ಗಿಗ್ಗು ಅರ್ಥವ್ಯವಸ್ಥೆ ಅರ್ಥಾತ್ ಗಿಗ್ಗಾವಸ್ತೆ- ಡೇಟಾಮ್ಯಾಟಿಕ್ಸ್
ಹಳೇ ಕನ್ನಡ ಸಿನಿಮಾದಾಗ ಹೊಸ ಹೀರೋಗಳ ಕಡೆ ಹೊಡತ ತಿನ್ನಲಿಕ್ಕೆ ಒಬ್ಬ ಸಣ್ಣ ರೌಡಿ ಇರ್ತಾ ಇದ್ದ. ಅವನ ಹೆಸರು ಗುಗ್ಗು.
ಅವನು ಒಮ್ಮೊಮ್ಮೆ ಕಾಮೇಡಿ ಮಾಡ್ತಾ ಇದ್ದ. ಇನ್ನೊಮ್ಮೆ ರೌಡಿಗಿರಿ ಮಾಡ್ತಾ ಇದ್ದ. ಅವನ ಪಾತ್ರ ಸಣ್ಣದು. ಅವ ಹೀರೋ ಆಗಿ ಯಾವ ಪಿಚ್ಚರೂ ಮಾಡಲಿಲ್ಲ. ಮೂರು ತಾಸೀನ ಪಿಚ್ಚರಿನಾಗ ಒಂದು ಹತ್ತು ನಿಮಿಷ ಬಂದು ಹೋಗತಿದ್ದ. ಬಹಳ ಮಂದಿಗೆ ಅವ ಇದ್ದದ್ದೂ ಗೊತ್ತಾಗಲಿಲ್ಲ, ಹೋದದ್ದೂ ಗೊತ್ತಾಗಲಿಲ್ಲ.
ಈಗ ನಮ್ಮ ಜಾಗತಿಕ ಅರ್ಥವ್ಯವಸ್ಥೆ ಅನ್ನೋದು ಕೊರೊನಾದಿಂದಾಗಿ ಕೆಟ್ಟು ಕೆರ ಹಿಡದು ಹೋಗೇದ. ಇಂಥದ್ದರಾಗ ನಮ್ಮನ್ನು ಆಳುವ ಗುಗ್ಗುಗಳು ಗಿಗ್ಗು ಅರ್ಥವ್ಯವಸ್ಥೆ ಅಥವಾ ಗಿಗ್ಗಾವಸ್ತೆಯನ್ನ ಜಾರಿಗೆ ತರೋ ತಯಾರಿ ಮಾಡಾಕ ಹತ್ಯಾರ.
ಇದು ಏನಪಾ ಗಿಗ್ಗಾವಸ್ತೆ? ಹಂಗಅಂದ್ರ ಖಾತ್ರಿಯಲ್ಲದ ಕೆಲಸ. ಪಂಚಾಯಿತಿಯಿಂದ ಹಿಡದು ಯೂನನಿವರ್ಸಿಟಿವರೆಗೂ ಎಲ್ಲ ಭಾರತೀಯರಿಗೂ ಉದ್ಯೋಗ ಖಾತ್ರಿ ಅಭ್ಯಾಸ ಆಗಿ ಹೋಗೇದ. ಹಿಂಗಾಗಿ ಅಂತವರಿಗೆ ಇದು ಅಪಥ್ಯ. ಕೋಟ್ಯಾಂತರ ಮಂದಿಗೆ – ಕೂಲಿಕಾರರಿಗೆ, ಮನೆ ಕೆಲಸದವರಿಗೆ, ಅರೆಕಾಲಿಕ ಸಿಬ್ಬಂದಿಗಳಿಗೆ, ಅತಿಥಿ ಉಪನ್ಯಾಸಕರಿಗೆ ಇದು ದಿನ ನಿತ್ಯದ ಗೋಳು. ಅವರಿಗೆ ಏನೂ ಆಶ್ಚರ್ಯ ಆಗೋದಿಲ್ಲ.
ಈ ಗಿಗ್ಗು ಯಾಕ ಬಂತು ಅಂತ ತಿಳಕೋಬೇಕು ಅಂದ್ರ ಅದಕ್ಕ ಒಂದು ಸ್ವಲ್ಪ ಹಿನ್ನೆಲೆ ಬೇಕಾಗತದ. ಸರಳ ಭಾಷೆಯೊಳಗ ಹೇಳಬೇಕು ಅಂದ್ರ ಈ ಸಮಕಾಲೀನ ಜಾಗತಿಕ ಸಂದರ್ಭದಲ್ಲಿ ನವ್ಯೋತ್ತರ ವಸಾಹತುಶಾಹಿಯ ಪ್ರಭಾವದಿಂದ ಏನು ನಮ್ಮ ಅರ್ಥವ್ಯವಸ್ಥೆ ನಡದದ ಅಲ್ಲಾ. ಅದಕ್ಕ ಸಾಂಪ್ರದಾಯಿಕ ಅರ್ಥವ್ಯವಸ್ಥೆ ಅಥವಾ ಮಾರುಕಟ್ಟೆ ಹಿನ್ನೆಲೆಯ ಅರ್ಥವ್ಯವಸ್ಥೆ ಅಂತ ಅಂತಾರ.
