1962 ರಿಂದ ಭಾರತವು ನೇಪಾಳದ ಭೂಪ್ರದೇಶವನ್ನು ‘ಅತಿಕ್ರಮಿಸಿದೆ’ ಎಂದು ಹೇಳಿರುವ ನೇಪಾಳ ಪ್ರಧಾನಿ ಕೆ.ಪಿ.ಶರ್ಮ ಒಲಿ ’ಅದನ್ನು ನಮಗೆ ಹಿಂದಿರುಗಿಸಬೇಕು’ ಎಂದು ಭಾರತವನ್ನು ಒತ್ತಾಯಿಸಿದ್ದಾರೆ.
ಬುಧವಾರ ನೇಪಾಳದ ಸಂಸತ್ತನ್ನುದ್ದೇಶಿಸಿ ಮಾತನಾಡಿದ ನೇಪಾಳದ ಪ್ರಧಾನಿ ವಿವಾದಿತ ಕಾಲಾಪಾನಿ ಪ್ರದೇಶವನ್ನು ಉಲ್ಲೇಖಿಸಿ, “1962 ರಿಂದ ಭಾರತ ಅಲ್ಲಿ ಸೈನ್ಯವನ್ನು ನಿಯೋಜಿಸುವ ಮೂಲಕ ನೇಪಾಳಿ ಪ್ರದೇಶವನ್ನು ಅತಿಕ್ರಮಿಸಿದೆ, ನಮ್ಮ ಪ್ರದೇಶವನ್ನು ಹಿಂದಿರುಗಿಸಬೇಕು” ಎಂದು ಹೇಳಿದ್ದಾರೆ.
ನೇಪಾಳ ಐತಿಹಾಸಿಕ ಸಂಗತಿಗಳು ಹಾಗೂ ಸಾಕ್ಷ್ಯಾಧಾರಗಳ ಮೇಲೆ ರಾಜತಾಂತ್ರಿಕ ಮಾತುಕತೆಗಳ ಮೂಲಕ ಗಡಿ ವಿವಾದವನ್ನು ಇತ್ಯರ್ಥಗೊಳಿಸಲು ಇನ್ನೂ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
“ನಮ್ಮ ಭೂಪ್ರದೇಶವನ್ನು ಹಿಂತಿರುಗಿಸಬೇಕು” ಎಂದಿರುವ ಒಲಿ ಸಂಸತ್ತಿನ ಕೆಳಮನೆಯ ಪ್ರತಿನಿಧಿಗಳ ಸದನದಲ್ಲಿ ತಮ್ಮ ಸರ್ಕಾರ ಮಸೂದೆಯನ್ನು ಮಂಡಿಸಿದ ಒಂದು ದಿನದ ನಂತರ ನೇಪಾಳದ ಸಂವಿಧಾನವನ್ನು ತಿದ್ದುಪಡಿ ಮಾಡಿ ವಿವಾದಿತ ಪ್ರದೇಶಗಳಾದ ಲಿಂಪಿಯಾಧುರಾ, ಲಿಪುಲೆಖ್ ಮತ್ತು ಕಲಾಪಾನಿಯನ್ನು ತನ್ನ ಅಧಿಕೃತ ನಕ್ಷೆಯಲ್ಲಿ ಸೇರಿಸಲು ನಿರ್ಣಯವಾಗಿತ್ತು ಎಂದಿದ್ದಾರೆ.
ವಿವಾದಿತ ಪ್ರದೇಶದ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸಲು ಭಾರತ ಕಾಳಿ ನದಿಯನ್ನು “ಕೃತಕವಾಗಿ ನಿರ್ಮಿಸಿದೆ” ಮತ್ತು ಅದು ಈಗ ಎರಡು ದೇಶಗಳ ಗಡಿಯಂತೆ ಇದೆ ಎಂದು ಒಲಿ ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಹೇಳಿಕೆಯನ್ನು ಪ್ರಶ್ನಿಸಿರುವ ಒಲಿ, “ಆದಿತ್ಯನಾಥ್ ನೇಪಾಳದ ಬಗ್ಗೆ ಕೆಲವು ವಿಷಯಗಳನ್ನು ಹೇಳಿದ್ದಾರೆ. ಅವರ ಅಭಿಪ್ರಾಯಗಳು ಸೂಕ್ತವಲ್ಲ ಮತ್ತು ನ್ಯಾಯಸಮ್ಮತವಲ್ಲ. ತನಗೆ ಅರ್ಥವಾಗದ ವಿಷಯಗಳ ಬಗ್ಗೆ ಪ್ರತಿಕ್ರಿಯಿಸದಂತೆ ಭಾರತದ ನಾಯಕರು ಯಾರಾದರೂ ಅವರಿಗೆ ತಿಳಿಸಿ ಹೇಳಬೇಕು” ಎಂದು ಹೇಳಿದ್ದಾರೆ.
ಟಿಬೆಟ್ ಮಾಡಿದ ತಪ್ಪನ್ನು ನೇಪಾಳ ಮಾಡಬಾರದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹೇಳಿದ್ದರು ಎಂಬ ವರದಿಗೆ ನೇಪಾಳಿ ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.
ಓದಿ: ಚೀನಾ ಇಟಲಿಗಿಂತ ಭಾರತೀಯ ವೈರಸ್ ಹೆಚ್ಚು ಅಪಾಯಕಾರಿ: ನೇಪಾಳ ಪ್ರಧಾನಿ


