ಬುಧವಾರ (ಮೇ 1) ಪ್ರಕಟವಾದ ಫ್ರೀ ಸ್ಪೀಚ್ ಕಲೆಕ್ಟಿವ್‌ನ ಅಧ್ಯಯನದ ಪ್ರಕಾರ, ಈ ವರ್ಷದ ಜನವರಿ ಮತ್ತು ಏಪ್ರಿಲ್ ನಡುವೆ ದೇಶದಲ್ಲಿ ಕನಿಷ್ಠ 134 ವಾಕ್ ಸ್ವಾತಂತ್ರ್ಯ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆಯ ಪ್ರಕರಣಗಳು ವರದಿಯಾಗಿವೆ.
ಫ್ರೀ ಸ್ಪೀಚ್ ಕಲೆಕ್ಟಿವ್ ವಾಕ್ ಸ್ವಾತಂತ್ರ್ಯದ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಗಾವಲಿಡುತ್ತದೆ. ಈ ಕುರಿತ ದಾಖಲೆಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡುತ್ತದೆ. ಅಲ್ಲದೆ, ಇದು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ಎದುರಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಬೆಂಬಲ ನೀಡುತ್ತದೆ.
ವರದಿಯಲ್ಲಿ ಉಲ್ಲೇಖಿಸಲಾದ ವಾಕ್ ಸ್ವಾತಂತ್ರ್ಯದ ಉಲ್ಲಂಘನೆಗಳಲ್ಲಿ ಪತ್ರಕರ್ತರು, ಶಿಕ್ಷಣ ತಜ್ಞರು, ಯೂಟ್ಯೂಬರ್‌ಗಳು, ವಿದ್ಯಾರ್ಥಿಗಳು ಮತ್ತು ಇತರ ನಾಗರಿಕರ ಮೇಲಿನ ಕಿರುಕುಳ, ದಾಳಿಗಳು, ಬಂಧನಗಳು ಮತ್ತು ಸೆನ್ಸಾರ್‌ಶಿಪ್ ಸೇರಿವೆ. ವ್ಯಕ್ತಿಗಳ ವಿರುದ್ಧದ ಕಾನೂನು ಕ್ರಮ ಮತ್ತು ಬೆದರಿಕೆಗಳ ಉದಾಹರಣೆಗಳು ಮತ್ತು ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯ ಪ್ರಕರಣಗಳು ಕೂಡ ವಾಕ್ ಸ್ವಾತಂತ್ರ್ಯದ ಉಲ್ಲಂಘನೆಗಳಲ್ಲಿ ಒಳಗೊಂಡಿವೆ.
ವರದಿ ಪ್ರಕಾರ, ವರ್ಷಾರಂಭದಿಂದ ದೇಶದಲ್ಲಿ 34 ಪತ್ರಕರ್ತರ ಮೇಲೆ ಹಲ್ಲೆ ನಡೆದಿದೆ. ದಾಳಿಗೊಳಗಾದವರಲ್ಲಿ ಪತ್ರಕರ್ತ ನಿಖಿಲ್ ವಾಗ್ಲೆ ಕೂಡ ಒಬ್ಬರು. ಫೆಬ್ರವರಿ 9, 2024 ರಂದು ಪುಣೆಯ ಸಾರ್ವಜನಿಕ ಸಭೆಯೊಂದಕ್ಕೆ ಕಾರ್ಯಕರ್ತ ವಿಶ್ವಂಭರ್ ಚೌಧರಿ ಮತ್ತು ಮಾನವ ಹಕ್ಕುಗಳ ವಕೀಲ ಅಸಿಮ್ ಸರೋದೆ ಅವರೊಂದಿಗೆ ತೆರಳುತ್ತಿದ್ದಾಗ ಜನರ ಗುಂಪು ಅವರನ್ನು ಬೆನ್ನಟ್ಟಿತ್ತು. ಪುಣೆಯ ಖಂಡೋಜಿ ಬಾಬಾ ಚೌಕ್‌ನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಕಾರ್ಯಕರ್ತರು ಪತ್ರಕರ್ತರ ಕಾರಿಗೆ ಮಸಿ ಎರಚಿ, ಹಾನಿಗೊಳಿಸಿದ್ದರು.
