Homeಮುಖಪುಟ100% FDI ಗೆ ಹಾದಿ ಸುಗಮಗೊಳಿಸಲಿರುವ ಹೊಸ ಟೆಲಿಕಾಂ ಮಸೂದೆ; ಮಾರ್ಗದರ್ಶಕ ಮಂಡಳಿ ಸೇರಲಿರುವ TRAI

100% FDI ಗೆ ಹಾದಿ ಸುಗಮಗೊಳಿಸಲಿರುವ ಹೊಸ ಟೆಲಿಕಾಂ ಮಸೂದೆ; ಮಾರ್ಗದರ್ಶಕ ಮಂಡಳಿ ಸೇರಲಿರುವ TRAI

- Advertisement -
- Advertisement -

ಭಾರತ ಸರ್ಕಾರವು ಕಳೆದ ವಾರ ಭಾರತೀಯ ಟೆಲಿಕಾಂ ಮಸೂದೆ-2022ರ ಕರಡನ್ನು ಬಿಡುಗಡೆ ಮಾಡಿದ್ದು, ಅದಕ್ಕೆ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ. ಮೇಲುನೋಟಕ್ಕೆ ಈ ಕರಡು, ಈಗಾಗಲೆ ಖಾಸಗಿಯವರ ಕೈಯಲ್ಲಿರುವ ಟೆಲಿಕಾಂ ರಂಗಕ್ಕೆ ಶಾಸಕಾಂಗದ ಮೂಲಕ ಇನ್ನಷ್ಟು ಖಾಸಗೀಕರಣಕ್ಕೆ ಸುಗಮ ಹಾದಿ ತೆರೆದುಕೊಡುವಂತೆ ಕಾಣಿಸುತ್ತಿದೆ. ಜೊತೆಗೆ, ತಂತ್ರಜ್ಞಾನದಲ್ಲಿ ಆಗುತ್ತಿರುವ ಕ್ಷಿಪ್ರ ಬೆಳವಣಿಗೆಗಳ ಕಾರಣಕ್ಕೆ ಆಗಾಗ ತನ್ನ ನಿಯಂತ್ರಣ ತಪ್ಪುತ್ತಿರುವ ಟೆಲಿಕಾಂ ರಂಗದ ಮೇಲೆ ತನ್ನ ಶಾಸನಾತ್ಮಕ ನಿಯಂತ್ರಣವನ್ನು ಬಲಪಡಿಸಿಕೊಳ್ಳುವ ಸರ್ಕಾರದ ಪ್ರಯತ್ನದಂತೆ ಈ ಹೊಸ ಮಸೂದೆ ಕಾಣಿಸುತ್ತಿದೆ.

