Homeಮುಖಪುಟಪಠ್ಯ ಪರಿಷ್ಕರಣೆಯಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ: 35 ಅಂಶಗಳನ್ನು ಪಟ್ಟಿ ಮಾಡಿದ ಸಿದ್ದರಾಮಯ್ಯ

ಪಠ್ಯ ಪರಿಷ್ಕರಣೆಯಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ: 35 ಅಂಶಗಳನ್ನು ಪಟ್ಟಿ ಮಾಡಿದ ಸಿದ್ದರಾಮಯ್ಯ

ಇಡೀ ಸಮಾಜದಲ್ಲಿ ಕೇವಲ ಅತ್ಯಲ್ಪ ಗುಂಪುಗಳನ್ನು ಪ್ರತಿನಿಧಿಸುವ ಇಂತಹ ವ್ಯಕ್ತಿಗಳ ರಾಜಕೀಯ ಪ್ರೇರಿತ ಪಾಠಗಳನ್ನು ಸಮಾಜದ ಶೇಕಡಾ 98ರಷ್ಟು ಸಮುದಾಯಗಳು ಒಪ್ಪಿಕೊಳ್ಳಬೇಕೆ?

- Advertisement -
- Advertisement -

ಪಠ್ಯ ಪರಿಷ್ಕರಣೆ ಸಂಬಂಧ ಕಂದಾಯ ಸಚಿವ ಆರ್ ಅಶೋಕ್ ನೀಡಿದ ಸ್ಪಷ್ಟೀಕರಣಗಳ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಾದ ಆರಂಭವಾಗಿ ತಿಂಗಳು ಕಳೆದರೂ ತಜ್ಞರನ್ನು ನೇಮಿಸಿ ಆಗಿರುವ ಸಮಸ್ಯೆಗಳನ್ನು ಪರಿಶೀಲಿಸುವ ಬದಲು ರೋಹಿತ್ ಚಕ್ರತೀರ್ಥ ಮಾಡಿರುವ ಪ್ರಮಾದಗಳನ್ನು ಸಮರ್ಥಿಸಿಕೊಳ್ಳುವ ಬೇಜವಾಬ್ಧಾರಿತನವನ್ನು ಸರ್ಕಾರ ತೋರಿಸುತ್ತಿದೆ ಎಂದು ಕಡಿಕಾರಿದ್ದಾರೆ. ಈ ಬಗ್ಗೆ 35 ಅಂಶಗಳನ್ನು ಗುರುತಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ವಿವಾದ ಆರಂಭವಾದ ತಿಂಗಳ ನಂತರ ಕಂದಾಯ ಸಚಿವ ಆರ್ ಅಶೋಕ್ ತಮ್ಮ ಜೊತೆಗೆ ಸಿಸಿ ಪಾಟೀಲ್, ಭೈರತಿ ಬಸವರಾಜು ಮತ್ತು ಶಿವರಾಮ್ ಹೆಬ್ಬಾರ್‌ರನ್ನು ಕೂರಿಸಿಕೊಂಡು ಪತ್ರಿಕಾಗೋಷ್ಠಿ ಮಾಡಿದ್ದು ಏಕೆ? ಈ ನಾಲ್ಕೂ ಜನರು ಕೂಡ ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿಯೆ ಇಲ್ಲದವರು ಮತ್ತು ಅದರಲ್ಲಿ 3 ಜನ ಶೂದ್ರ ಸಮುದಾಯಗಳಿಗೆ ಸೇರಿದ ಸಚಿವರು. ಹಾಗೊಂದು ವೇಳೆ ಸಮರ್ಪಕ ಮಾಹಿತಿ ಇದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಧ್ಯಮಗೋಷ್ಠಿ ನಡೆಸಬೇಕಾಗಿತ್ತು. ವಾಸ್ತವವಾಗಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಸತ್ಯ ಸಂಗತಿಗಳನ್ನು ವಿವರಿಸಬೇಕಾಗಿದ್ದುದು ಸಂಬಂಧಿತ ಶಿಕ್ಷಣ ಸಚಿವರು. ಕಂದಾಯ ಸಚಿವ ಆರ್ ಅಶೋಕ್ ಅವರು ಕುಳಿತುಕೊಂಡು ಸಂಪೂರ್ಣವಾಗಿ ಈ ವಿಚಾರವನ್ನು ರಾಜಕೀಕರಣಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಪಠ್ಯ ಪುಸ್ತಕಗಳು ಪಕ್ಷ ಪುಸ್ತಕಗಳಾಗಬಾರದು ಎಂದು ಹಲವಾರು ರಾಷ್ಟ್ರೀಯ, ಅಂತರ ರಾಷ್ಟ್ರೀಯ ಚಿಂತಕರು ಹಾಗೂ ಸಂಸ್ಥೆಗಳು ನಿರಂತರವಾಗಿ ಹೇಳುತ್ತಾ ಬಂದಿವೆ. ಹಿಂದಿನ ಪಠ್ಯದಿಂದ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಪ್ರಾದೇಶಿಕ ಒಳಗೊಳ್ಳುವಿಕೆಯ ತತ್ವಗಳನ್ನು ಪ್ರತಿಪಾದಿಸುವ ಪಠ್ಯಗಳನ್ನು ಕಿತ್ತು ಹಾಕಿರುವುದು ಅಕ್ಷಮ್ಯ. ಹೊಸದಾಗಿ ಸೇರಿಸಲಾದ ಪಾಠಗಳು ಬಿಜೆಪಿ-ಸಂಘಪರಿವಾರದ ಸಿದ್ಧಾಂತಕ್ಕೆ ಪೂರಕವಾದ ರೀತಿಯಲ್ಲಿ ಇರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಬಿಜೆಪಿ ಸರ್ಕಾರ, ಯಾವುದೋ ಒಂದು ಅರ್ಜಿಗೆ ಸಂಬಂಧಿಸಿದಂತೆ, ನಿರ್ಧಿಷ್ಟ ವಿಷಯವನ್ನು ಪರಿಶೀಲಿಸಿಕೊಡಿ ಎಂದು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಡದ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವ ಅರ್ಹತೆಯೂ ಇಲ್ಲದ ವ್ಯಕ್ತಿಯಾದ ರೋಹಿತ್ ಚಕ್ರತೀರ್ಥ ಎಂಬುವವರಿಗೆ ದಿನಾಂಕ 8.9.21 ರಂದು ತಿಳಿಸಿದ್ದಾರೆ. ಆದರೆ ಪರಿಶೀಲನೆ ಮಾಡುವುದಕ್ಕೆ ಬದಲಾಗಿ ಸರ್ಕಾರದ ಅಧಿಕೃತ ಆದೇಶವೇ ಇಲ್ಲದೆ ಪರಿಷ್ಕರಣೆ ಮಾಡಿದ್ದಾರೆ. ಈ ಪರಿಷ್ಕರಣೆ ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿರುವುದರಿಂದ ಅಸಾಂವಿಧಾನಿಕವಾಗಿದೆ, ಅಪ್ರಜಾತಾಂತ್ರಿಕ ನಿಲುವಿನಿಂದ ಕೂಡಿದೆ ಎಂದು ಇದರಿಂದ ಸಾಬೀತಾಗಿದೆಯೆಂದು ಹಲವಾರು ತಜ್ಞರುಗಳು ಪ್ರತಿ ಪಾದಿಸುತ್ತಿದ್ದಾರೆ ಎಂದಿದ್ದಾರೆ.

ಮುಡಂಬಡಿತ್ತಾಯ ಸಮಿತಿ ಸಂವಿಧಾನದ ಆಶಯಗಳಿಗೆ ಶಿಕ್ಷಣ ಆಯೋಗಗಳ ಸಲಹೆಗಳನ್ನು ಗಾಳಿಗೆ ತೂರಿದೆ ಎಂಬ ಕಾರಣದಿಂದಲೆ ನಮ್ಮ ಸರ್ಕಾರ ಬರಗೂರು ರಾಮಚಂದ್ರಪ್ಪನವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸದರಿ ಸಮಿತಿಯ ಅಡಿಯಲ್ಲಿ 27 ಉಪ ಸಮಿತಿಗಳಿದ್ದವು. ಪ್ರತಿ ಉಪ ಸಮಿತಿಯಲ್ಲಿ 4 ಜನರಿದ್ದರು. ಬರಗೂರು ಸಮಿತಿಯು ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡುವಾಗ ಸುಮಾರು 30 ಸಾವಿರಕ್ಕೂ ಹೆಚ್ಚು ಶಿಕ್ಷಕರು ಮತ್ತು ಶಿಕ್ಷಣ ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರೊಂದಿಗೆ ಸಂವಾದ ಮಾಡಲಾಗಿತ್ತೆಂದು ಕೇಳಿದ್ದೇನೆ. ಅವರು 21 ನೇ ಶತಮಾನಕ್ಕೆ ಬೇಕಾದ ಪಠ್ಯಪುಸ್ತಕವನ್ನು ಪರಿಷ್ಕರಿಸಿಕೊಡಿ ಎಂದು ಕೇಳಿಕೊಂಡಿದ್ದೆವು. ಅದರಂತೆ ಅವರು ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಿ ಕೊಟ್ಟಿದ್ದರು. ಅವುಗಳನ್ನು ವಿರೋಧ ಪಕ್ಷದಲ್ಲಿದ್ದ ಬಿಜೆಪಿಯಾಗಲಿ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಣ ತಜ್ಞರಾಗಲಿ, ಶಿಕ್ಷಕರಾಗಲಿ, ಸಮುದಾಯಗಳಾಗಲಿ, ಮಕ್ಕಳಾಗಲಿ, ಪೋಷಕರಾಗಲಿ ವಿರೋಧ ವ್ಯಕ್ತ ಪಡಿಸಿರಲಿಲ್ಲ. ಆದರೆ ಈಗ ಕರ್ನಾಟಕದ ಜನರಷ್ಟೆ ಅಲ್ಲ, ತಜ್ಞರುಗಳೂ ವಿರೋಧಿಸಿದ್ದಾರೆ. ಜೊತೆಗೆ ಆಡಳಿತಾರೂಢ ಬಿಜೆಪಿಯ ಎಂ ಎಲ್ ಎ, ಎಂಪಿಗಳೆ ವಿರೋಧಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಸರ್ಕಾರ ಮಾಡಿರುವ ಪಠ್ಯ ಪರಿಷ್ಕರಣೆಯಲ್ಲಿ ಕನ್ನಡ ಭಾಷೆಯ ಪಠ್ಯ ಪುಸ್ತಕದಲ್ಲಿ 21 ಜನ ಶೂದ್ರ ಕವಿ, ಲೇಖಕರ ಬರಹಗಳನ್ನು ಕೈ ಬಿಡಲಾಗಿದೆ [ ಅದರಲ್ಲಿ 6 ಕ್ಕೂ ಹೆಚ್ಚು ಜನ ದಲಿತ ಸಮುದಾಯಗಳ ಬರಹಗಾರರ ಬರಹಗಳು, 8 ಕ್ಕೂ ಹೆಚ್ಚು ಜನ ಲಿಂಗಾಯತ ಸಮುದಾಯಗಳ ಬರಹಗಳನ್ನು ಕೈ ಬಿಡಲಾಗಿದೆ]. ಬದಲಿಗೆ 28 ಜನರ ಬರಹಗಳನ್ನು ಸೇರಿಸಿದ್ದಾರೆ. ಸೇರ್ಪಡೆಗೊಂಡ ಶೇ.95 ರಷ್ಟು ಜನ ಲೇಖಕರು ಬ್ರಾಹ್ಮಣರಾಗಿದ್ದಾರೆ. ಆದರಲ್ಲೂ ಸಂವಿಧಾನ ವಿರೋಧಿ ಆರೆಸ್ಸೆಸ್ ಸಿದ್ಧಾಂತ ಬೆಂಬಲಿಸುವ ಬ್ರಾಹ್ಮಣ ಲೇಖಕರ ಗದ್ಯ-ಪದ್ಯಗಳನ್ನು ಕಲಿಸಬಾರದೆನ್ನುವ ವಿಕೃತಿ ನಮ್ಮದಲ್ಲ. ಈ ಹಿಂದೆಯೂ ಹಲವಾರು ಬ್ರಾಹ್ಮಣ ಲೇಖಕರ ಪಠ್ಯಗಳು ಇದ್ದವು. ಆದರೆ ಅವರ ಜೊತೆಯಲ್ಲಿ ಸಮಾಜದ ಎಲ್ಲಾ ಸ್ತರಗಳ ಲೇಖಕ ಲೇಖಕಿಯರಿಗೆ ಅವಕಾಶ ಕಲ್ಪಿಸುವುದು ಸಂವಿಧಾನದ ತತ್ವಗಳಿಗೆ ಅನುಗುಣವಾಗಿದೆ. ಆದರೆ ಈಗ ಇದನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಈಗ ಪಠ್ಯ ಪುಸ್ತಕಗಳಲ್ಲಿ ಶೂದ್ರ, ದಲಿತ, ಅಲ್ಪಸಂಖ್ಯಾತರ ಕುರಿತು ದ್ವೇಷ ಸಾಧಿಸುವ, ಬಹುಪಾಲು ಜನ ಆರ್ ಎಸ್ ಎಸ್ ಗೆ ಸೇರಿದವರ ಪಾಠಗಳನ್ನು ಸೇರಿಸಲಾಗಿದೆ. ಇವರಲ್ಲಿ ಬಹುಪಾಲು ಜನ ಲೇಖಕರೇ ಅಲ್ಲ. ಮನುವಾದಿ ಅಜೆಂಡಾವನ್ನು ಪ್ರಚಾರ ಮಾಡುವ ವಕ್ತಾರರುಗಳಷ್ಟೆ ಎಂದು ಅವರು ಹೇಳಿದ್ದಾರೆ.