ವಾಗ್ಲೆ ಮೇಲಿನ ದಾಳಿಯ ಒಂದು ದಿನದ ಮೊದಲು, ಉತ್ತರಾಖಂಡದ ಹಲ್ದ್ವಾನಿಯಲ್ಲಿ 10 ಪತ್ರಕರ್ತರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು ಎಂದು ವರದಿ ಹೇಳಿದೆ. ಅಲ್ಲಿ 2002 ರಲ್ಲಿ ನಿರ್ಮಿಸಲಾದ ಮರಿಯಂ ಮಸೀದಿ ಮತ್ತು ಅಬ್ದುಲ್ ರಝಾಕ್ ಝಕರಿಯ ಮದರಸವನ್ನು ಧ್ವಂಸಗೊಳಿಸಿದ ನಂತರ ಉದ್ವಿಗ್ನತೆ ಉಂಟಾಗಿತ್ತು.
ಅಮೃತ್ ವಿಚಾರ್ ಪತ್ರಿಕೆಯಲ್ಲಿ ಫೋಟೊ ಜರ್ನಲಿಸ್ಟ್ ಆಗಿರುವ 48 ವರ್ಷದ ಸಂಜಯ್ ಕನೇರಾ ಅವರು ಹಲ್ದ್ವಾನಿಯಲ್ಲಿ “ತಲೆಯ ಮೇಲೆ ಚೂಪಾದ ವಸ್ತುವಿನಿಂದ” ದಾಳಿಗೊಳಗಾದ ನಂತರ ತೀವ್ರವಾಗಿ ಗಾಯಗೊಂಡಿದ್ದರು.
ಫ್ರೀ ಸ್ಪೀಚ್ ಕಲೆಕ್ಟಿವ್‌ನ ವರದಿಯು, ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್‌ನ ಸೌತ್ ಏಷ್ಯಾ ಬ್ಯೂರೋ ಮುಖ್ಯಸ್ಥೆ ಅವನಿ ಡಯಾಸ್ ಪ್ರಕರಣವನ್ನು ಒಳಗೊಂಡಂತೆ ಸುದ್ದಿ ಮಾಧ್ಯಮದ ಮೇಲಿನ ಸೆನ್ಸಾರ್‌ಶಿಪ್‌ನ 12 ಉದಾಹರಣೆಗಳನ್ನು ಪಟ್ಟಿ ಮಾಡಿದೆ.
ಎಪ್ರಿಲ್ 23 ರಂದು ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಡಯಾಸ್ ಅವರು, “ಎರಡು ವರ್ಷಗಳ ಕಾಲ ದೇಶದಲ್ಲಿ ನೆಲೆಸಿದ ಬಳಿಕ ಹಠಾತ್ತನೆ ಭಾರತವನ್ನು ತೊರೆಯಬೇಕಾಯಿತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನನ್ನ ವರದಿಯು ‘ಮಿತಿ ದಾಟಿದೆ’ ಎಂಬ ಕಾರಣ ನೀಡಿ ವೀಸಾ ವಿಸ್ತರಣೆಗೆ ನಿರಾಕರಿಸಿದೆ” ಎಂದು ಹೇಳಿದ್ದರು.
ಕೆನಡಾದ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಸುದ್ದಿಯನ್ನು ಭಾರತದಲ್ಲಿ ಪ್ರಸಾರ ಮಾಡುವುದಕ್ಕೆ ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್‌ನ ಯೂಟ್ಯೂಬ್‌ಗೆ ನಿರ್ಬಂಧ ವಿಧಿಸಿದ ವಾರಗಳ ನಂತರ ಅವನಿ ಡಯಾಸ್ ಅವರಿಗೆ ವೀಸಾ ನಿರಾಕರಿಸಲಾಗಿದೆ ಎಂದು ವರದಿ ತಿಳಿಸಿದೆ.