ಇದು ಅರ್ಥವಾಗಲು ದೇಶದ ಟೆಲಿಕಾಂ ರಂಗ ಕಳೆದ 35 ವರ್ಷಗಳಲ್ಲಿ ಎಷ್ಟು ವೇಗವಾಗಿ ಬದಲಾಯಿತು ಎಂಬುದನ್ನು ಗಮನಿಸಬೇಕು. ಭಾರತದಲ್ಲಿ ಟೆಲಿಕಾಂ ರಂಗ ವೇಗಪಡೆಯಲು ಬೀಜ ನೆಟ್ಟದ್ದು ಇಂದಿರಾಗಾಂಧಿ. 1981ರಲ್ಲಿ ಫ್ರೆಂಚ್ ಟೆಲಿಕಾಂ ಸಂಸ್ಥೆ ಅಲ್ಕಾಟೆಲ್ ಜೊತೆ ಭಾರತದ ITI ಲಿಮಿಟೆಡ್‌ನ್ನು ವಿಲೀನಗೊಳಿಸುವ ಒಪ್ಪಂದದೊಂದಿಗೆ ಇದು ಆರಂಭಗೊಂಡಿತು. ಅಲ್ಲಿಯತನಕ ಟೆಲಿಫೋನ್ ಸಂಪರ್ಕ ಉಳ್ಳವರ, ಪ್ರತಿಷ್ಠೆಯ ಗುರುತಾಗಿತ್ತು. ಬಳಿಕ ರಾಜೀವ್ ಗಾಂಧಿ-ಸ್ಯಾಮ್ ಪಿತ್ರೋಡಾ ಜೋಡಿ ಜನಸಾಮಾನ್ಯರ ಬಳಿಗೆ ಟೆಲಿಕಾಂ ಸಂಪರ್ಕವನ್ನು ತಲುಪಿಸುವ “ಟೆಲಿಕಾಂ ಕ್ರಾಂತಿ”ಗೆ ಕಾರಣವಾಯಿತು. ಅಂಚೆ ಮತ್ತು ಟೆಲಿಗ್ರಾಫ್ ಇಲಾಖೆಯ ಕೈಯಲ್ಲಿದ್ದ ಟೆಲಿಸಂಪರ್ಕ ವಿಭಾಗ, 1985ರ ಹೊತ್ತಿಗೆ ಪ್ರತ್ಯೇಕವಾಗಿ ಟೆಲಿಕಾಂ ಇಲಾಖೆ (DoT) ಆಯಿತು. 1986ರಲ್ಲಿ MTNL ಮತ್ತು VSNL ವಿಭಾಗಗಳು ಆರಂಭಗೊಂಡವು. 1990ರ ಹೊತ್ತಿಗೆ ಪಿ.ವಿ ನರಸಿಂಹರಾವ್ ಟೆಲಿಕಾಂ ರಂಗವನ್ನು ಉದಾರೀಕರಣಕ್ಕೆ ಒಡ್ಡಿದರು; 1997ರ ಹೊತ್ತಿಗೆ ಬೀದಿಬೀದಿಗಳಲ್ಲಿ ಟೆಲಿಫೋನ್ ಬೂತ್‌ಗಳು, ದೇಶದಲ್ಲಿ ಟೆಲಿಕಾಂ ವೃತ್ತಗಳು ಕಾಣಿಸಿಕೊಂಡವು; ಟೆಲಿಕಾಂ ರಂಗವನ್ನು ಖಾಸಗಿ, ವಿದೇಶೀ ಹೂಡಿಕೆಗಳಿಗೆ ಹಂತಹಂತವಾಗಿ ತೆರೆಯಲಾರಂಭಿಸಲಾಯಿತು. 1994ರ ಹೊತ್ತಿಗಾಗಲೇ ಟೆಲಿಕಾಂ ನೀತಿ ಖಾಸಗೀಕರಣಕ್ಕೆ ತೆರೆದುಕೊಂಡಿತಾದರೂ, ನಿಯಂತ್ರಣ ಸರ್ಕಾರದ ಕೈಯಲ್ಲಿದ್ದುದರಿಂದ ಅದು ಭಾರೀ ಪ್ರಮಾಣದಲ್ಲಿ ಹೂಡಿಕೆಗಳನ್ನು ಆಕರ್ಷಿಸಿರಲಿಲ್ಲ. 1997ರಲ್ಲಿ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಸ್ಥಾಪಿಸುವ ಮೂಲಕ ಖಾಸಗಿಯವರಲ್ಲಿ ’ಲೆವೆಲ್ ಪ್ಲೇಯಿಂಗ್ ಫೀಲ್ಡ್’ನ ಭರವಸೆ ಹುಟ್ಟಿಸಲು ಪ್ರಯತ್ನಿಸಲಾಯಿತು. 1999ರಲ್ಲಿ ವಾಜಪೇಯಿ ಸರ್ಕಾರ ಟೆಲಿಕಾಂ ಖಾಸಗೀಕರಣಕ್ಕೆ ಮಹತ್ವದ ಹಾದಿಗಳನ್ನು ತೆರೆಯಿತು. ಒಂದು ಟೆಲಿಕಾಂ ವೃತ್ತದಲ್ಲಿ ಒಂದಕ್ಕಿಂತ ಹೆಚ್ಚು ಖಾಸಗಿಯವರಿಗೆ ಅವಕಾಶ ಸಿಕ್ಕಿತು; ಲೈಸನ್ಸಿಂಗ್ ತೊಡಕುಗಳ ನಿವಾರಣೆ ಆಯಿತು. ಸರ್ಕಾರ ಟೆಲಿಕಾಂ ಸೇವೆಗಳಿಂದ ದೂರ ಉಳಿದು, ಅದಕ್ಕೆಂದೇ BSNL ಸ್ಥಾಪಿಸಿತು.

