Homeಮುಖಪುಟ’ಅಗ್ನಿಪಥ್' ಯೋಜನೆ; ’ಎಕ್ಸೆಕ್ಯುಟಿವ್' ಆಡಳಿತ ಎಂಬುದು ಸರ್ವಾಧಿಕಾರದ ’ಪ್ರಾಕ್ಸಿ'

’ಅಗ್ನಿಪಥ್’ ಯೋಜನೆ; ’ಎಕ್ಸೆಕ್ಯುಟಿವ್’ ಆಡಳಿತ ಎಂಬುದು ಸರ್ವಾಧಿಕಾರದ ’ಪ್ರಾಕ್ಸಿ’

- Advertisement -
- Advertisement -

ಲೋಕಸಭೆಯಲ್ಲಿ 333/543 ಮತ್ತು ರಾಜ್ಯಸಭೆಯಲ್ಲಿ 109/245 ಸಂಖ್ಯಾಬಲವನ್ನು ಹೊಂದಿರುವ ಸುಸ್ಥಿರ ಸರ್ಕಾರವೊಂದಕ್ಕೆ ’ತನ್ನ ಕಾರ್ಯಕ್ರಮಗಳನ್ನು ಸಂಸದೀಯ ನಿಕಷಕ್ಕೆ ಒಳಪಡಿಸಿ, ಕಾನೂನಾಗಿ ಹೊರತರಲು ಯಾಕೆ ಹಿಂಜರಿಕೆ?’ ಎಂಬ ಪ್ರಶ್ನೆ 2019ರಿಂದ ಈಚೆಗೆ ಮತ್ತೆಮತ್ತೆ ಏಳತೊಡಗಿದೆ. 2020ರ ಬಳಿಕ, ಕೋವಿಡ್ ಕಾಲದಲ್ಲಂತೂ ವಿಪತ್ತು ನಿರ್ವಹಣೆ ಕಾನೂನಿನ ಅಡಿಯಲ್ಲೇ ದೇಶವನ್ನು ಆಳಲಾಯಿತು, ಮೊನ್ನೆಮೊನ್ನೆಯ ತನಕ ಸಾವಿರಾರು ’ಎಕ್ಸೆಕ್ಯುಟಿವ್ ಆರ್ಡರ್’ಗಳ ಮೂಲಕವೇ ದೇಶವನ್ನು ನಿಯಂತ್ರಿಸಲಾಯಿತು. ಈಗ ಕೋವಿಡ್ ಹಿಂಜರಿದು, ವಿಪತ್ತು ಪ್ರಕಟಣೆಯನ್ನು ಹಿಂದೆಗೆದುಕೊಳ್ಳಲಾಗಿದ್ದರೂ, ಕಾನೂನು ಜಾರಿಯ ಮಟ್ಟಿಗೆ ಅದೇ ಹಳೆಯ ಚಾಳಿ ಮುಂದುವರಿಯುತ್ತಿರುವಂತೆ ತೋರುತ್ತಿದೆ. ಸಾರ್ವಜನಿಕ ನೆನಪಿನ ಅವಧಿ ತೀರಾ ಚಿಕ್ಕದೆಂಬ ವಾಸ್ತವ ಸರ್ಕಾರದ ಅನುಕೂಲಕ್ಕೆ ಬರುತ್ತಿದೆ. ಇದು ಹೀಗೇ ಮುಂದುವರಿದರೆ, ಒಂದು ಬಹುಮತ ಹೊಂದಿರುವ ಸರ್ಕಾರದ ಎದುರು ದೇಶದ ಸಂಸತ್ತು ಕೂಡ ’ರಬ್ಬರ್ ಸ್ಟಾಂಪ್’ ಹುದ್ದೆಯಾಗಲಿದೆ ಎಂಬ ಆತಂಕ ಗಾಢವಾಗಿ ಕಾಡತೊಡಗಿದೆ.