ಇದರಾಗ ಎರಡು ಮಾರುಕಟ್ಟೆ ಮುಖ್ಯ ಆಗತಾವು. ಒಂದು ಸರಕು ಮತ್ತು ಸೇವೆ ಹಾಗೂ ಇನ್ನೊಂದು ಕಾರ್ಮಿಕ ಮಾರುಕಟ್ಟೆ. ಕಾರ್ಮಿಕ ವಿಭಾಗದೊಳ ಎರಡು ಉಪ ವಿಭಾಗ ಅದಾವು – ಕೌಶಲ್ಯ ರಹಿತ ಮತ್ತು ಕೌಶಲ್ಯ ಸಹಿತ.
ಇದು ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ನಡೀತೇತಿ. ಬೇಡಿಕೆ ಹೆಚ್ಚು ಇದ್ದರ ಸರಕಿನ ಬೆಲೆ ಹೆಚ್ಚಾಗಿ, ಸಂಬಳ ಹೆಚ್ಚಾಗಿ ಇರ್ತದ. ಪೂರೈಕೆ ಹೆಚ್ಚು ಆದರ ಬೆಲೆ ಮತ್ತು ಸಂಬಳ ಕಮ್ಮಿ. ಇದು ರಸ್ತೆ ಪಕ್ಕದಾಗ ಶೇಂಗಾ ಮಾರೋ ಮುದುಕಿಯಿಂದ ಹಿಡದು ಗೌತಮ್ ಅಡಾಣಿ ಅವರವರೆಗೆ ಎಲ್ಲರಿಗೂ ಗೊತ್ತಿರತದ.

ಕೌಶಲ್ಯ ಅನ್ನೋದು ಹೆಚ್ಚು ಆದಷ್ಟು ಸಂಬಳ ಹೆಚ್ಚು. ಕಮ್ಮಿ ಆದರ ಕಮ್ಮಿ. ಆಷ್ಟ.
ಆದರ ಇನ್ನೂ ಮುಂದು ಬರೋ ಗಿಗ್ಗಾವಸ್ತೆಯೊಳಗ ಇದು ಎಲ್ಲಾ ಉಲ್ಟಾ ಪಲ್ಟ ಆಗತದ.
ಯಾವ ಕೆಲಸಗಾರ ಎಷ್ಟು ಕೌಶಲ್ಯಾದಿಂದ ಕೆಲಸ ಮಾಡತಾನ, ಅವನಿಗೆ ಎಷ್ಟು ಅನುಭವ ಐತಿ, ಇದು ಯಾವುದೂ ಲೆಕ್ಕಕ್ಕೆ ಬರೋದಿಲ್ಲ.
ಎಂಥ ಕೆಲಸಗಾರನ ಇರಲಿ ಯಾರೂ ಕಾಯಂ ಅಲ್ಲ. ಎಲ್ಲರೂ ಅರೆಕಾಲಿಕ. ಉದಾಹರಣೆಗೆ ಪೊಲೀಸು, ಡಾಕ್ಟರು, ಸೇನಾ ಪಡೆ, ಶಿಕ್ಷಕರು, ನರ್ಸು, ಕಾರ್ಖಾನೆ ಕಾರ್ಮಿಕರು, ಬ್ಯಾಂಕು ಸಿಬ್ಬಂದಿ, ಎಲ್ಲರೂ ಗುತ್ತಿಗೆ ಮೇಲೆ ಕೆಲಸ ಮಾಡೋದು.