ಇಡೀ ಸಮಾಜದಲ್ಲಿ ಕೇವಲ ಅತ್ಯಲ್ಪ ಗುಂಪುಗಳನ್ನು ಪ್ರತಿನಿಧಿಸುವ ಇಂತಹ ವ್ಯಕ್ತಿಗಳ ರಾಜಕೀಯ ಪ್ರೇರಿತ ಪಾಠಗಳನ್ನು ಸಮಾಜದ ಶೇಕಡಾ 98ರಷ್ಟು ಸಮುದಾಯಗಳು ಒಪ್ಪಿಕೊಳ್ಳಬೇಕು ಎಂದು ಹೇಳುವುದು ಸರ್ವಾಧಿಕಾರಿ ವರ್ತನೆ. ಇದನ್ನು ನೇರವಾಗಿ ಆರೆಸ್ಸೆಸ್ ವ್ಯಕ್ತಿಗಳಾದ ಸುರೇಶ್ ಕುಮಾರ್, ನಾಗೇಶ್ ಅವರ ಬಾಯಿಂದ ಹೇಳಿಸದೇ ಆರ್. ಅಶೋಕ್, ಸಿ ಟಿ ರವಿ, ಕೋಟಾ ಶ್ರೀನಿವಾಸ ಪೂಜಾರಿ, ನಾರಾಯಣ ಸ್ವಾಮಿ ಮೊದಲಾದ ಹಿಂದುಳಿದ, ಶೂದ್ರ ಮತ್ತು ದಲಿತ ರಾಜಕಾರಣಿಗಳ ಮೂಲಕ ಹೇಳಿಸುವುದು ಆರೆಸ್ಸೆಸ್‍ನ ಪಿತೂರಿ ಪಾಂಡಿತ್ಯ ಎಂಬುದು ಕನ್ನಡಿಗರಿಗೆ ಅರ್ಥವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರಿಗೆ ಮೊದಲಿಗಿಂತ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಸರ್ಕಾರ ಸಮರ್ಥನೆ ಮಾಡಿಕೊಳ್ಳಲಾಗಿದೆ. ಸೂಕ್ಷ್ಮವಾಗಿ ನೋಡಿದಲ್ಲಿ ಕುವೆಂಪು ಅವರನ್ನು ಮತ್ತೂ ಅವಮಾನಿಸಲಾಗಿದೆ. ಯಾವ ಮತ್ತು ಯಾರ ಪದ್ಯಗಳನ್ನು ತೆಗೆದು ಹಾಕಿ ಅದರ ಬದಲಿಗೆ ಕುವೆಂಪು ಅವರ ಪದ್ಯಗಳನ್ನು ಹಾಕಲಾಗಿದೆ? ಕುವೆಂಪು ಅವರ ಆಶಯಗಳನ್ನು ಸಮರ್ಥವಾಗಿ ತಮ್ಮ ಸಾಹಿತ್ಯದಲ್ಲಿ ಬಿಂಬಿಸುವ ಎಸ್ ಜಿ ಸಿದ್ದರಾಮಯ್ಯ ಮತ್ತು ಬಿ ಟಿ ಲಲಿತಾ ನಾಯಕ್ ಅವರ ಪದ್ಯಗಳನ್ನು ತೆಗೆದು ಒಂದು ತಂತ್ರಗಾರಿಕೆಯಾಗಿ ಕುವೆಂಪು ಪದ್ಯಗಳನ್ನು ಹಾಕಲಾಗಿದೆ. ಈ ಪದ್ಯಗಳ ಕೊನೆಯಲ್ಲಿ ಕುವೆಂಪು ಅವರನ್ನು ಪರಿಚಯಿಸುವಾಗ ‘ರಾಷ್ಟ್ರಕವಿ ಕುವೆಂಪು’ ಎಂದು ಹೇಳುವ ಬದಲಿಗೆ ಅನಗತ್ಯವಾಗಿ ಎರಡನೆಯ ರಾಷ್ಟ್ರಕವಿ ಕುವೆಂಪು (ಮೊದಲನೆಯವರು ಗೋಂವಿದ ಪೈ) ಎಂದು ಬರೆದಿರುವುದು ಎಂತಹ ಮನಸ್ಥಿತಿ? 