ನಮ್ಮ ಸಾಂವಿಧಾನಿಕ ವ್ಯವಸ್ಥೆಯು ಸಂಸತ್ತನ್ನು ’ಶಾಸಕಾಂಗ’ ಎಂದು ಗುರುತಿಸಿದ್ದು, ಅದರ ಸದಸ್ಯರಾದ ಜನಪ್ರತಿನಿಧಿಗಳು ಸಂವಿಧಾನದ ಚೌಕಟ್ಟಿನೊಳಗೆ ಚರ್ಚೆಗಳನ್ನು ನಡೆಸಿ, ದೇಶದ ಕಾನೂನುಗಳನ್ನು ರೂಪಿಸುವ ಮಹತ್ವದ ಜವಾಬ್ದಾರಿಯನ್ನು ಸಂವಿಧಾನ ಅದಕ್ಕೆ ನೀಡಿದೆ. ಹೀಗೆ ಶಾಸನವಾಗಿ ಬಂದ ಕಾನೂನುಗಳಿಗೆ ’ಕಾರ್ಯಾಂಗ’ದ ಅಧಿಕಾರಿ ವ್ಯವಸ್ಥೆ ಸೂಕ್ತ ನಿಯಮಗಳನ್ನು ರೂಪಿಸುವ ಮೂಲಕ ಕಾರ್ಯಾನುಷ್ಠಾನಕ್ಕೆ ತರಬೇಕಾಗಿರುತ್ತದೆ ಎಂಬುದು ನಾವು ಅರ್ಥಮಾಡಿಕೊಂಡಿರುವ ಪ್ರಜಾತಾಂತ್ರಿಕ ವ್ಯವಸ್ಥೆ. ಇದಕ್ಕೆ ಬದಲಾಗಿ, ಆಡಳಿತಾರೂಢ ರಾಜಕೀಯ ಪಕ್ಷವು ತನ್ನ ಅಜೆಂಡಾಗಳನ್ನು ತಾನು ಬಹುಮತ ಹೊಂದಿರುವ ಸಂಸತ್ತಿನಲ್ಲೇ ಚರ್ಚೆಗೆ ಒಡ್ಡದಿರುವುದು ಮತ್ತು ನೇರವಾಗಿ ಕಾರ್ಯಾಂಗದ ಮೂಲಕ ಜಾರಿಗೆ ತೊಡಗುವುದನ್ನು ದೇಶ ಹೇಗೆ ಅರ್ಥೈಸಿಕೊಳ್ಳಬೇಕು?

ಇಂತಹದೊಂದು ಆತಂಕಕಾರಿ ಸನ್ನಿವೇಶದ ತೀರಾ ಇತ್ತೀಚೆಗಿನ ’ಕ್ಲಾಸಿಕ್’ ಉದಾಹರಣೆ ಎಂದರೆ, ಈಗ ದೇಶದಾದ್ಯಂತ ಚರ್ಚೆ, ಪ್ರತಿಭಟನೆಗಳಿಗೆ ಕಾರಣ ಆಗುತ್ತಿರುವ ’ಅಗ್ನಿಪಥ್’ ಯೋಜನೆ. ಅದು ಹೇಗೆ ಆತಂಕಕಾರಿ ಎಂಬುದನ್ನು ವಿವರವಾಗಿ ನೋಡೋಣ.

ಈಗಾಗಲೇ ಇರುವ NCC ವ್ಯವಸ್ಥೆ

1917ರಷ್ಟು ಹಿಂದೆಯೇ ಬ್ರಿಟಿಷ್ ಆಡಳಿತ ಕಾಲದಲ್ಲಿ ಇದ್ದಂತಹ ಯೂನಿವರ್ಸಿಟಿ ಕಾರ್ಪ್ಸ್ (UC) ವ್ಯವಸ್ಥೆಯನ್ನು ಸ್ವತಂತ್ರ ಭಾರತವು, ಪಂಡಿತ್ ಎಚ್. ಎನ್. ಕುಂಜ್ರು ನೇತೃತ್ವದ ಸಮಿತಿ ನೀಡಿದ ವರದಿಯ ಆಧಾರದಲ್ಲಿ, ತನ್ನ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡಿತ್ತು. ಈ ಹೊಸ ವ್ಯವಸ್ಥೆಯನ್ನು 1948ರ ಜುಲೈ 15ರಂದು NATIONAL CADET CORPS ACT (Act XXXI of 1948) ಮೂಲಕ ಶಾಸನವಾಗಿ ಅಂಗೀಕರಿಸಲಾಯಿತು. ಶಿಸ್ತಿನ ನಾಗರಿಕ ಸಮಾಜ, ನಾಯಕತ್ವ ಗುಣಗಳು ಮತ್ತು ಸೇನೆ ಸೇರ್ಪಡೆಗೆ ಅಗತ್ಯವಿರುವ ಮೂಲಭೂತ ಕೌಶಲಗಳನ್ನು ದೇಶದ ವಿದ್ಯಾರ್ಥಿಗಳಿಗೆ ಸೇನೆಯ ವ್ಯವಸ್ಥೆಯ ಮೂಲಕವೇ ಕಲಿಸಿಕೊಡಲು ಏರ್ಪಡಿಸಿದ್ದ, ಸಾಂವಿಧಾನಿಕ ಅಂಗೀಕಾರ ಪಡೆದ ವ್ಯವಸ್ಥೆ ಇದಾಗಿತ್ತು. ಅಂದಿನ ಪ್ರಧಾನಿ ಜವಹರ್‌ಲಾಲ್ ನೆಹರೂ ಸರ್ಕಾರ ಇದನ್ನು ಜಾರಿಗೆ ತಂದಿತ್ತು.

