Homeಮುಖಪುಟಲಿಂಗಾಯತ ಚಳವಳಿ : ಕೇವಲ ರಾಜಕಾರಣವಾಗಿತ್ತೇ?

ಲಿಂಗಾಯತ ಚಳವಳಿ : ಕೇವಲ ರಾಜಕಾರಣವಾಗಿತ್ತೇ?

ಇಲ್ಲಿ ಮತ್ತೆ ಗೆದ್ದಿದ್ದು ಅಂದು ಬಸವಾದಿಗಳ ಹತ್ಯಾಕಾಂಡ ಮಾಡಿರುವ ಶಕ್ತಿಗಳೆ, ಸೋತಿದ್ದು ಮಾತ್ರ ಬಸವಾದಿ ಶರಣರು ಮಾತ್ರ.

- Advertisement -
- Advertisement -

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೊನೆಯ ಅವಧಿಯಲ್ಲಿ ‘ಲಿಂಗಾಯತ’ ಸ್ವತಂತ್ರ ಧರ್ಮದ ಮಾನ್ಯತೆಗಾಗಿ, ಜತೆಗೆ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆಗಾಗಿ, ಜನರ ಕೂಗು ಜೋರಾಗಿ ಕೇಳಿಬಂದಿತ್ತು. ಆದರೆ ಇತ್ತೀಚೆಗೆ ಆ ದನಿ ಕ್ಷೀಣಿಸಿದೆ; ಹಾಗಾಗಿ ಸಹಜವಾಗಿ ಈ ನೆಲದ ಬಹುತೇಕರಿಗೆ ಲಿಂಗಾಯತ ಚಳವಳಿ ಕೇವಲ ಒಂದು ರಾಜಕಾರಣವಾಗಿತ್ತೇ? ಎನ್ನುವ ದಟ್ಟವಾದ ಅನುಮಾನ ಮೂಡಿದೆ. ಲಿಂಗಾಯತ ತತ್ವದ ಪ್ರಜ್ಞೆ ಮತ್ತು ಸ್ವತಂತ್ರ ಧರ್ಮದ ಕೂಗಿನ ಇತಿಹಾಸದ ಪರಿಚಯ ಇದ್ದವರೂ ಸಹ ಇದನ್ನು ಸಾರಾಸಗಟಾಗಿ ತಿರಸ್ಕರಿಸುವುದಿಲ್ಲ. ಜನರ ಅನುಮಾನದಲ್ಲಿ ಅರ್ಧ ಸತ್ಯವಿದೆ.

ಆದರೆ ಲಿಂಗಾಯತ ಚಳವಳಿ ಆರಂಭವಾಗಿರುವುದು ಇತ್ತೀಚೆಗಲ್ಲ. ಅದು ದುಡಿಯುವ ವರ್ಗದ ಮಧ್ಯೆ ಹನ್ನೆರಡನೆಯ ಶತಮಾನದಲ್ಲಿ ಆರಂಭವಾಗಿದೆ. ಅದೊಂದು ಚಳವಳಿ, ಸಂಘರ್ಷ, ಕ್ರಾಂತಿ. ಲಿಂಗಾಯತ ಎನ್ನುವುದು ಉತ್ಕೃಷ್ಟವಾದ ಒಂದು ತತ್ವ. ಈ ಧರ್ಮ ಆ ತತ್ವದ ಒಂದು ಭಾಗವಷ್ಟೇ.

ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ಸಮಾನತೆಯೆ ಆ ಚಳವಳಿಯ ಆದ್ಯತೆ ಆಗಿತ್ತು. ಧಾರ್ಮಿಕತೆ ಇದಕ್ಕೆ ಪೂರಕವಾಗಿತ್ತು. ಲಿಂಗಾಯತ ತತ್ವದ ಚಳವಳಿಯ ಆ ರಥ ಹನ್ನೆರಡನೆಯ ಶತಮಾನದಿಂದ ಕಲ್ಯಾಣದಲ್ಲೇ ನಿಂತಿದೆ. ಇತ್ತೀಚೆಗೆ ಎದ್ದಿರುವ ದನಿ ಕೇವಲ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಮಾತ್ರ.