1995ರಲ್ಲೇ ಭಾರತಕ್ಕೆ ವೈರ್‌ಲೆಸ್ ಟೆಲಿಸಂಪರ್ಕ ಕಾಲಿಟ್ಟಿತ್ತಾದರೂ ಅದು ಗತಿ ಪಡೆಯತೊಡಗಿದ್ದು 2002ರ ಹೊತ್ತಿಗೆ, 2ಜಿಯೊಂದಿಗೆ ಆರಂಭಗೊಂಡ ಸೇವೆ, 2008ರ ಹೊತ್ತಿಗೆ 3ಜಿ ಆಯಿತು. 2008ರಲ್ಲಿ VSNL ಖಾಸಗಿ ಪಾಲಾಯಿತು. 2012ರ ಹೊತ್ತಿಗೆ ಒಂದು ದೇಶ-ಒಂದು ಲೈಸನ್ಸ್ ನೀತಿಯ ಕಡೆ ಗಮನ ಹರಿಯಿತು. 3ಜಿ ತಂತ್ರಜ್ಞಾನ ಟೆಲಿಫೋನಿನ ಜೊತೆ ಇಂಟರ್ನೆಟ್ ಸಂವಹನಕ್ಕೂ ಹಾದಿ ತೆರೆಯಿತು. 4ಜಿ ಸಂವಹನದೊಂದಿಗೆ ಮೊಬೈಲ್‌ನಲ್ಲಿ ವೀಡಿಯೊ ಸ್ಟ್ರೀಮಿಂಗ್ ಸಾಧ್ಯವಾದರೆ, ಈಗ ನಾವು 5ಜಿ ಹೊಸ್ತಿಲಿನಲ್ಲಿ ಬಂದು ನಿಂತಿದ್ದೇವೆ. ಇದಿಷ್ಟು ಸ್ಥೂಲವಾಗಿ ಭಾರತದ ಟೆಲಿಕಾಂ ಚರಿತ್ರೆ.

ಯಾಕೆ ಹೊಸ ಕಾಯಿದೆ ಅಗತ್ಯ?

ಇಷ್ಟೆಲ್ಲ ವೇಗವಾಗಿ ಟೆಲಿಕಾಂ ರಂಗ ಬೆಳೆಯುತ್ತಿದ್ದರೂ, ಅದನ್ನು ನಿಯಂತ್ರಿಸುವ ಕಾನೂನು ಚೌಕಟ್ಟು ಬಹಳ ಹಳೆಯದು. 1885ರ ಭಾರತ ಟೆಲಿಗ್ರಾಫ್ ಕಾಯಿದೆ, 1993ರ ಇಂಡಿಯನ್ ವೈರ್‌ಲೆಸ್ ಟೆಲಿಗ್ರಾಫ್ ಕಾಯಿದೆ ಹಾಗೂ 1950ರ ಟೆಲಿಗ್ರಾಫ್ ವಯರ್ಸ್ (ದುರ್ಬಳಕೆ ತಡೆ) ಕಾಯಿದೆಗಳೇ ಇಂದಿಗೂ ದೇಶದ ಟೆಲಿಕಾಂ ರಂಗವನ್ನು ನಿಯಂತ್ರಿಸುತ್ತಿವೆ. ಅರ್ಥಾತ್, ಈ ಕಾಯಿದೆಗಳ ಅಡಿಯಲ್ಲಿಯೇ ನಮ್ಮ “ಟೆಲಿಕಾಂ ಕ್ರಾಂತಿ” ಇವತ್ತಿಗೂ ಮುಂದುವರಿದಿದೆ.

ಈ ಹಳೆಯ ಕಾಯಿದೆಗಳ ಆಧಾರದಲ್ಲಿ, ಆಗಾಗ ಕಾಲದ ಅಗತ್ಯಕ್ಕೆ ತಕ್ಕಂತೆ ರೂಪುಗೊಂಡ, ಶಾಸಕಾಂಗದ ಮೊಹರಿಲ್ಲದೆ ಕಾರ್ಯಾಂಗ ರೂಪಿಸಿದ ನೀತಿ-ನಿಯಮಗಳ ಆಧಾರದಲ್ಲೇ ಇಲ್ಲಿಯತನಕವೂ ಟೆಲಿಕಾಂ ಕ್ರಾಂತಿಯ ಗಾಡಿ ಸಾಗಿಬಂದಿದೆ.

