ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಂಗಳವಾರ ಘೋಷಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿಯ ನಿವಾಸದಲ್ಲಿ ನಡೆದ ಇಂಡಿಯಾ ಒಕ್ಕೂಟದ ನಾಯಕರ ಸಭೆಯ ನಂತರ ಈ ನಿರ್ಧಾರ ಪ್ರಕಟಿಸಲಾಗಿದೆ.
“ಇಂಡಿಯಾ ಒಕ್ಕೂಟದ ಎಲ್ಲಾ ಪಕ್ಷಗಳು ಸಾಮಾನ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧರಿಸಿವೆ. ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲಾ ವಿರೋಧ ಪಕ್ಷಗಳು ಒಂದೇ ಹೆಸರಿಗೆ ಒಪ್ಪಿಗೆ ನೀಡಿರುವುದು ನನಗೆ ಸಂತೋಷ ತಂದಿದೆ. ಇದು ಪ್ರಜಾಪ್ರಭುತ್ವದ ಗೆಲುವು” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಅಭ್ಯರ್ಥಿಯಾಗಿ ಆರ್‌ಎಸ್‌ಎಸ್, ಬಿಜೆಪಿಯ ಹಿರಿಯ ನಾಯಕ, ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರ ಹೆಸರನ್ನು ಘೋಷಣೆ ಮಾಡಿದೆ. ಭಾನುವಾರ ಎನ್‌ಡಿಎ ಕೂಟದ ಪಕ್ಷಗಳ ನಾಯಕರ ಸಭೆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅಭ್ಯರ್ಥಿ ಹೆಸರು ಪ್ರಕಟಿಸಿದ್ದಾರೆ.
ಕಳೆದ ತಿಂಗಳು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಆರೋಗ್ಯ ಕಾರಣಗಳನ್ನು ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆ, ಚುನಾವಣೆಯ ಅನಿವಾರ್ಯತೆ ಎದುರಾಗಿದೆ. ಸೆಪ್ಟೆಂಬರ್ 9ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನಾಂಕವಾಗಿದೆ.
ಬಿ. ಸುದರ್ಶನ್ ರೆಡ್ಡಿ ಅವರನ್ನು ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಘೋಷಿಸುತ್ತಾ ಮಲ್ಲಿಕಾರ್ಜುನ ಖರ್ಗೆ ಅವರು, “ಸುದರ್ಶನ್ ರೆಡ್ಡಿ ಭಾರತದ ಅತ್ಯಂತ ವಿಶಿಷ್ಟ ಮತ್ತು ಪ್ರಗತಿಪರ ನ್ಯಾಯಶಾಸ್ತ್ರಜ್ಞರಲ್ಲಿ ಒಬ್ಬರು ಎಂದಿದ್ದಾರೆ.
ಆಂಧ್ರ ಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶರಾಗಿ, ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವ ಅವರು, ದೀರ್ಘ ಮತ್ತು ಶ್ರೇಷ್ಠ ಕಾನೂನು ವೃತ್ತಿ ಜೀವನವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ನಿರಂತರ ಮತ್ತು ಧೈರ್ಯಶಾಲಿ ಪ್ರತಿಪಾದಕರಾಗಿರುವ ಸುದರ್ಶನ್ ರೆಡ್ಡಿ, ಬಡ ಹಿನ್ನೆಲೆಯಿಂದ ಬಂದವರು. ನೀವು ಅವರ ಅನೇಕ ತೀರ್ಪುಗಳನ್ನು ಓದಿದರೆ, ಅವರು ಬಡವರ ಪರವಾಗಿ ಹೇಗೆ ನಿಂತರು, ಸಂವಿಧಾನವನ್ನು ಹೇಗೆ ಎತ್ತಿಹಿಡಿದರು ಮತ್ತು ಮೂಲಭೂತ ಹಕ್ಕುಗಳನ್ನು ಹೇಗೆ ರಕ್ಷಿಸಿದರು ಎಂಬುದನ್ನು ನೀವು ನೋಡಬಹುದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸಿದ್ಧಾರ್ಥ್ ವರದರಾಜನ್ ಮತ್ತು ಕರಣ್ ಥಾಪರ್ ಅವರಿಗೆ ಗುವಾಹಟಿ ಪೊಲೀಸರಿಂದ ಸಮನ್ಸ್: ದೇಶದ್ರೋಹ ಪ್ರಕರಣದ ತನಿಖೆ


