ವಿಪಕ್ಷಗಳ ಇಂಡಿಯಾ ಮೈತ್ರಿಯಲ್ಲಿ ಸಾಮೂಹಿಕ ಚರ್ಚೆಗಳ ಕೊರತೆಯಿಂದಾಗಿ ಲೋಕಸಭಾ ಚುನಾವಣೆಯ ನಂತರ ಮುಂದುವರಿಯುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸಿಪಿಐ(ಎಂ)ನ ಹಿರಿಯ ನಾಯಕ, ಮಧ್ಯಂತರ ಸಂಯೋಜಕ ಪ್ರಕಾಶ್ ಕಾರಟ್ ಹೇಳಿದ್ದಾರೆ ಎಂದು TNIE ವರದಿ ಮಾಡಿದೆ. ಪಕ್ಷದ 27ನೇ ರಾಷ್ಟ್ರೀಯ ಮಹಾಅಧಿವೇಶನ ತಮಿಳುನಾಡಿನಲ್ಲಿ ಏಪ್ರಿಲ್ 2ರಿಂದ 6ರ ವರೆಗೆ ನಡೆಯಲಿದ್ದು, ಅದಕ್ಕೂ ಮುಂಚೆ ಅವರು ಈ ಹೇಳಿಕೆ ನೀಡಿದ್ದಾರೆ.
ಇಂಡಿಯಾ ಮೈತ್ರಿಯ ಪಕ್ಷಗಳು ಮೈತ್ರಿಕೂಟದ ಭವಿಷ್ಯದ ಕಾರ್ಯತಂತ್ರದ ಬಗ್ಗೆ ಒಮ್ಮತಕ್ಕೆ ಬರಬೇಕು ಎಂದು ಸಿಪಿಐ(ಎಂ) ಬಯಸುತ್ತಿದೆ ಎಂದು ಪ್ರಕಾಶ್ ಕಾರಟ್ ಹೇಳಿದ್ದಾರೆ. ಮೈತ್ರಿಯು ಮುಂದುವರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, “ರಾಷ್ಟ್ರೀಯವಾಗಿ ಏನಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗದೆ, ರಾಜ್ಯವಾರು ಆಧಾರದ ಮೇಲೆ ಒಪ್ಪಂದಗಳ ಮೇಲೆ ಮೈತ್ರಿ ಮುಂದುವರೆಯಲಿದೆ” ಎಂದು ಹೇಳಿದ್ದಾರೆ.
“ಲೋಕಸಭಾ ಚುನಾವಣೆಯ ನಂತರ ಇಂಡಿಯಾ ಮೈತ್ರಿಯೊಂದಿಗೆ ಹೇಗೆ ಮುಂದುವರಿಯಬೇಕೆಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಸಂಸತ್ತಿನಲ್ಲಿ, ಇಂಡಿಯಾ ಮೈತ್ರಿಯ ಪಕ್ಷಗಳು ಎಲ್ಲಾ ಸಮಸ್ಯೆಗಳು ಮತ್ತು ನೀತಿ ವಿಷಯಗಳಲ್ಲಿ ಸಹಕರಿಸುತ್ತವೆ, ಆದರೆ ಅದರ ಹೊರಗೆ ಯಾವುದೇ ಚರ್ಚೆ ನಡೆದಿಲ್ಲ.” ಎಂದು ಅವರು ಹೇಳಿದ್ದಾರೆ.
“ಅಂತಹ ಚರ್ಚೆಯ ಅಗತ್ಯವಿದೆ. ಏನನ್ನೂ ನಿರ್ಧರಿಸುವುದು ನಮ್ಮ ಕೈಯ್ಯಲ್ಲಿಲ್ಲ; ನಾವು ಅಂತಹ ಪ್ರಮುಖ ಶಕ್ತಿಯಲ್ಲ. ಅದಾಗ್ಯೂ, ಎಲ್ಲಾ ಪಕ್ಷಗಳು ಒಟ್ಟಿಗೆ ಕುಳಿತು ಚರ್ಚಿಸಿ ಹೇಗೆ ಮುಂದುವರಿಯಬೇಕು ಎಂಬುದರ ಕುರಿತು ಒಮ್ಮತಕ್ಕೆ ಬರಬೇಕೆಂದು ನಾವು ಬಯಸುತ್ತೇವೆ. ಆದರೆ ಅದು ಇಲ್ಲಿಯವರೆಗೆ ಆಗಿಲ್ಲ” ಎಂದು ಪ್ರಕಾಶ್ ಕಾರಟ್ ತಿಳಿಸಿದ್ದಾರೆ.
ತಮ್ಮ ಪಕ್ಷವು ರಾಜ್ಯವಾರು ಆಧಾರದ ಮೇಲೆ ಚುನಾವಣಾ ಒಪ್ಪಂದದ ಕುರಿತು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. ಸಾಮೂಹಿಕ ಚರ್ಚೆ ನಡೆಯದ ಕಾರಣ, ಈಗ ಅದಕ್ಕೆ ಯಾವುದೆ ದಿಕ್ಕಿಲ್ಲ ಎಂಬ ಸಾಮಾನ್ಯ ಭಾವನೆ ಇದೆ ಎಂದು ಪ್ರಕಾಶ್ ಕಾರಟ್ ಹೇಳಿದ್ದಾರೆ.
ಒಮ್ಮತವನ್ನು ತಲುಪುವ ಸಾಧ್ಯತೆಯ ಬಗ್ಗೆ ಮಾತನಾಡಿದ ಅವರು, ಬಿಜೆಪಿ ವಿರೋಧಿ ಮತ್ತು ಬಿಜೆಪಿಯೇತರ ಪಕ್ಷಗಳು ಒಂದಾಗಬೇಕಿದೆ ಎಂದು ಹೇಳಿದ್ದಾರೆ. ಇಂಡಿಯಾ ಮೈತ್ರಿಯಲ್ಲಿ
ಬಿಹಾರ ಮತ್ತು ತಮಿಳುನಾಡಿನಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ವ್ಯವಸ್ಥೆಗಳನ್ನು ಉಲ್ಲೇಖಿಸಿದ ಅವರು, “ಇಂಡಿಯಾ ಮೈತ್ರಿಗಿಂತ ಮೊದಲೇ ಮಹಾಘಟಬಂಧನ್ (ಮಹಾಮೈತ್ರಿ) ಇದೆ. ಆದ್ದರಿಂದ ಅದು ಬಹುಶಃ ಮುಂದುವರಿಯುತ್ತದೆ, ಹಾಗೂ ಬಲಗೊಳ್ಳಬಹುದು … ಪ್ರತಿ ರಾಜ್ಯದ ಆಧಾರದಲ್ಲಿ ನಾವು ಈ ಬಗ್ಗೆ ತೀರ್ಮಾನ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತೆಲಂಗಾಣ: ಒಂದೇ ಮದುವೆ ಮಂಟಪದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ; ವೀಡಿಯೋ ವೈರಲ್
ತೆಲಂಗಾಣ: ಒಂದೇ ಮದುವೆ ಮಂಟಪದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ; ವೀಡಿಯೋ ವೈರಲ್

