Homeಮುಖಪುಟನೆನೆವುದೆನ್ನ ಮನಂ... ಅಣ್ಣಾ ಹಜಾರೆ ದಿನಂಗಳಂ...

ನೆನೆವುದೆನ್ನ ಮನಂ… ಅಣ್ಣಾ ಹಜಾರೆ ದಿನಂಗಳಂ…

- Advertisement -
- Advertisement -

ಅದಾನಿ ಸಮೂಹದ ವ್ಯವಹಾರಗಳ ಕುರಿತು ಹಿಂಡೆನ್‌ಬರ್ಗ್ ವರದಿ ಸುದ್ದಿಯಲ್ಲಿದೆ. ಅದರ ವಿವರಗಳು ಈಗ ಸಾರ್ವಜನಿಕವಾಗಿ ಸಾಕಷ್ಟು ಲಭ್ಯವಿವೆ. ಹಾಗಾಗಿ ಅದರ ವಿವರಗಳ ಗೋಜಿಗೆ ನಾನು ಹೋಗುವುದಿಲ್ಲ. ಆದರೆ, ಈ ವರದಿ ಮತ್ತು ಅದರ ಸುದ್ದಿಗಳನ್ನು ಇನ್ನೊಂದು ಕೋನದಿಂದ ನೋಡುವುದು ಅಗತ್ಯವಿದೆ. ಪ್ರಿಂಟ್ ಅಥವಾ ಟೆಲಿವಿಷನ್ ಮಾಧ್ಯಮಗಳೇ ಭಾರತದ ಜನಸಾಮಾನ್ಯರ ಧ್ವನಿ ಎಂಬ ಮಿಥ್‌ಅನ್ನು ಈ ಗದ್ದಲ ಒಡೆದುಹಾಕುತ್ತಿದೆ ಎಂಬುದು ಬಹಳ ಸಮಾಧಾನಕರ ಸಂಗತಿ. ಅದು ಹೇಗೆ ಎಂಬುದನ್ನು ವಿವರವಾಗಿ ನೋಡೋಣ.