ಕೆಲವರು ಅದರ ಒಳ್ಳೆ ಗುಣಗಳನ್ನು ಪಟ್ಟಿ ಮಾಡಿದಾರು. ಅವು ಯಾವಪ ಅಂದ್ರ – ಜಲ್ದಿ ಕೆಲಸ ಸಿಗೋದು, ಬರೇ ಫೈಲು ಓಡಾಟ ಇಲ್ಲ, ಕೆಂಪು ಪಟ್ಟಿಗೆ ಕತ್ತರಿ, ಮನೆಯಲ್ಲಿಯೇ ಕುಳಿತು ಕೆಲಸ ಮಾಡೋದು, ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ, ಕಚೇರಿ ಕೆಲಸ ಇಲ್ಲ, ಹಾಜರಿ ಹಾಕೋದು ಇಲ್ಲ, ಒಬ್ಬ ವ್ಯಕ್ತಿ ನೂರಾರು ತರಹ ಕೆಲಸ ಮಾಡೋದರಿಂದ ಅವನಿಗೆ ಬೇರೆ ಬೇರೆ ಕ್ಷೇತ್ರದ ಅನುಭವ ಜಾಸ್ತಿ, ನಿವೃತ್ತರಿಗೂ ಕೆಲಸ, ಇತ್ಯಾದಿ.
ಇನ್ನ ಗಿಗ್ಗು ವ್ಯವಸ್ಥೆಯ ಅವಗುಣಗಳನ್ನ ನೋಡೋಣ. ಅವು ಕಣ್ಣಿಗೆ ಕಾಣೋವಂತಾವು.
ಒಂದು ದೇಶದೊಳಗ ಹೆಚ್ಚಾನು ಹೆಚ್ಚು ಅರೆಕಾಲಿಕ, ಗುತ್ತಿಗೆ ಕೆಲ್ಸನ ಇರತಾವು. ಎಲ್ಲರಿಗೂ ಸರಕಾರಿ ಕೆಲಸ ಎಲ್ಲಿ ಸಿಗತದ? ನಮ್ಮ ದೇಶದಾಗ ಸರ್ಕಾರಿ ನೌಕರರು ಕೇವಲ ಮೂರು ಶೇಕಡಾ ಅದಾರು. ಉಳಿದ 97 ಶೇಕಡಾ ಕೆಲಸಗಾರರು ಖಾಸಗಿ ಕ್ಷೇತ್ರದಾಗ ಅದಾರು.
ಇವರಿಗೆ ಯಾರಿಗೂ ಸಿಬ್ಬಂದಿ ಕಲ್ಯಾಣದ ಯೋಜನೆಗಳು ಲಾಗೂ ಆಗೋದಿಲ್ಲ. ಇವರಿಗೆ ಪಿಂಚಣಿ ಇಲ್ಲ, ಆರೋಗ್ಯ – ಅಪಘಾತ ವಿಮೆ ಇಲ್ಲ, ಉದ್ಯೋಗಿ ವಿಮಾ ಯೋಜನೆಯ ಆಸ್ಪತ್ರೆ – ಮುಂತಾದ ಸೌಲಭ್ಯ ಇಲ್ಲ.
ಮೊದಲಿಗೆ ನಮ್ಮ ಬೆಂಗಳೂರಿನೊಳಗ ಎಚ್‌ಎಂಟಿ, ಬಿಇಎಲ್ ಅಂಥ ಸಾರ್ವಜನಿಕ ಕಂಪನಿಗಳು ಇದ್ದವು. ಅದರಾಗ ದೊಡ್ಡ ಹುದ್ದೆ ಒಳಗ ಇದ್ದವರು ಹಾಗೂ ಅವರ ಗಾಡಿ ಚಾಲಕರು ಎಲ್ಲರೂ ಕಾಯಂ ಕೆಲಸದಾಗ ಇದ್ದರು. ಅವರು ಇಬ್ಬರೂ ತಮ್ಮ ಮಕ್ಕಳನ್ನ ಒಳ್ಳೆ ಸಾಲಿಗೆ ಕಳಿಸಿ, ಒಳ್ಳೆ ಕೆಲಸ ಕೊಡಿಸಿ, ಪಿಂಚಣಿ ಪಡೆದು, ಮೊಮ್ಮಕ್ಕಳನ್ನ ನೋಡಲಿಕ್ಕೆ ಅಮೇರಿಕಾಗೆ ಹೋಗಿ, ನಯಾಗರ ಜಲಪಾತದ ಮುಂದ ನಿಂತು ಫೋಟೋ ಹೊಡಿಸಿಕಂಡರು. ಎಲ್ಲ ಜಾತಿ, ಜನಾಂಗದವರು ಈ ಸೌಲಭ್ಯಗಳನ್ನ ಪಡೆದರು.