ಇಂದು ದೇಶದಾದ್ಯಂತ ಸುಮಾರು 4880 ಕಾಲೇಜುಗಳು ಮತ್ತು 7783 ಶಾಲೆಗಳು ಒಟ್ಟು 13 ಲಕ್ಷಕ್ಕೂ ಮಿಕ್ಕಿ ಕೆಡೆಟ್‌ಗಳಿಗೆ NCC ತರಬೇತಿ ನೀಡುತ್ತಿವೆ. ದೇಶದ 716 ಜಿಲ್ಲೆಗಳಲ್ಲಿ 703ರಲ್ಲಿ NCC ಕೆಡೆಟ್‌ಗಳಿದ್ದಾರೆ. ಅದು ಅಷ್ಟು ಸರ್ವವ್ಯಾಪಿ. ಸೇನೆಗೆ ಸಿಪಾಯಿಗಳಾಗಿ ಸೇರ್ಪಡೆ ಮಾತ್ರವಲ್ಲದೇ, ಅಧಿಕಾರಿ ದರ್ಜೆಯ ಸೇರ್ಪಡೆಗೆ ಅಥವಾ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮೂಲಕ ಸೇನೆ ಸಂಬಂಧಿ ಉನ್ನತ ಕಲಿಕೆಗೆ ಕೂಡ NCC ಬಾಗಿಲು ತೆರೆಯುತ್ತದೆ.

ಮಾಹಿತಿಗಳ-ಪ್ರೋತ್ಸಾಹದ ಕೊರತೆಯಿಂದಾಗಿ NCC ಸೇರುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಸದ, ಮೇ| ಜ| ಬಿ.ಸಿ. ಖಂಡೂರಿ ಅವರ ಅಧ್ಯಕ್ಷತೆಯ ಸಂಸದೀಯ ಸ್ಥಾಯಿ ಸಮಿತಿಯು ಸಂಸತ್ತಿನಲ್ಲಿ ಮಂಡಿಸಿರುವ ವರದಿಯನ್ನು (2015) ಹಾಲೀ ಸರ್ಕಾರ ನೆನೆಗುದಿಗೆ ಹಾಕಿ ಕುಳಿತಿದೆ. ಆ ಬಳಿಕ 2018ರಲ್ಲಿ, NCC ಸುಧಾರಣೆಗಾಗಿ ಅನಿಲ್ ಸ್ವರೂಪ್ (ಶಿಕ್ಷಣ ಇಲಾಖೆಯ ಮಾಜಿ ಕಾರ್ಯದರ್ಶಿ) ಅವರ ನೇತೃತ್ವದ ಸಮಿತಿ ರಚಿಸಲಾಗಿತ್ತು. ಆ ಸಮಿತಿ ವರದಿಯ ಗತಿ ಏನಾಗಿದೆ ಎಂಬುದೂ ಸ್ಪಷ್ಟವಿಲ್ಲ.

ಒಟ್ಟಿನಲ್ಲಿ ಹಾಲೀ ಸರ್ಕಾರಕ್ಕೆ, ನೆಹರೂ ಕಾಲದ್ದೆಂಬ ಕಾರಣಕ್ಕಾಗಿ, ಈ ವ್ಯವಸ್ಥೆ ಬೇಕಾಗಿಲ್ಲ ಎಂಬುದು ಸ್ಪಷ್ಟ.

