ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಎಲ್ಲಾ ರೀತಿಯ ಕೈಗಾರಿಕೆಗಳು ಮತ್ತು ಸಾರಿಗೆ ಕ್ಷೇತ್ರ ಸ್ಥಗಿತಗೊಂಡಿದ್ದರಿಂದ ಇಳಿಕೆಯಾಗಿದ್ದ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯು ಇದೀಗ ಮತ್ತೆ ಹೆಚ್ಚುತ್ತಿದೆ. ಮತ್ತೆ ಹೆಚ್ಚುತ್ತಿರುವ ಇಂಗಾಲದ ಹೊರಸೂಸುವಿಕೆಯಲ್ಲಿ ಚೀನಾದ ಪಾತ್ರ ಹೆಚ್ಚಿದೆ ಎಂದು ಹೊಸ ವೈಜ್ಞಾನಿಕ ಅಧ್ಯಯನವು ಹೇಳಿದೆ.
ಹವಾಮಾನ ಬದಲಾವಣೆಗೆ ಕಾರಣವಾಗುವ ಹೀಟ್-ಟ್ರ್ಯಾಪಿಂಗ್ ಅನಿಲಗಳನ್ನು ಪತ್ತೆಹಚ್ಚುವ ವಿಜ್ಞಾನಿಗಳ ಗುಂಪು ಅಧ್ಯಯನ ನಡೆಸಿದ್ದು, ಈ ವರ್ಷದ ಮೊದಲ ಒಂಬತ್ತು ತಿಂಗಳುಗಳಲ್ಲಿನ ಹೊರಸೂಸುವಿಕೆಯು 2019 ರ ಮಟ್ಟಕ್ಕಿಂತ ಸ್ವಲ್ಪ ಮಾತ್ರವೇ ಕಡಿಮೆ ಇದೆ ಎಂದು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಲಾಕ್‌ಡೌನ್‌ಗೂ ಮುಂಚಿತವಾಗಿ ಇದ್ದ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ ಪ್ರಮಾಣ 36.7 ಶತಕೋಟಿ ಮೆಟ್ರಿಕ್ ಟನ್‌ಗಳಿಗೆ ಹೋಲಿಸಿದರೆ 2021 ರಲ್ಲಿ ಪ್ರಪಂಚವು 36.4 ಶತಕೋಟಿ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕಿದೆ ಎಂದು ಅವರು ಅಂದಾಜಿಸಿದ್ದಾರೆ.
ಕಳೆದ ವರ್ಷ ಕೊರೊನಾ ಅಲೆಯು ಉತ್ತುಂಗದಲ್ಲಿದ್ದಾಗ, ಹೊರಸೂಸುವಿಕೆಯು 34.8 ಶತಕೋಟಿ ಮೆಟ್ರಿಕ್ ಟನ್‌ಗಳಿಗೆ ಕಡಿಮೆಯಾಗಿತ್ತು. ಆದರೆ, ಇದೀಗ ಗ್ಲೋಬಲ್ ಕಾರ್ಬನ್ ಪ್ರಾಜೆಕ್ಟ್‌ನ ನವೀಕರಿಸಿದ ಲೆಕ್ಕಾಚಾರಗಳ ಪ್ರಕಾರ ಈ ವರ್ಷ ಇಂಗಾಲ ಹೊರಸೂಸುವಿಕೆಯ ಪ್ರಮಾಣ ಶೇ. 4.9% ಏರಿಕೆಯಾಗಿದೆ.
“ಹೆಚ್ಚಿನ ದೇಶಗಳು ಕೊರೊನಾ ವೈರಸ್ ಪತ್ತೆಯಾಗುವುದಕ್ಕೂ ಮೊದಲಿದ್ದ ಪ್ರವೃತ್ತಿಗೆ ಹಿಂತಿರುಗಿವೆ. ಆ ಎಲ್ಲಾ ದೇಶಗಳಲ್ಲಿಯೂ ಇಂಗಾಲ ಹೊರಸೂಸುವಿಕೆ ಮತ್ತೆ ಹೆಚ್ಚಾಗಿದೆ. ಈ ಪೈಕಿ, ಚೀನಾದಲ್ಲಿನ ಮಾಲಿನ್ಯ ಹೆಚ್ಚಳವು ವಿಶ್ವಾದ್ಯಂತ ಅಂಕಿಅಂಶಗಳು 2019 ರ ಮಾಲಿನ್ಯ ಮಟ್ಟಕ್ಕೆ ಹಿಂದಿರುಗಲು ಹೆಚ್ಚಿನ ಕಾರಣವಾಗಿದೆ” ಎಂದು ಯುನೈಟೆಡ್ ಕಿಂಗ್‌ಡಂನ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ ಹವಾಮಾನ ವಿಜ್ಞಾನಿ, ಅಧ್ಯಯನ ಸಹ-ಲೇಖಕ ಕೊರಿನ್ನೆ ಲೆಕ್ವೆರ್ ಹೇಳಿದ್ದಾರೆ.
ಭಾರತದಿಂದ ಇಟಲಿಯವರೆಗಿನ ನಗರಗಳಲ್ಲಿ 2020ರ ಅವಧಿಯಲ್ಲಿ ನಾಟಕೀಯವಾಗಿ ಇಂಗಾಲದ ಮಾಲಿನ್ಯವನ್ನು ಕಡಿಮೆಯಾಗುವುದರ ಜೊತೆಗೆ ಶುದ್ದ ಗಾಳಿ ಹೆಚ್ಚುವಂತೆ ಮಾಡುವಲ್ಲಿ ಜಗತ್ತು ಸರಿಯಾದ ಹಾದಿಯಲ್ಲಿದೆ ಎಂದು ಕೆಲವರು ಭಾವಿಸಿರಬಹುದು, ಆದರೆ ವಿಜ್ಞಾನಿಗಳು ಅದು ನಿಜವಲ್ಲ ಎಂದು ಹೇಳಿದ್ದಾರೆ.