ಇದೆಲ್ಲ ಅರ್ಥ ಆಗಬೇಕಿದ್ದರೆ, ನಾವು ಯುಪಿಎ ಸರ್ಕಾರದ ಎರಡನೇ ಅವಧಿಯ ಬೆಳವಣಿಗೆಗಳಿಂದ ಆರಂಭಿಸಬೇಕು. 2ಜಿ ಹಗರಣ, ಕಲ್ಲಿದ್ದಲು ಹಗರಣ ಎಂದಿತ್ಯಾದಿಯಾಗಿ ಹಗರಣಗಳ ಸರಮಾಲೆಗಳನ್ನೇ ಭಾರತೀಯ ಮಾಧ್ಯಮಗಳು ಮತ್ತೆಮತ್ತೆ ಚರ್ಚಿಸಿ, ಪ್ರತಿನಿತ್ಯ ಅದು ಸಾರ್ವಜನಿಕರ ಮನದಲ್ಲಿ ಉಳಿಯುವಂತೆ ಮಾಡತೊಡಗಿದ್ದವು. 2011ರ ಮಾರ್ಚ್ ಸುಮಾರಿಗೆ ಅಮೆರಿಕ ಸೇರಿದಂತೆ ಜಗತ್ತಿನ ಐವತ್ತಕ್ಕೂ ಮಿಕ್ಕಂತೆ ದೇಶಗಳಲ್ಲಿ ಭಾರತೀಯ ಸಮುದಾಯಗಳಿಂದ ದಂಡಿಯಾತ್ರೆ 2 ನಡೆಯುತ್ತದೆ. ಅದಕ್ಕೆ ದೊರೆತ ಪ್ರತಿಕ್ರಿಯೆಯನ್ನು ಗಮನಿಸಿಕೊಂಡವರು, ಭಾರತದಲ್ಲಿ ಅಣ್ಣಾ ಹಜಾರೆ ಎಂಬ ಸಾಮಾಜಿಕ ಹೋರಾಟಗಾರರ ನೇತೃತ್ವದಲ್ಲಿ ಭಾರತದ ಒಳಗೂ ಭ್ರಷ್ಟಾಚಾರದ ವಿರುದ್ಧ ಬಿಗಿಯಾದ ಕಾನೂನುಗಳನ್ನು ರಚಿಸುವಂತೆ ಅಂದಿನ ಡಾ| ಮನಮೋಹನ್ ಸಿಂಗ್ ಸರ್ಕಾರವನ್ನು ಆಗ್ರಹಿಸಿ, ಜನಾಭಿಪ್ರಾಯಗಳನ್ನು ರೂಪಿಸತೊಡಗುತ್ತಾರೆ; ಕಡೆಗೆ 2011 ಏಪ್ರಿಲ್ 5ರಂದು ದಿಲ್ಲಿಯ ಜಂತರ್ ಮಂತರ್‌ನಲ್ಲಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಆರಂಭಿಸುತ್ತಾರೆ. ಸಹಜವಾಗಿಯೇ ಆಳುವ ಪಕ್ಷವನ್ನು ಹೊರತುಪಡಿಸಿ ಬಹುತೇಕ ಎಲ್ಲ ಪ್ರತಿಪಕ್ಷಗಳು ಮತ್ತು ಮಾಧ್ಯಮಗಳ ಬೆಂಬಲದೊಂದಿಗೆ ಮೈದುಂಬತೊಡಗಿದ ಈ ಹೋರಾಟವನ್ನು, ಭಾರತೀಯ ಮಾಧ್ಯಮಗಳಂತೂ ಎರಡನೆಯ ಸ್ವಾತಂತ್ರ್ಯ ಹೋರಾಟ ಎಂದೇ ಬಿಂಬಿಸಿ ಬಣ್ಣಿಸಿದ್ದವು. ಈ ಹೋರಾಟದಲ್ಲಿ ಅಣ್ಣಾ ಹಜಾರೆ ಅವರ ಜೊತೆಗೆ, ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ, ಜಸ್ಟಿಸ್ ಸಂತೋಷ್ ಹೆಗ್ಡೆ, ಸಾಮಾಜಿಕ ಹೋರಾಟಗಾರ ಶಾಂತಿ ಭೂಷಣ್ ಅವರಿದ್ದರು. ಈ ಹೋರಾಟಕ್ಕೆ ಇಂಡಿಯ ಅಗೇನ್ಸ್ಟ್ ಕರಪ್ಷನ್ ಎಂದು ಹೆಸರಿಡಲಾಗಿತ್ತು. ಏಪ್ರಿಲ್ ಹೊತ್ತಿಗೆ ಈ ಹೋರಾಟಕ್ಕೆ ಪೂರಕವಾಗಿ ಬಾಬಾ ರಾಮದೇವ್ ಅವರ ಭಾರತ ಸ್ವಾಭಿಮಾನ ಆಂದೋಲನ ಆರಂಭಗೊಂಡಿತು. ಜೂನ್ ಐದರಂದು ರಾಮಲೀಲಾ ಮೈದಾನದಲ್ಲಿ ಆರಂಭಗೊಂಡ ಈ ಧರಣಿಗೆ ಪೊಲೀಸರು ದಾಳಿ ನಡೆಸಿದ್ದು ದೇಶದಾದ್ಯಂತ ಸುದ್ದಿಯಾಯಿತು ಮತ್ತು ಅದನ್ನು ಪ್ರತಿಭಟಿಸಿ ದಿಲ್ಲಿಯಲ್ಲಿ ಅಣ್ಣಾಹಜಾರೆ ಅವರದು ಮಾತ್ರವಲ್ಲದೇ ಚೆನ್ನೈ, ಬೆಂಗಳೂರು, ಮುಂಬಯಿ, ಹೈದರಾಬಾದ್, ಜಮ್ಮು ಮತ್ತು ಲಕ್ನೋಗಳಲ್ಲೂ ಸತ್ಯಾಗ್ರಹ-ಪ್ರತಿಭಟನೆಗಳು ನಡೆದವು.