7 ನೇ ತರಗತಿ ಕನ್ನಡ ಪಠ್ಯದಲ್ಲಿ ಏಕೀಕರಣ ಚಳವಳಿಯ ಪಾಠದಿಂದ ಕುವೆಂಪು ಅವರ ಭಾವಚಿತ್ರವನ್ನು ಕಿತ್ತು ಹಾಕಿ ಅದರ ಬದಲಿಗೆ ಗೋವಿಂದ ಪೈ ಅವರ ಭಾವಚಿತ್ರ ಸೇರಿಸಲಾಗಿದೆ. ಹೀಗೆ ಮಾಡುವುದು ನಾಡಿನ ಇಬ್ಬರು ಧೀಮಂತ ಸಾಹಿತಿಗಳಾದ ರಾಷ್ಟ್ರಕವಿ ಕುವೆಂಪು ಮತ್ತು ರಾಷ್ಟ್ರಕವಿ ಗೋವಿಂದ ಪೈ ಇಬ್ಬರಿಗೂ ಮಾಡಿದ ಅಪಮಾನವಲ್ಲವೇ? ನಾಡಿನ ಏಳಿಗೆಗಾಗಿ ಅಹರ್ನಿಶಿ ದುಡಿ ಚೇತನಗಳನ್ನು ಒಂದು ಸರ್ಕಾರ ಹೀಗೆ ಅಪಮಾನಿಸುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಮನುವಾದಿ ಸಿದ್ಧಾಂತದ ಎಲ್ಲ ಶೂದ್ರ- ದಲಿತ, ದುಡಿಯುವ ವರ್ಗಗಳ ವಿರೋಧಿಯಾದ ಬಿಜೆಪಿ ಸರ್ಕಾರ ನಾಲ್ಕು ಜನ ಶೂದ್ರ ಸಮುದಾಯಗಳಿಗೆ ಸೇರಿದ ಸಚಿವರುಗಳ ಬಾಯಲ್ಲಿ ಸುಳ್ಳು ಹೇಳಿಸಿದೆ. ಬರಗೂರು ಸಮಿತಿಯು ನಾಡಪ್ರಭು ಕೆಂಪೇಗೌಡರ ಕುರಿತಾದ ಪಾಠವನ್ನು 3 ಪುಟಗಳಷ್ಟನ್ನು ಸೇರಿಸಿತ್ತು. ಇದನ್ನು ಬಿಜೆಪಿ ಸರ್ಕಾರವು 1 ಪುಟಕ್ಕೆ ಇಳಿಸಿರುವ ಮಾಹಿತಿ ಸರ್ಕಾರದ ವೆಬ್ ಸೈಟಿನಲ್ಲಿದೆ. ಧೈರ್ಯವಿಲ್ಲದ, ಗೊತ್ತಿಲ್ಲದೆ ಬೆನ್ನಿಗೆ ಇರಿಯುವ ಸ್ವಭಾವದ ಮನುವಾದಿ ದುಷ್ಟರು ನಾಡಪ್ರಭು ಕೆಂಪೇಗೌಡರ ಪಾಠಗಳನ್ನು ಕೈಬಿಟ್ಟಿದೆ ಎಂದು ಹೇಳಿದ್ದಾರೆ. ಸರ್ಕಾರವೊಂದು ಇಷ್ಟು ಹಸಿಯಾದ ಸುಳ್ಳು ಹೇಳಿದರೆ ಅದಕ್ಕೆ ಕ್ಷಮೆ ಇದೆಯೆ ಎಂದಿದ್ದಾರೆ.

