ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಯ ನಡುವೆಯೂ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಮುಂದುವರಿಸಲಿದೆ ಎಂದು ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ವಿಷಯದ ಸೂಕ್ಷ್ಮತೆಯ ಕಾರಣದಿಂದ ಈ ಮೂಲದ ಅಧಿಕಾರಿಗಳು ತಮ್ಮ ಹೆಸರನ್ನು ಬಹಿರಂಗಪಡಿಸಲು ಅವರು ಬಯಸಿಲ್ಲವೆನ್ನಲಾಗಿದೆ.
“ಇವು ದೀರ್ಘಕಾಲೀನ ತೈಲ ಒಪ್ಪಂದಗಳು. ಒಂದೇ ದಿನದಲ್ಲಿ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದು ಸುಲಭವಲ್ಲ” ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳು ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಟ್ರಂಪ್ ಅವರು, ರಷ್ಯಾ ಶಸ್ತ್ರಾಸ್ತ್ರ ಮತ್ತು ತೈಲವನ್ನು ಖರೀದಿಸುವ ಭಾರತದ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಸೂಚಿಸಿದ್ದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತವು ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸುತ್ತಿಲ್ಲ ಎಂದು ತಾನು ಕೇಳಿದ್ದೇನೆ ಎಂದು ಹೇಳಿದ್ದರು.
ಇದಕ್ಕೆ ತದ್ವಿರುದ್ಧವಾಗಿ, ಶನಿವಾರದಂದು ನ್ಯೂಯಾರ್ಕ್ ಟೈಮ್ಸ್ ಇಬ್ಬರು ಅನಾಮಧೇಯ ಹಿರಿಯ ಭಾರತೀಯ ಅಧಿಕಾರಿಗಳನ್ನು ಉಲ್ಲೇಖಿಸಿ, ಭಾರತ ಸರ್ಕಾರದ ನೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ವರದಿ ಮಾಡಿದೆ. ರಷ್ಯಾದಿಂದ ಆಮದುಗಳನ್ನು ಕಡಿಮೆ ಮಾಡಲು ಭಾರತ ಸರ್ಕಾರ ತೈಲ ಕಂಪನಿಗಳಿಗೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದೇ ವಾರ ರಾಯಿಟರ್ಸ್ ವರದಿ ಮಾಡಿದಂತೆ, ಜುಲೈನಲ್ಲಿ ರಷ್ಯಾ ತೈಲದ ರಿಯಾಯಿತಿ ಕಡಿಮೆಯಾದ ನಂತರ ಭಾರತದ ಸರ್ಕಾರಿ ಸ್ವಾಮ್ಯದ ರಿಫೈನರಿಗಳು ಕಳೆದ ವಾರ ರಷ್ಯಾ ತೈಲ ಖರೀದಿ ನಿಲ್ಲಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ನಮ್ಮ ಇಂಧನ ಅವಶ್ಯಕತೆಗಳಿಗಾಗಿ ಲಭ್ಯವಿರುವ ಮಾರುಕಟ್ಟೆಗಳು, ಕೊಡುಗೆಗಳು ಹಾಗೂ ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಪರಿಗಣಿಸುತ್ತೇವೆ” ಎಂದು ಶುಕ್ರವಾರದ ನಿಯಮಿತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೈಸ್ವಾಲ್ ಅವರು, ಭಾರತವು ರಷ್ಯಾದೊಂದಿಗೆ “ಸ್ಥಿರ ಮತ್ತು ಕಾಲಾತೀತ ಪಾಲುದಾರಿಕೆ”ಯನ್ನು ಹೊಂದಿದೆ ಮತ್ತು ವಿವಿಧ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಮೂರನೇ ದೇಶದ ದೃಷ್ಟಿಕೋನದಿಂದ ನೋಡಬಾರದು ಎಂದು ಹೇಳಿದರು.
ವಾಷಿಂಗ್ಟನ್‌ನ ಶ್ವೇತಭವನ ಈ ಕುರಿತು ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಿಯಾಯಿತಿ ಕಡಿಮೆ ಆದ ಕಾರಣ ಖರೀದಿ ನಿಲುಗಡೆ
ರಷ್ಯಾ ತೈಲದ ರಿಯಾಯಿತಿ 2022ರಿಂದಲೇ ಇಳಿದಿದ್ದು, ಇದು ಪಾಶ್ಚಿಮಾತ್ಯ ನಿರ್ಬಂಧಗಳು ಹೇರಿದಾಗಿನಿಂದಲೇ ಅತ್ಯಂತ ಕಡಿಮೆ ಮಟ್ಟಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ. ಕಡಿಮೆ ರಷ್ಯನ್ ರಫ್ತು ಮತ್ತು ಸ್ಥಿರ ಬೇಡಿಕೆಯಿಂದಾಗಿ ಈ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ, ದೇಶದ ಸರ್ಕಾರಿ ರಿಫೈನರಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (HPCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (BPCL) ಮತ್ತು ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ ಲಿಮಿಟೆಡ್ (MRPL), ಕಳೆದ ಒಂದು ವಾರದಿಂದ ರಷ್ಯಾ ಕಚ್ಚಾ ತೈಲ ಖರೀದಿಗೆ ಮುಂದಾಗಿಲ್ಲ ಎಂದು ರಿಫೈನರಿಗಳ ಖರೀದಿ ಯೋಜನೆಗಳ ಬಗ್ಗೆ ತಿಳಿದಿರುವ ನಾಲ್ಕು ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.
