳಿಸಿದೆ.
ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನದಂದು, ಢಾಕಾ ಬಿಜೆಪಿ ಶಾಸಕ ಪವನ್ ಕುಮಾರ್ ಜೈಸ್ವಾಲ್ ಅವರ ಆಪ್ತ ಸಹಾಯಕ ಧೀರಜ್ ಕುಮಾರ್ ಹೆಸರಿನಲ್ಲಿ ಸಹಿ ಮಾಡಲಾದ ಹೊಸ ಅರ್ಜಿ ಸಲ್ಲಿಕೆಯಾಗಿದೆ. ಅದರಲ್ಲಿ, ಜನವರಿ 2025 ರವರೆಗೆ ಪಟ್ಟಿಯಲ್ಲಿಲ್ಲದ ಜನರನ್ನು ನಿವಾಸ ಪ್ರಮಾಣಪತ್ರಗಳು ಸೇರಿದಂತೆ ಸರಿಯಾದ ದಾಖಲೆಗಳಿಲ್ಲದೆ ಕರಡು ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಲಾಗಿದೆ.
ಹಿಂದಿನ ಅರ್ಜಿಗಳಿಗಿಂತ ಭಿನ್ನವಾಗಿ, ಈ ಅರ್ಜಿಯಲ್ಲಿ ನೂರು-ಇನ್ನೂರು ಹೆಸರುಗಳಲ್ಲ, ಬದಲಾಗಿ ಢಾಕಾದ ಮತದಾರರ ಪಟ್ಟಿಯಿಂದ 78,384 ಮತದಾರರ ಹೆಸರುಗಳನ್ನು ಅಳಿಸಲು ಕೋರಲಾಗಿತ್ತು.
ಅಳಿಸಬೇಕಾದ ಮತದಾರರ ಹೆಸರುಗಳು ಮತ್ತು ಎಪಿಕ್ ಸಂಖ್ಯೆಗಳನ್ನು ವ್ಯವಸ್ಥಿತವಾಗಿ ಪಟ್ಟಿ ಮಾಡಲಾಗಿತ್ತು. ಜೆಪಿಯ ಬಿಹಾರ ರಾಜ್ಯ ಪ್ರಧಾನ ಕಚೇರಿಯ ಲೆಟರ್‌ಹೆಡ್‌ನಲ್ಲಿ ಕಳುಹಿಸಲಾದ ಪತ್ರದ ಮೂಲಕ ಪಾಟ್ನಾದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅವರಿಗೆ ಮನವಿ ಮಾಡಲಾಗಿತ್ತು.
ಈ ಕುರಿತು ವಿಚಾರಿಸಲು ನಾವು ಶಾಸಕ ಪವನ್ ಜೈಸ್ವಾಲ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, “ದೆಹಲಿಯವರಿಗೆ ನಮ್ಮ ಸ್ಥಳೀಯ ವಿಷಯಗಳಲ್ಲಿ ಅಷ್ಟೊಂದು ಆಸಕ್ತಿ ಏಕೆ?” ಎಂದು ಪ್ರಶ್ನಿಸಿದ್ದಾರೆ ಎಂದು ದಿ ರಿಪೋರ್ಟರ್ಸ್ ಕಲೆಕ್ಟಿವ್ ಹೇಳಿದೆ.
ಬಿಹಾರ ಬಿಜೆಪಿಯ ಚುನಾವಣಾ ನಿರ್ವಹಣಾ ಮಂಡಳಿಯ ತಿರ್ಹತ್ ಪ್ರಮಂಡಲ್ ಪ್ರಭಾರಿ ಎಂದು ಗುರುತಿಸಲಾದ ಲೋಕೇಶ್ ಸಹಿ ಮಾಡಿದ ಮತ್ತೊಂದು ಪತ್ರದಲ್ಲಿ, ಎಲ್ಲಾ 78,384 ಮುಸ್ಲಿಂ ಮತದಾರರು ಭಾರತೀಯ ನಾಗರಿಕರಲ್ಲ ಎಂದು ಆರೋಪಿಸಲಾಗಿದೆ. ತಿರ್ಹತ್ ಪ್ರದೇಶವು ಮುಜಫರ್ ಪುರ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳನ್ನು ಒಳಗೊಂಡಿದೆ.
