Homeಮುಖಪುಟಸಿನಿಮಾಗಳಲ್ಲಿ ನಮ್ಮ ಅಸ್ಮಿತೆಗಳನ್ನು ಅಳಿಸಲಾಗುತ್ತಿದೆ: ವೆಟ್ರಿಮಾರನ್‌ ಆತಂಕ

ಸಿನಿಮಾಗಳಲ್ಲಿ ನಮ್ಮ ಅಸ್ಮಿತೆಗಳನ್ನು ಅಳಿಸಲಾಗುತ್ತಿದೆ: ವೆಟ್ರಿಮಾರನ್‌ ಆತಂಕ

ತಿರುವಳ್ಳುವರ್‌ಗೆ ಕೇಸರಿ ಹೊದಿಸಿ, ರಾಜರಾಜ ಚೋಳನ್‌ಗೆ ಹಿಂದೂ ಎಂದು ನಮ್ಮ ಅಸ್ಮಿತೆಗಳನ್ನು ಸಿನಿಮಾಗಳಲ್ಲಿ ಅಳಿಸಲಾಗುತ್ತಿದೆ ಎಂದು ಖ್ಯಾತ ನಿರ್ದೇಶಕ ವೆಟ್ರಿಮಾರನ್‌ ಹೇಳಿದ್ದಾರೆ.

- Advertisement -
- Advertisement -

ರಾಜಕೀಯ ಜ್ಞಾನವನ್ನು ಪ್ರಸಾರ ಮಾಡುವ ಸಾಧನವಾಗಿ ಸಿನಿಮಾ ಕಲೆಯನ್ನು ರೂಪಿಸುವ ಮಹತ್ವವನ್ನು ತಮಿಳು ಚಲನಚಿತ್ರದ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಇತ್ತೀಚೆಗೆ ಒತ್ತಿ ಹೇಳಿದ್ದಾರೆ.

“ಸಿನಿಮಾದಲ್ಲಿ ನಮ್ಮ ಅಸ್ಮಿತೆಗಳನ್ನು ಅಳಿಸಲಾಗುತ್ತಿದೆ” ಎಂದು ಪ್ರಸ್ತಾಪಿಸಿರುವ ಅವರು, “ತಿರುವಳ್ಳುವರ್‌ಗೆ ಕೇಸರಿ ಹೊದಿಸುತ್ತಿರುವುದು, ರಾಜರಾಜ ಚೋಳನ್‌ರನ್ನು ಹಿಂದೂ ಎಂದು ಬಿಂಬಿಸುವುದು ನಡೆಯುತ್ತಲೇ ಇದೆ” ಎಂದಿದ್ದಾರೆ.

ಸಂಸದ ಹಾಗೂ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಪಕ್ಷದ ನಾಯಕ ತೊಲ್ ತಿರುಮಾವಲವನ್ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅಸುರನ್ (2019) ಚಿತ್ರ ಮಾಡಲು ಬಯಸಿದಾಗ, ರಾಜಕೀಯವಾಗಿ ತಮ್ಮ ಚಿತ್ರವು ತಪ್ಪಾಗದಂತೆ ನೋಡಿಕೊಳ್ಳಲು ಸಲಹೆಗಳನ್ನು ಪಡೆಯಲು ತಿರುಮಾವಳವನ್ ಅವರನ್ನು ಮೊದಲು ಭೇಟಿಯಾಗಿದ್ದೆ ಎಂದು ವೆಟ್ರಿಮಾರನ್‌ ತಿಳಿಸಿದ್ದಾರೆ.

“ಸಿನಿಮಾದಲ್ಲಿ ನಾವು ಅಂತಹ ವಿಷಯವನ್ನು ತರುವಾಗ ಆದ್ಯತೆ ಏನು ಎಂದು ನಾನು ಕೇಳಿದಾಗ, ಒಬ್ಬ ವ್ಯಕ್ತಿ ಸಮಾಜದಲ್ಲಿ ಬದಲಾವಣೆಗಳನ್ನು ತರಬಹುದು ಎಂದು ಹೇಳುವ ತಪ್ಪು ಮಾಡಬೇಡಿ ಎಂದಿದಿದ್ದರು. ಎಲ್ಲರೂ ಅದೇ ತಪ್ಪನ್ನು ಮಾಡುತ್ತಿದ್ದಾರೆ. ಬದಲಾವಣೆಗಳು ಆಂದೋಲನದ ಮೂಲಕ ಘಟಿಸುತ್ತವೆ ಎಂಬುದನ್ನು ತೋರಿಸಿ ಎಂದಿದ್ದರು” ಎಂದು ವೆಟ್ರಿಮಾರನ್ ನೆನೆದಿದ್ದಾರೆ.

