ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯಿಂದ ಜ್ಞಾನವಾಪಿ ಮಸೀದಿ ಸಂಕೀರ್ಣದ ಹೆಚ್ಚುವರಿ ಸಮೀಕ್ಷೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಹಿಂದೂ ಅರ್ಜಿದಾರರ ಮನವಿಯನ್ನು ವಾರಣಾಸಿಯ ತ್ವರಿತ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವಕೀಲ ವಿಜಯ್ ಶಂಕರ್ ರಸ್ತೋಗಿ ಸಲ್ಲಿಸಿರುವ ಅರ್ಜಿಯಲ್ಲಿ ಮಸೀದಿಯ ಕೇಂದ್ರ ಗುಮ್ಮಟದ ಅಡಿಯಲ್ಲಿ ಪ್ರಾಚೀನ ಹಿಂದೂ ದೇವಾಲಯದ ಅವಶೇಷಗಳನ್ನು ಪಡೆಯಲು ಆಕ್ರಮಣಕಾರಿ ಉತ್ಖನನ ವಿಧಾನಗಳನ್ನು ಬಳಸಲು ಪುರಾತತ್ವ ಸಂಸ್ಥೆಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಜನವರಿ 31 ರಂದು, ವಾರಣಾಸಿ ಜಿಲ್ಲಾ ನ್ಯಾಯಾಲಯವು ಹಿಂದೂಗಳಿಗೆ ಸಂಕೀರ್ಣದ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣೆಯ ವರದಿಯು ಈ ಸ್ಥಳದಲ್ಲಿ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯವನ್ನು 17 ನೇ ಶತಮಾನದಲ್ಲಿ ನಾಶಪಡಿಸಲಾಯಿತು ಎಂದು ಹೇಳಿತ್ತು.
2022ರ ಮೇ ತಿಂಗಳಲ್ಲಿ ಮಸೀದಿ ಆವರಣದಲ್ಲಿ ಇದ್ದ ಅಂಡಾಕಾರದ ವಸ್ತುವು ಶಿವಲಿಂಗವಾಗಿದೆ ಎಂದು ಹಿಂದೂ ಅರ್ಜಿದಾರರು ಪ್ರತಿಪಾದಿಸಿ ಪ್ರಕರಣ ದಾಖಲಿಸಿದ್ದರು. ಈ ವಸ್ತು ಶಿವಲಿಂಗವಾಗಿದೆ ಎಂದು ಅವರು ಪ್ರತಿಪಾದಿಸಿದ್ದರು. ಆದರೆ ಮಸೀದಿಯ ಉಸ್ತುವಾರಿ ಸಮಿತಿ ಈ ವಸ್ತು ಮಸೀದಿಗೆ ಆಗಮಿಸುವವರು ವುಜು ನಿರ್ವಹಿಸುವ ನೀರಿನ ತೊಟ್ಟಿಯಲ್ಲಿರುವ ನಿಷ್ಕ್ರಿಯವಾದ ಕಾರಂಜಿ ಎಂದು ಹೇಳಿತ್ತು.
ರಸ್ತೋಗಿ ಅವರ ಮನವಿಯ ಭಾಗವಾಗಿ, ಶುಕ್ರವಾರದ ತ್ವರಿತ ನ್ಯಾಯಾಲಯವು ಪುರಾತತ್ತ್ವ ಶಾಸ್ತ್ರದ ಸಂಸ್ಥೆಯು ವುಜು ನಿರ್ವಸುವ ನೀರಿನ ತೊಟ್ಟಿಯಲ್ಲಿ ಇರುವ ಕಾರಂಜಿಯ “ವಯಸ್ಸು, ಗಾತ್ರ, ಸ್ಮಾರಕ ಮತ್ತು ಪುರಾತತ್ವ ವಿನ್ಯಾಸ ಅಥವಾ ಶೈಲಿಯನ್ನು… ಮತ್ತು ಅದರ ನಿರ್ಮಾಣಕ್ಕೆ ಯಾವ ವಸ್ತುಗಳನ್ನು ಬಳಸಲಾಗಿದೆ ಎಂಬುದನ್ನು ನಿರ್ಧರಿಸಲು ತನಿಖೆ ನಡೆಸುವಂತೆ ಕೇಳಿದ್ದ ಕೋರಿಕೆಯನ್ನು ಪರಿಗಣಿಸಿದೆ.