ಹನ್ನೆರಡನೆಯ ಶತಮಾನದಲ್ಲಿ ಬಾಲಕ ಬಸವಣ್ಣ ಧರ್ಮಸ್ಥಾಪನೆ ಮಾಡುವ ಉದ್ದೇಶದಿಂದ ಮನೆ ತೊರೆದು ಬಂದವರಲ್ಲ. ಅಗ್ರಹಾರದ ಕ್ರೌರ್ಯವೇ ಅವರು ಮನೆಬಿಟ್ಟು ಹೋಗುವಂತೆ ಮಾಡುತ್ತದೆ. ಅವರ ಬಾಲ್ಯದಲ್ಲಿಯೇ ತಂದೆ-ತಾಯಿಗಳನ್ನು ಕಳೆದುಕೊಳ್ಳುತ್ತಾರೆ. ಅವರ ತಂದೆ ಮಾದರಸ ಅಗ್ರಹಾರದ ಮುಖ್ಯಸ್ಥ. ಬಸವನ ತಂದೆ ಸತ್ತನಂತರ ಅವನು ಅನಾಥನಾಗುತ್ತಾನೆ. ಮಹಾಜನಕ್ಕೆ ಮುಖ್ಯಸ್ಥನಾದವನ ಹಕ್ಕು ಬಾಧ್ಯತೆಗಳು ಅನೂಚಾನವಾಗಿ ಅವರ ಮಗ ಬಾಲಕ ಬಸವಣ್ಣನಿಗೆ ಬಂದಿರುತ್ತವೆ. ಆದರೆ ಸ್ವಲ್ಪ ದಿನದಲ್ಲೆ ಅಗ್ರಹಾರದ ಪ್ರಮುಖರು ಆ ಹಕ್ಕು-ಬಾಧ್ಯತೆಗಳನ್ನು ಬಸವನಿಂದ ಕಿತ್ತುಕೊಳ್ಳುತ್ತಾರೆ. ಈ ಘಟನೆ ಬ್ರಾಹ್ಮಣರು ಹೇಳುವುದೊಂದು, ಮಾಡುವುದೊಂದರ ಪರಿಚಯ ತನ್ನ ಊರಿನ ಅಗ್ರಹಾರದಲ್ಲಿಯೇ ಬಸವಣ್ಣನವರಿಗೆ ಬಾಲ್ಯದಲ್ಲಿಯೇ ಆಗುತ್ತದೆ.

ಅದಕ್ಕೆ ಬಸವಣ್ಣ- “ಏನಯ್ಯಾ ವಿಪ್ರರು ನುಡಿದಂತೆ ನಡೆಯರು ಇದೆಂತಯ್ಯಾ? ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ”… ಎಂಬ ವಚನವೂ ಮುಂದೆ ಅವರ ಬಾಯಿಯಿಂದ ಬರುತ್ತದೆ. ಇದರ ಜತೆಗೆ ಬೆಳೆದುನಿಂತ ತನ್ನ ಒಡಹುಟ್ಟಿದ ಸಹೋದರಿ ಅಕ್ಕನಾಗಮ್ಮನನ್ನು ಆ ವಯಸ್ಸಿನಲ್ಲೇ ಕರೆದುಕೊಂಡು ಹೋಗುವಂತೆ ಮಾಡಿದ ಬ್ರಾಹ್ಮಣ್ಯದ ಕ್ರೌರ್ಯ, ಬಸವಣ್ಣನವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಇವೆರಡೂ ಘಟನೆಗಳೇ ಬಸವಣ್ಣ ಮುಂದೆ ಕ್ರಾಂತಿಕಾರಿಯಾಗಿ ರೂಪಗೊಳ್ಳಲು ಪ್ರಮುಖ ಕಾರಣವಾಗಿದ್ದು.

ಬಸವಣ್ಣ ಅಗ್ರಹಾರ ತೊರೆದು, ಕೂಡಲಸಂಗಮಕ್ಕೆ ಬರುತ್ತಾರೆ. ಮುಂದೆ ಬಿಜ್ಜಳನ ಕಲ್ಯಾಣಕ್ಕೆ ಬರುತ್ತಾರೆ. ಕಲ್ಯಾಣದ ಸುತ್ತಮುತ್ತಲಿನ ಜನರು ರಾಜ, ಅಧಿಕಾರ, ಮಠ, ದೇವಸ್ಥಾನ ಮತ್ತು ವ್ಯಾಪಾರಗಳ ಸುಲಿಗೆಗೆ ಒಳಗಾಗಿ ಅವರ ಬದುಕು ತೀರಾ ಅಧೋಗತಿಗೆ ಇಳಿದಿರುತ್ತದೆ. ಬಸವಣ್ಣ ಈ ಬವಣೆ ಕಂಡು ಮಮ್ಮಲ ಮರುಗುತ್ತಾರೆ. ಮುಂದೆ ಅವರ ಬವಣೆ ನಿವಾರಣೆಗೆ ಹಗಲಿರುಳು ಶ್ರಮಿಸುತ್ತಾರೆ. ಅವರ ಪ್ರಯತ್ನಕ್ಕೆ ಅಸಂಖ್ಯಾತ ಶರಣರು ಕಲ್ಯಾಣಕ್ಕೆ ಧಾವಿಸಿ ಬಂದು ಒತ್ತಾಸೆಯಾಗಿ ನಿಲ್ಲುತ್ತಾರೆ.

