ಯಾವುದೇ ಜಾತಿಯ ಯುವಕರು ಅನುಮಾನಾಸ್ಪದವಾಗಿ ಸಾವಿಗೀಡಾದಾಗ ಸಂಘ ಪರಿವಾರ ಅದಕ್ಕೆ ಕೋಮು ಬಣ್ಣವನ್ನು ಬಳಿಯಲು ಯತ್ನಿಸುತ್ತದೆ. ಇದಕ್ಕೆ ಬಹುದೊಡ್ಡ ರಾಜಕೀಯ ಇತಿಹಾಸವೇ ಇದೆ. ಹಾಗೆಯೇ 2017ರ ಡಿಸೆಂಬರ್ 6ರಂದು ಘಟಿಸಿದ ಪರೇಶ್ ಮೆಸ್ತಾ ಎಂಬ ಬೆಸ್ತರ ಯುವಕನ ಸಾವಿನಲ್ಲೂ ರಾಜಕೀಯ ನಡೆಯಿತು.
ಅಂದು ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿದ್ದ ಹೊನ್ನಾವರ ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಬಹುದೊಡ್ಡ ತಿರುವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖಾ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ವರದಿಯಲ್ಲಿ ಪರೇಶ್ ಮೇಸ್ತಾ ಸಾವು ಹತ್ಯೆಯಲ್ಲ, ಆಕಸ್ಮಿಕವಾಗಿ ಘಟಿಸಿದೆ ಎಂದು ಉಲ್ಲೇಖಿಸಲಾಗಿದೆ. ವರದಿ ಪರಿಶೀಲಿಸಿದ ಹೊನ್ನಾವರ ನ್ಯಾಯಾಲಯ ನವೆಂಬರ್ 16ಕ್ಕೆ ತೀರ್ಪು ಕಾಯ್ದಿರಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಎಂಟರಂದು ಹೊನ್ನಾವರ ನಗರದ ಶನಿದೇವಾಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಮೇಸ್ತಾ ಶವವಾಗಿ ಪತ್ತೆಯಾಗಿದ್ದ. ಯುವಕನನ್ನು ಮುಸ್ಲಿಮರು ಹತ್ಯೆ ಮಾಡಿದ್ದಾರೆಂದು ಸಂಘಪರಿವಾರ ಹಾಗೂ ಬಿಜೆಪಿ ಆರೋಪಿಸಿತ್ತು. ಮೃತ ಮೇಸ್ತಾನನ್ನು ಹಿಂದೂ ಕಾರ್ಯಕರ್ತ ಎಂದು ಬಿಂಬಿಸಲಾಯಿತು. ಆಗಿನ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹರಿಹಾಯ್ದಿತ್ತು.
ಪರೇಶ್ ಮೆಸ್ತಾ ಸಾವು ಮುಂದಿಟ್ಟು ಬಿಜೆಪಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿತ್ತು. ಆಗಿನ ಗೃಹ ಮಂತ್ರಿ ರಾಮಲಿಂಗ ರೆಡ್ಡಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ವಿಸ್ತೃತ ವಿಚಾರಣೆಗೆ ಕೇಳಿತ್ತು. ಅದಾಗಿಯೂ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರ ಕನ್ನಡ, ಉಡುಪಿ, ದಕ, ಶಿವಮೊಗ್ಗ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬಿರುಸಿನ ಪ್ರಚಾರ ನಡೆಸಿತ್ತು.
ಇದನ್ನೂ ಓದಿರಿ: ಕೋಲ್ಕತಾ: ದುರ್ಗಾಪೂಜೆಯಲ್ಲಿ ಮಹಾತ್ಮಾ ಗಾಂಧಿಯನ್ನು ರಾಕ್ಷಸನಂತೆ ಬಿಂಬಿಸಿದ ಹಿಂದೂ ಮಹಾಸಭಾ
ಪರೇಶ್ ಸಾವಿನ ಸಂದರ್ಭದಲ್ಲಿ ಬಿಜೆಪಿ ನಾಯಕರು ಹೇಗೆ ವರ್ತಿಸಿ, ಸಮಾಜದ ಭಾವನೆಗಳನ್ನು ಕೆರಳಿಸಲು ಯತ್ನಿಸಿದ್ದರು ಎಂಬುದನ್ನು ಅವಲೋಕನ ಮಾಡಿಕೊಂಡು ಉತ್ತಮ ರಾಜಕೀಯ ಪರಿಸರವನ್ನು ನಿರ್ಮಿಸಬೇಕಿದೆ. ಸಾವುಗಳು ಸಂಭವಿಸಿದಾಗ ಎಚ್ಚರಿಕೆ ವಹಿಸಿ ಒಂದು ಕೋಮನ್ನು ವಿನಾಕಾರಣ ದೂಷಿಸದೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ತುರ್ತು ಇದೆ. ಹೀಗಾಗಿ ಸಂಘಪರಿವಾರ ಹಾಗೂ ಬಿಜೆಪಿ ನಾಯಕರು ಅಂದು ಹೇಗೆ ಅಂದು ವರ್ತಿಸಿದ್ದರು, ಮುಗ್ದ ಜರನ್ನು ಕೆರಳಿಸಿ ಗೆದ್ದರು ಎಂಬುದನ್ನು ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ.