ತಮಿಳು ಚಿತ್ರರಂಗ ಕೆಲಕಾಲ ರಾಜಕೀಯ ಸಂಬಂಧಿತ ಸಿನಿಮಾಗಳನ್ನು ಮಾಡುವುದನ್ನು ನಿಲ್ಲಿಸಿದೆ ಎಂದಿರುವ ಅವರು, ರಾಜಕೀಯ ಚಿಂತನೆಗಳನ್ನು ಸಿನಿಮಾಗಳಲ್ಲಿ ತರುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

“ಕಲೆಯು ಅಂತರ್ಗತವಾಗಿ ರಾಜಕೀಯವನ್ನು ಹೊಂದಿದೆ. ಆದರೆ, ತಿರುಮಾವಳವನ್ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಅಸ್ತಿತ್ವವೇ ರಾಜಕೀಯ ಎಂದಿದ್ದರು. ತಿಳಿದೋ ತಿಳಿಯದೆಯೋ ನಾವು ಒಂದು ನಿರ್ದಿಷ್ಟ ರಾಜಕೀಯ ಜಾಗವನ್ನು ಆಕ್ರಮಿಸಿಕೊಳ್ಳುತ್ತೇವೆ. ನಾವು ಧರಿಸುವ, ಮಾತನಾಡುವ ಮತ್ತು ನಮ್ಮ ಬಗೆಗಿನ ಎಲ್ಲವೂ ನಾವು ಅಳವಡಿಸಿಕೊಂಡಿರುವ ರಾಜಕೀಯ ಸಿದ್ಧಾಂತದ ಪ್ರತಿಬಿಂಬವಾಗಿರುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ದ್ರಾವಿಡ ಚಳವಳಿಯು ತಮಿಳು ಚಿತ್ರರಂಗವನ್ನು ಒಳಗೊಂಡ ಕಾರಣ, ತಮಿಳುನಾಡು ಜಾತ್ಯತೀತ ರಾಜ್ಯವಾಗಿ ಉಳಿದಿದೆ. ವಿವಿಧ ಬಾಹ್ಯ ಅಂಶಗಳ ಪ್ರಭಾವವನ್ನು ವಿರೋಧಿಸುವ ಪ್ರಬುದ್ಧತೆಯನ್ನು ನಮಗೆ ನೀಡಿದೆ. ಸಿನಿಮಾ ಎನ್ನುವುದು ಸಾಮಾನ್ಯ ಜನರನ್ನು ಸುಲಭವಾಗಿ ತಲುಪುವ ಒಂದು ಕಲಾ ಪ್ರಕಾರವಾಗಿದೆ. ಅದನ್ನು ರಾಜಕೀಯಗೊಳಿಸುವುದು ಮುಖ್ಯವಾಗಿದೆ” ಎಂದು ಆಶಿಸಿದ್ದಾರೆ.

ವೆಟ್ರಿಮಾರನ್ ಅವರು ತಮ್ಮ ಸಿನಿಮಾಗಳಲ್ಲಿ ರಾಜಕೀಯದ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಅವರ ಎಲ್ಲಾ ಚಲನಚಿತ್ರಗಳು ಒಂದು ಪ್ರಮುಖ ಸಾಮಾಜಿಕ ಸಮಸ್ಯೆಯೊಂದಿಗೆ ಬೆಸೆದುಕೊಂಡಿರುತ್ತದೆ. ವಿಸಾರಣೈನಲ್ಲಿ ಪೋಲೀಸ್ ದೌರ್ಜನ್ಯ ಮತ್ತು ಕಸ್ಟಡಿ ಚಿತ್ರಹಿಂಸೆಯ ಭಯಾನಕತೆ ಕುರಿತು ತೋರಿಸಲಾಯಿತು. ಅಸುರನ್‌ನಲ್ಲಿನ ಜಾತಿವಾದಿ ಸಮಾಜ ಹಾಗೂ ದಲಿತ ಪ್ರತಿರೋಧವನ್ನು ದಾಖಲಿಸಲಾಯಿತು. ತಮ್ಮ ಸಿನಿಮಾಗಳಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದನ್ನು ಮುಂದುವರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