ಅಣ್ಣಾ ಹಜಾರೆ

ಅಲ್ಲಿಂದಾಚೆಗೆ 2014ರ ಸಾರ್ವತ್ರಿಕ ಚುನಾವಣೆಗಳ ತನಕವೂ ಈ ಹೋರಾಟ-ಪ್ರತಿಭಟನೆಗಳ ಕಾವನ್ನು ಕಾಯ್ದುಕೊಂಡು ಬರಲಾಯಿತು ಮತ್ತು ಆ ಬಳಿಕ ಏನೇನಾಯಿತು ಎಂಬುದೆಲ್ಲ ಈಗ ಇತಿಹಾಸ. ಈ ಇಡಿಯ ಪ್ರಹಸನದಲ್ಲಿ ನನ್ನ ಆಸಕ್ತಿ ಇರುವುದು, ಈ ಪ್ರಹಸನದ ಮಾಧ್ಯಮ ಕವರೇಜ್ ಬಗ್ಗೆ. ಅಣ್ಣಾ ಹಜಾರೆ ಅವರನ್ನು “ಅಭಿನವ ಗಾಂಧಿ” ಎಂದು ಬಿಂಬಿಸಿ, ಆ ಬಳಿಕ “ಮೈ ಭೀ ಅಣ್ಣಾ” ಟೋಪಿಯನ್ನು ದೇಶದ ಯುವಕರಿಗೆಲ್ಲ ತೊಡಿಸಿದ್ದರಲ್ಲಿ ಬಲುದೊಡ್ಡ ಪಾತ್ರ ಮಾಧ್ಯಮಗಳದು. ‘ಇಂಡಿಯನ್ ಎಕ್‌ಪ್ರೆಸ್’ ಪತ್ರಿಕೆ 2ಜಿ ಹಗರಣದ ಕಾಲದಲ್ಲಿ ಸುದ್ದಿಗೆ ಮಾಡಿದ್ದ ಸೊನ್ನೆಗಳ ರೈಲು ಲೀಡ್ ಶೀರ್ಷಿಕೆಯನ್ನು ದೇಶ ಇವತ್ತಿಗೂ ನೆನಪಿಟ್ಟುಕೊಂಡಿದೆ. (ಈ ಪ್ರಕರಣದಲ್ಲಿ ಕಡೆಗೆ ಆದ ಲಾಭ ಎಂದರೆ ಅದನ್ನು ಬಹಿರಂಗಪಡಿಸಿದ್ದ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವಿನೋದ್ ರಾಯ್ ಅವರ ನಿವೃತ್ತಿಯ ಬಳಿಕದ ಬದುಕು ಹಸನಾದದ್ದು ಎಂಬುದು ಬೇರೆಯದೇ ಕಥೆ).

ಆ ಬಳಿಕ ಏನಾಯಿತು?

2014ರ ಬಳಿಕ, ಮಾಧ್ಯಮಗಳು ಬದಲಾದದ್ದನ್ನು ದೇಶದಲ್ಲಿ ಪ್ರಜ್ಞಾವಂತರೆಲ್ಲ ಗಮನಿಸಿದ್ದಾರೆ. ನೋಟು ರದ್ದತಿ, ಜಿಎಸ್ಟಿ ಅನುಷ್ಠಾನ, ಸಿಎಎ-ಎನ್‌ಆರ್‌ಸಿ ಗದ್ದಲ, ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟದ ಕಾಲದಲ್ಲಿ ಮಾಧ್ಯಮಗಳು ಎಷ್ಟು ಸುದ್ದಿ ಕೊಟ್ಟಿದ್ದವು ಮತ್ತು ಯಾರಿಗೆ ಬುದ್ಧಿ ಹೇಳುತ್ತಿದ್ದವು ಎಂಬುದನ್ನು ನೋಡಿಕೊಂಡರೆ ಮಾಧ್ಯಮಗಳು ಹೇಗೆ ಬದಲಾದವು ಎಂಬುದು ಅರ್ಥವಾಗುತ್ತದೆ. ಅದರ ಜೊತೆಗೇ, ಪ್ರಧಾನಮಂತ್ರಿಗಳು “ನ ಖಾವೂಂಗ-ನ ಖಾನೇ ದೂಂಗ” ಎಂದದ್ದನ್ನು ಮತ್ತು “ಮೈ ಭೀ ಚೌಕೀದಾರ್” ಎಂದು ಅವರ ಬೆಂಬಲಿಗರು ಎದ್ದದ್ದನ್ನು ಸಂಭ್ರಮಿಸುವುದರಲ್ಲಿ ಮಾಧ್ಯಮಗಳು ಮೈಮರೆತವೇ ಹೊರತು, ಭಾರತದಲ್ಲಿ ಭ್ರಷ್ಟಾಚಾರ ಕಡಿಮೆ ಆಯಿತೇ? ಎಂಬುದನ್ನು ಗಮನಿಸುವ ಗೋಜಿಗೆ ಹೋಗಲಿಲ್ಲ. ರಕ್ಷಣಾ ಖರೀದಿಯ ಹಗರಣಗಳಾದಾಗಲಾಗಲೀ (ಉದಾ: ರಾಫೇಲ್) ಅಥವಾ ಭಾರತೀಯ ಸೇನೆಯು ರಾಜಕೀಯಕ್ಕೆ ಬಳಕೆಯಾದಾಗಲಾಗಲೀ, ಈ ಮಾಧ್ಯಮಗಳು ಏನಾಗಿದೆ ಎಂದು ನೋಡುವ ಗೋಜಿಗೆ ಹೋಗಲಿಲ್ಲ; ಅದಾನಿ ಬಳಗ ಏಕಾಏಕಿ ಕೇವಲ ಮೂರು-ನಾಲ್ಕು ವರ್ಷಗಳಲ್ಲಿ 300-400% ಬೆಳವಣಿಗೆ ಕಂಡಾಗಲೂ ಅವರಿಗೆ ಏನೂ ಅಸಹಜ ಅನ್ನಿಸಲಿಲ್ಲ. ಖಾಸಗೀಕರಣದ ಹೆಸರಲ್ಲಿ ದೇಶದ ಇಂಚಿಂಚನ್ನೂ ಮಾರತೊಡಗಿದಾಗಲೂ, ಅದು ಯಾಕೆ ನಡೆಯಿತೆಂದು ನೋಡುವ ಬದಲು ಅದರ ಸಮರ್ಥನೆಯಲ್ಲಿ ತೊಡಗಿಕೊಳ್ಳಲಾಯಿತು. ಕೋವಿಡ್ ಜಗನ್ಮಾರಿಯ ನಿರ್ವಹಣೆಯಲ್ಲಿಯಂತೂ ಮರ್ಯಾದೆಯ ಎಲ್ಲ ಎಲ್ಲೆಗಳನ್ನು ಮೀರಿ ಸರ್ಕಾರದ ವೈಫಲ್ಯಗಳನ್ನು ಮತ್ತು ಭ್ರಷ್ಟಾಚಾರಗಳನ್ನು “ಸೇವೆ” ಎಂದು ಸಮರ್ಥಿಸಿಕೊಳ್ಳಲಾಯಿತು. ಇದೇ ವೇಳೆಗೆ ಇನ್ನೊಂದೆಡೆ, ಸರ್ಕಾರದ ವಿರುದ್ಧ ಇರುವ ಪತ್ರಕರ್ತರನ್ನು ಅವರ ಉದ್ಯೋಗಕ್ಕೆ ಕುತ್ತು ತಂದು ಮಣಿಸಲಾಯಿತಲ್ಲದೇ ಕ್ರೋನಿಗಳ ಮೂಲಕ ಮಾಧ್ಯಮ ಸಂಸ್ಥೆಗಳನ್ನು ಖರೀದಿಸಲಾಯಿತು. ಇವೆಲ್ಲವೂ ಈಗಾಗಲೇ ಗೊತ್ತಿರುವ ಕಥೆ. ಹಾಗಾಗಿ ಇವನ್ನೆಲ್ಲ ವಿವರವಾಗಿ ಹೇಳುವುದು ಅಗತ್ಯ ಇಲ್ಲ.