ಅಗ್ನಿಪಥಕ್ಕೆ ಸಂಸದೀಯ ಮಾನ್ಯತೆ ಇಲ್ಲ

ಕಾಲದ ಪರೀಕ್ಷೆಯಲ್ಲಿ ತೇರ್ಗಡೆ ಆಗಿರುವ, ಸಂಸದೀಯ ಮಾನ್ಯತೆ ಪಡೆದಿರುವ NCCಯಂತಹ ವ್ಯವಸ್ಥೆಯೊಂದು ಈಗಾಗಲೇ ಇರುವಾಗ, ಒಕ್ಕೂಟ ಸರ್ಕಾರದ ಸಚಿವ ಸಂಪುಟವು ಜೂನ್ 14ರಂದು ಸಂಸತ್ತಿನ ಗಮನಕ್ಕೆ ತರದೇ, ಅಗ್ನಿಪಥ ಯೋಜನೆಗೆ ಮಂಜೂರಾತಿ ನೀಡಿಬಿಡುತ್ತದೆ.

ಗಮನಿಸಬೇಕಾದ ಸಂಗತಿಯೆಂದರೆ, ಈ ’ಅಗ್ನಿಪಥ’ ಯೋಜನೆಯ ಬಗ್ಗೆ ಆಡಳಿತ ಪಕ್ಷ 2018ರಲ್ಲಿ ಬಿಡುಗಡೆ ಮಾಡಿದ ಸಾಧನೆಯ ಗುರಿಪತ್ರದಲ್ಲಾಗಲೀ, 2019ರ ಚುನಾವಣಾ ಪ್ರಣಾಳಿಕೆಯಲ್ಲಾಗಲೀ, ಯಾವುದೇ ಪ್ರಸ್ತಾಪ ಇಲ್ಲ. ಹಾಗಾಗಿ ಇದು ಹೊಸ ಯೋಚನೆ ಎಂಬುದು ಖಚಿತ. ಕಳೆದ ಎರಡು ವರ್ಷಗಳ ’ಎಕ್ಸೆಕ್ಯುಟಿವ್ ಆದೇಶ’ ಆಧರಿತ ಆಡಳಿತವನ್ನು ದೇಶದ ಜನತೆ ಕೋವಿಡ್ ಕಾರಣಕ್ಕೆ ಬಾಯಿಮುಚ್ಚಿ ಒಪ್ಪಿಕೊಂಡಿತ್ತು. ಅದನ್ನೇ ತಪ್ಪಾಗಿ ಅಂದಾಜಿಸಿಕೊಂಡಿರುವ ರಾಜಕೀಯ ಪಕ್ಷವೊಂದು, ತನ್ನ ಖಾಸಗಿ ಅಜೆಂಡಾಗಳನ್ನು ಸಂಸದೀಯ ವ್ಯವಸ್ಥೆಗೆ ಬೈಪಾಸ್ ರೂಪಿಸುವ ಮೂಲಕ ಜಾರಿಗೆ ತರುವ ಅತ್ಯುತ್ಸಾಹವನ್ನು ಈ ಪ್ರಕರಣದಲ್ಲಿ ತೋರಿದೆ ಎಂದೇ ಅನ್ನಿಸುತ್ತದೆ.

ಈ ರೀತಿಯ ಹಿಂದು-ಮುಂದಿನ ಯೋಚನೆಗಳಿಲ್ಲದ ಹಠಾತ್ ತೀರ್ಮಾನಗಳಿಂದ ಎದುರಾಗುವ ವಿಪತ್ತುಗಳು ಹಲವು. ಅವುಗಳಲ್ಲಿ ಕೆಲವದರ ಬಿಸಿಯನ್ನು ಸರ್ಕಾರ ಈಗಾಗಲೇ ಅನುಭವಿಸಲಾರಂಭಿಸಿದೆ; ತನ್ನ ಎಂದಿನ ’ಕೋರ್ಸ್ ಕರೆಕ್ಷನ್’ ಚಾಳಿಯನ್ನು ಇಲ್ಲೂ ಆರಂಭಿಸಿದೆ. ಈ ಅಗ್ನಿಪಥ ಯೋಜನೆಯ ವಿಪತ್ತುಗಳನ್ನು ಇಲ್ಲಿ ಪಟ್ಟಿ ಮಾಡಲು ಪ್ರಯತ್ನಿಸಿದ್ದೇನೆ (ಈ ಪಟ್ಟಿ ಅಪೂರ್ಣ. ಇನ್ನೂ ಇಂತಹ ಹಲವು ಲೋಪಗಳು ಈಗಾಗಲೇ ಚರ್ಚೆಯಾಗಿವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳಕಿಗೆ ಬರಲಿವೆ)