ಎಲ್ಲಾ ಶರಣರ ಪ್ರಯತ್ನದಿಂದಾಗಿ ಕಲ್ಯಾಣದ ಸುತ್ತಲಿನ ಜನರು ಒಂದು ಕಡೆ ಸಾಮಾಜಿಕವಾಗಿ ಸ್ವಾಭಿಮಾನಿಗಳಾಗಿ, ಮತ್ತೊಂದು ಕಡೆ ಆರ್ಥಿಕವಾಗಿಯೂ ಸ್ವಾವಲಂಬನೆಯಾಗಿ ಬದಲಾಗುತ್ತಾರೆ. ದುಡಿಯದೆ ಐಶಾರಾಮಿ ಬದುಕು ಸಾಗಿಸುತ್ತಿದ್ದ ಪುರೋಹಿತವರ್ಗ, ಶೋಷಿತರಲ್ಲಿ ಬೆಳೆಯುತ್ತಿರುವ ವೈಚಾರಿಕ ಪ್ರಜ್ಞೆ ಕಂಡು ಬೆಚ್ಚಿಬಿದ್ದು ಕಂಗಾಲಾಗುತ್ತದೆ. ಇದೇ ಸಂದರ್ಭದಲ್ಲಿ ಕಲ್ಯಾಣದಲ್ಲಿ ಜರುಗಿದ ಅಂತರ್ಜಾತಿ ಮದುವೆಯ ನೆಪ ಮಾಡಿಕೊಂಡು ಇದೆ ಪುರೋಹಿತರು ಕುತಂತ್ರ ಮಾಡಿ ಬಿಜ್ಜಳನ ಸೈನಿಕರಿಂದಲೇ ಬಹುತೇಕ ಶರಣರನ್ನು ಬರ್ಬರವಾಗಿ ಹತ್ಯಾಕಾಂಡ ಮಾಡಿಸುತ್ತಾರೆ. ಅಸಂಖ್ಯಾತ ವಚನ ತಾಡೋಲೆಗಳಿಗೆ ಮತ್ತು ಶರಣರ ತಾತ್ವಿಕ ಸಂಘರ್ಷದ ಕೇಂದ್ರಬಿಂದುವಾಗಿದ್ದ ಅನುಭವ ಮಂಟಪಕ್ಕೆ ಕೊಳ್ಳಿ ಇಟ್ಟು ಬೂದಿ ಮಾಡುತ್ತಾರೆ.

(ಅಂದು ಅನುಭವ ಮಂಟಪಕ್ಕೆ ಕೊಳ್ಳಿ ಇಟ್ಟು ಬೂದಿ ಮಾಡಿದ ವಂಶಸ್ಥರೇ ಇಂದು ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ಕಟ್ಟಲು 500 ಕೋಟಿ ರೂಪಾಯಿ ಅನುದಾನ ನೀಡುತ್ತಿರುವುದು ಕುಚೋದ್ಯವಾಗಿದೆ. ಇದು ಪುರೋಹಿತಶಾಹಿಗಳ ಕಾರ್ಯಸೂಚಿಯ ಒಂದು ಭಾಗವಾಗಿದೆ. ಆದರೆ ಲಿಂಗಾಯತರು ಮಠೀಕರಣ(ಮನುಕರಣ)ಗೊಂಡಿರುವ ಪರಿಣಾಮವಾಗಿ ಇದನ್ನು ಕೇಕೆ ಹಾಕಿ, ಪಟಾಕಿ ಸಿಡಿಸಿ ಸ್ವಾಗತಿಸಿ, ಮುಕ್ತಕಂಠದಿಂದ ಹೊಗಳುತ್ತಿದ್ದಾರೆ. ಇದನ್ನು ಕಂಡು ಬಸವಾದಿ ಶರಣರು ತಮ್ಮ ಸಮಾಧಿಯಲ್ಲಿಯೇ ರೋದಿಸುತ್ತಿದ್ದಾರೆ, ಸಂಭ್ರಮದ ಭರಾಟೆಯಲ್ಲಿ ಅವರ ರೋದನೆ ಇವರ ಕಿವಿಗೆ ಅಪ್ಪಳಿಸದೆ ಇರುವುದು ಮಾತ್ರ ದುರಂತವಾಗಿದೆ) ಮುಂದೆ ಶರಣರ ಹತ್ಯಕಾಂಡದ ನಂತರ ಈ ಚಳವಳಿ ಧರ್ಮದ ಸ್ವರೂಪ ಪಡೆಯುತ್ತದೆ.