ಈಗ ದೇಶದಲ್ಲಿ ಆರಂಭಿಸಲು ಉದ್ದೇಶಿಸಿರುವ 5ಜಿ ತಂತ್ರಜ್ಞಾನ ಬಳಕೆಯ ಆರ್ಥಿಕ ಪರಿಣಾಮಗಳ ಗಾತ್ರ 2035ರ ಹೊತ್ತಿಗೆ 75 ಲಕ್ಷ ಕೋಟಿ ರೂಪಾಯಿಗಳ ಗಾತ್ರದ್ದು (ಒಂದು ಟ್ರಿಲಿಯನ್ ಡಾಲರ್) ಎಂದು ಅಂದಾಜಿಸಲಾಗಿದೆ. ಸಂಸತ್ತಿನಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಸ್ಥಾಯೀ ಸಮಿತಿಯು 5ಜಿಗೆ ನಮ್ಮ ತಯಾರಿಗಳ ಕುರಿತಾಗಿ 2021ರ ಜನವರಿಯಲ್ಲಿ ಶಶಿ ತರೂರ್ ಅವರ ಅಧ್ಯಕ್ಷತೆಯಲ್ಲಿ ವರದಿ ಸಲ್ಲಿಸಿದ್ದು, ಅದರಲ್ಲಿ ನಮ್ಮ ಸನ್ನದ್ಧತೆ ಏನೇನೂ ಸಾಲದು ಎಂದು ಹೇಳಿತ್ತು. ಸ್ಪೆಕ್ಟ್ರಂ ಅಲಭ್ಯತೆ, ಅತಿಯಾದ ಬೆಲೆ, ಬಳಕೆಯ ತಂತ್ರಜ್ಞಾನಗಳಲ್ಲಿ ಸನ್ನದ್ಧತೆ ಇಲ್ಲದಿರುವುದು, ಆಪ್ಟಿಕಲ್ ಫೈಬರ್ ಕೇಬಲ್ ವಿಸ್ತರಣೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿರದಿರುವುದು, ನೆಟ್‌ವರ್ಕ್‌ಗಳ ನಡುವೆ ಸಂಪರ್ಕ ಇಲ್ಲದಿರುವುದು ಮೊದಲಾದ ಕೊರತೆಗಳನ್ನು ಸಮಿತಿ ಗುರುತಿಸಿತ್ತು. ಈ ಎಲ್ಲ ಕೊರತೆಗಳನ್ನು ಹೊಸ ಕಾಯಿದೆ ತುಂಬಿಕೊಡುವುದೆಂಬ ನಿರೀಕ್ಷೆ ಇದೆ. ಇದು ಎಂದೋ ಆಗಬೇಕಿದ್ದ ಕೆಲಸ.

ಹೊಸ ಕಾಯಿದೆಯ ಕರಡು ಏನು ಹೇಳುತ್ತಿದೆ?

ಹೊಸ ಕಾಯಿದೆಯ ಕರಡನ್ನು ಸ್ಥೂಲವಾಗಿ ಗಮನಿಸಿದರೆ, ಅದು ಮೂರು ಉದ್ದೇಶಗಳನ್ನು ಹೊಂದಿರುವಂತಿದೆ.

* ಮೊದಲನೆಯದು, ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ಹಲ್ಲುಗಳನ್ನು ಕಿತ್ತು, ಕೇಂದ್ರ ಸರ್ಕಾರ ತನ್ನ ಕೈಯಲ್ಲಿ ಹೆಚ್ಚಿನ ಅಧಿಕಾರಗಳನ್ನು ಉಳಿಸಿಕೊಳ್ಳುವ ಉದ್ದೇಶ ಹೊಂದಿರುವಂತಿದೆ. ಇದರಿಂದಾಗಿ ಇಲ್ಲಿಯತನಕ “ವಾಚ್‌ಡಾಗ್ ಆಗಿದ್ದ TRAI ಇನ್ನು ಮುಂದೆ “ಮಾರ್ಗದರ್ಶಕ ಮಂಡಳಿ” ಸೇರಲಿದೆ.

* ಎರಡನೆಯದಾಗಿ, ಈಗಾಗಲೇ ರಂಗಕ್ಕಿಳಿದಿರುವ ಖಾಸಗಿಯವರಿಗೆ, ಕಾನೂನಿನ ರಕ್ಷಣೆ ಕೊಡುವ ಮತ್ತು ಈಸ್ ಆಫ್ ಬ್ಯುಸಿನೆಸ್ ಹೆಸರಲ್ಲಿ ಅವರಿಗೆ ಕಾನೂನಿನಡಿಯೇ ಅನುಕೂಲಗಳನ್ನು ಮಾಡಿಕೊಡುವ ಉದ್ದೇಶ ಹೊಂದಿದೆ.