ಲೋಪಗಳು-ವಿಪತ್ತುಗಳು

1. ಸೇನೆ ಸೇರ್ಪಡೆಯಲ್ಲಿ ಮುಂಚೂಣಿಯಲ್ಲಿರುವ ಬಿಹಾರ, ಹರ್ಯಾಣ, ಪಂಜಾಬಿನಂತಹ ರಾಜ್ಯಗಳಲ್ಲಿ ಈಗಾಗಲೇ ಯುವಕರು ಈ ಹೊಸ ಯೋಜನೆಯಿಂದ ತಮ್ಮ ಸ್ಥಿರ ಉದ್ಯೋಗಾವಕಾಶಗಳಿಗೆ ಕುತ್ತು ಬರಲಿದೆ ಎಂಬ ವಾಸ್ತವಕ್ಕೆ ಮುಖಾಮುಖಿಯಾಗಿ ಬೀದಿಗಿಳಿದಿದ್ದಾರೆ. ಇದರಿಂದಾಗಿ ಕಾನೂನು-ವ್ಯವಸ್ಥೆಯ ಪ್ರಶ್ನೆಗಳು ಎದ್ದಿವೆ, ಸಾರ್ವಜನಿಕ ಸೊತ್ತುಹಾನಿ ಆಗಿದೆ ಮತ್ತು ಜೀವಗಳೂ ನಷ್ಟವಾಗಿವೆ.

2. ಸೇನೆಗೆ ಸೇರ್ಪಡೆ ಎಂದರೆ ಹೆಚ್ಚಿನವರ ತಲೆಯಲ್ಲಿ ಮೂಡುವ ಚಿತ್ರ, ಸೇನೆಯ ಸಲ್ಯೂಟ್ ಪಡೆಯುವ ದೊಡ್ಡ ದರ್ಜೆಯ ಅಧಿಕಾರಿಗಳದು, ಯೂನಿಫಾರಂಗಳದು. ವಾಸ್ತವ ಏನೆಂದರೆ, ಕಮಿಷನ್ಡ್ ಅಧಿಕಾರಿ ದರ್ಜೆಯಲ್ಲಿ ಸೇನೆ ಸೇರಲು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA), ಕಂಬೈನ್ಡ್ ಡಿಫೆನ್ಸ್ ಸರ್ವೀಸ್ ಎಕ್ಸಾಮಿನೇಷನ್ (CDSE) ಮತ್ತಿತರ ಹಲವು ನಿರ್ದಿಷ್ಟ ಹಾದಿಗಳಿವೆ. ತಾಂತ್ರಿಕ, ವೈದ್ಯಕೀಯ ಅಧಿಕಾರಿಗಳೂ ಆ ದಾರಿಯಲ್ಲೇ ಸೇನೆಗೆ ಸೇರ್ಪಡೆಗೊಳ್ಳುವುದಕ್ಕೆ ವ್ಯವಸ್ಥಿತವಾದ ಹಾದಿ ಹಿಂದಿನಿಂದಲೂ ಇದೆ. ಈ ಅಗ್ನಿಪಥ ಅವುಗಳನ್ನೇನೂ ಬದಲಾಯಿಸುವುದಿಲ್ಲ. ಅಗ್ನಿಪಥ ಯೋಜನೆಯ ಮೂಲಕ ಸೇನೆಗೆ ದಾಖಲಾಗುವ ಯುವಕರು ತಳಹಂತದ ಸಿಪಾಯಿಗಳಾಗಿ ಸೇರ್ಪಡೆಗೊಳ್ಳುವವರು. ಆಡಳಿತ ಪಕ್ಷದ ಕೆಲವು ನಾಯಕರು ಈಗಾಗಲೇ ಇದನ್ನು ಸೂಚಿಸಿದ್ದಾರೆ. ಇದರ ಒಟ್ಟು ಅರ್ಥ, ಆರ್ಥಿಕವಾಗಿ ತಳವರ್ಗದ ಉದ್ಯೋಗಾಕಾಂಕ್ಷಿಗಳೇ ಅಗ್ನಿಪಥದ ಗುರಿ.