ಮುಂದೆ 15ನೆಯ ಶತಮಾನದಲ್ಲಿ ನೂರೊಂದು ವಿರಕ್ತರು ತಾಡೋಲೆಗಳನ್ನು ಸಂಗ್ರಹಿಸಿ ಸಂಕಲನ ಮಾಡುತ್ತಾರೆ. ಈ ಸಂದರ್ಭದಲ್ಲೇ ವೀರಶೈವ ಪದ, ಸಂಸ್ಕೃತ ಶ್ಲೋಕಗಳು ಸೇರ್ಪಡೆ ಆಗಿದ್ದು. ಮುಂದೆ ಡಾ.ಫ.ಗು.ಹಳಕಟ್ಟಿಯವರ ಅವಿರತ ಶ್ರಮದಿಂದಾಗಿ ಶರಣರ ವಚನಗಳು ಬೆಳಕಿಗೆ ಬರುತ್ತವೆ. ಮುಂದೆ ಒಂದು ಕಡೇ ಗೃಹಸ್ಥರಾದ ಅರಟಾಳ ರುದ್ರೆಗೌಡರು, ಸರ್ ಸಿದ್ದಪ್ಪ ಕಂಬಳಿಯವರು, ಶಿರಸಂಗಿ ಲಿಂಗರಾಜ ದೇಸಾಯಿ, ಎಂಎಂ.ಕಲಬುರ್ಗಿ ಲಿಂಗಣ್ಣ ಸತ್ಯಂಪೇಟೆ, ರಂಜಾನ್ ದರ್ಗಾ ಆದಿಯಾಗಿ ಅಸಂಖ್ಯಾತ ಶರಣ ಪ್ರೇಮಿಗಳ, ಮತ್ತೊಂದು ಕಡೆ ಬಸವಧರ್ಮ ಪೀಠದ ಲಿಂಗಾನಂದರ ಮತ್ತು ನಾಡಿನ ಕೆಲವು ವಿರಕ್ತ ಮಠಗಳ ಪ್ರಯತ್ನದಿಂದಾಗಿ ಬಸವಣ್ಣನ ವಿಚಾರಗಳು ಮತ್ತೆ ಮುನ್ನೆಲೆಗೆ ಬರಲು ಆರಂಭವಾಗುತ್ತವೆ.

ಕಳೆದು ನೂರು ವರ್ಷಗಳ ಈಚೆಗೆ ಲಿಂಗಾಯತ ಒಂದು ಸ್ವತಂತ್ರ ಧರ್ಮ ಎನ್ನುವ ಅರಿವು ಸಮುದಾಯದಲ್ಲಿ ಸಣ್ಣ ಪ್ರಮಾಣದಲ್ಲಿ ಮೂಡಲು ಆರಂಭವಾಗಿದ್ದು. ಅಂದಿನಿಂದ ಅಲ್ಲಲ್ಲಿ ಸ್ವತಂತ್ರ ಧರ್ಮದ ಕೂಗು ಕೇಳಿಬರುತ್ತಲೆ ಇತ್ತು. ಮೊದಲ ಬಾರಿಗೆ ಭಾಲ್ಕಿ ಬಸವಲಿಂಗ ಪಟ್ಟದೇವರ ಮತ್ತು ಮಾತೆ ಮಹಾದೇವಿಯವರ ನೇತೃತ್ವದಲ್ಲಿ ಬೀದರನಲ್ಲಿ ಒಂದು ದೊಡ್ಡ ಕೂಗು ಏಳುತ್ತದೆ. ಇಲ್ಲಿ ಸೇರಿದ ಜನಸಾಗರ ನೋಡಿ ಅನೇಕರು ಹುಬ್ಬೇರಿಸಿದರು. ಬೆಳಗಾವಿ ಸಮಾವೇಶದ ನಂತರ ಇದಕ್ಕೆ ರಾಜಕೀಯ ಸೋಂಕು ತಗಲುತ್ತದೆ.

