Homeಮುಖಪುಟಅಕ್ರಮ ಗಣಿಗಾರಿಕೆ ಮನಿ ಲಾಂಡರಿಂಗ್ ಪ್ರಕರಣ; ಹರಿಯಾಣದ ಮಾಜಿ ಶಾಸಕನನ್ನು ಬಂಧಿಸಿದ ಇಡಿ

ಅಕ್ರಮ ಗಣಿಗಾರಿಕೆ ಮನಿ ಲಾಂಡರಿಂಗ್ ಪ್ರಕರಣ; ಹರಿಯಾಣದ ಮಾಜಿ ಶಾಸಕನನ್ನು ಬಂಧಿಸಿದ ಇಡಿ

- Advertisement -
- Advertisement -

ಅಕ್ರಮ ಗಣಿಗಾರಿಕೆ ಸಂಬಂಧದ ಮನಿ ಲಾಂಡರಿಂಗ್ ತನಿಖೆಯಲ್ಲಿ ಹರಿಯಾಣದ ಮಾಜಿ ಶಾಸಕ ದಿಲ್ಬಾಗ್ ಸಿಂಗ್ ಮತ್ತು ಅವರ ಸಹಾಯಕ ಕುಲ್ವಿಂದರ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜಾರಿ ನಿರ್ದೇಶನಾಲಯವು ಯಮುನಾ ನಗರ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್ಎಲ್‌ಡಿ)ದ ಮಾಜಿ ಶಾಸಕ ಸಿಂಗ್, ಸೋನಿಪತ್‌ನ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ಅವರಿಗೆ ಸಂಬಂಧಿಸಿದ ಜಾಗಗಳ ಮೇಲೆ ಜನವರಿ 4ರಂದು ದಾಳಿ ನಡೆಸಿತ್ತು. ಐದು ದಿನಗಳ ತೀವ್ರ ಹುಡುಕಾಟದ ನಂತರ ಸೋಮವಾರದಂದು ಪರಿಶೀಲನೆ ಕೊನೆಗೊಂಡಿದೆ.

ಸುಮಾರು 20 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಹರ್ಯಾಣದ ಮಾಜಿ ಶಾಸಕ ಮತ್ತು ಅವರ ಸಹಾಯಕರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಬಂಧಿಸಲಾಗಿದ್ದು, ಇಬ್ಬರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆಗಾಗಿ ತನಿಖಾ ಸಂಸ್ಥೆಯು ಮತ್ತಷ್ಟು ದಿನಗಳ ಕಾಲ ವಶಕ್ಕೆ ಕೋರಲಿದೆ ಎನ್ನಲಾಗಿದೆ.

ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಪ್ರಕರಣವನ್ನೂ ದಾಖಲಿಸಲಾಗಿದ್ದು, ಕನಿಷ್ಠ ಐದು “ಅಕ್ರಮ” ರೈಫಲ್‌ಗಳು, 300 ಬುಲೆಟ್‌ಗಳು ಮತ್ತು ಕಾರ್ಟ್ರಿಡ್ಜ್‌ಗಳು, 100ಕ್ಕೂ ಹೆಚ್ಚು ಮದ್ಯದ ಬಾಟಲಿಗಳು, ₹5 ಕೋಟಿ ನಗದನ್ನು ದಿಲ್ಬಾಗ್ ಸಿಂಗ್ ಮತ್ತು ಅವರಿಗೆ ಸಂಬಂಧಿತ ವ್ಯಕ್ತಿಗಳ ಜಾಗಗಳಿಂದ ಇಡಿ ವಶಪಡಿಸಿಕೊಂಡಿದೆ. ಕೇಂದ್ರ ತನಿಖಾ ಸಂಸ್ಥೆಯು ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಪರವಾನಗಿ ಅವಧಿ ಮುಗಿದಿರುವುದರಿಂದ, ತನಿಖಾ ಸಂಸ್ಥೆಯು ಪ್ರತಾಪ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ.

ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿದ್ದಕ್ಕಾಗಿ ಮತ್ತೊಂದು ಪೊಲೀಸ್ ದೂರು ದಾಖಲಿಸಿದ ಇಡಿ, ಹರಿಯಾಣ ಅಬಕಾರಿ ಇಲಾಖೆಯೊಂದಿಗೆ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಯಮುನಾ ನಗರ ಜಿಲ್ಲೆಯ ರಾಯನ್ವಾಲಾ ಗ್ರಾಮದ ಫಾರ್ಮ್‌ ಹೌಸ್‌ನಲ್ಲಿ ವೈನ್ ಬಾಕ್ಸ್ ಮತ್ತು ಬಾಟಲಿಗಳು ಪತ್ತೆಯಾಗಿವೆ.

ಗುತ್ತಿಗೆ ಅವಧಿ ಮುಗಿದ ನಂತರವೂ ಯಮುನಾ ನಗರ ಮತ್ತು ಸಮೀಪದ ಜಿಲ್ಲೆಗಳಲ್ಲಿ ಈ ಹಿಂದೆ ನಡೆದಿರುವ ಬಂಡೆಗಳು, ಜಲ್ಲಿಕಲ್ಲು, ಅಕ್ರಮ ಮರಳು ಗಣಿಗಾರಿಕೆ ಆರೋಪದ ಮೇಲೆ ತನಿಖೆ ನಡೆಸಲು ಹರಿಯಾಣ ಪೊಲೀಸರು ದಾಖಲಿಸಿದ ಹಲವಾರು ಎಫ್ಐಆರ್‌ಗಳಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣವು ಬೆಳಕಿಗೆ ಬಂದಿದೆ. ರಾಯಲ್ಟಿ ಮತ್ತು ತೆರಿಗೆಗಳ ಸಂಗ್ರಹವನ್ನು ಸರಳಗೊಳಿಸಲು, ಗಣಿಗಾರಿಕೆ ಪ್ರದೇಶಗಳಲ್ಲಿ ತೆರಿಗೆ ವಂಚನೆಯನ್ನು ತಡೆಗಟ್ಟಲು ಹರಿಯಾಣ ಸರ್ಕಾರವು 2020 ರಲ್ಲಿ ಪರಿಚಯಿಸಿದ ಆನ್ಲೈನ್ ಪೋರ್ಟಲ್ ‘ಇ-ರಾವಣ’ ಯೋಜನೆಯಲ್ಲಿನ ವಂಚನೆಯನ್ನು ಕೇಂದ್ರೀಯ ಸಂಸ್ಥೆ ತನಿಖೆ ನಡೆಸುತ್ತಿದೆ.

ಇಬ್ಬರು ರಾಜಕಾರಣಿಗಳೊಂದಿಗೆ ಸಂಬಂಧ ಹೊಂದಿರುವ ‘ಸಿಂಡಿಕೇಟ್’ ಗುಂಪು ಈ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಇಡಿ ಮೂಲಗಳು ಹೇಳಿವೆ.

ಇದನ್ನೂ ಓದಿ; ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಪುನಃ ಜೈಲು; ತೀರ್ಪು ಸ್ವಾಗತಿಸಿದ ಪ್ರತಿಪಕ್ಷಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...