ಹರಿಯಾಣ ರಾಜ್ಯದಲ್ಲಿ ಈಗ ವಿಧಾನಸಭೆ ಚುನಾವಣೆ ಕಾವು ಹೆಚ್ಚಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಕುರಿತು ಅಸಮಾಧಾನ ಭುಗಿಲೆದ್ದಿದೆ. ಅಕ್ಟೋಬರ್ 21ಕ್ಕೆ ಚುನಾವಣೆ ಘೋಷಣೆಯಾಗಿದ್ದು, 24ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ, ಟಿಕೆಟ್ ಹಂಚಿಕೆ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಹರಿಯಾಣದ ಒಟ್ಟು ವಿಧಾನಸಭೆ ಕ್ಷೇತ್ರಗಳು 90. ಇವುಗಳಲ್ಲಿ 78 ಕ್ಷೇತ್ರಗಳಿಗೆ ಮಾತ್ರ ಬಿಜೆಪಿ ಟಿಕೆಟ್ ಘೋಷಿಸಿದೆ. ಇಷ್ಟು ದಿನ ಪಕ್ಷದಲ್ಲಿ ಆಂತರಿಕವಾಗಿ ಕಚ್ಚಾಡುತ್ತಿದ್ದ ರಾಜಕೀಯ ನಾಯಕರು ಚುನಾವಣೆ ಹೊಸ್ತಿಲಲ್ಲಿ ಸಾರ್ವಜನಿಕವಾಗಿ ಕಚ್ಚಾಟಕ್ಕಿಳಿದಿದ್ದಾರೆ. ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಗುರುಗ್ರಾಮ್ ಬಿಜೆಪಿ ಶಾಸಕ ಹಾಗೂ ಪಕ್ಷದ ಉಸ್ತುವಾರಿ ಉಮೇಶ್ ಅಗರವಾಲ್ ಟ್ವಿಟ್ಟರ್ ನಲ್ಲಿ ಪರಸ್ಪರ ವಾಗ್ವಾದಕ್ಕಿಳಿಯುವ ಮೂಲಕ ಪಕ್ಷದಲ್ಲಿ ಆಂತರಿಕವಾಗಿ ಭುಗಿಲೆದ್ದಿದ್ದ ಭಿನ್ನಾಭಿಪ್ರಾಯ, ಅಸಂತೋಷ ಬೀದಿ ಜಗಳವಾಗಿದೆ.

ಬಿಜೆಪಿಯಲ್ಲಿ ಸಂಸದ ಇಂದ್ರಜಿತ್ ಸಿಂಗ್ ತಮ್ಮ ಮಗಳಿಗೆ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಗುರುಗ್ರಾಮ್ ಶಾಸಕ ಉಮೇಶ್ ಅಗರವಾಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟ್ವೀಟ್ ಮೂಲಕ ಸಬಕಾ ಸಾಥ್, ಸಬಕಾ ವಿಕಾಸ್, ಸಬಕಾ ವಿಶ್ವಾಸ ಈ ಘೋಷಣೆಯನ್ನು ಮೂಲವಾಗಿಟ್ಟುಕೊಂಡೇ ಟಿಕೆಟ್ ಹಂಚಿಕೆಯಾಗಬೇಕು. ಯೋಗ್ಯತೆ, ಸಾಮರ್ಥ್ಯ ಹಾಗೂ ಜನಾನುಭಾವ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪಕ್ಷ ಟಿಕೆಟ್ ಹಂಚಿಕೆ ಮಾಡಬೇಕು ಎಂದಿದ್ದಾರೆ.
ಇನ್ನು 90 ಸ್ಥಾನಗಳಲ್ಲಿ ಕೇವಲ 78 ಕ್ಷೇತ್ರಗಳಿಗೆ ಮಾತ್ರ ಟಿಕೆಟ್ ಹಂಚಿಕೆ ಮಾಡಲಾಗಿದೆ. ಟಿಕೆಟ್ ಹಂಚಿಕೆ ವಿಚಾರ ನಾಯಕರ ಪ್ರತಿಷ್ಠೆಯ ವಿಷಯವಾಗಿ ಹೊರಹೊಮ್ಮಿದೆ. ಗುಡಗಾಂವ್, ರೆವಾಡಿ, ಕೋಸಲಿ, ಪಾಣಿಪತ್ ಶಹರ್, ಪಲವಲ್, ಫತೇಹಾಬಾದ್, ಆದಂಪುರ, ನಾರಾಯಣಗಢ, ಗನ್ನೌರ್ ಸೇರಿದಂತೆ ಇನ್ನು ಕೆಲವು ಸ್ಥಾನಗಳ ಟಿಕೆಟ್ ಹಂಚಿಕೆ ಆಗಿಲ್ಲ. ಪ್ರತಿಷ್ಠೆ, ಜಿದ್ದಾಜಿದ್ದಿನ ಕಣವಾಗಿರುವ ಹರಿಯಾಣದಲ್ಲಿ ಅಸಮಾಧಾನಿತರ ಮನವೊಲಿಸಲು ಬಿಜೆಪಿ ಹರಸಾಹಸ ಮಾಡುತ್ತಿದೆ.
ಇನ್ನು ಕಾಂಗ್ರೆಸ್ ನಲ್ಲಿಯೂ ಸಹ ಭಿನ್ನಮತ ಭುಗಿಲೆದ್ದಿದ್ದು ಭೂಪೇಂದ್ರ ಸಿಂಗ್ ಹೂಡಾ, ಅಶೋಕ್ ತನ್ವರ್ ಹಾಗೂ ಪಕ್ಷದ ಇತರೆ ನಾಯಕರ ಮಧ್ಯೆ ಪರಸ್ಪರ ಅಸಮಾಧಾನ ಮನೆ ಮಾಡಿದೆ.