ಈ ದನಿಗೆ ಅಧಿಕೃತವಾದ ಆಧಾರ ಕೊಟ್ಟಿದ್ದು ಎಂ.ಎಂ.ಕಲಬುರ್ಗಿಯವರು. ಕಾನೂನಾತ್ಮಕ ಮಾಹಿತಿ ಸಂಗ್ರಹಿಸಿ, ಒದಗಿಸಿಕೊಟ್ಟಿದ್ದು ಶಿವಾನಂದ ಜಾಮದಾರ್ ಅವರು. ಇದಕ್ಕೊಂದು ವಿಸ್ತೃತವಾದ ಸ್ವರೂಪ ಕೊಟ್ಟು ಅದಕ್ಕೆ ಒತ್ತಾಸೆಯಾಗಿ ನಿಂತವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಇದಕ್ಕೆ ಮುತುವರ್ಜಿ ವಹಿಸಿದವರು ಎಂ.ಬಿ ಪಾಟೀಲ್, ಬಸವರಾಜ ಹೊರಟ್ಟಿ, ವಿನಯ್ ಕುಲಕರ್ಣಿ, ಶರಣಪ್ರಕಾಶ ಪಾಟೀಲ್, ಬಿ.ಆರ್.ಪಾಟೀಲ್, ಬಸವರಾಜ ರಾಯರೆಡ್ಡಿ ಮೊದಲಾದವರು. ಇದರಿಂದ ಹೋರಾಟಕ್ಕೆ ಒಂದು ಬಲ ಬಂದಿತ್ತು. ಸಿದ್ದರಾಮಯ್ಯ, ಬಸವರಾಜ ಹೊರಟ್ಟಿ ಹೊರತುಪಡಿಸಿ ಎಲ್ಲಾ ರಾಜಕಾರಣಿಗಳು ಚಳವಳಿ ಕಾವಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಂದವರೇ. ಬೇಯಲಿಲ್ಲವೆಂದು ಅರ್ಧಕ್ಕೆ ಬಿಟ್ಟು ಹೋದರು.

ಲಿಂಗಾಯತ ಸಮುದಾಯದ ರಾಜಕಾರಣಿಗಳು ಇದರಲ್ಲಿ ಪಾಲ್ಗೊಂಡಿದ್ದು ತಮ್ಮ ಅಸ್ಮಿತೆಗಾಗಿ ಅಲ್ಲ. ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ. ಲಿಂಗಾಯತರು ಮಠೀಕರಣಗೊಂಡ ಪರಿಣಾಮವಾಗಿ ಮತ್ತು ತಮ್ಮ ಕಠೋರ ಜಾತಿಯ ಪ್ರಜ್ಞೆಯಿಂದಾಗಿ ಲಿಂಗಾಯತರ ಬಹುತೇಕ ಮತಗಳು ಕಳೆದ ಮೂರು ದಶಕಗಳಿಂದ ಬಿಜೆಪಿಗೆ ಹರಿದುಹೋಗುತ್ತಿವೆ. ಕರ್ನಾಟದಲ್ಲಿ ಲಿಂಗಾಯತರೇ ಬಿಜೆಪಿಯ ಬೆನ್ನೆಲುಬು, ಗಟ್ಟಿ ಮತದಾರರು. ಇವೆಲ್ಲವೂ ಮನಗಂಡು ಲಿಂಗಾಯತರಲ್ಲಿನ 10% ಮತಗಳಾದರೂ ಬಿಜೆಪಿಯ ಬುಟ್ಟಿಯಿಂದ ಕಾಂಗ್ರೆಸ್ ಕಡೆಗೆ ತಿರುಗಿಸಬಹುದು ಎನ್ನುವ ಆಲೋಚನೆಯಿಂದ ಹೋರಾಟದಲ್ಲಿ ತಾವಾಗಿಯೇ ರಾಜಕಾರಣಿಗಳು ಧುಮುಕುತ್ತಾರೆ.