ಸಿದ್ಧರಾಮಯ್ಯನವರ ಸರ್ಕಾರ ಮೈಸೂರು ಅರಸರು, ಕೆಂಪೇಗೌಡರ ಪಾಠಗಳನ್ನು ಕೈಬಿಟ್ಟಿತ್ತು ನಿರ್ಲಕ್ಷಿಸಿತ್ತು ಎಂದು ಸುಳ್ಳು ಹೇಳುತ್ತಿದೆ. 7 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಮುಡಂಬಡಿತ್ತಾಯ ಸಮಿತಿಯಲ್ಲಿದ್ದದ್ದಕ್ಕಿಂತ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ. ಬರಗೂರು ಸಮಿತಿಯು ಪರಿಷ್ಕರಿಸಿದ್ದ ಕೆಂಪೇಗೌಡರ ಕುರಿತಾದ ಪಾಠದಲ್ಲಿ ಬಹುಪಾಲನ್ನು ಚಕ್ರತೀರ್ಥ ಸಮಿತಿಯು ಕಿತ್ತು ಹಾಕಿದೆ ಎಂದು ತಿಳಿಸಿದ್ದಾರೆ.

ಮೈಸೂರಿನ ಒಡೆಯರ ಕುರಿತು ಸಮಗ್ರ ಮಾಹಿತಿ ಬರಗೂರು ಸಮಿತಿ ರಚನೆಯ ಪಠ್ಯಗಳಲ್ಲಿತ್ತು. ಆದರೆ ‘ಚಕ್ರತೀರ್ಥ ಸಮಿತಿ’ ಮಾಡಿರುವ ಪರಿಷ್ಕರಣೆಯಲ್ಲಿ 7ನೇ ತರಗತಿ ಸಮಾಜ ವಿಜ್ಞಾನ(ಭಾಗ1) ರಲ್ಲಿ ಪುಟ 50-54ರಲ್ಲಿ ಇದ್ದ ಮುಮ್ಮಡಿ ಕೃಷ್ಣರಾಜ ಒಡೆಯರು, ಜಯಚಾಮರಾಜೇಂದ್ರ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರು, ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಮುಖ ಸಾಧನೆಗಳು, ಸರ್ ಎಂ ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್, ಕಮಿಷನರುಗಳ ಆಡಳಿತ- ಇಷ್ಟೂ ಭಾಗಗಳನ್ನು ಕಿತ್ತು ಹಾಕಿರುವುದು ಏಕೆ? ನಾಡಿನ ಎಲ್ಲಾ ಶೂದ್ರ ಸಮುದಾಯಗಳ ಪಾಲಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಒಂದು ಮಹಾನ್ ಚೇತನ. ಅವರನ್ನು ಕರ್ನಾಟಕದ ಸಾಮಾಜಿಕ ನ್ಯಾಯದ ಹರಿಕಾರ ಎನ್ನವಬಹುದು. ಅಂತವರ ಪಾಠವನ್ನೇ ಕೈಬಿಟ್ಟಿರುವುದರ ಹಿಂದೆ ಶೂದ್ರ ವಿರೋಧಿ ಮನಸ್ಥಿತಿ ಕೆಲಸ ಮಾಡಿದೆ ಎಂಬುದು ಸ್ಪಷ್ಟ. ಬಿಜೆಪಿ ಸರ್ಕಾರದ ಸಚಿವರು ರಾಜ್ಯದ ಜನತೆಯ ಎದುರು ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎನ್ನಲು ಇದಕ್ಕಿಂತ ಸಾಕ್ಷಿ ಬೇಕೇ? ಎಂದಿದ್ದಾರೆ.

