ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿರುವ ಮಾಲ್ಡೀವ್ಸ್‌ನ ಮೂವರು ಮಂತ್ರಿಗಳ ಹೇಳಿಕೆಗಳು ‘ಭಾರತದ ಘನತೆಗೆ ಸವಾಲಾಗಿದೆ’ ಎಂದು ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಹೇಳಿದ್ದಾರೆ ಎಂದು ಸೋಮವಾರ ಎನ್‌ಡಿಟಿವಿ ವರದಿ ಮಾಡಿದೆ.
‘ಭಾರತವು ಅಂತಹ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ. ಇಡೀ ದೇಶವು ಪ್ರಧಾನಿಯವರೊಟ್ಟಿಗೆ ಒಗ್ಗಟ್ಟನ್ನು ತೋರಿಸಿದೆ. ಪ್ರಧಾನಿ ಮತ್ತು ಲಕ್ಷದ್ವೀಪಗಳ ಪರವಾಗಿ ನಿಂತಿರುವ ಭಾರತದ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.
‘ನಾವು ಅವರ ಕ್ಷಮೆಯಾಚನೆ ಬಗ್ಗೆ ಮಾತನಾಡಲು ಹೋಗುವುದಿಲ್ಲ.. ನಮ್ಮ ಮೌಲ್ಯಗಳು ವಿಭಿನ್ನವಾಗಿವೆ … ಅವರು ಅಂತಹ ಟೀಕೆಗಳನ್ನು ಮಾಡುವ ಅಗತ್ಯವಿಲ್ಲ. ಅವರ ತಪ್ಪುಗಳಿಗಾಗಿ ಅಲ್ಲಿನ ಸರ್ಕಾರದಿಂದ ಅವರು ಶಿಕ್ಷೆಗೆ ಒಳಗಾಗಿದ್ದಾರೆ. ಇದನ್ನೆಲ್ಲಾ ಭಾರತ ಸಹಿಸುವುದಿಲ್ಲ ಎಂದು ತೋರಿಸಿದೆ. ತನ್ನ ಪ್ರಧಾನಿಗೆ ಯಾವುದೇ ಅವಮಾನ ಆಗದಂತೆ ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು ಮತ್ತು ಸಾಮಾನ್ಯ ಜನರವರೆಗೆ ಭಾರತವು ಮಾಲ್ಡೀವ್ಸ್‌ಗೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ’ ಎಂದರು.
ಮಾಲ್ಡೀವಿಯನ್ ಸಚಿವರಾದ ಮರ್ಯಮ್ ಶಿಯುನಾ, ಮಲ್ಶಾ ಶರೀಫ್ ಮತ್ತು ಮಹಜೂಮ್ ಮಜಿದ್ ಅವರು ಎಕ್ಸ್ ನಲ್ಲಿ ಮೋದಿಯವರ ಬಗ್ಗೆ ವಿಮರ್ಶಾತ್ಮಕ ಟೀಕೆಗಳನ್ನು ಪೋಸ್ಟ್ ಮಾಡಿದ ನಂತರ ಈ ಗದ್ದಲ ಪ್ರಾರಂಭವಾಯಿತು. ಪ್ರಧಾನಿಯವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದದ್ದರು. ಪ್ರಧಾನಮಂತ್ರಿಯವರ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಲಕ್ಷದ್ವೀಪವನ್ನು ಪರ್ಯಾಯ ರಜೆಯ ತಾಣವಾಗಿಸಿಕೊಳ್ಳಲು ಪ್ರೇರೇಪಿಸಿತು.
ಮಾಲ್ಡೀವ್ಸ್ ದ್ವೀಪವು ಆದಾಯಕ್ಕಾಗಿ ಭಾರತೀಯ ಪ್ರವಾಸಿಗರ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ತಮ್ಮ ಸಚಿವರ ಹೇಳಿಕೆಯ ಬಗ್ಗೆ ದ್ವೀಪ ರಾಷ್ಟ್ರವು ತಡಮಾಡದೆ ಪ್ರತಿಕ್ರಿಯಿಸಿದೆ. ‘ಸರ್ಕಾರಿ ಹುದ್ದೆಗಳಲ್ಲಿದ್ದಾಗ ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಪೋಸ್ಟ್ ಮಾಡಿದವರನ್ನು ಅಮಾನತುಗೊಳಿಸಲಾಗಿದೆ’ ಎಂದು ದ್ವೀಪ ರಾಷ್ಟ್ರ ಹೇಳಿದೆ.
ಈ ಘಟನೆಯು ರಾಜಕೀಯ ಮತ್ತು ರಾಜತಾಂತ್ರಿಕ ಬಿಕ್ಕಟ್ಟಾಗಿ ಮಾರ್ಪಟ್ಟಿದ್ದು, ವಿಶೇಷವಾಗಿ ಆ ದೇಶದ ವಿರೋಧ ಪಕ್ಷದ ಶಾಸಕರು ಆಡಳಿತ ಪಕ್ಷದ ಮೇಲೆ ದಾಳಿ ಮಾಡಲು ಇದನ್ನು ಬಳಸುತ್ತಿದ್ದಾರೆ. ಮಾಜಿ ಅಧ್ಯಕ್ಷ ಮೊಹಮದ್ ನಶೀದ್ ಅವರು ಸಚಿವರ ಹೇಳಿಕೆಗಳನ್ನು “ಭಯಾನಕ” ಎಂದು ಕರೆದಿದ್ದಾರೆ. ಈ ಮಧ್ಯೆ ಭಾರತವು ದೆಹಲಿಯಲ್ಲಿ ಮಾಲ್ಡೀವ್ಸ್ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ವ್ಯಕ್ತಪಡಿಸಿದೆ.
ಚೀನಾದ ಪರವಾಗಿದ್ದಾರೆ ಎನ್ನಲಾದ ಮೊಹಮ್ಮದ್ ಮುಯಿಝು ಅವರು ದ್ವೀಪ ರಾಷ್ಟ್ರದ ನಾಯಕರಾಗಿ ಆಯ್ಕೆಯಾದಾಗಿನಿಂದ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳು ಹದಗೆಟ್ಟಿದೆ. ಮುಯಿಝು ಅವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ರಾಷ್ಟ್ರೀಯ ಭದ್ರತೆಯ ಆಧಾರದ ಮೇಲೆ ಮಾಲ್ಡೀವ್ಸ್‌ನಿಂದ ಭಾರತೀಯ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಇದನ್ನೂ ಓದಿ; ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಪುನಃ ಜೈಲು; ತೀರ್ಪು ಸ್ವಾಗತಿಸಿದ ಪ್ರತಿಪಕ್ಷಗಳು