ಕೇವಲ ಮಠಗಳಿಂದ ತಾವು ನಿರೀಕ್ಷಿಸಿದ ಮತಗಳು ಬರಬಹುದು ಎನ್ನುವ ಭ್ರಮೆಯಿಂದ ಚಳವಳಿ ತಳಮಟ್ಟಕ್ಕೆ ತೆಗೆದುಕೊಂಡು ಹೋಗದೆ, ಅಬ್ಬರದ ಸಮಾವೇಶಕ್ಕೆ ಮಾತ್ರ ಚಳವಳಿ ಸೀಮಿತಗೊಳಿಸಿದ ಪರಿಣಾಮವಾಗಿ ಜನರ ಮೇಲೆ ಯಾವುದೇ ಪರಿಣಾಮ ಆಗದಿರುವದರಿಂದ ಲಿಂಗಾಯತರ ಬಿಜೆಪಿ ಮೇಲಿನ ನಿಷ್ಠೆ ಅಲ್ಲಾಡಲಿಲ್ಲ. ಇಲ್ಲಿ ಮಠಗಳು ವ್ಯಾಪಾರಕ್ಕೆ ನಿಂತಾಗಿನಿಂದ ಜನಸಾಮಾನ್ಯರು ಮಠಗಳಿಂದ ಒಂದು ಅಂತರ ಕಾಯ್ದುಕೊಂಡಿದ್ದಾರೆ ಎನ್ನುವ ಸತ್ಯ ಅರಿಯದಿರುವುದು ರಾಜಕಾರಣಿಗಳ ಅಜ್ಞಾನ ಎತ್ತಿತೋರಿಸುತ್ತದೆ.

ಎಂ.ಬಿ ಪಾಟಿಲ್

ಆರಂಭದಲ್ಲಿ ರಾಜಕಾರಣಿಗಳು ‘ಈ ಹೋರಾಟದ ರಥ ದಡ ಸೇರಿಸುತ್ತೇವೆ. ಯಾವುದೇ ಕಾರಣಕ್ಕೂ ಇದನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ’ ಎಂಬಂತೆ ಬಿಂಬಿಸಿಕೊಂಡರು. ಆದರೆ ಇವರು ಎಷ್ಟು ವೇಗವಾಗಿ ಬಂದರೋ, ಅಷ್ಟೇ ವೇಗವಾಗಿ ಚಳವಳಿ ಅರ್ಧಕ್ಕೆ ಬಿಟ್ಟು ಸರದಿಯಲ್ಲಿ ನಿಂತು ಒಬ್ಬೊಬ್ಬರಾಗಿ ಕೈತೊಳೆದುಕೊಂಡರು. ಬೀದರ ಸಮಾವೇಶ ಹೊರತುಪಡಿಸಿ, ಕರ್ನಾಟಕದಲ್ಲಿ ಜರುಗಿದ ಎಲ್ಲಾ ಸಮಾವೇಶಗಳಿಗೆ ಹಣ ಒದಗಿಸಿದ್ದು ಎಂ.ಬಿ.ಪಾಟೀಲರು. ಈಗಲೂ ಬೆಂಗಳೂರಿನ ಜಾಗತಿಕ ಲಿಂಗಾಯತ ಮಹಾಸಭೆಯ ಕೇಂದ್ರ ಕಚೇರಿಯ ಬಾಡಿಗೆ ಮತ್ತು ಸಿಬ್ಬಂದಿಗಳ ಸಂಬಳ ನೀಡುತ್ತಿರುವುದು ಅವರೇ. ಈ ಸಂಘಟನೆ ಮುಂದೊಂದು ದಿನ ತನ್ನ ರಾಜಕೀಯ ಅನುಕೂಲಕ್ಕಾಗಿ ಬಳಕೆಗೆ ಬರಬಹುದು ಎನ್ನುವ ಕಾರಣದಿಂದ ಇಂದಿಗೂ ಪ್ರತಿತಿಂಗಳು ಒಂದು ಲಕ್ಷ ರೂಪಾಯಿ ಹಣ ನೀಡಿ ಚಳವಳಿಯಿಂದ ಕೈತೊಳೆದುಕೊಂಡು ದೂರ ನಿಂತಿದ್ದಾರೆ ಎಂಬ ಅನುಮಾನ ಹುಟ್ಟುತ್ತದೆ.

