ಭಾರತೀಯ ನ್ಯಾಯಾಲಯಗಳು ತನ್ನ ವೇದಿಕೆಯಲ್ಲಿನ ಮಾಹಿತಿಗೆ ಜಾಗತಿಕ ನಿರ್ಬಂಧ ಹೇರುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಲಿದ್ದು, ಇದು ಇತರ ದೇಶಗಳ ಸಾರ್ವಭೌಮತ್ವಕ್ಕೆ ಅಡ್ಡಿಯುಂಟು ಮಾಡಲಿದೆ ಎಂದು ದೆಹಲಿ ಹೈಕೋರ್ಟ್‌ಗೆ ಸಾಮಾಜಿಕ ಜಾಲತಾಣ ಎಕ್ಸ್ ಕಾರ್ಪ್ ತಿಳಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಭಾರತದ ವ್ಯಾಪ್ತಿಯಲ್ಲಿ ತನ್ನ ಕಾನೂನು ಅನ್ವಯಿಸುವ ಭಾರತದ ಹಕ್ಕನ್ನು ಗೌರವಿಸುವುದಾಗಿ ಎಕ್ಸ್ ಕಾರ್ಪ್ ಅಫಿಡವಿಟ್‌ನಲ್ಲಿ ತಿಳಿಸಿದೆ ಎಂದು ವರದಿ ಹೇಳಿದೆ.
ಬೇರೆ ದೇಶಗಳ ಜನರು ಯಾವ ಮಾಹಿತಿ ನೋಡಬಹುದು ಎಂಬುವುದನ್ನು ಭಾರತದ ನ್ಯಾಯಾಲಯಗಳು ನಿರ್ಧರಿಸಬಹುದು ಎಂಬ ವಾದ ಒಪ್ಪುವುದಾದರೆ, ಪಾಕಿಸ್ತಾನ ಮತ್ತು ಚೀನಾದ ನ್ಯಾಯಾಲಯಗಳು ಇಂಟರ್‌ನೆಟ್‌ನಲ್ಲಿ ಭಾರತೀಯರು ಏನು ನೋಡಬಹುದು, ಏನು ನೋಡಬಾರದು ಎಂದು ಆದೇಶಿಸಬಹುದಾಗಿದೆ ಎಂದು ಎಕ್ಸ್ ವಾದಿಸಿದೆ.
“ಭಾರತದಲ್ಲಿ ಪೋಸ್ಟ್ ಕಾಣದಂತೆ ಮಾಡಬೇಕು ಎಂದು ಆದೇಶಿಸುವ ಬದಲು, ಎಲ್ಲಾ ದೇಶಗಳಲ್ಲಿ ಪೋಸ್ಟ್ ಕಾಣದಂತೆ ನಿರ್ಬಂಧಿಸಬೇಕು ಎಂಬುವುದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ. ಇದು ಎಲ್ಲಾ ದೇಶಗಳ ಸಹಭಾಗಿತ್ವ ತತ್ವಕ್ಕೆ ವಿರುದ್ಧವಾಗಿದೆ. ಈ ಆದೇಶವು ನ್ಯಾಯಾಲಯದ ವ್ಯಾಪ್ತಿ ಮೀರಿದ್ದು, ಅಮೆರಿಕ ಸೇರಿದಂತೆ ಇತರ ದೇಶಗಳ ಸಾರ್ವಭೌಮತ್ವಕ್ಕೆ ಅಡ್ಡಿಯಾಗಬಹುದು. ಅಲ್ಲಿ ಭಿನ್ನವಾದ ಕಾನೂನು ಮತ್ತು ರಕ್ಷಣೆ ಅನ್ವಯಿಸುತ್ತದೆ” ಎಂದು ಎಕ್ಸ್ ಹೇಳಿದೆ.
ಭಾರತದ ಹೊರಗೆ ಇಲ್ಲಿನ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲಾಗದು ಎಂದಿರುವ ಎಕ್ಸ್ ಕಾರ್ಪ್, ಬಾಬಾ ರಾಮ್‌ದೇವ್ ಪ್ರಕರಣದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜಾಗತಿಕ ನಿರ್ಬಂಧ ಆದೇಶವು ದೋಷಪೂರಿತ ಎಂದಿದೆ.
ಐಟಿ ಕಾಯ್ದೆಯ ಸೆಕ್ಷನ್ 79ರ ಅಡಿ ಜಾಗತಿಕವಾಗಿ ಮಾಹಿತಿ ತೆಗೆಯಲು ಆದೇಶಿಸಬಹುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಆದರೆ, ಈ ಸೆಕ್ಷನ್ ವಿನಾಯಿತಿ ನಿಬಂಧನೆ ಮಾತ್ರ ಆಗಿದೆ ಎಂದು ಎಕ್ಸ್ ವಾದಿಸಿದೆ.
ಹೈಕೋರ್ಟ್ ಆದೇಶದ ಹೊರತಾಗಿಯೂ ಪತ್ರಕರ್ತ ರಜತ್ ಶರ್ಮಾ ವಿರುದ್ಧದ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ ಅನ್ನು ಭಾರತದಲ್ಲಿ ಮಾತ್ರ ತೆಗೆಯಲಾಗಿದೆ. ಜಾಗತಿಕ ಮಟ್ಟದಲ್ಲಿ ತೆಗೆದಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಎಕ್ಸ್ ಕಾರ್ಪ್ ಆಕ್ಷೇಪಣೆ ಸಲ್ಲಿಸಿದೆ.
ಕೃಪೆ : ಬಾರ್ & ಬೆಂಚ್
ಇದನ್ನೂ ಓದಿ : ದೇಹದ ತೂಕದಲ್ಲಿ 100 ಗ್ರಾಂ ಹೆಚ್ಚಳ; ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ವಿನೇಶಾ ಫೋಗಟ್


