ಅಕ್ಟೋಬರ್ 16ರಿಂದ ಆರಂಭವಾಗುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 23ರಂದು ಎದುರಿಸಲಿದೆ. ಈ ಸಂದರ್ಭದಲ್ಲಿಯೇ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಶೆಯ ಸುದ್ದಿಯೊಂದು ಅಪ್ಪಳಿಸಿದೆ. ಜಸ್ಪ್ರಿತ್ ಬೂಮ್ರ ಸ್ಥಾನಕ್ಕೆ ಆಯ್ಕೆಯಾಗಿದ್ದ ಭಾರತದ ವೇಗದ ಬೌಲರ್ ದೀಪಕ್ ಚಹರ್ ಸಹ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ದೀಪಕ್ ಚಹರ್ ಫಿಟ್ ಆಗಲು ಮತ್ತಷ್ಟು ಸಮಯ ಬೇಕು. ಅವರ ಹಿಮ್ಮಡಿ ಗಾಯ ಗುಣಮುಖವಾಗಿದೆ. ಆದರೆ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿದೆ. ಅದರಿಂದ ಅವರು ಟೂರ್ನಿಯಿಂದ ಹೊರಗುಳಿಯುವುದು ಅನಿವಾರ್ಯ ಎನ್ನಲಾಗಿದೆ. ಹಾಗಾಗಿ ಭಾರತದ ವಿಶ್ವಕಪ್ ತಂಡಕ್ಕೆ ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ ಮತ್ತು ಶಾರ್ದೂಲ್ ಠಾಕೂರ್ ಜೊತೆಗೂಡಿದ್ದಾರೆ.
ಬೂಮ್ರ ಗಾಯದ ಕಾರಣದಿಂದಾಗಿ ಏಷ್ಯಾಕಪ್‌ನಲ್ಲಿಯೂ ಕಣಕ್ಕಿಳಿದಿರಲಿಲ್ಲ. ಏಷ್ಯಾ ಕಪ್‌ನಲ್ಲಿ ಭಾರತದ ಬೌಲಿಂಗ್ ಕೊರತೆಯಿಂದಾಗಿಯೇ ಭಾರತವು ಫೈನಲ್ ತಲುಪಲು ಸಾಧ್ಯವಾಗಿರಲಿಲ್ಲ. ಆನಂತರ ಆಸ್ಟ್ರೇಲಿಯಾ ವಿರುದ್ಧ 2 ಪಂದ್ಯಗಳನ್ನು ಬೂಮ್ರ ಆಡಿದ್ದರು. ಯಾರ್ಕರ್‌ಗಳಿಗೆ ಖ್ಯಾತಿಯಾಗಿರುವ ಬೂಮ್ರ ಭಾರತದ ಬೌಲಿಂಗ್ ಬೆನ್ನೆಲುಬು ಆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಫಿಂಚ್ ಅವರನ್ನು ಯಾರ್ಕರ್ ಬೌಲ್ ಹಾಕಿ ಬೌಲ್ಡ್ ಮಾಡಿದಾಗ ಸ್ವತಃ ಫಿಂಚ್ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ್ದರು.
ಅಂತಿಮ ಓವರ್‌ಗಳಲ್ಲಿ ಕಳಪೆ ಬೌಲಿಂಗ್ ಪ್ರದರ್ಶನವು ಭಾರತ ತಂಡವನ್ನು ಕಾಡುತ್ತಿದೆ. ಭುವನೇಶ್ವರ್ ಕುಮಾರ್ ಅಂತಿಮ ಓವರ್‌ಗಳಲ್ಲಿ ವಿಫಲರಾಗಿದ್ದಾರೆ. ಕೆಲವೊಮ್ಮೆ ಹರ್ಷಲ್ ಪಟೇಲ್ ಸಹ ದುಬಾರಿಯೆನಿಸಿದ್ದಾರೆ. ಇದು ತಂಡದ ನಾಯಕ ರೋಹಿತ್ ಶರ್ಮಾರನ್ನು ಚಿಂತೆಗೀಡುಮಾಡಿದೆ. ಕಳೆದ ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವಿಫಲವಾಗಿದ್ದರೆ ಈಗ ಸದ್ಯ ಅಂತಿಮ ಓವರ್‌ಗಳ ಬೌಲಿಂಗ್ ಸಮಸ್ಯೆಯಾಗಿ ಪರಿಣಮಿಸಿದೆ. ಈ ನಡುವೆಯ ಭರವಸೆಯ ಆಟಗಾರರಾದ ಜಸ್ಪ್ರಿತ್ ಬೂಮ್ರ ಮತ್ತು ದೀಪಕ್ ಚಹರ್ ಹೊರಗುಳಿದಿದ್ದಾರೆ. ಅವರ ಸ್ಥಾನವನ್ನು ಉಳಿದ ವೇಗದ ಬೌಲರ್‌ಗಳು ಹೇಗೆ ನಿಭಾಯಿಸುತ್ತಾರೆ ನೋಡಬೇಕಿದೆ.
ಇದನ್ನೂ ಓದಿ: ಕ್ರಿಕೆಟ್, ಕಾಮೆಂಟ್ರಿ ಮತ್ತು ಭಾಷೆ