ಎರಡು ವರ್ಷದ ಹಿಂದೆ ಆರಂಭವಾದ ಈ ವಿಸ್ತೃತ ಚಳವಳಿ ಇತ್ತೀಚೆಗೆ ಕ್ಷೀಣಿಸಿದ್ದು ಸುಳ್ಳಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಲಿಂಗಾಯತರ ಅಜ್ಞಾನ, ಮಠಾಧೀಶರ ಅವಕಾಶವಾದಿತನ, ರಾಜಕಾರಣಿಗಳು ಚಳವಳಿಯಿಂದ ಬೆನ್ನು ತಿರುಗಿಸಿದ್ದು, ಚಳವಳಿಗೆ ಸಮರ್ಥವಾದ ನಾಯಕತ್ವದ ಕೊರತೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸೋಲು, ಜಾಗತಿಕ ಲಿಂಗಾಯತ ಮಹಾಸಭೆಯ ನಿಷ್ಕ್ರಿಯತೆ ಮತ್ತು ಈ ಸಂಘಟನೆಗೆ ಒಂದು ಸೈದ್ಧಾಂತಿಕ ಸ್ಪಷ್ಟತೆ ಇಲ್ಲದೇ ಇರುವುದು ಪ್ರಮುಖ ಕಾರಣವಾಗಿವೆ.

ಶಿವಾನಂದ ಜಾಮದಾರ್

ಒಂದೆಡೆ ರಾಜಕಾರಣಿಗಳು ಕೇವಲ ರಾಜಕೀಯ ಲಾಭಕ್ಕೋಸ್ಕರ ಇದರಲ್ಲಿ ಕೈಹಾಕಿದರು, ಲಾಭಗಿಟ್ಟದೆ ಹೋದಾಗ ಸಹಜವಾಗಿಯೇ ದೂರ ಸರಿದರು, ಇನ್ನೊಂದೆಡೆ ಎಂದಿಗೂ ಗೆದ್ದೆತ್ತಿನ ಬಾಲ ಹಿಡಿಯುವ ಮಠಾಧೀಶರು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮಠಾಧೀಶರಲ್ಲಿ ತಮ್ಮ ಪೂರ್ವಾಶ್ರಮದ ಜಾತಿ ವಾಸನೆ ಜಾಗೃತಗೊಂಡ ಪರಿಣಾಮ ಮತ್ತೆ ಮೊದಲಿನಂತೆ ಸರ್ಕಾರದ ಮುಂದೆ ತಮ್ಮ ತಮ್ಮ ಸಂಸ್ಥೆಗಳ, ಮಠಗಳ ವಿಕಾಸಕ್ಕೆ ಬಕೆಟ್ ಹಿಡಿಯುವ ಆಶೆಯಿಂದ ಹೋರಾಟದ ಮೇಲಿನ ಆಸಕ್ತಿ ಕಳೆದುಕೊಂಡರು. ಇದರ ಪರಿಣಾಮವಾಗಿ ಚಳವಳಿ ಕ್ಷೀಣಿಸಿದೆ. ಹಾಗಾಗಿ ಜನರಿಗೆ ಸಹಜವಾಗಿಯೇ ಲಿಂಗಾಯತ ಧರ್ಮದ ಮಾನ್ಯತೆಯ ಚಳವಳಿ ಕೇವಲ ರಾಜಕಾರಣವಾಗಿತ್ತು ಅನಿಸುವುದರಲ್ಲಿ ತಪ್ಪೇನಿಲ್ಲ.

ಕಳೆದು ಒಂದು ವರ್ಷದ ಹಿಂದೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವಿದ್ದಾಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ಯಾಬಿನೆಟ್‍ನಲ್ಲಿ ವಿಸ್ತೃತವಾಗಿ ಚರ್ಚಿಸಿ, ಬಹುಮತದ ಮೇರೆಗೆ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆಗಾಗಿ ಒಂದು ರಾಜ್ಯಸರ್ಕಾರದಿಂದ ಕ್ಯಾಬಿನೆಟ್‍ನಲ್ಲಿ ಪಾಸಾಗಿ ಬಂದ ನಂತರ ಕೇಂದ್ರಕ್ಕೆ ಕಳಿಸಿದ್ದರು. ಆದರೆ, ಈ ಶಿಫಾರಸಿನ ಅರ್ಜಿಯನ್ನು ಕನಿಷ್ಠ ಸದನದಲ್ಲಿ ಚರ್ಚೆಯೂ ಮಾಡದೇ ತಿರಸ್ಕರಿಸಿದ್ದು ಹೋರಾಟಕ್ಕೆ ಮಾಡಿದ ದೊಡ್ಡ ಅವಮಾನ. ಆದರೆ ಇದರ ವಿರುದ್ಧ ಹೋರಾಟದ ಮುಂಚೂಣಿಯಲ್ಲಿದ್ದ ಯಾವ ರಾಜಕಾರಣಿಗಳಾಗಲಿ, ಮಠಾಧೀಶರಾಗಲಿ ಸೊಲ್ಲೆತ್ತಲಿಲ್ಲ. ಹೋರಾಟ ಕ್ಷೀಣಿಸಿರುವುದಕ್ಕೆ ಇದುವೇ ಒಂದು ದೊಡ್ಡ ನಿದರ್ಶನ.