* ಮೂರನೆಯದಾಗಿ, ಟೆಲಿಕಾಂ ಆಪರೇಟರ್‌ಗಳ ಲೈಸನ್ಸಿಂಗ್ ಮುಂದುವರಿಸುವ ಜೊತೆಗೆ ಟೆಲಿಕಮ್ಯುನಿಕೇಷನ್ ಸೇವೆಗಳನ್ನೂ (ಪ್ರಸಾರ ಸೇವೆಗಳು, ಇಮೇಲ್, ಧ್ವನಿ ಮೇಲ್, ಧ್ವನಿ-ವೀಡಿಯೊ ಮತ್ತು ಡೇಟಾ ಸಂವಹನ ಸೇವೆಗಳು, ಆಡಿಯೊಟೆಕ್ಸ್-ವೀಡಿಯೊಟೆಕ್ಸ್ ಸೇವೆಗಳು, ಮೊಬೈಲ್ ಸೇವೆಗಳು, ಇಂಟರ್ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳು, ಸ್ಯಾಟಲೈಟ್ ಆಧರಿತ ಸಂವಹನ ಸೇವೆಗಳು, ಇಂಟರ್ನೆಟ್ ಆಧರಿತ ಸಂವಹನ ಸೇವೆಗಳು, ಯಂತ್ರದಿಂದ ಯಂತ್ರಕ್ಕೆ ಸಂವಹನ, OTT ಸಂವಹನಗಳು ಇದರಲ್ಲಿ ಸೇರಿವೆ) ಲೈಸನ್ಸಿಂಗ್ ಪರಿಧಿಯೊಳಗೆ ತಂದು, ಅವುಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಸರ್ಕಾರಕ್ಕೆ ಇರುವಂತಿದೆ.

ಎಲ್ಲೆಲ್ಲಿ ಬದಲಾವಣೆಗಳು?

* 2021ರ ಆಗಸ್ಟ್ ಹೊತ್ತಿಗೆ, ಭಾರತ ಸರ್ಕಾರದ ಥಿಂಕ್ ಟ್ಯಾಂಕ್ ನೀತಿ ಆಯೋಗವು ನ್ಯಾಷನಲ್ ಮಾನೆಟೈಸೇಷನ್ ಪೈಪ್‌ಲೈನನ್ನು ಸಿದ್ಧಪಡಿಸಿತ್ತು. ಅದರಲ್ಲಿ 2024-25ಕ್ಕೆ ಮುನ್ನ ಟೆಲಿಕಾಂ ಕ್ಷೇತ್ರವನ್ನು ಖಾಸಗಿಗೆ ಮಾರುವ ಮೂಲಕ 35,100 ಕೋಟಿ ರೂಗಳನ್ನು ಸರ್ಕಾರದ ಬೊಕ್ಕಸಕ್ಕೆ ತರಲಾಗುವುದು ಎಂದು ಸೂಚಿಸಲಾಗಿತ್ತು. ಆದರೆ, 2022-23ನೇ ಸಾಲಿನ ಬಜೆಟ್ಟಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಟೆಲಿಕಾಂ ರಂಗಕ್ಕೆ ಬಜೆಟ್ ಹಂಚಿಕೆಯಲ್ಲಿ 138% ಹೆಚ್ಚಳವನ್ನು ಪ್ರಕಟಿಸಿದರು. ಖಾಸಗಿಯವರಿಗೆ ಮಾರಿಹೋಗಲಿದೆ ಎಂದು ಊಹಿಸಲಾಗಿದ್ದ BSNL ಪುನರುತ್ಥಾನಕ್ಕೆ 44,720 ಸಾವಿರ ಕೋಟಿ ರೂ.ಗಳನ್ನು ತೆಗೆದಿರಿಸಲಾಯಿತು. ಇದೀಗ ವಿದ್ಯುತ್ ಕ್ಷೇತ್ರದಲ್ಲಿ ಮಾಡುತ್ತಿರುವಂತೆ, BSNLನಲ್ಲಿ ಆಗಿರುವ ನಷ್ಟಗಳನ್ನು ಸರ್ಕಾರಿ ಬೊಕ್ಕಸದಿಂದ ಸರಿದೂಗಿಸಿ, ಆ ಬಳಿಕ ಹೂಡಿಕೆಗಳಿಗೆ ಆಹ್ವಾನ ನೀಡುವುದು ಸರ್ಕಾರದ ಉದ್ದೇಶವೇ? ಎಂಬುದನ್ನು ಕಾದು ನೋಡಬೇಕಿದೆ.