3. ಸೇನೆಯಲ್ಲಿ ಪ್ರತೀವರ್ಷ ಸುಮಾರು 60,000 ಸೈನಿಕರು ನಿವೃತ್ತಿ ಹೊಂದುತ್ತಿದ್ದು, ಆ ಖಾಲಿ ಜಾಗಗಳನ್ನು ಭರ್ತಿ ಮಾಡಲು ಈ ಅಗ್ನಿಪಥ್ ಯೋಜನೆಯನ್ನು ಬಳಸಲು ಉದ್ದೇಶಿಸಲಾಗಿದೆ. ವಾರ್ಷಿಕ 5.25 ಲಕ್ಷ ಕೋಟಿ ಗಾತ್ರದ ರಕ್ಷಣಾ ಬಜೆಟ್‌ನಲ್ಲಿ 1.19ಲಕ್ಷ ಕೋಟಿ ರೂ.ಗಳು ಮಾಜಿ ಸೈನಿಕರ ಪಿಂಚಿಣಿಗೆ ವೆಚ್ಚವಾಗುತ್ತಿರುವುದು ಸರ್ಕಾರದ ಮಗ್ಗುಲಮುಳ್ಳಾಗಿತ್ತು. ರಕ್ಷಣೆ ಸೇರಿದಂತೆ ಎಲ್ಲ ರಂಗಗಳಲ್ಲಿ ಆಡಳಿತದ ತಲೆನೋವುಗಳನ್ನೆಲ್ಲ ಖಾಸಗಿಯತ್ತ ಸರಿಸಿ, ಭಾಷಣ ಮಾಡಿಕೊಂಡು ತಿರುಗಾಡುವುದನ್ನೇ ಆಡಳಿತ ಎಂದುಕೊಂಡಿರುವ ಹೊಸಮಾದರಿಯ ನಾಯಕತ್ವದ ಈ ತೀರ್ಮಾನದಿಂದ, ಈ ತನಕ ಸೈನಿಕರಿಗೆ ಸಲ್ಲುತ್ತಿದ್ದ ಪಿಂಚಿಣಿ ಮತ್ತಿತರ ಗೌರವಪೂರ್ವಕ ಸವಲತ್ತುಗಳು ಇಲ್ಲದಾಗುತ್ತವೆ ಎಂಬ ಹುಯಿಲು ದೊಡ್ಡ ಧ್ವನಿಯಲ್ಲಿ ಕೇಳಿಬರುತ್ತಿದ್ದು, ಅದರಲ್ಲಿ ಹುರುಳಿದೆ.

4. ಅಗ್ನಿಪಥ ಯೋಜನೆಯಲ್ಲಿ ನಾಲ್ಕು ವರ್ಷಗಳ ಅವಧಿಯ ಅಂತ್ಯಕ್ಕೆ, ಅವರಲ್ಲಿ 25% ತನಕ ಅಗ್ನಿವೀರರನ್ನು ಸೈನಿಕ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡಲಾಗುತ್ತದೆ; ಉಳಿದವರಿಗೆ 11.71ಲಕ್ಷ ರೂ.ಗಳ ದುಡಿಮೆಯ ನಿಧಿ ಸಿಗುತ್ತದೆ, ಅದನ್ನು ಅವರು ತಮ್ಮ ಬದುಕಿಗೆ, ಶಿಕ್ಷಣಕ್ಕೆ ಬಳಸಬಹುದು ಎಂದು ಸರ್ಕಾರ ಹೇಳುತ್ತಿದೆ, ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಅವರಿಗೆ ಮೀಸಲಾತಿ ನೀಡಲಾಗುವುದು ಎಂದು ಆಶ್ವಾಸನೆ ನೀಡುತ್ತಿದೆ. NCC ಕಾಯಿದೆಯಲ್ಲಿ, ರಾಜ್ಯಸರ್ಕಾರಗಳ ಜೊತೆ ಹೊಂದಾಣಿಕೆಯ ವ್ಯವಸ್ಥೆಯನ್ನು ಸಾಂವಿಧಾನಿಕವಾಗಿಯೇ ಮಾಡಿಕೊಳ್ಳಲಾಗಿತ್ತು. ಆದರೆ, ಅಗ್ನಿಪಥ ಯೋಜನೆಯಲ್ಲಿ, ಡಬಲ್ ಇಂಜಿನ್ ಸರ್ಕಾರ ಇಲ್ಲದ ರಾಜ್ಯಗಳಲ್ಲಿ ಅಥವಾ ಸರ್ಕಾರಗಳು ಬದಲಾದಾಗ ರಾಜ್ಯಗಳ ಪರವಾಗಿ ನೀಡಲಾಗಿರುವ ಈ ಮೀಸಲಾತಿ ಭರವಸೆಗಳ ಗತಿ ಏನು ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ.