ಆದರೆ, ಢಾಕಾದ ಬಿಜೆಪಿ ಸಂಘಟನಾ ಅಧ್ಯಕ್ಷರು ಲೋಕೇಶ್ ಎಂಬ ಹೆಸರಿನ ಯಾವುದೇ ವ್ಯಕ್ತಿ ಇಲ್ಲ ಎಂದಿದ್ದಾರೆ. ಆದರೂ, ಪಕ್ಷದ ಹೆಸರಿನಲ್ಲಿ ಅರ್ಜಿ, ಪತ್ರಗಳನ್ನು ನಕಲಿ ಮಾಡಲಾಗಿದೆ ಎಂಬ ಬಗ್ಗೆ ಬಿಜೆಪಿಯವರು ಯಾವುದೇ ಪೊಲೀಸ್ ದೂರುಗಳನ್ನು ದಾಖಲಿಸಿಲ್ಲ.
ಡಿಜಿಟಲ್ ಆಗಿ ತಯಾರಿಸಲಾದ ಪಟ್ಟಿಯಲ್ಲಿ ಕೇವಲ ಮುಸ್ಲಿಂ ಹೆಸರುಗಳು ಅಥವಾ ಮುಸ್ಲಿಮರೊಂದಿಗೆ ಸಾಮಾನ್ಯವಾಗಿ ಸಂಬಂಧಿಸಲ್ಪಟ್ಟ ಹೆಸರುಗಳು ಮಾತ್ರ ಇವೆ. ಇದು ಮುಸ್ಲಿಂ ಮತದಾರರನ್ನು ಫಿಲ್ಟರ್ ಮಾಡಲು ಮತ್ತು ಆಯ್ಕೆ ಮಾಡಲು ಸಾಫ್ಟ್‌ವೇರ್ ಬಳಸಲಾಗಿದೆ ಎಂಬುವುದನ್ನು ಸೂಚಿಸುತ್ತದೆ, ಅಥವಾ ಬೂತ್‌ಗನುಸಾರ ವ್ಯವಸ್ಥಿತವಾಗಿ ಅವರನ್ನು ಪ್ರತ್ಯೇಕಿಸಿ ಸಂಗ್ರಹಿಸುವ ಕಾರ್ಯವನ್ನು ನಡೆಸಲಾಗಿದೆ ಎಂದು ತೋರಿಸುತ್ತದೆ.
ಸಾಮೂಹಿಕವಾಗಿ ಮುಸ್ಲಿಂ ಮತದಾರರ ಹೆಸರನ್ನು ತೆಗೆದು ಹಾಕಲು ಮಾಡಿದ ಮನವಿಯನ್ನು ತಾವು ಹೇಗೆ ನಿರ್ವಹಿಸಿದ್ದೀರಿ ಎಂದು ಢಾಕಾದ ಇಆರ್‌ಒ (ಚುನಾವಣಾ ನೋಂದಣಿ ಅಧಿಕಾರಿ) ಅವರನ್ನು ಕೇಳಿದಾಗ, ನಾನು ಮನವಿಯನ್ನು ಸ್ವೀಕರಿಸಿದ್ದೇನೆ ಎಂದು ದೃಢಪಡಿಸಿದ್ದಾರೆ.