* ಹೊಸ ಕರಡಿನ ಅನ್ವಯ, ಟೆಲಿಕಮ್ಯುನಿಕೇಷನ್ ಸೇವೆಗಳನ್ನು ಸರ್ಕಾರದ ಲೈಸನ್ಸಿಂಗ್ ನಿಯಂತ್ರಣದ ವ್ಯಾಪ್ತಿಯಲ್ಲಿ ತರಲು ಉದ್ದೇಶಿಸಲಾಗಿದೆ. ಇದರಿಂದಾಗಿ, ವಾಟ್ಸಾಪ್, ಸಿಗ್ನಲ್, ಟೆಲಿಗ್ರಾಂನಂತಹ ಓವರ್-ದಿ-ಟಾಪ್ ಸಂವಹನ ಸೇವೆಗಳು ಬೇರೆ ಟೆಲಿಕಾಂ ಆಪರೇಟರ್ ಸೇವೆಗಳ ರೀತಿಯಲ್ಲೇ ಲೈಸನ್ಸ್ ಪಡೆದು ವ್ಯವಹರಿಸಬೇಕಾಗುತ್ತದೆ. ಭಾರತದಲ್ಲಿ ಮುಖ್ಯಾಲಯ ಹೊಂದಿರದ ಈ ಬಹುರಾಷ್ಟ್ರೀಯ ಕಂಪನಿಗಳು ಭಾರತ ಸರ್ಕಾರದ ನಿಯಂತ್ರಣಕ್ಕೆ ಯಾವ ಮಟ್ಟಿಗೆ ಸಿಗಬಲ್ಲವು ಎಂಬುದು ಈಗ ಎಲ್ಲರ ಕುತೂಹಲ.

* ಖಾಸಗಿಯವರು ತಮ್ಮ ಟವರ್ ಇತ್ಯಾದಿ ಸ್ಥಾವರಗಳ ನಿರ್ಮಾಣಕ್ಕೆ ಹೊರಟಾಗ, ಇಲ್ಲಿಯತನಕ ಇರುತ್ತಿದ್ದ ಸ್ಥಳದ-ಸೊತ್ತುಗಳ ಮಾಲಕತ್ವಕ್ಕೆ ಸಂಬಂಧಿಸಿದ ಗೊಂದಲಗಳನ್ನು ಹೊಸ ಕಾಯಿದೆ ವಿವರವಾಗಿ ಪರಿಹರಿಸುತ್ತದೆ. ಇದರ ಜೊತೆಗೇ, ಖಾಸಗಿಯವರಿಗೆ ತಮ್ಮ ಕೇಬಲ್‌ಗಳನ್ನು ಹಾಯಿಸಲು ರಸ್ತೆ, ಸೇತುವೆ ಮತ್ತಿತರ ಸಾರ್ವಜನಿಕ ಕಾಮಗಾರಿಗಳ ವೇಳೆ ಕಾಮನ್ ಡಕ್ಟ್‌ಗಳ ನಿರ್ಮಾಣಕ್ಕೆ ಮೂಲದಲ್ಲೇ ವ್ಯವಸ್ಥೆ ಮಾಡಿಕೊಡುವತ್ತಲೂ ಕಾಯಿದೆ ಗಮನ ಹರಿಸುತ್ತದೆ.