“ದ್ರಾವಿಡ ಚಳವಳಿಯು ಸಿನಿಮಾವನ್ನು ಕೈಗೆತ್ತಿಕೊಂಡಾಗ, ಕಲೆಗಾಗಿ ಕಲೆ ಇರಬೇಕು ಜನಸಾಮಾನ್ಯರಿಗಾಗಿ ಅಲ್ಲ ಎಂಬ ವಾದಗಳು ಇದ್ದವು. ಅವರು ಸಿನಿಮಾ ಸೌಂದರ್ಯದ ಬಗ್ಗೆ ಸಾಕಷ್ಟು ಮಾತನಾಡಿದರು. ಹೌದು, ಅದು ಕೂಡ ಮುಖ್ಯ, ಆದರೆ ಯಾವುದೇ ಕಲೆಯು ಜನರ ಜೀವನವನ್ನು ಮುಟ್ಟದಿದ್ದರೆ ಅದು ಪೂರ್ಣಗೊಳ್ಳುವುದಿಲ್ಲ ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ವರುಣನ ನಡುವೆಯೇ ರಾಹುಲ್ ಭಾಷಣ; ‘ಮೆಚ್ಚುಗೆಯ ಮಳೆ’ ಸುರಿಸಿದ ಜನತೆ

ಚಿತ್ರರಂಗದಿಂದ ಅನೇಕ ಅಸ್ಮಿತೆಗಳನ್ನು ಅಳಿಸಲಾಗುತ್ತಿದೆ ಎಂದು ವೆಟ್ರಿಮಾರನ್ ಆರೋಪಿಸಿದ್ದಾರೆ. “ಕಲೆ ಜನರಿಗಾಗಿ, ಮತ್ತು ಜನರನ್ನು ಪ್ರತಿಬಿಂಬಿಸುವುದು ಕಲೆ. ಆದ್ದರಿಂದ ನಾವು ಈ ಕಲಾ ಪ್ರಕಾರವನ್ನು ಸರಿಯಾಗಿ ನಿರ್ವಹಿಸದಿದ್ದರೆ… ಈಗಾಗಲೇ ನಮ್ಮ ಅನೇಕ ಗುರುತುಗಳನ್ನು ಅಳಿಸಲಾಗುತ್ತಿದೆ. ತಿರುವಳ್ಳುವರ್‌ಗೆ ಕೇಸರಿ ಹೊದಿಸುವುದಿರಲಿ, ಅಥವಾ ರಾಜರಾಜ ಚೋಳನ್‌ನನ್ನು ಹಿಂದೂ ರಾಜನೆಂದು ಬಿಂಬಿಸುವುದಿರಲಿ, ಇಂತಹ ಸಂಗತಿಗಳು (ನಮ್ಮ ಸಮಾಜದಲ್ಲಿ) ನಡೆಯುತ್ತಲೇ ಇರುತ್ತವೆ. ಇದು ಸಿನಿಮಾದಲ್ಲಿ ಘಟಿಸುತ್ತಿದೆ ಮತ್ತು ಸಿನಿಮಾದಿಂದ (ಈಗಾಗಲೇ) ಅನೇಕ ಗುರುತುಗಳನ್ನು ತೆಗೆದುಹಾಕಲಾಗಿದೆ. ನಾವು ನಮ್ಮ ಗುರುತನ್ನು ರಕ್ಷಿಸಿಕೊಳ್ಳಬೇಕು” ಎಂದು ಎಚ್ಚರಿಸಿದ್ದಾರೆ.

ರಾಜರಾಜ ಚೋಳನ್‌ನಿಂದ ಸ್ಫೂರ್ತಿ ಪಡೆದ ಕಲ್ಕಿಯವರ ಕಾಲ್ಪನಿಕ ಕಾದಂಬರಿಯನ್ನು ಆಧರಿಸಿದ ಪೊನ್ನಿಯಿನ್ ಸೆಲ್ವನ್: 1 ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಈ ಸಿನಿಮಾ ಬಿಡುಗಡೆಯಾಗಿರುವ ಹೊತ್ತಿನಲ್ಲಿ ವೆಟ್ರಿಮಾರನ್‌ ಅವರ ಈ ಅಭಿಪ್ರಾಯಗಳು ಹೊರಬಿದ್ದಿರುವುದು ಕುತೂಹಲ ಹುಟ್ಟಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...