ಖಾಸಗಿ ಕಂಪನಿಗಳು ಇಷ್ಟು ಅನುಕೂಲ ಮಾಡಿಕೊಡಲಾರದೇ ಇದ್ದರೂ ಕೂಡ, ಸ್ವಲ್ಪ ಅನುಕೂಲ ಮಾಡಿ ಕೊಡಬೇಕು ಅಂತ ನಮ್ಮಲ್ಲೇ ಕಾರ್ಮಿಕ ಕಲ್ಯಾಣ ಕಾಯಿದೆಗಳು ಬಂದವು. ಅವನ್ನು ಮುಖಾ ಮೂತಿ ನೋಡದೇ ಕೊರೊನಾ ನೆವ ಹೇಳಿ ಬಂದು ಮಾಡಲಾಯಿತು.
ಗಿಗ್ಗುದಾಗ ಈ ಕಾಯಿದೆಗಳ ಸುಳಿವೆ ಇರಂಗಿಲ್ಲ. ಉಳ್ಳವರು – ಮತ್ತು ಇಲ್ಲದವರು ಅಂತ ವ್ಯತ್ಯಾಸ ಖಾತ್ರಿ. ಇವರಿಗೆ ಸಿಕ್ಕಿದ್ದು ಅವರಿಗೆ ಸಿಗಬೇಕು ಅಂತ ಇಲ್ಲ.
ಕೊರೊನಾದಿಂದ ಈ ಸ್ಥಿತಿ ಬಂದೇತಿ ಅಂತ ಬಂಡವಾಳಶಾಹಿಗಳು ಹೇಳತಾರ. ಆದರ ಅವರ ಮನಸ್ಥಿತಿ ನೋಡಿದರ ಅವರು ಇದನ್ನ ಮಾಡಲಿಕ್ಕೆ ಕಾಯುತ್ತಾ ಇದ್ದರು, ಅಷ್ಟರಾಗ ಕೊರೊನಾ ಮಾಮ ಬಂದು ಅವರ ಕೆಲಸ ಹಗುರ ಮಾಡಿದ ಅಂತ ಅನ್ನಸತೇತಿ.
ಗಿಗ್ಗು ಅಂದ್ರ ಇಂಗ್ಲೀಷ್‌ದಾಗ ಸಂಗೀತ ಕಚೇರಿ ಅಂತ. ಅಂದ್ರ ಊರೂರಿಗೆ ಹಾಡಿಕೋತ ಹೋಗೋರು ಯಾವ ಊರಾಗೂ ನಿಲ್ಲೋದಿಲ್ಲಾ. ಅವರಿಗೆ ಯಾವ ಊರು ಆದರೇನು? ಸಂಗೀತ ಮುಖ್ಯ ಅಂತ ಅಲ್ಲಿಯ ಅರ್ಥ.
ನಮ್ಮಲ್ಲೆ ಹಂಗ ಇಲ್ಲಲ್ಲ. ಊರಾಗ ಒಂದು ಕಾರಖಾನೆ ಹಾಕಿಕೋತ ಹೋಗೋರಿಗೆ ಕೆಲಸಗಾರರ ಹಂಗು ಯಾಕ? ಅವರಿಗೆ ಬರೇ ರೊಕ್ಕದ ಚಿಂತೆ. ಯಾವ ಪಕ್ಷ ಅಧಿಕಾರಕ್ಕ ಬರ್ತೇತೋ ಆ ಪಕ್ಷದ ಬೆನ್ನು ಬಡಿಯೋರು ಅವರು. ಕೆಲಸಗಾರರು ಮಾತ್ರ ಊರು ಬಿಟ್ಟು, ದುಡಿಯಲಿಕ್ಕೆ ಹೋಗಿ ಲಾಕಡೌನ್ ಆದಾಗ ಸಾವಿರಾರು ಕಿಲೋ ಮೀಟರು ನಡಕೋತ ಬಂದು ರಸ್ತೆದಾಗ ಸಾಯೋರು. ಮಾಲೀಕರಿಗೆ ಕಾನೂನಿಗೆ ಕಿಮ್ಮತ್ತು ಇಲ್ಲ, ಕೆಲಸಗಾರರಿಗೆ ಕಾನೂನು ಗೊತ್ತಿಲ್ಲ. ಸರಕಾರ ಮಾಲೀಕರ ಮಾತು ಕೇಳತದ, ಕೆಲಸಗಾರರ ಮಾತು ಕೇಳೋದಿಲ್ಲ.
ಈ ಗಿಗ್ಗು ಬದಲಾಯಿಸುವುದು ಯಾರ ಕೈಯಾಗ ಐತಿ?
ಇದನ್ನೂ ಓದಿ: ಕೋವಿಡ್‌ನಿಂದ ನೆಲಕಚ್ಚಿರುವ ಆರ್ಥಿಕತೆಯನ್ನು ಮೇಲೆತ್ತಲು ಸರ್ಕಾರ ಮಾಡಬೇಕಾದುದ್ದೇನು?