ರೋಹಿತ್ ಚಕ್ರತೀರ್ಥ ಅವರ ಸಮಿತಿಗೆ ಸಿದ್ಧಗಂಗಾಮಠದ ಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠದ ಶ್ರೀಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಯವರ ಮೇಲೆ ಇರುವ ದ್ವೇಷವಾದರೂ ಏನು? ಅವರ ಕುರಿತು ಹಿಂದಿನ ಪಠ್ಯದಲ್ಲಿ ಇದ್ದಂತಹ ವಿವರಗಳನ್ನು ಯಾಕೆ ತೆಗೆದು ಹಾಕಲಾಗಿದೆ? (ಹಿಂದಿನ 7ನೇ ತರಗತಿ ಸಮಾಜ ವಿಜ್ಞಾನ ಪುಟ 17-18) ನಾನು ಮುಖ್ಯಮಂತ್ರಿ ಇದ್ದಾಗ ಆಧುನಿಕ ಮೈಸೂರಿನ ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ ಮೈಸೂರಿನಲ್ಲಿ ಅಧ್ಯಯನ ಪೀಠ ಮಾಡಿ 5 ಕೋಟಿ ರೂ ಹಣ ನೀಡಿದ್ದೆ. ಹಾಗೆಯೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇರಿಸಿದ್ದೆವು ಎಂದಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ರೋಹಿತ್ ಚಕ್ರತೀರ್ಥ ಸಮಿತಿಗೆ ಇರುವ ಅಸಹನೆಯಂತೂ ಹಸಿಹಸಿಯಾಗಿ ಪಠ್ಯ ಪರಿಷ್ಕರಣೆಯಲ್ಲಿ ಕಂಡು ಬಂದಿದೆ. ಅದಕ್ಕೆ ಇರುವ ನಿದರ್ಶನಗಳು: ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ’ ಎಂಬ ವಾಕ್ಯವಿದ್ದುದನ್ನು ಕಿತ್ತು ಹಾಕಲಾಗಿದೆ. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಗಿಂತಲೂ ಹೆಚ್ಚು ಪಾತ್ರ ವಹಿಸಿದವರು ಬಿ ಎನ್ ರಾವ್ ಎಂದು ಅರ್ಥ ಬರುವಂತೆ ಪಾಠವನ್ನು ರಚಿಸಲಾಗಿದೆ. ಇದರ ಹಿಂದಿನ ದುರುದ್ದೇಶವೇನು? ಇದರಿಂದಾಗಿಯೆ 6 ನೇ ತರಗತಿ ಕನ್ನಡ ಪಠ್ಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ದಿ.ಚನ್ನಣ್ಣ ವಾಲೀಕಾರ್ ಅವರು ಬರೆದಿರುವ ‘ನೀ ಹೋದ ಮರುದಿನ’ ಎಂಬ ಪದ್ಯವನ್ನು ಕಿತ್ತು ಹಾಕಿದ್ದಾರೆ. 7 ನೇ ತರಗತಿ ಸಮಾಜ ವಿಜ್ಞಾನ (ಭಾಗ ಎರಡು)ದಲ್ಲಿ ಅಂಬೇಡ್ಕರ್ ಮತ್ತು ಅವರ ಸುಧಾರಣೆಗಳು ಎಂಬ ಭಾಗದಲ್ಲಿ ಅಂಬೇಡ್ಕರ್ ಅವರ ಜನನ, ಹುಟ್ಟೂರು, ತಂದೆತಾಯಿಗಳ ಹೆಸರುಗಳು ತಿಳಿಸಲಾಗಿತ್ತು. ಅಂಬೇಡ್ಕರ್ ನಡೆಸಿದ ಮಹಾಡ್ ಸತ್ಯಾಗ್ರಹ ಮತ್ತು ಕಾಲಾರಾಂ ದೇಗುಲ ಪ್ರವೇಶ ಚಳವಳಿಗಳ ಕುರಿತು ಮಾಹಿತಿ ಇತ್ತು. ಇವುಗಳನ್ನು ಪರಿಷ್ಕೃತ ಪಠ್ಯದಲ್ಲಿ ಕಿತ್ತು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ಸಚಿವ ಆರ್‌. ಅಶೋಕ್‌ ಆರೋಪಗಳಿಗೆ ಪ್ರೊ. ಬರಗೂರು ಸ್ಪಷ್ಟನೆ

ಮಹಾನ್ ಸಾಮಾಜಿಕ ಹಾಗೂ ಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ‘ಶ್ರೀನಾರಾಯಣಗುರು ಧರ್ಮಪಾಲನ ಯೋಗಂ ಎಂಬ ಪಾಠವನ್ನು 10 ನೇ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ಕಿತ್ತು ಹಾಕಲಾಗಿದೆ. ನಾಡಿನ ಸಾಂಸ್ಕೃತಿಕ ಚೇತನವಾದ ಕನಕದಾಸರ ಕುರಿತು ಇದ್ದ ಭಾಗವನ್ನು (7ನೇ ತರಗತಿ ಸಮಾಜ ವಿಜ್ಞಾನ) ಕಿತ್ತು ಹಾಕಿರುವುದಕ್ಕೆ ಕಾರಣವೇನು? ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ‘ಜಾತಿ ವ್ಯಸನಿಗಳಿಗೆ’ ಬುದ್ದಿ ಹೇಳಿದ ಕನಕರನ್ನೇ ಕೈ ಬಿಟ್ಟಿರುವ ಪರಿಷ್ಕರಣ ಸಮಿತಿಯವರ ಕ್ರಮ ಅಕ್ಷಮ್ಯ ಎಂದಿದ್ದಾರೆ.