5. 80 ವರ್ಷಗಳಿಂದ ದೇಶದ ಸೇವೆಯಲ್ಲಿದ್ದರೂ ಮಲತಾಯಿ ಧೋರಣೆಗೆ ಗುರಿಯಾಗಿರುವ NCC ವ್ಯವಸ್ಥೆಯು ’ಅಗ್ನಿಪಥ’ದ ಕಾರಣದಿಂದಾಗಿ ಅಪ್ರಸ್ತುತಗೊಳ್ಳುವ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಈ ತನಕ ವರ್ಷಕ್ಕೆ 2200 ಕೋಟಿ ರೂ.ಗಳಷ್ಟು ಅಗಾಧ ಮೊತ್ತವನ್ನು ಸರ್ಕಾರಿ ಬೊಕ್ಕಸದಿಂದ ವ್ಯಯಿಸಿ ನಡೆಯುತ್ತಾ ಬಂದಿರುವ NCC ವ್ಯವಸ್ಥೆಯನ್ನು ಯಾವುದೇ ಸ್ಪಷ್ಟ ಯೋಜನೆ ಇಲ್ಲದೆ ರಾತ್ರೋರಾತ್ರಿ ಅಪ್ರಸ್ತುತಗೊಳಿಸುವ ಕ್ರಮ ಖಂಡಿತವಾಗಿಯೂ ಸ್ವೀಕಾರಾರ್ಹ ಅಲ್ಲ.

6. ಇದೆಲ್ಲದಕ್ಕಿಂತ ಹೆಚ್ಚಾಗಿ, ಒಂದು ಸಂಸದೀಯ ವ್ಯವಸ್ಥೆಯನ್ನು ಬದಿಗೆ ಸರಿಸಿ, ಕೇವಲ ಮಂತ್ರಿಮಂಡಲದ ಒಳಗೇ ಈ ಗಾತ್ರದ ಮಹತ್ವದ ತೀರ್ಮಾನವೊಂದು ಆಗಿ ಮುಗಿಯುವುದು, ದೇಶದ ಸಂಸದೀಯ ವ್ಯವಸ್ಥೆಯ ದೀರ್ಘಾರೋಗ್ಯಕ್ಕೆ ಒಳ್ಳೆಯ ಪೂರ್ವೋದಾಹರಣೆ ಆಗಲಾರದು. ಇದನ್ನು ಸರಳವಾಗಿ, “ಕಾರ್ಯಾಂಗವನ್ನು ಪ್ರಾಕ್ಸಿಯಾಗಿ ಬಳಸಿ ನಡೆಸುತ್ತಿರುವ ಸರ್ವಾಧಿಕಾರ” ಎಂದು ಕರೆಯಬಹುದು.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ, ದುಪ್ಪಟ್ಟು, ನಮ್ದೇಕತೆ ಅವರ ಕೆಲವು ಪ್ರಕಟಿತ ಪುಸ್ತಕಗಳು.


ಇದನ್ನೂ ಓದಿ: Explainer: ಏನಿದು ಅಗ್ನಿಪಥ್ ಯೋಜನೆ? ಯಾಕಿಷ್ಟು ವಿರೋಧ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿವಾಹವಾದ ಕಾರಣಕ್ಕೆ ಸೇನಾ ಮಹಿಳಾ ಅಧಿಕಾರಿಯ ವಜಾ; ‘ಲಿಂಗ ತಾರತಮ್ಯ’ ಎಂದ ಸುಪ್ರೀಂಕೋರ್ಟ್‌

0
ವಿವಾಹವಾದ ಕಾರಣಕ್ಕೆ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಖಾಯಂ ನಿಯೋಜಿತ ಅಧಿಕಾರಿಯನ್ನು ವಜಾ ಮಾಡಿರುವುದು ಸ್ವೇಚ್ಛೆಯ ಹಾಗೂ ಸೂಕ್ಷ್ಮತೆ ಇಲ್ಲದ ಲಿಂಗ ತಾರತಮ್ಯ ಹಾಗೂ ಅಸಮಾನತೆಯನ್ನು ಬಿಂಬಿಸುತ್ತದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗ‌ಳಾದ ಸಂಜೀವ್ ಖನ್ನಾ...