ಒಟ್ಟಾರೆಯಾಗಿ, ಜನವರಿಯಿಂದ ದೇಶದಲ್ಲಿ ಸಾಮಾಜಿಕ ಮಾಧ್ಯಮ, ಸುದ್ದಿ ಮಾಧ್ಯಮ, ಶೈಕ್ಷಣಿಕ ಮತ್ತು ಮನರಂಜನಾ ಕ್ಷೇತ್ರವನ್ನು ಒಳಗೊಂಡಿರುವ ಸೆನ್ಸಾರ್‌ಶಿಪ್‌ನ 46 ಪ್ರಕರಣಗಳು ವರದಿಯಾಗಿವೆ.
ಜನವರಿ 22 ರಂದು ರಾಮ ಮಂದಿರದ ಉದ್ಘಾಟನೆಗೆ ಮುಂಚಿತವಾಗಿ, ಸುಮಾರು 100 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ ಎಂದು ವರದಿ ಹೇಳಿದೆ.
1992ರ ಬಾಬ್ರಿ ಮಸೀದಿ ಧ್ವಂಸ ಕುರಿತ ಪೋಸ್ಟರ್ ಅನ್ನು ಕ್ಯಾಂಪಸ್‌ನಲ್ಲಿ ಪ್ರದರ್ಶಿಸಿದ್ದಕ್ಕಾಗಿ ಜನವರಿ 24 ರಂದು, ಪುಣೆಯ ಫಿಲ್ಮ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಏಳು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಹಿಂದುತ್ವದ ಗುಂಪೊಂದು ಕ್ಯಾಂಪಸ್‌ಗೆ ನುಗ್ಗಿ, ಘೋಷಣೆಗಳನ್ನು ಕೂಗಿ, “ಸಂವಿಧಾನದ ಸಾವನ್ನು ನೆನಪಿಸಿಕೊಳ್ಳಿ” ಎಂಬ ಬ್ಯಾನರ್‌ಗೆ ಬೆಂಕಿ ಹಚ್ಚಿದ ಒಂದು ದಿನದ ನಂತರ ಇದು ಸಂಭವಿಸಿತ್ತು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಕಪ್ ನೊಕ್ವೊಹಮ್, ಪ್ರಧಾನ ಕಾರ್ಯದರ್ಶಿ ಸಯಂತನ್ ಚಕ್ರವರ್ತಿ ಮತ್ತು ಒಬ್ಬ ವಿದ್ಯಾರ್ಥಿನಿ ಸೇರಿದಂತೆ ಇತರ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ರಾಮ ಮಂದಿರ ಉದ್ಘಾಟನೆಯ ಬಳಿಕ ಹಲವು ರಾಜ್ಯಗಳಲ್ಲಿ ‘ರಾಮ್ ಕೆ ನಾಮ್’ ಸಾಕ್ಷ್ಯಚಿತ್ರದ ಪ್ರದರ್ಶಕ್ಕೆ ಅಡ್ಡಿಪಡಿಸಲಾಗಿದೆ ಎಂದು ವರದಿಯು ಗಮನಸೆಳೆದಿದೆ. ‘ರಾಮ್ ಕೆ ನಾಮ್’ ಅಯೋಧ್ಯೆಯಲ್ಲಿ ಹಿಂದಿನ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಹಿಂದುತ್ವ ಗುಂಪುಗಳ ಪ್ರಚಾರದ ಕುರಿತು ಚಲನಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್ ಅವರ 1992ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರವಾಗಿದೆ.
ಇದನ್ನೂ ಓದಿ : ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳ ಪರೀಕ್ಷೆ, ಸಂತ್ರಸ್ತರಿಗೆ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ


