ಜಮ್ಮುಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, ಮಹಿಳೆಯರು ನಡೆಸಿರುವ ಪ್ರತಿಭಟನೆಯಲ್ಲಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ವಿರೋಧಿಸಿ, ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯರು ಭಿತ್ತಿ ಪತ್ರ ಹಿಡಿದು, ಶ್ರೀನಗರದ ಲಾಲ್ ಚೌಕ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಸಹೋದರಿ ಸೂರೈಯಾ ಅಬ್ದುಲ್ಲಾ, ಪುತ್ರಿ ಸಾಫಿಯಾ ಅಬ್ದುಲ್ಲಾ ಖಾನ್, ಕಾಶ್ಮೀರದ ಮುಖ್ಯ ನ್ಯಾಯಾಧೀಶ ಬಶೀರ್ ಅಹಮದ್ ಖಾನ್ ಪತ್ನಿ ಹವಾ ಬಶೀರ್ ಹಾಗೂ ಮಹಿಳಾ ಹೋರಾಟಗಾರರು, ವಿವಿಧ ಅಕಾಡೆಮಿಗಳ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕ್ರಮವನ್ನು ಖಂಡಿಸಿದ ಸೂರೈಯಾ ಅಬ್ದುಲ್ಲಾ, ಆಗಸ್ಟ್ 5 ರಿಂದ ಇಲ್ಲಿಯವರೆಗೆ ನಿರ್ಬಂಧ ಹೇರುವ ಮೂಲಕ, ನಮ್ಮನ್ನು ಬಂಧನದಲ್ಲಿರಿಸಲಾಗಿತ್ತು. ಇಚ್ಛೆಯಿಲ್ಲದಿದ್ದರೂ ಅಂತಹ ಗಂಡಿನೊಂದಿಗೆ ಒತ್ತಾಯಪೂರ್ವಕವಾಗಿ ಮದುವೆ ಮಾಡಲಾಗುತ್ತದೆ. ಅಂತಹ ಕ್ರಮವನ್ನೇ ಕಾಶ್ಮೀರದಲ್ಲಿ ಅನುಸರಿಸಲಾಗುತ್ತಿದೆ ಎಂದು ಮಾಧ್ಯಮಗಳೆದುರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕಾಶ್ಮೀರದಲ್ಲಿ 370 ಆರ್ಟಿಕಲ್ ರದ್ದಾದ ಕೂಡಲೇ 100ಕ್ಕೂ ಹೆಚ್ಚು ರಾಜಕೀಯ ಪ್ರಮುಖರನ್ನು ಬಂಧನದಲ್ಲಿರಿಸಲಾಗಿತ್ತು. ಈಗ ನಿರ್ಬಂಧ ತೆಗೆಯಲಾಗಿದ್ದು, ವಿಶೇಷಾಧಿಕಾರ ರದ್ದುಗೊಳಿಸಿರುವ ಕ್ರಮದ ವಿರುದ್ಧ ಸ್ಥಳೀಯರು ರೊಚಚ್ಚಿಗೆದ್ದಿದ್ದು, ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ ಹೋರಾಟಗಾರರನ್ನು ಬಂಧಿಸಿ, ಧ್ವನಿ ಅಡಗಿಸುವ ಯತ್ನ ಮಾಡಲಾಗುತ್ತಿದೆ.


