ಆಡಳಿತ ನಡೆಸುವವರು ಸರ್ವಾಧಿಕಾರಿಗಳಂತೆ ದರ್ಪದಿಂದ ನಡೆಸಿಕೊಳ್ಳುವುದನ್ನು ಭಾರತೀಯ ಜನತೆ ಮತ್ತು ಭಾರತದ ವಿಚಾರವಂತ ಗಣ್ಯರು ನಿಸ್ಸಹಾಯಕರಂತೆ, ಮೂಕಪ್ರೇಕ್ಷಕರಂತೆ ನೋಡಿ, ಕೈಕಟ್ಟಿ ಕೂರುತ್ತಾರಾ…?
ಪ್ರದರ್ಶನ ಪಿತಾಮಹ ಮೋದಿಯವರು ಗಳಿಗೆಗೊಂದು ನಾಟಕ ಮಾಡುತ್ತಾರೆ, ಪ್ರಹಸನ ಮಾಡುತ್ತಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೋದಿ ತಬ್ಬಿಕೊಂಡಿದ್ದೋ ತಬ್ಬಿಕೊಂಡಿದ್ದು. ಇಷ್ಟು cheap ಆಗಿ ಬಿಟ್ಟರೇ ಈ ಇಬ್ಬರೂ?
ಬ್ರಿಟನ್ನಿನ ಮಹಾರಾಣಿ ಯಾರದಾದರೂ ಕೈ ಕುಲುಕಬೇಕಾದರೆ ಕೈಗೆ ಕೈಚೀಲ ಹಾಕಿಕೊಳ್ಳುತ್ತಾರೆ. ಕೈ ಕುಲುಕುವವನಿಗೆ ಯಾವ ಚರ್ಮರೋಗ ಇದೆಯೋ ಎಂದು ಹೆದರಿಕೆ. ಮೋದಿ, ಟ್ರಂಪ್‍ಗಳಿಗೆ ಅದೆಷ್ಟು ಕಾಯಿಲೆ ಇದೆಯೋ? ಆದರೂ ಒಬ್ಬರನ್ನೊಬ್ಬರನ್ನು ತಬ್ಬಿಕೊಳ್ಳುವುದರಲ್ಲಿ ಅವರ ಅಟ್ಟಹಾಸವೆಷ್ಟು? ಸಭ್ಯತೆ ಮೀರಿ ನಡೆದುಕೊಳ್ಳುವುದು ಅವರಿಗೆ ಭೂಷಣವಲ್ಲ. ಟ್ರಂಪ್, ಮೋದಿಯವರನ್ನು ಭಾರತದ ರಾಷ್ಟ್ರಪಿತ ಮಾಡಿದ. ಗಾಂಧೀಜಿ ಸೋಗು ಹಾಕಿದ್ದು ರಾಷ್ಟ್ರಪಿತ, ಮೋದಿಯೇ ಅಸಲಿ ರಾಷ್ಟ್ರಪಿತ. ಗಾಂಧೀಜಿ ಹತ್ಯೆಯಾದ 72 ವರ್ಷಗಳ ಮೇಲೆ ಅಮೆರಿಕದ ಅಧ್ಯಕ್ಷರು ಮೋದಿಯವರನ್ನೇ ನಿಜವಾದ ರಾಷ್ಟ್ರಪಿತ ಮಾಡಿದ್ದಾರೆ. ನಕಲಿ ರಾಷ್ಟ್ರಪಿತ ಗಾಂಧೀಜಿಯನ್ನು ಬಯಲಿಗೆಳೆದು ಅಸಲಿ ಮೋದಿಯನ್ನು ರಾಷ್ಟ್ರಪಿತನ ಸ್ಥಾನದಲ್ಲಿ ಕೂಡಿಸಿದ ಟ್ರಂಪ್‍ಗೆ ಆರ್‍ಎಸ್‍ಎಸ್ ಕೃತಜ್ಞತೆಗಳನ್ನು ಅರ್ಪಿಸಬೇಕು. ಮುಂದೆ ಒಂದು ದಿನ ನಿಜವಾದ ರಾಮ ಮೋದಿಯೇ ಹೊರತು ಅಯೋಧ್ಯೆ ರಾಮನಲ್ಲ ಎನ್ನುವ ಕಾಲ ಬರಲೂಬಹುದು.
ಸೆಕ್ಷನ್ 370 ನ್ನು ಹಿಂಪಡೆದು ಕಾಶ್ಮೀರವನ್ನು ಒಡೆದು, ಪ್ರಜಾಪ್ರಭುತ್ವವನ್ನು ಕೊನೆಗಾಣಿಸಿ ಕಾಶ್ಮೀರವನ್ನು ಕೇಂದ್ರ ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳುವ ಮೋದಿ ಸರ್ಕಾರದ ವಿರುದ್ಧ 250 ಭಾರತೀಯ ಗಣ್ಯರು ಮೋದಿಯವರಿಗೆ ಪತ್ರ ಬರೆದಿದ್ದಾರೆ. ಶಿಕ್ಷಣ ತಜ್ಞರು, ಪತ್ರಕರ್ತರು, ರಾಜಕೀಯ ನಾಯಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಕಾಶ್ಮೀರದ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸಬೇಕು. ಅಲ್ಲಿ ವಿಧಾನಸಭೆಯ ಚುನಾವಣೆ ನಡೆಸಬೇಕು. 370ನೇ ವಿಧಿಯನ್ನು ರದ್ದುಪಡಿಸುವ ವಿಚಾರದಲ್ಲಿ ಅಲ್ಲಿಯ ಪ್ರಜೆಗಳ ಅಭಿಪ್ರಾಯವನ್ನು ಪಡೆದೇ ಮುಂದುವರೆಯಬೇಕು. ಅಲ್ಲಿಯ ಗಣ್ಯರ ಅಭಿಪ್ರಾಯವನ್ನು ಪಡೆಯದೇ ನಿರ್ಧಾರಕ್ಕೆ ಬಂದಿರುವುದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ. ಕಣಿವೆ ರಾಜ್ಯದಲ್ಲಿನ ನಾಯಕರನ್ನು ಗೃಹಬಂಧನದಲ್ಲಿಟ್ಟು, ಸುದ್ದಿ ಮಾಧ್ಯಮಗಳನ್ನು ಅಡಗಿಸಿಟ್ಟು, ಭಾರತದ ಇತರ ಭಾಗಗಳಿಗೆ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬ ಸುದ್ದಿ ಹರಡದಂತೆ ತಡೆಗಟ್ಟಿರುವುದು ಸರಿಯಲ್ಲ ಎಂದೂ ಈ ಗಣ್ಯರು ಮೋದಿಯವರಿಗೆ ಬರೆದಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ 45 ಜನ ಗಣ್ಯರ ಮೇಲೆ ರಾಜದ್ರೋಹ ಆಪಾದನೆ ಹೊರಿಸಿ ನ್ಯಾಯಾಲಯಕ್ಕೆ ಹೋಗಿದ್ದನ್ನು ಖಂಡಿಸಿ ಚಲನಚಿತ್ರ ಪ್ರಮುಖರು, ಕಲಾವಿದರು, ಪತ್ರಿಕಾ ಪ್ರತಿನಿಧಿಗಳು ಮೊದಿಯವರಿಗೆ ಪತ್ರ ಬರೆದು ಮೋದಿಯವರ ಆಡಳಿತ ರೀತಿಯನ್ನ ಒಪ್ಪದವರ ಮೇಲೆ ರಾಜದ್ರೋಹ ಆಪಾದನೆ ಹೊರಿಸುವುದು ಎಷ್ಟು ಸರಿ? ಪ್ರಧಾನಮಂತ್ರಿಯನ್ನು ಪ್ರಶ್ನಿಸುವ ಹಕ್ಕು ಪ್ರಜೆಗಳಿಗೆ ಇಲ್ಲವೇ? ಎಂದು ನೂರಾರು ಗಣ್ಯರು ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ಆ 49 ಗಣ್ಯರ ಮೇಲೆ ಹಾಕಿದ್ದ ಮೊಕದ್ದಮೆಯನ್ನು ಹಿಂಪಡೆಯಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಆಡಳಿತ ನಡೆಸುವವರು ಸರ್ವಾಧಿಕಾರಿಗಳಂತೆ ದರ್ಪದಿಂದ ನಡೆಸಿಕೊಳ್ಳುವುದನ್ನು ಭಾರತೀಯ ಜನತೆ ಮತ್ತು ಭಾರತದ ವಿಚಾರವಂತ ಗಣ್ಯರು ನಿಸ್ಸಹಾಯಕರಂತೆ, ಮೂಕಪ್ರೇಕ್ಷಕರಂತೆ ನೋಡಿ, ಕೈಕಟ್ಟಿ ಕೂಡುವುದಿಲ್ಲ. ಬದಲಿಗೆ ಸರ್ಕಾರದ ಹುಚ್ಚಾಟಗಳನ್ನು ಪ್ರತಿಭಟಿಸುತ್ತಾರೆ. ಹಿಟ್ಲರ್‍ಗಿರಿ ಬೆಳೆಯಲು ಬಿಡುವುದಿಲ್ಲ ಎಂಬುದು ಮೇಲೆ ಹೇಳಿದ ಎರಡು ಪ್ರಕರಣಗಳಿಂದ ಸಾಬೀತಾಗಿದೆ.
ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆ‘Halt the hate’ ಎಂದು ಭಾರತ ಸರ್ಕಾರಕ್ಕೆ ತಿಳಿಸಿದೆ. ದ್ವೇಷಾಪರಾಧ, ಗುಂಪು ಹಲ್ಲೆಯಂತಹ ಕೃತ್ಯಗಳು 2017-18ರಲ್ಲಿ ಕಡಿಮೆ ಇದ್ದದ್ದು 2019ರ ಮೊದಲ ಆರು ತಿಂಗಳಲ್ಲಿ ಅತಿಹೆಚ್ಚು ಘಟನೆಗಳು ನಡೆದಿವೆ.
2015ರಲ್ಲಿ ದ್ವೇಷಾಪರಾಧಗಳು 51 ಇತ್ತು. 2016ರಲ್ಲಿ 240, 2017ರಲ್ಲಿ 212, 2018ರಲ್ಲಿ 210 ಕೃತ್ಯಗಳು ಸಂಭವಿಸಿದ್ದರೆ 2019ರ ಮೊದಲ ಆರು ತಿಂಗಳಲ್ಲೇ 180 ಕೃತ್ಯಗಳು ನಡೆದಿವೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಹೇಳಿ ಆಮ್ನೆಸ್ಟಿ ತನ್ನ ಕಳವಳ ವ್ಯಕ್ತಪಡಿಸಿದೆ. ನಡೆದಿರುವ ಒಟ್ಟು 180 ಪ್ರಕರಣಗಳಲ್ಲಿ ಧರ್ಮದ ಹೆಸರಿನಲ್ಲಿ 44 ಕೃತ್ಯಗಳು ನಡೆದಿವೆ. ಈ ಪೈಕಿ 40 ಪ್ರಕರಣಗಳು ಮುಸ್ಲಿಮರ ಮೇಲೆ, 4 ಕೃತ್ಯಗಳು ಕ್ರಿಶ್ಚಿಯನ್ನರ ಮೇಲೆ ನಡೆದಿವೆ. ಮೋದಿ ಇದುವರೆಗೂ ಈ ದುಷ್ಕೃತ್ಯ ನಡೆಯುತ್ತಿದ್ದರೂ ಒಮ್ಮೆಯೂ ಅದರ ಬಗೆಗೆ ಬಾಯಿ ಬಿಟ್ಟಿಲ್ಲ. ಮೋದಿಯ ಈ ದಿವ್ಯ ಮೌನವನ್ನು ದುಷ್ಕೃತ್ಯ ನಡೆಯುತ್ತಿರುವುದಕ್ಕೆ ಮೋದಿಯವರ ಸಮ್ಮತಿ ಇದೆಯೆಂದು ಅರ್ಥೈಸಬೇಕಾದಿತು.
ಇದಲ್ಲದೆ 2000 ದಿಂದ 2018ರ ನಡುವೆ ಭಾರತದಲ್ಲಿ ಕರ್ತವ್ಯನಿರತರಾಗಿದ್ದ 64 ಪತ್ರಕರ್ತರ ಹತ್ಯೆ ಆಗಿದೆ. ಪತ್ರಕರ್ತರ ವಿರುದ್ಧ ವಿವಿಧ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದೆ. 12 ರಾಜ್ಯಗಳಲ್ಲಿ 2000-2018ರ ಮಧ್ಯೆ ತಮ್ಮ ವಿಮರ್ಶಾತ್ಮಕ ಬರವಣಿಗೆಗಾಗಿ 21 ಪತ್ರಕರ್ತರ ಮೇಲೆ ಖಟ್ಲೆ ಹೂಡಲಾಗಿದೆ. 2017ರ ಸೆಪ್ಟಂಬರ್ 5 ರಂದು ತಮ್ಮ ಮನೆಗೆ ಪ್ರವೇಶ ಮಾಡುವಾಗಲೇ ‘ಗೌರಿ ಲಂಕೇಶ್’ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್‍ರನ್ನು ಹತ್ಯೆ ಮಾಡಲಾಯಿತು. ಹಾಗೂ 2018ರ ಜೂನ್14 ರಂದು ರೈಸಿಂಗ್ ಕಾಶ್ಮೀರದ ಸಂಪಾದಕರಾದ ಶುಜಾತ್ ಬುಕಾರಿಯವರ ಹತ್ಯೆಯಾಯಿತು. ಹಲ್ಲೆಗೊಳಗಾದ 65 ಪತ್ರಕರ್ತರ ವ್ಯಕ್ತಿ ವಿವರಗಳನ್ನು ‘Silencing Journalists’ ಎಂಬ ಪುಸ್ತಕದಲ್ಲಿ ದಾಖಲಿಸಲಾಗಿದೆ.
ಒಟ್ಟಿನಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ವರ್ಗದ ಜನರ ಮೇಲೂ ಹಲ್ಲೆ ಮಾಡುವುದು ಅಧಿಕಗೊಂಡಿವೆ.


