ಕೇಂದ್ರದಲ್ಲಿ 2024ರಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ ಸೋಲುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ವಿವಿಧ ಸಂಘಟನೆಗಳ ಜಂಟಿ ಸಹಯೋಗದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ‘ದುಡಿವ ಜನರ ಮಹಾ ಧರಣಿ’ಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ರೈತ ಸಮುದಾಯ ಯಾವ ಸಮಸ್ಯೆಗೆ ಎದುರಾಗಿತ್ತಿದೆಯೋ ಅದರ ವಿರುದ್ಧ ನಿರಂತರ ಹೋರಾಟ ನಡೆದಿದೆ. ಆದರೆ, ದೆಹಲಿ ಹೋರಾಟ ರೈತರ ಆಕ್ರೋಶ ಕಟ್ಟೆ ಒಡೆದ ಹೊರಾಟವಾಗಿದೆ. 780 ರೈತರು ತಮ್ಮ ಪ್ರಾಣವನ್ನು ಇದಕ್ಕೆ ಅರ್ಪಿಸಿದ್ದಾರೆ. ರೈತರ ಈ ತೀವ್ರ ಹೋರಾಟವು ಕಾಯ್ದೆ ವಾಪಾಸ್ ಪಡೆಯಲೇ ಬೇಕಾದ ಸ್ಥಿತಿ ತಂದಿಟ್ಟಿತ್ತು. 2020ರಲ್ಲಿ ಹೋರಾಟಗಾರ ಮಾರುತಿ ಮಾನ್ಪಡೆ ತೀರಿಕೊಂಡರು. ಈ ವೇಳೆ ಬಿಜೆಪಿಯ ಯಡಿಯೂರಪ್ಪ ಅವರ ಸರ್ಕಾರ ರೈತ ವಿರೋಧಿ ಕಾಯ್ದೆಯನ್ನು ಜಾರಿ ತಂದಾಗ ರೈತ, ದಲಿತ, ಕಾರ್ಮಿಕರು ಐಕ್ಯವಾಗಿ ಹೋರಾಟ ನಡೆಸಿದೆವು ಎಂದರು.
ಸ್ವಾತಂತ್ರ್ಯ ಪಡೆಯಲು ನಾವು 2 ಶತಮಾನಗಳ ಕಾಲ ಹೋರಾಟ ಮಾಡಿದ್ದೇವೆ. ಈ ದೇಶಕ್ಕಾಗಿ ಜನರು ತಮ್ಮ ಆಯುಷ್ಯವನ್ನೇ ಮುಡಿಪಿಟ್ಟಿದ್ದಾರೆ. ನಾವು ಈಗ ಸಂವಿಧಾನ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ. 2024ರ ಚುನಾವಣೆಯಲ್ಲಿ ಭಾರತದ ದೇಶದ ಜನರಿಗೆ ದೊಡ್ಡ ಮಹತ್ವವಾದ ಚುನಾವಣೆ. ಈ ಚುನಾವಣೆಯಲ್ಲಿ ಕೋಮುವಾದಿ, ಬಂಡವಾಳಶಾಹಿಯನ್ನು ಪ್ರತಿನಿಧಿಸುವ ಮೋದಿ ಸರ್ಕಾರ ಮತ್ತೆ ಚುನಾಯಿತವಾದರೆ ಮತ್ತೆ ಎಂದೂ ಚುನಾವಣೆ ನಡೆಯುವುದಿಲ್ಲ. 2024ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರವನ್ನು ಪ್ರತಿನಿಧಿಸುವ ಜನರು ಅಧಿಕಾರಕ್ಕೆ ಬಂದರೆ ಭಾರತ ಸೋಲುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನ ಚಳವಳಿಗಳ ಮೂಲಕ ನಾವು ಬದಲವಾಣೆ ತರಬೇಕು. ರಾಜಕೀಯ ಪಕ್ಷಗಳಿಂದ ಬದಲಾವಣೆ ಸಾಧ್ಯವಿಲ್ಲ. 2024ರ ಚುನಾವಣೆಯಲ್ಲಿ ಜನ ಚಳವಳಿಗಳು ನಿರ್ಣಾಯಕ ಪಾತ್ರ ವಹಿಸಬೇಕು ಎಂದು ಹೇಳಿದರು.
ಇದನ್ನೂ ಓದಿ : ಬೆಂಗಳೂರು: ಎರಡನೇ ದಿನಕ್ಕೆ ಕಾಲಿಟ್ಟ ‘ದುಡಿಯುವ ಜನರ ಮಹಾ ಧರಣಿ’