ಇದೀಗ ಹೊಸ ಸನ್ನಿವೇಶ

ಹೀಗೆ ಒಂದು ಸರ್ಕಾರ, ಅದರ ಸಮರ್ಥಕರು, ಅದರ ಪರವಾಗಿ ನಿಂತಿರುವ ಮಾಧ್ಯಮಗಳು ಮತ್ತು ವ್ಯವಹಾರಸ್ಥ ಕ್ರೋನಿಗಳು ಎಲ್ಲರೂ ಒಂದು ಕಡೆ ಮಹಾಗೋಡೆಯಾಗಿ ನಿಂತಿರುವಾಗಲೂ ಹಿಂಡೆನ್‌ಬರ್ಗ್ ವರದಿ ಹೊರಬಂದದ್ದು, ಬಿಬಿಸಿಯ ಸಾಕ್ಷ್ಯಚಿತ್ರವೊಂದು ಸವಾಲೊಡ್ಡಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕವೇ ಹರಡಿದ್ದು ಮತ್ತು ಜಗತ್ತಿನಾದ್ಯಂತ ಸುದ್ದಿಯಾದದ್ದು ಸಣ್ಣ ಸಂಗತಿಯೇನಲ್ಲ. ಮಾಧ್ಯಮಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸದಿದ್ದಾಗ, ಅದಕ್ಕೆ ಪರ್ಯಾಯ ತನ್ನ ಹಾದಿಯನ್ನು ತಾನೇ ಕಂಡುಕೊಳ್ಳುತ್ತದೆ ಎಂಬುದಕ್ಕೆ ಹಿಂಡೆನ್‌ಬರ್ಗ್ ವರದಿ ಬಲುದೊಡ್ಡ ನಿದರ್ಶನ ಮತ್ತು ಇತ್ತೀಚೆಗೆ ನಡೆದಿರುವ ಒಂದು ಅತ್ಯಂತ ಆಶಾದಾಯಕ ಬೆಳವಣಿಗೆ. ಕುತೂಹಲಕರ ಸಂಗತಿ ಎಂದರೆ ಅವೆರಡೂ ಕೂಡ ಸಾಂಪ್ರದಾಯಿಕ ಮಾಧ್ಯಮಗಳ ಹಾದಿ ತುಳಿಯದೇ, ನೇರವಾಗಿ ಜನರನ್ನು ತಲುಪಿದ್ದು ಮತ್ತು ಮಾಧ್ಯಮಗಳು ಆ ಬಗ್ಗೆ ಬಾಯಿಬಿಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಿದ್ದು.