ಆದಾಗ್ಯೂ, ಈ ಸ್ಥಳದಲ್ಲಿ ಯಾವುದೇ ಉತ್ಖನನವನ್ನು ತಡೆಯುವ ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶಗಳನ್ನು ನ್ಯಾಯಾಲಯ ಉಲ್ಲೇಖಿಸಿ, “ಸುಪ್ರೀಂ ಕೋರ್ಟ್ ಮತ್ತು ಅಲಹಾಬಾದ್ ಹೈಕೋರ್ಟ್ ಸಹ ಆಕ್ರಮಣಶೀಲವಲ್ಲದ ವಿಧಾನವನ್ನು ಬಳಸಿಕೊಂಡು ಸಮೀಕ್ಷೆ ನಡೆಸುವಂತೆ ಆದೇಶಿಸಿದೆ. ತನಿಖೆ ನಡೆಸುವಾಗ ಉತ್ಖನನ ತಂತ್ರವನ್ನು ಬಳಸಬೇಡಿ ಮತ್ತು ಯಾವುದೇ ಆಸ್ತಿಯನ್ನು ನಾಶಪಡಿಸಬೇಡಿ” ಎಂದು ಸಿವಿಲ್ ನ್ಯಾಯಾಧೀಶ ಯುಗಲ್ ಶರ್ಮಾ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ವರದಿಯನ್ನು ಇನ್ನೂ ಕಾನೂನುಬದ್ಧವಾಗಿ ಪರಿಶೀಲಿಸಬೇಕಾಗಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಕಾರಣಕ್ಕೆ ಮಸೀದಿಯ ವುಜೂ ನಿರ್ವಹಿಸುವ ನೀರಿನ ತೊಟ್ಟಿಯಲ್ಲಿರುವ ಕಾರಂಜಿಯನ್ನು ರಕ್ಷಿಸಲಾಗಿದೆ ಎಂದು ಶರ್ಮಾ ಸೂಚಿಸಿದ್ದಾರೆ.
ಮಸೀದಿ ಸಂಕೀರ್ಣದ ಮುಚ್ಚಿದ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಹಿಂದೂಗಳು ದಕ್ಷಿಣದಿಂದ ಮಸೀದಿ ಸಂಕೀರ್ಣವನ್ನು ಪ್ರವೇಶಿಸಬೇಕು ಮತ್ತು ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಮತ್ತು ಮುಸ್ಲಿಮರು ಉತ್ತರ ಭಾಗದಲ್ಲಿ ಪ್ರಾರ್ಥಿಸಬೇಕು ಎಂದು ನಿರ್ದೇಶಿಸಿದೆ. ಪ್ರಕರಣದ ತೀರ್ಪು ಬರುವವರೆಗೆ ಈ ವ್ಯವಸ್ಥೆ ಮುಂದುವರಿಯುವ ನಿರೀಕ್ಷೆಯಿದೆ.
ಇದನ್ನೂ ಓದಿ: ಅಮಿತ್ ಶಾ ವಿದೇಶ ಪ್ರಯಾಣದ ಸೂಕ್ಷ್ಮ ಮಾಹಿತಿಗೆ $1 ಮಿಲಿಯನ್ ಬಹುಮಾನ – ನಿಷೇಧಿತ ‘ಸಿಖ್ಸ್ ಫಾರ್ ಜಸ್ಟಿಸ್’ ಸಂಘಟನೆ ಘೋಷಣೆ