ಸಮಾಜದಲ್ಲಿ ಅರ್ಧಕ್ಕರ್ಧ ಇರುವ ಮಹಿಳೆಯರ ಒಳಗಿನಿಂದ ಬರುವ ಸಮಾಜ ಸುಧಾರಕಿಯರು, ಸಾಧಕರನ್ನು ಉದ್ದೇಶಪೂರ್ವಕವಾಗಿ ಕೈ ಬಿಟ್ಟಿರುವುದಕ್ಕೆ ಏನಾದರೂ ಸಮರ್ಥನೆ ಇದೆಯೇ? ಶರಣೆ ಅಕ್ಕಮಹಾದೇವಿ, ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಾದ ರಾಣಿ ಅಬ್ಬಕ್ಕದೇವಿ, ಬಳ್ಳಾರಿ ಸಿದ್ದಮ್ಮ, ಕಮಲಾದೇವಿ ಚಟ್ಟೋಪಾದ್ಯಾಯ, ಯಶೋಧರಮ್ಮ ದಾಸಪ್ಪ, ಉಮಾಬಾಯಿ ಕುಂದಾಪುರ, ಹಾಗೆಯೇ ಮಹಿಳಾ ಸಮಾಜ ಸುಧಾರಕಿಯರಾದ ಸಾವಿತ್ರಿ ಬಾಯಿ ಫುಲೆ, ತಾರಾಬಾಯಿ ಶಿಂದೆ, ಪಂಡಿತಾ ರಮಾಬಾಯಿ ಕುರಿತು ಪಾಠಗಳನ್ನು ತೆಗೆದು ಹಾಕಿದ್ದು ಒಪ್ಪುವಂತದ್ದಲ್ಲ.

ಈ ಹಿನ್ನೆಲೆಯಲ್ಲಿ ಬರಗೂರು ಸಮಿತಿಯ ನೇತೃತ್ವದಲ್ಲಿ ಇತಿಹಾಸ ತಜ್ಞರು ಬರೆದಿದ್ದ ಇತಿಹಾಸದ ಪಾಠಗಳಿಗೆ ವೈಜ್ಞಾನಿಕ ತಳಹದಿ ಇರುವುದರಿಂದ ಅವುಗಳನ್ನೇ ಮುಂದುವರಿಸಬೇಕು. ಜೊತೆಗೆ ಕನ್ನಡಿಗರಿಂದ ಬಂದಿರುವ ಪ್ರತಿರೋಧಗಳಿಂದಾಗಿ ಈಗಾಗಲೆ ಮುದ್ರಿಸಲಾಗಿದ್ದ ಪುಸ್ತಕಗಳನ್ನು ಹಿಂಪಡೆದು ಕೆಲವು ಸಂಗತಿಗಳನ್ನು ಮರು ಮುದ್ರಿಸಲಾಗಿದೆ ಎಂಬ ಮಾಹಿತಿ ಇದೆ. ಹಾಗಾಗಿ ಇಷ್ಟೂ ಹಣವನ್ನು ಸಂಬಂಧಿಸಿದವರಿಂದ ವಸೂಲು ಮಾಡಬೇಕು. ಪಠ್ಯ ಪುಸ್ತಕಗಳ ಬಗ್ಗೆ ಉದ್ಭವಿಸಿರುವ ಎಲ್ಲ ಅಂಶಗಳ ಕುರಿತು ಸರ್ಕಾರ ನಿಖರ ಮಾಹಿತಿಯನ್ನು ಜನರ ಮುಂದೆ ಮಂಡಿಸಬೇಕು. ಸುಳ್ಳು ಹೇಳುವುದಿಲ್ಲವೆಂದು, ಪಕ್ಷ ಪಾತ ಮಾಡುವುದಿಲ್ಲವೆಂದು ಹೇಳಿ ಅಧಿಕಾರ ಸ್ವೀಕರಿಸಿ ನಿನ್ನೆ ಪತ್ರಿಕಾ ಗೋಷ್ಠಿಯಲ್ಲಿ ನಾಡಿನ ಜನರಿಗೆ ಸುಳ್ಳು ಹೇಳಿರುವ ಸಚಿವರನ್ನು ವಜಾ ಮಾಡಬೇಕು. ಮಾಧ್ಯಮಗಳಿಗೆ ಸುಳ್ಳು ಮಾಹಿತಿ ಬಿಡುಗಡೆ ಮಾಡಿರುವ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಬೇಷರತ್ತಾಗಿ ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...