2018ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನಾಯಕ ಅಮಿತ್ ಷಾ ಅವರು ಹೊನ್ನಾವರದಲ್ಲಿರುವ ಪರೇಶ್ ಮೆಸ್ತಾ ಅವರ ಮನೆಗೆ ಭೇಟಿ ನೀಡಿದ್ದರು. ಆ ಮೂಲಕ ಹಿಂದೂ ಮತಗಳ ಧ್ರುವೀಕರಣಕ್ಕೆ ಯತ್ನಿಸಿದ್ದರು. ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗಡೆ ಅಂದು ಹಾಜರಿದ್ದರು.
ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶೋಭಾ ಕರಂದ್ಲಾಜೆ ತರಹೇವಾರಿ ಹೇಳಿಕೆಗಳನ್ನು ನೀಡಿದ್ದರು. “ಈಶ್ವರಪ್ಪನವರ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಜಿಹಾದಿಗಳ ಪರವಾಗಿ ಸರ್ಕಾರ ಹಾಗೂ ಪೊಲೀಸರೇ ನಿಂತು ಹಿಂದೂಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬುದನ್ನು ರಾಜ್ಯಪಾಲರಿಗೆ ನೀಡಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ನಡೆಯುತ್ತಿರುವ ಘಟನೆಗಳಿಗೆ ರಾಜ್ಯ ಸರ್ಕಾರವೇ ಪ್ರಮುಖವಾದ ಕಾರಣ. ಪ್ರಕರಣವನ್ನು ಮುಚ್ಚಿಹಾಕುವ ಗುಮಾನಿ ಆ ಭಾಗದ ಜನರಿಗೆ ಬರುತ್ತಿದೆ” ಎಂದು ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು.
“ಮೀನುಗಾರರ ಜನಾಂಗ ಕಷ್ಟಪಟ್ಟು ಜೀವನ ಮಾಡುತ್ತಿದ್ದು, ಧರ್ಮದ ಬಗ್ಗೆ ನಿಷ್ಟೆಯನ್ನು ಹೊಂದಿದೆ. ಅಂತಹ ಸಮುದಾಯದ ಯುವಕನನ್ನು ಜಿಹಾದಿಗಳು ಅಮಾನುಷ ಹಾಗೂ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆದರೂ ಏನೂ ಆಗಿಲ್ಲ ಎಂಬ ರೀತಿ ಸರ್ಕಾರ ವರ್ತನೆ ಮಾಡುತ್ತಿದೆ” ಎಂದು ಆರೋಪಿಸಿದ್ದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಶೋಭಾ ಕರಂದ್ಲಾಜೆ, “ಹಿಂದಿನ ದಿನ ದೇವಸ್ಥಾನದಲ್ಲಿ ಮೇಸ್ತಾ ಚಂಡೆ ಭಾರಿಸುತ್ತಿದ್ದನು. ಯಾರು ಚಂಡೆ ಹೊಡೆಯುತ್ತಿದ್ದಾನೆ ಎಂದು ಮುಸಲ್ಮಾನ ಗೂಂಡಾಗಳು ಗಮನಿಸಿಕೊಂಡು ಹೋಗಿದ್ದರು. ಡಿಸೆಂಬರ್ ಆರನೇ ತಾರೀಕು ತನ್ನ ಸ್ನೇಹಿತನ ಬೈಕ್ ತರುವುದಾಗಿ ಎಲ್ಲರಿಗೂ ಹೇಳಿ ಮೇಸ್ತಾ ಹೊರಗೆ ಹೋಗಿದ್ದನು. ಆಚೆ ಹೋದವನು ವಾಪಸ್ ಬಂದಿಲ್ಲ” ಎಂದು ಕತೆ ಕಟ್ಟಿದ್ದರು.
ಇಡೀ ದೇಶದ ಶೋಷಿತ ಹಾಗೂ ಅಲಕ್ಷಿತ ಸಮುದಾಯಗಳನ್ನು ರಕ್ಷಿಸುತ್ತಿರುವ ಸಂವಿಧಾನವನ್ನೇ ಬದಲಿಸುವುದಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಸಂಸದ ಅನಂತಕುಮಾರ್ ಹೆಗಡೆ, “ಮೇಸ್ತಾನ ಪ್ರತಿ ಹನಿ ರಕ್ತಕ್ಕೂ ನ್ಯಾಯ ದೊರಕಿಸದೆ ಬಿಡುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
“ಏನು ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ತಾಳ್ಮೆಯನ್ನು ಮೀರಿ ಏನೋ ಮಾಡಿಕೊಳ್ಳುತ್ತೇವೆ ಎಂಬುದು ಸಾಧ್ಯವಾಗುವುದಿಲ್ಲ. ಕೆಳಗಡೆ ಬಿದ್ದಿರುವ ಒಂದೊಂದು ರಕ್ತದ ಹನಿಯ ಪ್ರಜ್ಞೆ ನಮಗಿದೆ. ಏನೇನು ಮಾಡಬೇಕು ಎಂಬುದರ ಬಗ್ಗೆ ನಾವು ಖಂಡಿತವಾಗಿಯೂ ಯೋಚನೆ ಮಾಡುತ್ತೇವೆ. ಕೆಳಗಡೆ ಬಿದ್ದಿರುವ ರಕ್ತಕ್ಕೆ ನ್ಯಾಯ ಕೊಡದೆ ಸುಮ್ಮನಿರುವುದಿಲ್ಲ” ಎಂದು ಪ್ರಚೋದಿಸಿದ್ದರು.
