ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಹಾಗೂ ಮಲಯಾಳಂ ಚಲನಚಿತ್ರ ನಟ, ಕೇರಳದಿಂದ ಆಯ್ಕೆಯಾದ ಮೊದಲ ಬಿಜೆಪಿ ಲೋಕಸಭಾ ಸಂಸದ ಸುರೇಶ್ ಗೋಪಿ ಅವರು ಪೂರ್ಣಾವಧಿ ನಟನೆಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದು, ಸಚಿವ ಸ್ಥಾನದಿಂದ ಕೆಳಗಿಳಿಯಲು ಬಯಸಿರುವುದಾಗಿ ಹೇಳಿದ್ದಾರೆ.
ಅಕ್ಟೋಬರ್ 12, ಭಾನುವಾರ ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರ್ ಸಂಸದ ಸುರೇಶ್ ಗೋಪಿ, ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ತನ್ನ ಆದಾಯ ಗಮನಾರ್ಹವಾಗಿ ಕುಸಿದಿದೆ ಮತ್ತು ತಮ್ಮ ಕುಟುಂಬವನ್ನು ಪೋಷಿಸಲು ಚಲನಚಿತ್ರ ವೃತ್ತಿಜೀವನವನ್ನು ಪುನರಾರಂಭಿಸಲು ಬಯಸುವುದಾಗಿ ತಿಳಿಸಿದ್ದಾರೆ.
“ನಾನು ನಿಜವಾಗಿಯೂ ನಟನೆಯನ್ನು ಮುಂದುವರಿಸಲು ಬಯಸುತ್ತೇನೆ. ನಾನು ಇನ್ನಷ್ಟು ಸಂಪಾದಿಸಬೇಕಾಗಿದೆ; ನನ್ನ ಆದಾಯವು ಈಗ ಸಂಪೂರ್ಣವಾಗಿ ನಿಂತುಹೋಗಿದೆ. ಲೋಕಸಭಾ ಚುನಾವಣೆಗೆ ಮೊದಲೇ ಸಚಿವ ಸ್ಥಾನದ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಇಷ್ಟವಿಲ್ಲದಿರುವುದನ್ನು ತಿಳಿಸಿದ್ದೆ. ನಟನೆಯು ನನಗೆ ಆದಾಯವನ್ನು ತರುತ್ತದೆ, ಆ ಆದಾಯದಿಂದ ನನ್ನ ಕುಟುಂಬ ಮತ್ತು ಇತರ ಕೆಲವರನ್ನು ಬೆಂಬಲಿಸಲು ನಾನು ಬಯಸುತ್ತೇನೆ. ಆದರೆ ಈಗ, ನನ್ನ ಆದಾಯದ ಮೇಲೆ ಪರಿಣಾಮ ಬೀರಿದೆ” ಎಂದು ಸುರೇಶ್ ಗೋಪಿ ಹೇಳಿದ್ದಾರೆ.
2016ರ ಅಕ್ಟೋಬರ್‌ನಲ್ಲಿ ಬಿಜೆಪಿ ಸೇರಿದ ಸುರೇಶ್ ಗೋಪಿ, 2024ರಲ್ಲಿ ಕೇರಳದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಬಿಜೆಪಿ ಸಂಸದ ಎನಿಸಿಕೊಂಡರು. “ಸಚಿವನಾಗಿ ನೇಮಕಗೊಂಡಿರುವುದು ಗೆಲುವನ್ನು ಗೌರವಿಸುವ ಪಕ್ಷದ ಕ್ರಮವಾಗಿದೆ. ನಾನು ಪಕ್ಷದಲ್ಲಿ ಅತ್ಯಂತ ಕಿರಿಯ ಸದಸ್ಯನಾಗಿದ್ದರೂ, ನನ್ನನ್ನು ಸಚಿವನನ್ನಾಗಿ ಮಾಡಲಾಯಿತು. ಬಹುಶಃ ಕೇರಳದಿಂದ ಮೊದಲ ಬಿಜೆಪಿ ಸಂಸದನಾಗಲು ನನಗೆ ಸಹಾಯ ಮಾಡಿದ ಜನರಿಗಾಗಿ ನನಗೆ ಸ್ಥಾನ ಕೊಟ್ಟಿರುಬಹುದು” ಎಂದು ಸುರೇಶ್ ಗೋಪಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸುರೇಶ್ ಗೋಪಿ ಅವರು, ಆರ್‌ಎಸ್‌ಎಸ್ ಹಿರಿಯ ನಾಯಕ ಮತ್ತು ಕೇರಳದಿಂದ ಹೊಸದಾಗಿ ನಾಮನಿರ್ದೇಶನಗೊಂಡ ರಾಜ್ಯಸಭಾ ಸಂಸದ ಸಿ ಸದಾನಂದನ ಮಾಸ್ಟರ್ ಅವರನ್ನು ಕೇಂದ್ರ ಸಚಿವರನ್ನಾಗಿ ನೇಮಿಸಬೇಕೆಂದು ಸೂಚಿಸಿದ್ದಾರೆ. “ನಾನು ನಿಜವಾಗಿ ಹೇಳುತ್ತಿದ್ದೇನೆ: ಸದಾನಂದನ ಮಾಸ್ಟರ್ ಅವರನ್ನು ನನ್ನ ಸ್ಥಾನಕ್ಕೆ ಕೇಂದ್ರ ಸಚಿವರನ್ನಾಗಿ ಮಾಡಬೇಕು. ಹಾಗೇನಾದರು ಆದರೆ ಕೇರಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಲಿದೆ ಎಂದು ನಾನು ನಂಬುತ್ತೇನೆ” ಎಂದು ಹೇಳಿದ್ದಾರೆ.
ತಾನು ಸಚಿವ ಸ್ಥಾನದ ಆಕಾಂಕ್ಷೆಯನ್ನು ಎಂದಿಗೂ ಹೊಂದಿರಲಿಲ್ಲ ಎಂದು ಸುರೇಶ್ ಗೋಪಿ ಹೇಳಿದ್ದಾರೆ. ಚುನಾವಣೆಗೆ ಒಂದು ದಿನ ಮೊದಲು, ನಾನು ಸಚಿವನಾಗಲು ಬಯಸುವುದಿಲ್ಲ ಎಂದು ವರದಿಗಾರರಿಗೆ ಹೇಳಿದ್ದೆ. ನಾನು ನನ್ನ ಸಿನಿಮಾದಲ್ಲಿ ಮುಂದುವರಿಯಲು ಬಯಸುತ್ತೇನೆ ಎಂದಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಕಣ್ಣೂರಿನ ಸಿಪಿಐಎಂ ನಾಯಕರು ಸದಾನಂದನ ಮಾಸ್ಟರ್ ರಾಜ್ಯಸಭೆಗೆ ಬಡ್ತಿ ಪಡೆದ ಬಗ್ಗೆ ಆತಂಕಗೊಂಡಿದ್ದಾರೆ. ಏಕೆಂದರೆ, ಈ ನೇಮಕಾತಿ ಸಿಪಿಐಎಂ ಭದ್ರಕೋಟೆಯಲ್ಲಿ ಬಿಜೆಪಿಯ ನಿರೀಕ್ಷೆಗಳನ್ನು ಬಲಪಡಿಸಬಹುದು ಎಂಬ ಭಯ ಅವರಿಗೆ ಇದೆ ಎಂದು ಸುರೇಶ್ ಗೋಪಿ ಇದೇ ವೇಳೆ ಹೇಳಿದ್ದಾರೆ.