“ಪ್ರಪಂಚವು ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕೆಗಳ ಉದಯಕ್ಕೂ ಮೊದಲಿದ್ದ 1.5 ಡಿಗ್ರಿ ಸೆಲ್ಸಿಯಸ್ (2.7 ಡಿಗ್ರಿ ಫ್ಯಾರನ್‌ಹೀಟ್) ಗೆ ಮಿತಿಗೊಳಿಸುವ ಉದ್ದೇಶವನ್ನು ಹೊಂದಿದ್ದರೆ, ಅದನ್ನು ತ್ವರಿತವಾಗಿ ಆರಂಭಿಸಬೇಕು. ಪ್ರಸ್ತುತ ಹೊರಸೂಸುವಿಕೆಯ ಮಟ್ಟವನ್ನು ಗಮನಿದರೆ ಕೇವಲ 11 ವರ್ಷಗಳು ಮಾತ್ರ ಉಳಿದಿವೆ” ಎಂದು ಅಧ್ಯಯನ ವರದಿ ಹೇಳಿದೆ.
1800ರ ದಶಕದ ಅಂತ್ಯದಿಂದ ಪ್ರಪಂಚವು 1.1 ಡಿಗ್ರಿ ಸೆಲ್ಸಿಯಸ್ (2 ಡಿಗ್ರಿ ಫ್ಯಾರನ್‌ಹೀಟ್) ಅನ್ನು ಹೊಂದಿತ್ತು.
“ಇಂಗಾಲದ ಹೊರಸೂಸುವಿಕೆ ಸಂಖ್ಯೆಗಳು ತೋರಿಸುವುದೇನೆಂದರೆ, ಹೊರಸೂಸುವಿಕೆಗಳು (COVID-19 ಸಮಯದಲ್ಲಿ) ಈಗ ಮೂಲತಃ ಸಮತಟ್ಟಾಗಿದೆ ಅಥವಾ ಕಡಿಮೆಯಾಗಿದೆ. ಅದು ಒಳ್ಳೆಯ ಸುದ್ದಿ. ಅದರೆ, ಕೆಟ್ಟ ಸುದ್ದಿ ಎಂದರೆ ಅದು ಸಾಕಾಗುವುದಿಲ್ಲ. ನಾವು ಹೊರಸೂಸುವಿಕೆಯನ್ನು ಇಳಿಸಲು ಪ್ರಾರಂಭಿಸಬೇಕು” ಎಂದು ವರದಿಯ ಭಾಗವಾಗದ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಹವಾಮಾನ ವಿಜ್ಞಾನಿ ಮೈಕೆಲ್ ಮನ್ ಹೇಳಿದ್ದಾರೆ.
2019 ಕ್ಕೆ ಹೋಲಿಸಿದರೆ 2021 ರಲ್ಲಿ ಚೀನಾದಲ್ಲಿ ಹೊರಸೂಸುವಿಕೆ 7% ಹೆಚ್ಚಾಗಿದೆ. ಅದೇ ರೀತಿ, ಭಾರತದ ಹೊರಸೂಸುವಿಕೆ 3% ಹೆಚ್ಚಾಗಿದೆ ಎಂದು ಅಧ್ಯಯನ ಹೇಳಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಯೂನಿಯನ್ ಮತ್ತು ಪ್ರಪಂಚದ ಉಳಿದ ಭಾಗಗಳು 2019ಕ್ಕೆ ಹೋಲಿಸಿದರೆ, ಈ ವರ್ಷ ಕಡಿಮೆ ಮಾಲಿನ್ಯವನ್ನು ಹೊಂದಿವೆ.
ಚೀನಾದ ಮಾಲಿನ್ಯ ಜಿಗಿತಕ್ಕೆ ಹೆಚ್ಚಾಗಿ ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲವನ್ನು ಸುಡುವುದರಿಂದ ಮತ್ತು ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳಲು ಬೃಹತ್ ಆರ್ಥಿಕ ಪ್ರಚೋದನೆಯೇ ಕಾರಣವಾಗಿದೆ ಎಂದು ಲೆಕ್ವೆರ್ ಹೇಳಿದ್ದಾರೆ.
ಅಂಕಿಅಂಶಗಳು ವಿದ್ಯುತ್ ಬಳಕೆ, ಪ್ರಯಾಣ, ಕೈಗಾರಿಕಾ ಉತ್ಪಾದನೆ ಮತ್ತು ಇತರ ಅಂಶಗಳ ಮೇಲೆ ಸರ್ಕಾರಗಳ ಡೇಟಾವನ್ನು ಆಧರಿಸಿವೆ. ಈ ವರ್ಷ ಹೊರಸೂಸುವಿಕೆಯು ಪ್ರತಿ ಸೆಕೆಂಡಿಗೆ ಸರಾಸರಿ 115 ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಗಾಳಿಯನ್ನು ಸೇರುತ್ತಿದೆ.
ಆಧಾರ: ಇಂಡಿಯನ್ ಎಕ್ಸ್‌ಪ್ರೆಸ್
ಇದನ್ನೂ ಓದಿ: ಉಪಚುನಾವಣೆ ಸೋಲಿನಿಂದಾಗಿ ಕೇಂದ್ರವು ಪೆಟ್ರೋಲ್, ಡೀಸೆಲ್ ತೆರಿಗೆ ಕಡಿತಗೊಳಿಸಿದೆ: ಪಿ ಚಿದಂಬರಂ


