ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿಯು ಆಗಸ್ಟ್ 11ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಘೋಷಿಸಿದೆ. ನ್ಯಾ. ಹೆಚ್.ಎನ್. ನಾಗಮೋಹನ್‌ದಾಸ್ ಅವರ ಸಮೀಕ್ಷಾ ವರದಿಯನ್ನು ತಕ್ಷಣವೇ ಸ್ವೀಕರಿಸಿ, ಮುಂಬರುವ ಮಳೆಗಾಲ ಅಧಿವೇಶನದಲ್ಲಿಯೇ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡರಾದ ಕರಿಯಪ್ಪ ಗುಡಿಮನಿಯವರು, ಸುಪ್ರೀಂ ಕೋರ್ಟ್ ಪರಿಶಿಷ್ಟರ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರ್ಕಾರಗಳು ಆದ್ಯತೆಯ ಮೇರೆಗೆ ಜಾರಿಗೊಳಿಸಬಹುದು ಎಂಬ ಐತಿಹಾಸಿಕ ತೀರ್ಪು ನೀಡಿ ಒಂದು ವರ್ಷ ಗತಿಸಿದೆ. ಆದರೆ, ಇಷ್ಟಾದರೂ ಸರ್ಕಾರಗಳು ಒಳಮೀಸಲಾತಿ ಜಾರಿಗೆ ಮುಂದಾಗಿಲ್ಲ. ನ್ಯಾ. ನಾಗಮೋಹನ್‌ದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆಸಿ ಜುಲೈ 30ರೊಳಗೆ ವರದಿ ಸಲ್ಲಿಸಬೇಕಿತ್ತು. ಆದರೆ, ವಿಳಂಬ ಧೋರಣೆ ಮುಂದುವರಿದಿರುವುದರಿಂದ ಮತ್ತೊಂದು ಸುತ್ತಿನ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಕಳೆದ 30 ವರ್ಷಗಳಿಂದ ಒಳಮೀಸಲಾತಿ ಹೋರಾಟ ಮುಂದುವರಿದಿದ್ದು, ಆಯೋಗಗಳ ನೇಮಕ, ಅನುದಾನ ಬಿಡುಗಡೆ ಮತ್ತು ವರದಿ ಅನುಷ್ಠಾನದಲ್ಲಿ ನಿರಂತರ ವಿಳಂಬವಾಗುತ್ತಿದೆ. ಇದರಿಂದಾಗಿ, ಸಮುದಾಯದ ಜನರು ಯಾವ ಸರ್ಕಾರವನ್ನೂ ನಂಬುವ ಸ್ಥಿತಿಯಲ್ಲಿಲ್ಲ ಎಂದು ಸಮಿತಿ ವಿಷಾದ ವ್ಯಕ್ತಪಡಿಸಿದೆ.
ಹೋರಾಟದ ಭಾಗವಾಗಿ, ಆಗಸ್ಟ್ 11ರಂದು ಆರಂಭವಾಗಲಿರುವ ಮಳೆಗಾಲ ಅಧಿವೇಶನದಲ್ಲಿಯೇ ಒಳಮೀಸಲಾತಿ ಮಸೂದೆಯನ್ನು ಅಂಗೀಕರಿಸಬೇಕು. ಇದರಿಂದ 30 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ವಂಚಿತ ಯುವಕ-ಯುವತಿಯರಿಗೆ ಸಿಗಲಿವೆ. ಸರ್ಕಾರವು ಈ ಅಧಿವೇಶನದಲ್ಲಿ ತನ್ನ ಬದ್ಧತೆಯನ್ನು ಪ್ರಕಟಿಸಬೇಕು ಎಂದು ಸಮಿತಿ ಆಗ್ರಹಿಸಿದೆ. ಈ ಹೋರಾಟದಲ್ಲಿ ಎಲ್ಲ ಸಂಘ-ಸಂಸ್ಥೆಗಳ ಮುಖಂಡರು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಭಾಗವಹಿಸಬೇಕೆಂದು ಸಮಿತಿ ಮನವಿ ಮಾಡಿದೆ.
ಒಳಮೀಸಲಾತಿ ಬೇಡಿಕೆಯ ಪ್ರಮುಖ ಅಂಶಗಳು:
ನ್ಯಾ. ನಾಗಮೋಹನ್‌ದಾಸ್ ಸಮೀಕ್ಷಾ ವರದಿಯನ್ನು ತಕ್ಷಣವೇ ಅಂಗೀಕರಿಸುವುದು
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿವೇಶನದಲ್ಲಿ ತಮ್ಮ ಬದ್ಧತೆಯನ್ನು ಘೋಷಿಸುವುದು
ಆಗಸ್ಟ್ 11ರಿಂದ ಆರಂಭವಾಗುವ ಅಧಿವೇಶನದಲ್ಲಿಯೇ ಒಳಮೀಸಲಾತಿ ಜಾರಿಗೊಳಿಸುವುದು
30 ಸಾವಿರಕ್ಕೂ ಹೆಚ್ಚು ಖಾಲಿ ಇರುವ ಹುದ್ದೆಗಳಿಗೆ ವಂಚಿತ ಸಮುದಾಯದವರಿಗೆ ಅವಕಾಶ ಕಲ್ಪಿಸುವುದು
ಸರ್ಕಾರವು ಈ ನಿರ್ಲಕ್ಷ್ಯ ಧೋರಣೆಯನ್ನು ಕೈಬಿಟ್ಟು, ನುಡಿದಂತೆ ನಡೆಯುವ ಮೂಲಕ ತಮ್ಮ ಬದ್ಧತೆಯನ್ನು ತೋರಿಸಬೇಕೆಂದು ಹೋರಾಟ ಸಮಿತಿ ಒತ್ತಾಯಿಸಿದೆ.
ಸುಳ್ಳು ಸುದ್ದಿ ಪ್ರಸಾರ ಆರೋಪ: ಸುವರ್ಣ ನ್ಯೂಸ್‌ನ ಅಜಿತ್ ಹನುಮಕ್ಕನವರ್ ವಿರುದ್ಧ ಎಫ್‌ಐಆರ್