ಇನ್ನು, 78, 384 ಮತದಾರರು ಭಾರತೀಯರಲ್ಲ ಎಂದು ಬಿಹಾರದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆಯಲಾಗಿತ್ತು. ಈ ಸಂಬಂಧ ಪರಿಶೀಲಿಸಲು ಅವರು ಢಾಕಾದ ಚುನಾವಣಾ ಅಧಿಕಾರಿಗೆ ಆದೇಶಗಳನ್ನೂ ನೀಡಿದ್ದರು. ಈ ಗಂಭೀರ ವಿಷಯದ ಬಗ್ಗೆ ವಿಚಾರಿಸಿದಾಗ ಈ ಬಗ್ಗೆ ದಾಖಲೆಗಳನ್ನು ನಿಯಮಿತವಾಗಿ ನಡೆಯುವ ಸಾಮಾನ್ಯ ಪರಿಶೀಲನೆ ಅವಧಿಯಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ರಿಪೋರ್ಟರ್ಸ್ ಕಲೆಕ್ಟಿವ್ ವಿವರಿಸಿದೆ.
ಅರ್ಜಿ, ಮನವಿಗಳನ್ನು ಪಡೆದ ಬಗ್ಗೆ ರಶೀದಿಗಳನ್ನು ನೀಡಿದ್ದೇನೆ. ಸಾಮೂಹಿಕವಾಗಿ ಮತದಾರರನ್ನು ತೆಗೆದುಹಾಕುವ ವಿನಂತಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅರ್ಜಿ ಸಲ್ಲಿಸಿದವರಿಗೆ ತಿಳಿಸಿದ್ದೇನೆ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ. ಆದರೆ, ಈ ಅರ್ಜಿ, ಮನವಿಗಳ ಕುರಿತು ತಮ್ಮ ಕಚೇರಿಯಿಂದ ರಶೀದಿಗಳು ಅಥವಾ ಅಧಿಕೃತ ಸಂವಹನದ ಪುರಾವೆಗಳನ್ನು ಹಂಚಿಕೊಳ್ಳಲು ಅವರು ನಿರಾಕರಿಸಿದ್ದಾರೆ.
ವರದಿಯ ಪ್ರಕಾರ, ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ, ಭಾರತೀಯ ಚುನಾವಣಾ ಆಯೋಗ (ಇಸಿಐ) ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ತನ್ನದೇ ಆದ ಕೈಪಿಡಿಯನ್ನು ಬೈಪಾಸ್ ಮಾಡಿದೆ. ಬದಲಿಗೆ, ತನ್ನ ವಿವೇಚನಾ ಅಧಿಕಾರಗಳನ್ನು ಬಳಸಿಕೊಂಡು ಹೊಸ ನಿಯಮಗಳನ್ನು ರೂಪಿಸಿದೆ. ಈ ಮೂಲಕ ಪ್ರಕ್ರಿಯೆಯ ಮಧ್ಯದಲ್ಲಿ ತಿದ್ದುಪಡಿಗಳನ್ನು ಮಾಡಿದೆ. ಕೆಲವು ಬದಲಾವಣೆಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಎದುರಾದ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಮಾಡಲಾಗಿದೆ.
ಚುನಾವಣಾ ಆಯೋಗದ ಈ ನಿಯಮಗಳ ಕೊರತೆಯಿಂದಾಗಿ ಒಂದು ‘ನಿಯಂತ್ರಕ ಶೂನ್ಯತೆ’ (ರೆಗ್ಯುಲೇಟರಿ ವ್ಯಾಕ್ಯೂಮ್) ಸೃಷ್ಟಿಯಾಗಿದೆ. ಇದರ ಪರಿಣಾಮವಾಗಿ, ವಿರೋಧ ಪಕ್ಷದ ಕಾರ್ಯಕರ್ತರು ಚುನಾವಣಾ ಪ್ರಕ್ರಿಯೆಯ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಜೊತೆಗೆ, ಈ ಶೂನ್ಯತೆಯು ಅನೈತಿಕ ಅಥವಾ ತಪ್ಪು ಕೃತ್ಯಗಳಿಗೆ (ಉದಾಹರಣೆಗೆ, ಮತದಾರರ ಪಟ್ಟಿಯಲ್ಲಿ ತಾರತಮ್ಯ ಅಥವಾ ಕುತಂತ್ರ) ಹೆಚ್ಚಿನ ಅವಕಾಶವನ್ನು ನೀಡಿದೆ. ಇದು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಬಗ್ಗೆ ಗಂಭೀರ ಆತಂಕಗಳನ್ನು ಎತ್ತಿ ತೋರಿಸುತ್ತದೆ ಎಂದು ದಿ ರಿಪೋಟರ್ಸ್ ಕಲೆಕ್ಟಿವ್ ಹೇಳಿದೆ.