ಈ ಎರಡೂ ಪ್ರಕರಣಗಳಲ್ಲಿ, ತಮ್ಮ ವೆಬ್‌ಸೈಟುಗಳ ಮೂಲಕವೇ ವಿಷಯಗಳನ್ನು ಪ್ರಕಟಿಸಿ, ಅಲ್ಲಿ ತಮ್ಮ ವರದಿಗಾರಿಕೆಯನ್ನು ಬಹಿರಂಗಪಡಿಸಿ, ಅಲ್ಲಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ (ಫೇಸ್‌ಬುಕ್, ಟ್ವಿಟ್ಟರ್ ಇತ್ಯಾದಿ) ನೋಡುಗರನ್ನು ಆಹ್ವಾನಿಸಿ ಅವು ವೈರಲ್ ಆಗುವಂತೆ ಮಾಡಿದ್ದರು. ಹಿಂಡೆನ್‌ಬರ್ಗ್ ವರದಿಯ ವಿಷಯದಲ್ಲಂತೂ, ಅದಾನಿ ಬಳಗ ತಮ್ಮ FPOಅನ್ನು ಮಾರುಕಟ್ಟೆಗೆ ಇಳಿಸಲು ಮೊದಲೇ ತೀರ್ಮಾನಿಸಿಕೊಂಡದ್ದರಿಂದ, ಆ ಮಂಗಳವಾರ (24, ಜನವರಿ) ಹಿಂಡೆನ್‌ಬರ್ಗ್ ವರದಿ ಬಹಿರಂಗಗೊಂಡದ್ದು, ಭಾರತದಲ್ಲಿ ಗಣರಾಜ್ಯ ದಿನದ ರಜೆಯ ಕಾರಣದಿಂದಾಗಿ, ಸುದ್ದಿ ಹಬ್ಬಿ-ಹರಡಲು ಸಾಕಷ್ಟು ಸಮಯವನ್ನೂ ಕೊಟ್ಟಿತು, ಜೊತೆಗೇ, ಅದಕ್ಕೆ ಅದಾನಿ ಬಳಗ ಪ್ರತಿಕ್ರಿಯಿಸುವುದನ್ನು ಅನಿವಾರ್ಯಗೊಳಿಸಿತು.

ಇದನ್ನೂ ಓದಿ: Explainer: ಏನಿದು ಹಿಂಡೆನ್‌ಬರ್ಗ್ ವರದಿ? ಅದಾನಿ ಸಾಮ್ರಾಜ್ಯ ಕುಸಿಯುತ್ತಿರುವುದೇಕೆ?

ದೇಶದಲ್ಲಿರುವ ಪ್ರಮುಖ ಮಾಧ್ಯಮಗಳಲ್ಲಿ ಮುಕ್ಕಾಲು ಭಾಗಕ್ಕೆ ಸ್ವತಃ ತನ್ನದೇ ಮಾಲಕತ್ವ ಹೊಂದಿರುವಾಗ ಅದಾನಿ ಬಳಗ ನಿಶ್ಚಿಂತೆಯಿಂದ ಇರಬೇಕಿತ್ತು. ಅದಕ್ಕನುಗುಣವಾಗಿಯೇ ಕಳೆದ ಹದಿನೈದು ದಿನಗಳಿಂದಲೂ ದೇಶದ ಎಲ್ಲ ಪ್ರಮುಖ ದಿನಪತ್ರಿಕೆಗಳಲ್ಲಿ ಅದಾನಿ ಬಳಗವು ಮುಖಪುಟದಲ್ಲೇ ಪೂರ್ಣಪುಟದ ಜಾಹೀರಾತುಗಳ ಮೂಲಕ ಆವರಿಸಿಕೊಂಡಿತ್ತು. ಆದರೆ ಬುಧವಾರದ ವೇಳೆಗೆ, ಬಹುತೇಕ ಎಲ್ಲ ಪತ್ರಿಕೆಗಳಿಗೂ ತಮ್ಮ “ಸುದ್ದಿ ಬದ್ಧತೆಯ” ಮಾನ ಮುಚ್ಚಿಕೊಳ್ಳುವ ಸಲುವಾಗಿಯಾದರೂ ಸಣ್ಣಗೆ ಹಿಂಡೆನ್‌ಬರ್ಗ್ ವರದಿಯ ಕುರಿತು ಪ್ರಸ್ತಾಪ ಮಾಡುವ ಅನಿವಾರ್ಯ ಸ್ಥಿತಿ ಉಂಟಾಗಿತ್ತು. ಅದಾನಿ ಬಳಗದ ಮಾಲಕತ್ವ ಇಲ್ಲದ ಪತ್ರಿಕೆಗಳೇ (ಉದಾಹರಣೆಗೆ ಕನ್ನಡ ಪತ್ರಿಕೆಗಳು) ಈ ಹಿಂಡೆನ್‌ಬರ್ಗ್ ವರದಿಯನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಿದ್ದವು; ಎಲ್ಲಿ ಅದಾನಿ ಬಳಗದ ಬೆನ್ನೆಲುಬಾಗಿ ನಿಂತಿರುವ ಆಳುವವರಿಗೆ ಕಿರಿಕಿರಿಯಾದೀತೋ ಎಂಬ ಎಚ್ಚರ ಈ ವರದಿಗಳಲ್ಲಿ ಇದ್ದಂತಿತ್ತು, ಅಂದಹಾಗೆ, ಆ ವರದಿಗಳನ್ನೇನೂ ಅವರೇ ತಯಾರಿಸಿದ್ದಲ್ಲ. ಕನ್ನಡದಲ್ಲಂತೂ ಸುದ್ದಿಮನೆಗಳಲ್ಲಿ ವ್ಯಾವಹಾರಿಕ ಸುದ್ದಿಗಳ ಪರಿಣತರೂ ಕಡಿಮೆ. ಹಾಗಾಗಿ ಅವರೇನಿದ್ದರೂ ಸುದ್ದಿಮೂಲ ಸಂಸ್ಥೆಗಳು (ಉದಾಹರಣೆಗೆ PTI, ANI, UNI ಇತ್ಯಾದಿ) ಕಳುಹಿಸಿದ ಕಾಪಿಗಳನ್ನೇ ಭಾಷಾಂತರಿಸಿ ಪ್ರಕಟಿಸಿ ಕೈತೊಳೆದುಕೊಂಡಿದ್ದಾರೆ. ಈ ಸುದ್ದಿಯಲ್ಲಿ ಅವರದೇನಾದರೂ ಸಂಪಾದಕೀಯ ನಿರ್ಧಾರ ಇದ್ದರೆ, ಅದು ಆ ಸುದ್ದಿಯನ್ನು ಎಷ್ಟು ಸಣ್ಣ ಗಾತ್ರದಲ್ಲಿ, ಯಾವ ಮೂಲೆಯಲ್ಲಿ ಪ್ರಕಟಿಸಿದರೆ, ತಮ್ಮ ಸುದ್ದಿಬದ್ಧತೆ ಮೆರೆದಂತೆಯೂ ಆಗುತ್ತದೆ ಮತ್ತು ಸುದ್ದಿ ಉಂಟುಮಾಡುವ ಪರಿಣಾಮವೂ ಕಡಿಮೆ ಆಗಬಹುದು ಎಂಬುದರತ್ತ ಮಾತ್ರ ಇದ್ದದ್ದು. ಹಾಗಾಗಿ, ಸ್ವತಃ ಅದಾನಿ ಮಾಲಕತ್ವದಲ್ಲಿರುವ ಪತ್ರಿಕೆಗಳು ಅದನ್ನು ಎಚ್ಚರಿಕೆಯಿಂದ ನಿಭಾಯಿಸಿದ್ದರಲ್ಲಿ ಹೆಚ್ಚೇನೂ ಅಚ್ಚರಿ ಇರಲಾರದು.

ಅದಾನಿ ಮಾಧ್ಯಮ ಜಗತ್ತಿಗೆ ಹೊಸದಾಗಿ ಸೇರ್ಪಡೆ ಆಗಿರುವ NDTV ಬಳಗ ಜನವರಿ 27ರ ತನಕವೂ ಕಾದು, ಆ ಬಳಿಕ ಶೇರು ಮಾರುಕಟ್ಟೆಯಲ್ಲಿ ಕುಸಿತದ ಸುದ್ದಿ ಮತ್ತು ಕಾಂಗ್ರೆಸ್ ಈ ವಿಚಾರದಲ್ಲಿ ತನಿಖೆಗೆ ಆಗ್ರಹಿಸಿದೆ ಎಂಬ ಸುದ್ದಿಗಳನ್ನು ಪ್ರಕಟಿಸಿ ಕೈ ತೊಳೆದುಕೊಂಡಿದೆ. ಅದಾನಿ ಜಗತ್ತಿನ ಭಾಗವಾಗುವ ಮುನ್ನ, ಈ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತು ಸುದ್ದಿ ಮಾಡುವ ನಿರೀಕ್ಷೆ ಇದ್ದ ಮಾಧ್ಯಮ ಬಳಗ ಅದು.

ಉಳಿದ ಪತ್ರಿಕೆಗಳೂ ಕೂಡ ಹಿಂಡೆನ್‌ಬರ್ಗ್ ವರದಿಯಲ್ಲಿ ಏನಿತ್ತು ಎಂಬುದರತ್ತ ತಲೆ ಹಾಕದೇ, “ಅಮೆರಿಕ ಮೂಲದ ಸಂಶೋಧನಾ ಸಂಸ್ಥೆಯೊಂದರ ವರದಿಯ ಕಾರಣಕ್ಕೆ ಭಾರತದಲ್ಲಿ ಶೇರುಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಯಿತು” ಎಂಬುದಕ್ಕೆ ಸೀಮಿತಗೊಂಡು, ಅದಾದ ಬಳಿಕ ಅದಾನಿ ಬಳಗ ಈ ಬಗ್ಗೆ ನೀಡಿದ ಪ್ರತಿಕ್ರಿಯೆಗಳನ್ನು ಪ್ರಕಟಿಸಿದವು. ಸಂತುಲನಾಸಕ್ತರಾದ ಕೆಲವು ಪತ್ರಿಕೆಗಳು ಕಾಂಗ್ರೆಸ್ ಪಕ್ಷ ಈ ಬಗ್ಗೆ SEBI ತನಿಖೆ ನಡೆಸಬೇಕು ಎಂದು ಹೇಳಿದ್ದನ್ನೂ ಪ್ರಕಟಿಸಿದವು. ಇಂತಹದೊಂದು ಗಮನಾರ್ಹ ಸುದ್ದಿಯ ಕುರಿತು ಉದ್ದೇಶಪೂರ್ವಕ ನಿರ್ಲಕ್ಷ್ಯ ಯಾವ ಮಟ್ಟಕ್ಕಿತ್ತೆಂದರೆ, ಹಲವು ವಿದೇಶೀ ಪತ್ರಿಕೆಗಳು, ಅದರಲ್ಲೂ ಬ್ಯುಸಿನೆಸ್ ಸುದ್ದಿಗಳನ್ನು ಪ್ರಕಟಿಸುವ ಫಿನಾನ್ಷಿಯಲ್ ಟೈಮ್ಸ್, ವಾಲ್‌ಸ್ಟ್ರೀಟ್ ಜರ್ನಲ್‌ನಂತಹ ಪತ್ರಿಕೆಗಳು ಹಿಂಡೆನ್‌ಬರ್ಗ್ ಫೌಂಡೇಷನ್ ಸಂಸ್ಥೆಯು ಅದಾನಿ ಬಳಗದ ವ್ಯವಹಾರದಲ್ಲಿ ಹಿತಾಸಕ್ತಿಗಳಿರುವ ಶಾರ್ಟ್ ಸೆಲ್ಲರ್ ಎಂಬುದನ್ನು ಪ್ರಕಟಿಸಿದಾಗಲೂ ಆ “ಶಾರ್ಟ್ ಸೆಲ್ಲರ್” ಎಂದರೇನು ಎಂಬುದನ್ನು ನೋಡುವ ಗೋಜಿಗೂ ಹೋಗದೆ, ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ವರ್ತಿಸಿದವು. ಕಣ್ಣು ಬಿಟ್ಟು ನೋಡಿದರೆ ಇವತ್ತಿಗೂ, ಹಿಂಡೆನ್‌ಬರ್ಗ್ ಅದಾನಿ ಸಂಸ್ಥೆಯ ವಿರುದ್ಧ ಮಾಡಿರುವ ಆಪಾದನೆಗಳೇನು ಎಂಬುದರ ವಿವರ ಪಡೆಯಲು ಅವರ ವೆಬ್‌ಸೈಟಿಗೇ ಭೇಟಿ ನೀಡಬೇಕೇ ಹೊರತು, ಯಾವುದೇ ಪತ್ರಿಕೆಯ ಸುದ್ದಿಯಾಗಿ ಅದು ಲಭ್ಯ ಇದ್ದಂತಿಲ್ಲ.

ಈಗ ಈ ಬರಹ ಸಿದ್ಧಗೊಳ್ಳುವ ಹೊತ್ತಿಗೆ, ಅದಾನಿ ಬಳಗ 413 ಪುಟಗಳ ಪ್ರತಿಕ್ರಿಯೆಯನ್ನು ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದೆ. ಅದರಲ್ಲಿ ಹಿಂಡೆನ್‌ಬರ್ಗ್ ರಿಸರ್ಚ್ ಕೇಳಿರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿರುವುದಾಗಿ ಹೇಳಿಕೊಂಡಿದೆ. ಈಗ ಭಾರತದಲ್ಲಿ ಮಾಧ್ಯಮಗಳ ವರ್ತನೆ ಹೇಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಾದರೆ, ಇನ್ನು ಮುಂದಿನ ಕೆಲವು ದಿನಗಳ ಕಾಲ ಭಾರತೀಯ ಮಾಧ್ಯಮಗಳು ಹೇಗೆ ಅದಾನಿ ಬಳಗದ ಪರವಾಗಿ ತಮ್ಮ ವಾದಗಳನ್ನು ಮುಂದಿಡಲಿವೆ ಎಂಬುದನ್ನು ಗಮನಿಸಿದರೆ ಸಾಕಾಗುತ್ತದೆ.

ಈ ಮಾಧ್ಯಮ ಬೆಳವಣಿಗೆಗಳು ಏನೇ ಇದ್ದರೂ, ಇನ್ನಷ್ಟೇ ತನ್ನ ತಾರ್ಕಿಕ ಬೆಳವಣಿಗೆಗಳನ್ನು ಕಾಣಬೇಕಿರುವ ಈ ಪ್ರಕರಣದ ಹಿನ್ನೆಲೆಯಲ್ಲಿ, ಮಾಧ್ಯಮ ಲೋಕದಲ್ಲಿ ಆಗಿರುವ, ನಾವು ಗಮನಿಸಬಹುದಾದ ಒಂದು ಪುಟ್ಟ ಬದಲಾವಣೆ ಎಂದರೆ, ಯಾವುದೇ ಪ್ರಮುಖ ಮಾಧ್ಯಮಗಳ ಬೆಂಬಲ ಸಿಗುವ ಬದಲು ಆ ಮಾಧ್ಯಮಗಳೆಲ್ಲ ಸುದ್ದಿ ಹೊರಬರದಂತೆ ಗೋಡೆಯಾಗಿ ನಿಂತಿರುವಾಗಲೂ, ಹಿಂಡೆನ್‌ಬರ್ಗ್ ವರದಿ ದೇಶದ ಬಹುತೇಕ ಎಲ್ಲ ಓದು ಬರಹ ಬಲ್ಲವರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಅವರಲ್ಲಿ ಸ್ವಲ್ಪಮಟ್ಟಿಗೆ ಜನ ಶೇರು ಮಾರುಕಟ್ಟೆಯ ಹೂಡಿಕೆದಾರರಾಗಿರುವುದೂ ಕಾರಣ ಇರಬಹುದು. ಇದು ದೇಶದಲ್ಲಿ ಪ್ರಜ್ಞಾವಂತರಿಗೆ ಆಶಾದಾಯಕ ಬೆಳವಣಿಗೆಯಾದರೆ, ತಮ್ಮನ್ನು ತಾವು ಮಾರಿಕೊಂಡಂತೆ ವರ್ತಿಸುತ್ತಿರುವ ದೇಶದ ಮಾಧ್ಯಮಗಳಿಗೆ ಇದು ಎಚ್ಚರಿಕೆಯ ಗಂಟೆ ಕೂಡ ಹೌದು.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಉಡುಪಿ ನಿವಾಸಿ. ಕಳೆದ 35ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅವರು ಕನ್ನಡದಲ್ಲಿ ಆನ್‌ಲೈನ್ ಪತ್ರಿಕೋದ್ಯಮ ಮತ್ತು ಮೇನ್‌ಸ್ಟ್ರೀಮ್ ವೈದ್ಯಕೀಯ ಪತ್ರಿಕೋದ್ಯಮದ ಆರಂಭಿಕ ದಿನಗಳಲ್ಲಿ ಅವುಗಳ ಸ್ವರೂಪದ ಕುರಿತು ಕೆಲಸ ಮಾಡಿರುವವರು. ನುಣ್ಣನ್ನಬೆಟ್ಟ, ನಮ್ದೇಕಥೆ, ದುಪ್ಪಟ್ಟು, ಕರಿಡಬ್ಬಿ ಅವರ ಪ್ರಕಟಿತ ಪುಸ್ತಕಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...