* 2003ರಲ್ಲಿ ಸಂಸತ್ತು ಯುನಿವರ್ಸಲ್ ಸರ್ವಿಸ್ ಆಬ್ಲಿಗೇಷನ್ ನಿಧಿಗೆ (USOF) ಅನುಮತಿ ನೀಡಿತ್ತು. ದೇಶದ ಗ್ರಾಮೀಣ, ಹಿಂದುಳಿದ ಮತ್ತು ಜನಸಂಖ್ಯೆ ಹೆಚ್ಚಿಲ್ಲದ ಪ್ರದೇಶಗಳು ಖಾಸಗಿವಲಯದ ಮದ್ದಾನೆಗಳ ಮೇಲಾಟದಲ್ಲಿ ಟೆಲಿಕಾಂ ಸಂಪರ್ಕದಿಂದ ಹಿಂದುಳಿಯಬಾರದು ಎಂಬ ಕಾರಣಕ್ಕಾಗಿ, ಈ ನಿಧಿಯನ್ನು ಸ್ಥಾಪಿಸಲಾಗಿತ್ತು. ಟೆಲಿಕಾಂ ಆಪರೇಟರ್‌ಗಳು ತಮ್ಮ ಪಾವತಿಗಳಲ್ಲಿ ಒಂದು ಭಾಗವನ್ನು ಈ ನಿಧಿಗೆ ತೆರಿಗೆ ರೂಪದಲ್ಲಿ ಸಲ್ಲಿಸಬೇಕಾಗಿತ್ತು. ಹಾಲೀ ಹೊಸ ಕರಡು, ಈ ನಿಧಿಯ ತಳ ತಪ್ಪಿಸಿದೆ. ಹೊಸ ಕರಡಿನನ್ವಯ ಟೆಲಿಕಮ್ಯುನಿಕೇಷನ್ ಡೆವಲಪ್‌ಮೆಂಟ್ ಫಂಡ್ (TDF) ಎಂಬ ಹೊಸ ನಿಧಿ ಸ್ಥಾಪನೆ ಆಗಲಿದ್ದು, ಅದನ್ನು ಕೇವಲ ಹಿಂದುಳಿದ ಗ್ರಾಮೀಣ ಭಾಗಗಳಿಗೆ ಮಾತ್ರವಲ್ಲದೇ, ಅಗತ್ಯವಿರುವ ನಗರ ಪ್ರದೇಶಗಳಿಗೆ, ಸಂಶೋಧನೆ-ಅಭಿವೃದ್ಧಿಗೆ, ಕೌಶಲಾಭಿವೃದ್ಧಿ ಚಟುವಟಿಕೆಗಳಿಗೆ ಬಳಸುವ ಪ್ರಸ್ತಾಪ ಇದೆ.

* ಇಲ್ಲಿಯತನಕ ಸ್ವತಂತ್ರ ನಿಯಂತ್ರಕ ಪ್ರಾಧಿಕಾರ ಆಗಿದ್ದ TRAI ಈಗ ’ನಾಮ್ ಕೇ ವಾಸ್ತೇ’ (ಇದ್ದೂ ಸತ್ತಂತೆ) ಆಗಲಿದೆ. ಇಲ್ಲಿಯತನಕ ಯಾವುದೇ ಟೆಲಿಕಾಂ ಸೇವಾದಾತರಿಗೆ ಲೈಸನ್ಸ್ ನೀಡುವ ಮುನ್ನ TRAI ಅಭಿಪ್ರಾಯವನ್ನು ಟೆಲಿಕಾಂ ಇಲಾಖೆ ಪಡೆಯಬೇಕಿತ್ತು. ಆ ಆವಶ್ಯಕತೆಯನ್ನೀಗ ತೆಗೆದುಹಾಕಲಾಗಿದೆ. ತನ್ನ ಸಲಹೆಗಳಿಗೆ ಸರ್ಕಾರದಿಂದ ಅಗತ್ಯ ದಾಖಲೆಗಳನ್ನು ಪಡೆಯಲು TRAIಗೆ ಇದ್ದ ಶಾಸನಬದ್ಧ ಅಧಿಕಾರವನ್ನು ಕಿತ್ತುಹಾಕಲಾಗಿದೆ. ಜೊತೆಗೆ, ಟೆಲಿಕಾಂ ಇಲಾಖೆಯು TRAI ನೀಡುವ ಸಲಹೆಗಳನ್ನು ಸ್ವೀಕರಿಸಬೇಕು, ಬದಲಾವಣೆಗಳು ಬೇಕಿದ್ದಲ್ಲಿ ಮರುಪರಿಶೀಲನೆಗೆ ಕಳಿಸಬೇಕು ಎಂಬ ನಿಯಮ ಇನ್ನು ಮುಂದೆ ಇರುವುದಿಲ್ಲ. ಇದರಿಂದಾಗಿ TRAI ಕೇವಲ “ಹೊರೆ” ಆಗಿ ಉಳಿಯಲಿದೆ.