ಗಣನೀಯ ಪ್ರಮಾಣದ ಮುಸ್ಲಿಂ-ಯಾದವ್ ಜನಸಂಖ್ಯೆಯನ್ನು ಹೊಂದಿರುವ ಢಾಕಾ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮತ್ತು ನಂತರ ಆರ್‌ಜೆಡಿಯ ಭದ್ರಕೋಟೆಯಾಗಿದೆ. 2010ರಲ್ಲಿ, ಬಿಜೆಪಿಯ ಪವನ್ ಜೈಸ್ವಾಲ್ ಮುಸ್ಲಿಂ ಮತದಾರರ ವಿವಿಧ ವರ್ಗಗಳ ಬೆಂಬಲದೊಂದಿಗೆ ಗೆಲುವು ಸಾಧಿಸಿದ್ದರು. ಆದರೆ, 2015 ರಲ್ಲಿ ಅವರು ಸೋತರು.
ಜೈಸ್ವಾಲ್ 2020ರಲ್ಲಿ ಕ್ಷೇತ್ರವನ್ನು ಮರಳಿ ಪಡೆದರು ಮತ್ತು ಈಗ ನವೆಂಬರ್ ವೇಳೆಗೆ ಚುನಾವಣೆ ಎದುರಿಸಲು ಅಣಿಯಾಗಿದ್ದಾರೆ. ಅವರ ಪ್ರಮುಖ ಪ್ರತಿಸ್ಪರ್ಧಿ ಆರ್‌ಜೆಡಿಯ ಫೈಸಲ್ ರೆಹಮಾನ್, ಅವರು ಮೊದಲು 2015 ರಲ್ಲಿ ಗೆಲುವು ಸಾಧಿಸಿದರು. ರೆಹಮಾನ್ ಅವರ ತಂದೆ ಮೋತಿಯುರ್ ರೆಹಮಾನ್ ಕೂಡ ಸತತ ಎರಡು ಅವಧಿಗೆ ಕಾಂಗ್ರೆಸ್ ಶಾಸಕರಾಗಿ ಢಾಕಾವನ್ನು ಪ್ರತಿನಿಧಿಸಿದ್ದರು.
ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತಾದ ವಿವಾದದ ಮಧ್ಯೆ ಈ ರಿಪೋಟರ್ಸ್ ಕಲೆಕ್ಟಿವ್ ವರದಿ ಬಂದಿದೆ. ಇದು ಅಂಚಿನಲ್ಲಿರುವ ಸಮುದಾಯಗಳನ್ನು ಗುರಿಯಾಗಿಸುವ ಮತ್ತು ಪ್ರಜಾಪ್ರಭುತ್ವದ ಸಮಗ್ರತೆಯನ್ನು ದುರ್ಬಲಗೊಳಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಹಲವರು ಆರೋಪಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗವು ಅಧಿಕೃತವಾಗಿ ಎಸ್‌ಐಆರ್ ಅನ್ನು ಸ್ವಚ್ಛ ಮತ್ತು ಹೊಸ ಮತದಾರರ ಪಟ್ಟಿಯನ್ನು ನಿರ್ವಹಿಸುವ ಒಂದು ಪ್ರಕ್ರಿಯೆ ಎಂದು ಹೇಳಿಕೊಂಡರೂ, ಇದು ಸಾಮೂಹಿಕ ಮತದಾನದ ಹಕ್ಕು ನಿರಾಕರಣೆಯ ವ್ಯಾಪಕ ಭಯವನ್ನು ಹುಟ್ಟುಹಾಕಿದೆ.
ದೆಹಲಿ। 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ; ಸ್ವಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಬಂಧನ


