‘ಕೇರಳದ ಮುಸ್ಲಿಮರು ಆರೆಸ್ಸೆಸ್ ಕಾರ್ಯಕರ್ತನ ಕತ್ತನ್ನು ಕೊಯ್ಯುತ್ತಿರುವ ದೃಶ್ಯ’ ಎಂದು ಪ್ರತಿಪಾದಿಸಿ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 50 ಸೆಕೆಂಡ್ ಇರುವ ವೈರಲ್ ವಿಡಿಯೊದಲ್ಲಿ, ಯುವಕನೊಬ್ಬನ ಮೇಲೆ ಮುಸ್ಲಿಮರ ಗುಂಪೊಂದು ದಾಳಿ ಮಾಡಿ ಎಳೆದುಕೊಂಡು ಹೋಗುತ್ತದೆ. ನಂತರ ಅದೇ ವಿಡಿಯೊ ಮುಂದುವರಿದಂತೆ, ಶರ್ಟ್ ಬಿಚ್ಚಿರುವ ಯುವಕನೊಬ್ಬನನ್ನು ಮಲಗಿಸಿ ಆತನ ಕತ್ತನ್ನು ಕೊಯ್ಯುತ್ತಿರುವ ಭಯಾನಕ ದೃಶ್ಯವಿದೆ.
ಈ ಭಯಾನಕ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಖ್ಯವಾಗಿ ವಾಟ್ಸಪ್‌ನಲ್ಲಿ ಇದು ಹರಿದಾಡುತ್ತಿದ್ದು, ಅದರ ಶಿರ್ಷಿಕೆ ಕೆಳಗಿನಂತಿದೆ.
‘ಅತಿ ಘೋರ, ಕ್ರೂರ, ನೋಡಲು ಅಸಾಧ್ಯ. ಇದು ಕೇರಳದ ಮುಸ್ಲಿಂ ಸಮುದಾಯದವರು RSS ಸ್ವಯಂ ಸೇವಕನನ್ನು ಕುತ್ತಿಗೆ ಕತ್ತರಿಸಿ ಹತ್ಯೆ ಮಾಡಲಾಯಿತು. ಯೋಚಿಸಿ! ಮುಂದೆ ಇವರು ಬಹುಸಂಖ್ಯಾತರಾದರೆ ಹಿಂದುಗಳ ಸ್ಥಿತಿ, ಗತಿ ಏನಾಗಬಹುದು? ನಿಜವಾಗಿ ಭಯಂಕರ ಭಯಾನಕ’

ವಾಟ್ಸಪ್ ಮಾತ್ರವಲ್ಲದೆ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲೂ ಈ ವಿಡಿಯೊ ಹರಿದಾಡಿದೆ. ಅದನ್ನು ಇಲ್ಲಿ ನೋಡಬಹುದು. (ಎಚ್ಚರಿಕೆ: ವಿಡಿಯೊ ಭಯಾನಕವಾಗಿದೆ). ಫೇಸ್‌ಬುಕ್‌ನಲ್ಲೂ ಈ ವಿಡಿಯೊದ ಶೀರ್ಷಿಕೆ ಅಪ್ಲೋಡ್ ಆಗಿದ್ದು, ಅದನ್ನು ಇಲ್ಲಿ ನೋಡಬಹುದು.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಇಟಲಿಯಲ್ಲಿ ವಿಶ್ವನಾಯಕರನ್ನು ಭೇಟಿ ಮಾಡಲು ಮೋದಿ ಟ್ಯಾಕ್ಸಿಯಲ್ಲಿ ತೆರಳಿದ್ದರೆ?
ಫ್ಯಾಕ್ಟ್‌ಚೆಕ್
ವಾಸ್ತವದಲ್ಲಿ ಈ ವಿಡಿಯೊವನ್ನು ಎರೆಡು ಬೇರೆ ಬೇರೆ ವಿಡಿಯೋಗಳನ್ನು ಸೇರಿಸಿ ಮಾಡಲಾಗಿದೆ. ಮೊದಲ ಭಾಗದಲ್ಲಿ ಜನ ಸಮೂಹವೊಂದು ಯುವಕನ ಮೇಲೆ ದಾಳಿ ಮಾಡುತ್ತದೆ. ಅದರಲ್ಲಿ ಸುದರ್ಶನ್ ನ್ಯೂಸ್‌ನ ಲೋಗೊ ಕಾಣಬಹುದು. ವಿಡಿಯೊದ ಎರಡನೇ ಭಾಗದಲ್ಲಿ ಅರೆ ಬೆತ್ತಲೆಯಾಗಿರುವ, ಬಾಯಿಗೆ ಬಟ್ಟೆ ತುರುಕಲ್ಪಟ್ಟ, ನೀಲಿ ಬಣ್ಣದ ಪ್ಯಾಂಟ್‌ಗೆ ಬೆಲ್ಟ್ ಧರಿಸಿರುವ ಯುವಕನ್ನು ಕುತ್ತಿಗೆಯನ್ನು ಕೊಯ್ಯಲಾಗುತ್ತದೆ. ಈ ದೃಶ್ಯವಂತೂ ಅಮಾನವೀಯವಾಗಿದ್ದು, ನೋಡಲು ಸಾಧ್ಯವಿಲ್ಲದಂತಿದೆ. ಎರಡು ವಿಡಿಯೊವನ್ನು ಸೇರಿಸಿ ಈ ವಿಡಿಯೊ ಮಾಡಿರುವುದರಿಂದ ನಾವು ವಿಡಿಯೊವನ್ನು ಬೇರೆ ಬೇರೆಯಾಗಿ ಫ್ಯಾಕ್ಟ್‌ಚೆಕ್ ಮಾಡೋಣ.
ವಿಡಿಯೋದ ಮೊದಲನೇ ಭಾಗ
ಮೊದಲನೇ ಭಾಗದಲ್ಲಿ ನಾಲ್ಕೈದು ಜನ ಗುಂಪು ಯುವಕನ ಮೇಲೆ ದಾಳಿ ಮಾಡಿ, ಆತನನ್ನು ಎಳೆದೊಯ್ಯುತ್ತದೆ. ಈ ವಿಡಿಯೊವನ್ನು ನಾವು (ನಾನುಗೌರಿ.ಕಾಂ) ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದ್ದು, ಈ ವೇಳೆ ನಾವು ಕೆಲವು ಟ್ವೀಟ್‌ಗಳನ್ನು ಗಮನಿಸಿದೆವು. ಈ ಟ್ವೀಟ್ ಆಧಾರದಲ್ಲಿ ನಾವು ಇನ್ನಷ್ಟು ಹುಡುಕಾಡಿದ್ದು, ಈ ವೇಳೆ ಈ ಘಟನೆಯ ಬಗ್ಗೆ ವರದಿ ಮಾಡಿರುವ ಪತ್ರಿಕಾ ವರದಿಗಳು ನಮಗೆ ಸಿಕ್ಕಿವೆ.
‘ಅಮರ್ ಉಜಾಲ’ ಪತ್ರಿಕೆಯು 2021 ಮೇ 5ನೇ ತಾರೀಕಿನಂದು ವರದಿ ಮಾಡಿದೆ. ವರದಿಯ ಪ್ರಕಾರ, “ಲೈನ್‌ಮ್ಯಾನ್‌ನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಹಲ್ಲೆ” ಎಂದು ವರದಿ ಮಾಡಿದೆ. ಈ ವರದಿಯ ಪ್ರಕಾರ, “ಮುಜಫರ್‌ನಗರ, ಭೋಪಾ ಗ್ರಾಮದ ಸಿಕ್ರಿಯಲ್ಲಿ ವಿದ್ಯುತ್ ದೋಷವನ್ನು ಸರಿಪಡಿಸಲು ಬಂದ ಲೈನ್‌ಮ್ಯಾನ್‌ನನ್ನು ಗ್ರಾಮಸ್ಥರು ಒತ್ತೆಯಾಳಾಗಿಟ್ಟು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಲೈನ್‌ಮ್ಯಾನ್‌ನ ಸಹಚರರು ಅಲ್ಲಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಘಟನೆಯಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ” ಎಂದು ಬರೆಯಲಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪುನೀತ್‌ರವರ ‘ಬೊಂಬೆ ಹೇಳುತೈತೆ’ ಹಾಡನ್ನು ಪಾಕ್ ಅಭಿಮಾನಿ ಹಾಡಿದ್ದು 2018 ರಲ್ಲಿ!
ಜೊತೆಗೆ ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದ ವ್ಯಕ್ತಿಗಳಿಗೆ ಮುಜಾಫರ್ ನಗರ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರ ಪ್ರಕಾರ, “ಭೋಪಾ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ 07 ಜನರನ್ನು ಪ್ರಕರಣದಲ್ಲಿ ಹೆಸರಿಸಲಾಗಿದೆ. ಜೊತೆಗೆ 10-12 ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 10 ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ” ಎಂದು ಮೇ ತಿಂಗಳ 5 ರಂದು ನೀಡಿದ್ದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.
थाना भोपा पुलिस द्वारा 07 नामजद व 10-12 अज्ञात अभियुक्तों के विरुद्ध सुसंगत धाराओं में अभियोग पंजीकृत किया गया है। अभियुक्तों की शीघ्र गिरफ्तारी की जाएगी, स्थानीय पुलिस द्वारा अन्य विधिक कार्यवाही की जा रही है।
— MUZAFFARNAGAR POLICE (@muzafarnagarpol) May 5, 2021
ವಿಡಿಯೋದ ಎರಡನೇ ಭಾಗದಲ್ಲಿ ಭಯಾನಕ ದೃಶ್ಯವಿದ್ದು, ಅರೆ ಬೆತ್ತಲೆಯಾಗಿರುವ, ಬಾಯಿಗೆ ಬಟ್ಟೆ ತುರುಕಲ್ಪಟ್ಟ, ನೀಲಿ ಬಣ್ಣದ ಪ್ಯಾಂಟ್‌ಗೆ ಬೆಲ್ಟ್ ಧರಿಸಿರುವ ಯುವಕನ್ನು ಕುತ್ತಿಗೆಯನ್ನು ಕೊಯ್ಯಲಾಗುತ್ತದೆ. ಈ ದೃಶ್ಯವಂತೂ ಅಮಾನವೀಯವಾಗಿದ್ದು, ನೋಡಲು ಸಾಧ್ಯವಿಲ್ಲದಂತಿದೆ. ಈ ಚಿತ್ರವನ್ನೂ ನಾವು ರಿವರ್ಸ್ ಸರ್ಚ್ ಮಾಡಿದ್ದೇವೆ. ಈ ವೇಳೆ ನಮಗೆ ಆಸ್ಟ್ರೇಲಿಯಾದ ಸುದ್ದಿ ವೆಬ್ ಪೋರ್ಟಾಲ್ ಆಗಿರುವ news.com.auನಲ್ಲಿ 2018ರ ಫೆಬ್ರವರಿ ತಿಂಗಳ 6ರಂದು ಮಾಡಿರುವ ಸುದ್ದಿ ದೊರಕಿದೆ.
ವರದಿ ಪ್ರಕಾರ, “ಈ ಘಟನೆಯು ದಕ್ಷಿಣ ಅಮೆರಿಕಾದ ದೇಶವಾದ ವೆನೆಜುವೆಲಾದಲ್ಲಿ ನಡೆದಿದೆ. ವಿಡಿಯೋದಲ್ಲಿ, ಹದಿಹರೆಯದ ಬಾಲಕನನ್ನು ಮಾದಕ ದ್ರವ್ಯ ಮಾಫಿಯಾವು ಕತ್ತು ಕೊಯ್ದು ಕೊಂದಿದೆ. ಬಾಲಕನು ಮಾದಕ ದ್ರವ್ಯ ಮಾಫಿಯಾದ ವಿರೋಧಿ ಗುಂಪಿನವನಾಗಿದ್ದರಿಂದ, ಆತನನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಕತ್ತು ಕೊಯ್ದು ಕೊಂದಿತು. ಈ ವಿಡಿಯೊವನ್ನು ಆರೋಪಿ ಗುಂಪೇ ಚಿತ್ರೀಕರಿಸಿ, ದೃಶ್ಯಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದೆ”
ಈ ಘಟನೆಯನ್ನು ‘ಮೈಲ್ ಆನ್‌ಲೈನ್’ ಸುದ್ದಿ ಪೋರ್ಟಲ್ ಕೂಡಾ ವರದಿ ಮಾಡಿದೆ. ಈ ಪತ್ರಿಕೆಯ ವರದಿಯ ಪ್ರಕಾರ, ಬಾಲಕನು 13 ವರ್ಷದವನಾಗಿದ್ದು, ಆತನ ಕತ್ತನ್ನು ಕೊಯ್ಯುವ ಮೊದಲು ಕಿವಿಯನ್ನು ಕೂಡಾ ಕತ್ತರಿಸಲಾಗಿತ್ತು.

ಒಟ್ಟಿನಲ್ಲಿ ವೈರಲ್ ಆಗಿರುವ ವಿಡಿಯೊವನ್ನು ಎರಡು ಘಟನೆಗಳ ದೃಶ್ಯಗಳನ್ನು ಸೇರಿಸಿ ಮಾಡಲಾಗಿದೆ. ಮೊದಲನೇ ಘಟನೆಯು 2021ರ ಮೇ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಎರಡನೇ ಘಟನೆ 2018 ರ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಅಮೆರಿಕಾದ ವೆನೆಜುವಾಲದಲ್ಲಿ ನಡೆದಿದೆ. ಈ ಎರಡು ವಿಡಿಯೊಗೂ, ಕೇರಳಕ್ಕೂ, ಆರೆಸ್ಸೆಸ್‌ಗೂ ಯಾವುದೇ ಸಂಬಂಧವಿಲ್ಲ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ‘ಪಿಎಂ ಕನ್ಯಾ ಯೋಜನೆ’ ಅಡಿಯಲ್ಲಿ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ₹2000 ಸಿಗುವುದು ನಿಜವೇ?



ನಿಮ್ಮ ಪತ್ರಿಕೆ ಅದೋಗತಿಗೆ ಹೋಗಲು ಇಂತ ನ್ಯೂಸ್ ಗಳೇ ಕಾರಣ ,ಜನರು ಪತ್ರಿಕೆ ಮೇಲೆ ನಂಬಿಕೆ ಕಳೆದು ಕೊಳ್ಳಲು.