* ದೇಶದ ಭದ್ರತೆಯ ಪ್ರಶ್ನೆ, ಕಾನೂನು-ವ್ಯವಸ್ಥೆಯ ಪ್ರಶ್ನೆ ಬಂದಾಗ ಇಲ್ಲಿಯತನಕ ಸರ್ಕಾರ ಕಾರ್ಯಾಂಗದ ಮಟ್ಟದಲ್ಲೇ ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸುವ ಕೆಲಸ ಮಾಡುತ್ತಿತ್ತು. ಈಗ ಈ ಕೆಲಸಕ್ಕೆ ಶಾಸನಾತ್ಮಕ ಬಲವನ್ನು ಹೊಸ ಕರಡು ತಂದುಕೊಡಲಿದೆ. ಇದರಿಂದಾಗಿ ಸರ್ಕಾರ ತನ್ನ ಆವಶ್ಯಕತೆಗೆ ತಕ್ಕಂತೆ ಇಂಟರ್ನೆಟ್ ಸಂವಹನಗಳನ್ನು ನಿಯಂತ್ರಿಸುವ, ಟೆಲಿಕಾಂ ಸೇವೆಗಳನ್ನು ಸರ್ಕಾರ ತಾತ್ಕಾಲಿಕವಾಗಿ ತನ್ನ ವಶಕ್ಕೆ ತೆಗೆದುಕೊಳ್ಳುವ, ಸಂವಹನಗಳ ನಡುವೆ ಹಸ್ತಕ್ಷೇಪ ನಡೆಸಿ ಪರಿಶೀಲಿಸುವ ಅಧಿಕಾರ ಪಡೆಯಲಿದೆ.

* ಒಂದು ಟೆಲಿಕಾಂ ಕಂಪನಿ ಇನ್ನೊಂದನ್ನು ಖರೀದಿಸುವ, ವಿಲೀನಗೊಳಿಸುವ, ವಿಭಜನೆಗೊಳ್ಳುವ ಪ್ರಕ್ರಿಯೆಗಳಿಗೆ ಹೊಸ ಕಾನೂನು ಅವಕಾಶ ಕೊಡಲಿದೆ. 100% ವಿದೇಶೀ ಹೂಡಿಕೆಗೆ ಅನುಮತಿ ನೀಡಲಾಗಿರುವ ಹಿನ್ನೆಲೆಯಲ್ಲಿ ಈ ಅವಕಾಶ ಮಹತ್ವದ್ದೆನ್ನಿಸಲಿದೆ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಉಡುಪಿ ನಿವಾಸಿ. ಮುಂಗಾರು, ಕರಾವಳಿ ಅಲೆ, ಪಟ್ಟಾಂಗ, ಉದಯವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅವರು, ಕನ್ನಡದಲ್ಲಿ ಆನ್‌ಲೈನ್ ಪತ್ರಿಕೋದ್ಯಮ ಮತ್ತು ಮೇನ್‌ಸ್ಟ್ರೀಮ್ ವೈದ್ಯಕೀಯ ಪತ್ರಿಕೋದ್ಯಮದ ಆರಂಭಿಕ ಸಂಪನ್ಮೂಲಗಳಲ್ಲಿ ಒಬ್ಬರು. ನುಣ್ಣನ್ನಬೆಟ್ಟ, ನಮ್ದೇ ಕತೆ, ದುಪ್ಪಟ್ಟು, ಕರಿಡಬ್ಬಿ ಅವರ ಪ್ರಕಟಿತ ಪುಸ್ತಕಗಳು.


ಇದನ್ನೂ ಓದಿ: ಆರೆಸ್ಸೆಸ್‌ ದೇಶಪ್ರೇಮದ ಜಾಗೃತಿ ಮೂಡಿಸುತ್ತಿರುವ ಸಂಘಟನೆ: ಸಿಎಂ ಬಸವರಾಜ ಬೊಮ್ಮಾಯಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಕ್ಫ್ ಕಾಯಿದೆ ರದ್ದುಗೊಳಿಸಲು ಖಾಸಗಿ ಸದಸ್ಯ ಮಸೂದೆ ರಾಜ್ಯಸಭೆಯಲ್ಲಿ ಮಂಡನೆ

0
ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್ ಕಾಯಿದೆ 1995ನ್ನು ಹಿಂತೆಗೆದುಕೊಳ್ಳುವ/ ರದ್ದುಗೊಳಿಸುವ ಖಾಸಗಿ ಸದಸ್ಯ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ಬಿಜೆಪಿ ಸಂಸದ ಹರನಾಥ್‌ ಸಿಂಗ್‌ ಯಾದವ್‌ ವಕ್ಫ್‌ ಕಾಯಿದೆ ರದ್ದುಗೊಳಿಸುವ ಮಸೂದೆ 2022ನ್ನು...