ರಾಜ್ಯದ ಹಲವು ಭಾಗಗಳಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಸರ್ಕಾರವನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದ್ದವು.
ಇದೆಲ್ಲದರ ಪರಿಣಾಮವಾಗಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ದೊರೆತ್ತಿದ್ದವು. ಬಿಜೆಪಿ ಬೆಂಬಲಿಗ ಚಕ್ರವರ್ತಿ ಸೂಲಿಬೆಲೆಯವರು ಕೆಲವು ತಿಂಗಳ ಹಿಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತಾ, “ಒಬ್ಬ ಪರೇಶ್ ಮೆಸ್ತಾನಿಗಾಗಿ ನಾವು ಐದಾರು ಜನರನ್ನು ಗೆಲ್ಲಿಸಿ ಕಳಿಸಿದ್ದೇವೆ. ಆಮೇಲೆ ಏನಾಯ್ತು ಎಂಬುದನ್ನು ಇಲ್ಲಿಯವರೆಗೂ ಪ್ರಶ್ನೆ ಮಾಡಿಲ್ಲ” ಎಂದಿದ್ದರು.
ಪರೇಶ್ ಮೆಸ್ತಾ ಪ್ರಕರಣದಲ್ಲಿ ಆರೋಪಿಯೆಂದು ಗುರುತಿಸಲಾಗಿದ್ದ ಅಜಾದ್ ಅಣ್ಣಿಗೇರಿಗೆ ವಕ್ಫ್ ಮಂಡಲಿ ಜಿಲ್ಲಾ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ಸರ್ಕಾರ ನೀಡಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಬಳಿಕ ಆ ಸ್ಥಾನದಿಂದ ಅವರನ್ನು ತೆರವು ಮಾಡಲಾಗಿತ್ತು.
ಇದನ್ನೂ ಓದಿರಿ: ಸಿನಿಮಾಗಳಲ್ಲಿ ನಮ್ಮ ಅಸ್ಮಿತೆಗಳನ್ನು ಅಳಿಸಲಾಗುತ್ತಿದೆ: ವೆಟ್ರಿಮಾರನ್ ಆತಂಕ
ಬಿಜೆಪಿ ಕ್ಷಮೆ ಯಾಚಿಸಲಿ: ಸಿದ್ದರಾಮಯ್ಯ
ರಾಜಕೀಯ ಮೇಲಾಟಗಳು ಹೇಗೆ ನಡೆಯುತ್ತವೆ ಎಂಬುದಕ್ಕೆ ಪರೇಶ್ ಮೆಸ್ತಾ ಸಾವಿನ ಪ್ರಕರಣ ಸಾಕ್ಷಿಯಾಗಿ ನಿಂತಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದು, “ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂತಹ ಅಮಾಯಕ ಯುವಕರ ರಕ್ತ ಇದೆ. ಬಿಜೆಪಿ ನಾಯಕರೇ, ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ” ಎಂದು ದೂರಿದ್ದಾರೆ.
“ಹೊನ್ನಾವರದ ಪರೇಶ್ ಮೇಸ್ತನದ್ದು ಹತ್ಯೆ ಅಲ್ಲ, ಆಕಸ್ಮಿಕ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ. ಬಿಜೆಪಿಗೆ ಮಾನ-ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು” ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂತಹ ಅಮಾಯಕ ಯುವಕರ ರಕ್ತ ಇದೆ.@BJP4Karnataka ನಾಯಕರೇ, ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ. 2/2#PareshMesta pic.twitter.com/6hirinXLpW
— Siddaramaiah (@siddaramaiah) October 3, 2022
ಹೊನ್ನಾವರದ ಪರೇಶ್ ಮೇಸ್ತನದ್ದು ಹತ್ಯೆ ಅಲ್ಲ, ಆಕಸ್ಮಿಕ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ @BJP4Karnataka ಮುಖಕ್ಕೆ ಬಡಿದ ತಪರಾಕಿ. ಬಿಜೆಪಿಗೆ ಮಾನ-ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು. 1/2#PareshMesta pic.twitter.com/gChNsPEQN5
— Siddaramaiah (@siddaramaiah) October 3, 2022