ಭಾರತದ ಅಗ್ರ ತೈಲ ಪೂರೈಕೆದಾರ
ಜುಲೈ 14ರಂದು, ರಷ್ಯಾ ಉಕ್ರೇನ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ಬರದಿದ್ದರೆ ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ 100% ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು. ಭಾರತಕ್ಕೆ ರಷ್ಯಾ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರವಾಗಿದ್ದು, ಭಾರತದ ಒಟ್ಟು ತೈಲ ಪೂರೈಕೆಯಲ್ಲಿ ಶೇಕಡಾ 35ರಷ್ಟು ಪಾಲು ಹೊಂದಿದೆ.
2025ರ ಮೊದಲ ಆರು ತಿಂಗಳಲ್ಲಿ, ರಷ್ಯಾ ಭಾರತಕ್ಕೆ ಅಗ್ರ ತೈಲ ಪೂರೈಕೆದಾರನಾಗಿ ಮುಂದುವರಿದಿದ್ದು, ಇರಾಕ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಂತರದ ಸ್ಥಾನಗಳಲ್ಲಿವೆ. ಈ ವರ್ಷದ ಜನವರಿ-ಜೂನ್ ಅವಧಿಯಲ್ಲಿ ಭಾರತವು ಪ್ರತಿದಿನ ಸುಮಾರು 1.75 ದಶಲಕ್ಷ ಬ್ಯಾರೆಲ್ ರಷ್ಯಾ ತೈಲ ಆಮದು ಮಾಡಿಕೊಂಡಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 1% ಹೆಚ್ಚಳವಾಗಿದೆ ಎಂದು ರಾಯಿಟರ್ಸ್‌ಗೆ ಲಭ್ಯವಾದ ದತ್ತಾಂಶಗಳು ತೋರಿಸುತ್ತವೆ.
ರಷ್ಯಾ ತೈಲದ ಪ್ರಮುಖ ಖರೀದಿದಾರನಾದ ನಯಾರಾ ಎನರ್ಜಿ (Nayara Energy) ಇತ್ತೀಚೆಗೆ ಯುರೋಪಿಯನ್ ಯೂನಿಯನ್ (EU) ನಿಂದ ನಿರ್ಬಂಧಗಳಿಗೆ ಒಳಗಾಗಿದೆ. ಏಕೆಂದರೆ ಈ ರಿಫೈನರಿ ರಷ್ಯಾದ ತೈಲ ಸಂಸ್ಥೆಯಾದ ರೋಸ್ನೆಫ್ಟ್ (Rosneft) ಸೇರಿದಂತೆ ರಷ್ಯನ್ ಸಂಸ್ಥೆಗಳ ಬಹುಪಾಲು ಒಡೆತನದಲ್ಲಿದೆ. ಕಳೆದ ತಿಂಗಳು, ಇಯೂ ನಿರ್ಬಂಧಗಳ ನಂತರ ನಯಾರಾ ಎನರ್ಜಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ರಾಜೀನಾಮೆ ನೀಡಿದ್ದು, ಕಂಪನಿಯ ಹಿರಿಯ ಅಧಿಕಾರಿಯಾದ ಸೆರ್ಗೆ ಡೆನಿಸೊವ್ (Sergey Denisov) ಅವರನ್ನು ಸಿಇಒ ಆಗಿ ನೇಮಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿತ್ತು.
ಇದೇ ತಿಂಗಳ ಕೊನೆಯಲ್ಲಿ, ಹೊಸ ಇಯೂ ನಿರ್ಬಂಧಗಳಿಂದಾಗಿ ನಯಾರಾ ಎನರ್ಜಿಯಿಂದ ಹೊರಬಿದ್ದ ತೈಲ ಉತ್ಪನ್ನಗಳನ್ನು ಹೊತ್ತ ಮೂರು ಹಡಗುಗಳು ಇನ್ನೂ ತಮ್ಮ ಸರಕುಗಳನ್ನು ಇಳಿಸಲು ಸಾಧ್ಯವಾಗಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
ಅಜ್ಮೀರ್‌ನಲ್ಲಿ ಬೃಹತ್ ತೆರವು ಕಾರ್ಯಾಚರಣೆ: ದರ್ಗಾ ಪ್ರದೇಶದ 150ಕ್ಕೂ ಹೆಚ್ಚು ಅನಧಿಕೃತ ಮಳಿಗೆಗಳು ನೆಲಸಮ


