ವಯನಾಡ್ ಜಿಲ್ಲೆಯ ಸುಲ್ತಾನ್ ಬಾಥೆರಿಯಲ್ಲಿ ಒಂಬತ್ತು ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು ತನ್ನ ತರಗತಿಯೊಳಗೆ ಹಾವು ಕಚ್ಚಿದ ಪರಿಣಾಮ ಇಂದು ಮೃತಪಟ್ಟಿದ್ದಾಳೆ.
ಆಕೆಯ ಸಹಪಾಠಿಗಳ ಪ್ರಕಾರ, ಐದನೇ ತರಗತಿಯ ವಿದ್ಯಾರ್ಥಿನಿ ಎಸ್ ಶೆಹಲಾ ತನ್ನ ತರಗತಿಯಲ್ಲಿ ಕುಳಿತಿದ್ದಾಗ ವಿಷಕಾರಿ ಹಾವು ಅವಳ ಕಾಲಿಗೆ ಕಚ್ಚಿದೆ. ಕೂಡಲೇ ಆ ವಿದ್ಯಾರ್ಥಿನಿ ಅದನ್ನು ತರಗತಿ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಆದರೆ ಶಿಕ್ಷಕಿ ಅದು ಸುಳ್ಳಿರಬೇಕೆಂದು ತಲೆಕೆಡಿಸಿಕೊಳ್ಳದೇ ಪಾಠ ಮುಂದುವರೆಸಿದ್ದಾರೆ.
ಸ್ವಲ್ಪ ಸಮಯದಲ್ಲಿಯೇ ಆ ಹುಡುಗಿಯ ಕಾಲು ನೀಲಿ ಬಣ್ಣಕ್ಕೆ ತಿರುಗಿದಾಗ ಎಚ್ಚರಗೊಂಡು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿ ಸಾಧ್ಯವಿಲ್ಲವೆಂದು ನಂತರ ಕೋಳಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡ್ಯೋಯ್ಯುವಾಗ ಸಾವನ್ನಪ್ಪಿದಾಳೆ.
ಇದರಿಂದ ಕೋಪಗೊಂಡ ಸಂಬಂಧಿಕರು ಮತ್ತು ವಿದ್ಯಾರ್ಥಿಗಳು ಶಾಲಾ ಶಿಕ್ಷಕಿಯ ನಿರ್ಲಕ್ಷ್ಯಕ್ಕೆ ಕಿಡಿಕಾರಿದ್ದಾರೆ. ಶಾಲೆಯ ಕಚೇರಿ ಕೊಠಡಿಯನ್ನು ಧ್ವಂಸಗೊಳಿಸಿದ್ದಲ್ಲದೇ ಆ ಶಿಕ್ಷಕಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಸುಲ್ತಾನ್ ಬಾಥೆ ಸರ್ಕಾರಿ ಪ್ರೌಢಶಾಲಾ ತರಗತಿಗಳಲ್ಲಿ ಸಾಕಷ್ಟು ಬಿರುಕುಗಳು ಮತ್ತು ರಂಧ್ರಗಳಿವೆ. ಹಾಗಾಗಿ ಸರೀಸೃಪಗಳು ಅವುಗಳಲ್ಲಿ ನುಸುಳುತ್ತವೆ ಎಂದು ಪೋಷಕರು ಮತ್ತು ಇತರರು ದೂರಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ದೂರುಗಳನ್ನು ನೀಡಿದ್ದರೂ ಸಹ ಯಾರೂ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಕೆಯ ಸಹಪಾಠಿಗಳ ಪ್ರಕಾರ, ಅವರು ಮಧ್ಯಾಹ್ನ 3.10 ಕ್ಕೆ ಹಾವು ಕಚ್ಚುವಿಕೆಯ ಬಗ್ಗೆ ದೂರು ನೀಡಿದರು ಮತ್ತು ಸಂಜೆ 4 ಗಂಟೆಯ ನಂತರ ಆಕೆಯ ಪೋಷಕರು ಬರುವವರೆಗೂ ಶಾಲಾ ಅಧಿಕಾರಿಗಳು ಕಾಯುತ್ತಿದ್ದರು. ಶಾಲೆಯು ಸಕಾಲಿಕ ವೈದ್ಯಕೀಯ ಸಹಾಯವನ್ನು ನೀಡಿದ್ದರೆ ಆಕೆಯ ಜೀವ ಉಳಿಸಬಹುದಿತ್ತು ಎಂದು ಹೇಳಿದ್ದಾರೆ.
ಆದರೆ ಶಾಲೆಯ ಕಡೆಯಿಂದ ಯಾವುದೇ ವಿಳಂಬವಾಗಿಲ್ಲ ಎಂದು ಶಾಲೆಯ ಮುಖ್ಯ ಶಿಕ್ಷಕ ಪಿ ಮೋಹನನ್ ಹೇಳಿದ್ದಾರೆ ಮತ್ತು ಅವರು ಸಾವಿಗೆ ತಾಲ್ಲೂಕು ಆಸ್ಪತ್ರೆಯನ್ನು ದೂಷಿಸಿದ್ದಾರೆ. ಘಟನೆಯ ನಂತರ ಜಿಲ್ಲಾ ಶಿಕ್ಷಣಾಧಿಕಾರಿಯು ತರಗತಿ ಶಿಕ್ಷಕಿ ಸಾಜಿಲ್ ಸಿ.ವಿ ಅವರನ್ನು ಅಮಾನತುಗೊಳಿಸಿದ್ದಾರೆ. ಕೇರಳ ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ಅವರು ವಿದ್ಯಾರ್ಥಿಯ ಸಾವಿನ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.