ಬಿಜೆಪಿ ಸರ್ಕಾರ ಇರುವರೆಗೆ ಇವರ್ಯಾರು ಹೋರಾಟದ ಕಡೆ ತಲೆ ಎತ್ತಿ ನೋಡುವುದಿಲ್ಲ. ಕಣ್ಣೊರೆಸುವ ತಂತ್ರವಾಗಿ ಒಂದು ಪತ್ರಿಕಾ ಹೇಳಿಕೆ, ಪುಟ್ಟ ಪುಟ್ಟ ಸಭೆಗಳು ಮಾಡಬಹುದು ಅಷ್ಟೇ ಮತ್ತೆ ಈ ಹೋರಾಟವನ್ನು ವಿಶಾಲವಾದ ಜನಾಂದೋಲನವಾಗಿ ರೂಪಗೊಳ್ಳುವುದು ಕಷ್ಟ. ರೂಪಿಸಬೇಕು ಎನ್ನುವ ಕನಿಷ್ಠ ಕಾಳಜಿಯು ಎಲ್ಲಿಯೂ, ಯಾರಲ್ಲಿಯೂ ಕಾಣುತ್ತಿಲ್ಲ.

ರೂಪಿಸುವ ಉಮೇದಿನಲ್ಲಿ ಇರುವವರು ಸ್ವತಂತ್ರ ಧರ್ಮದ ಮಾನ್ಯತೆಯ ವಿಷಯ ಪಕ್ಕಕ್ಕೆ ಸರಿಸಿ, ಒಂದೆಡೆ ರಾಜಕಾರಣಿಗಳು ತಮ್ಮ ತಮ್ಮ ರಾಜಕೀಯ ಭವಿಷ್ಯದ ಕಡೆಗೆ, ಇನ್ನೊಂದೆಡೆ ಮಠಾಧೀಶರು ತಮ್ಮ ಮಠಗಳ ವಿಕಾಸದ ಕಡೆಗೆ, ಮಠಗಳಲ್ಲಿ ಜರುಗುವ ಜಾತ್ರೆಯ ಕಡೆಗೆ ಮುಖ ಮಾಡುತ್ತಿರಲಿಲ್ಲ. ಜತೆಗೆ ಜನರು ತಮ್ಮ ಕಣ್ಣೆದುರು ಬಸವಾದಿಗಳ ಚಿಂತನೆಗೆ, ಅವರ ಆಶಯಕ್ಕೆ, ಅವರು ಕಟ್ಟಿದ ಧರ್ಮಕ್ಕೆ ಗುಂಡು ಹೊಡೆದು, ಕೇವಲ ಲಿಂಗಾಯತ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಅನುಭವಮಂಟಪಕ್ಕೆ 500 ಕೋಟಿ ಕೊಟ್ಟಿದ್ದಕ್ಕೆ, ಸ್ವಾಭಿಮಾನ ಶೂನ್ಯರಾಗಿ ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಿಸುತ್ತಿರಲಿಲ್ಲ ಮತ್ತು ಉತ್ಸಾಹದಲ್ಲಿ ವೀರಶೈವ ಮಹಾಸಭೆ ಮತ್ತು ಸಂಘಪರಿವಾರಕ್ಕೆ ಸವಾಲು ಹಾಕಿ ಹುಟ್ಟಿದ ಜಾಗತಿಕ ಲಿಂಗಾಯತ ಮಹಾಸಭೆ ಕೇವಲ ಸದಸ್ಯತ್ವ ಸ್ವೀಕರಿಸಲು ಮಾತ್ರ ಸೀಮಿತವಾಗಿ, ಇಷ್ಟೊಂದು ನಿಷ್ಕ್ರಿಯವಾಗುತ್ತಿರಲಿಲ್ಲ.

ಇಲ್ಲಿ ಮತ್ತೆ ಗೆದ್ದಿದ್ದು ಅಂದು ಬಸವಾದಿಗಳ ಹತ್ಯಾಕಾಂಡ ಮಾಡಿರುವ ಶಕ್ತಿಗಳೆ, ಸೋತಿದ್ದು ಮಾತ್ರ ಬಸವಾದಿ ಶರಣರು ಮಾತ್ರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...