Homeಎಕಾನಮಿಭಾರತ ಮತ್ತು ವಿಶ್ವಾಸ ಕಳೆದುಕೊಂಡ ಆರ್ಥಿಕತೆ : ಕೌಶಿಕ್ ಬಸು

ಭಾರತ ಮತ್ತು ವಿಶ್ವಾಸ ಕಳೆದುಕೊಂಡ ಆರ್ಥಿಕತೆ : ಕೌಶಿಕ್ ಬಸು

ಆರ್ಥಿಕ ಬೆಳವಣಿಗೆ ನಿಧಾನವಾಗುತ್ತಿರುವುದರ ಜೊತೆಗೆ ಅಸಮಾನತೆಯು ಹೆಚ್ಚುತ್ತಿದೆ. ಆಕ್ಸ್ಫಾಮ್ ಪ್ರಕಾರ 2017ರಲ್ಲಿ ಶೇಕಡ 73ರಷ್ಟು ಸಂಪತ್ತು ಶೇಕಡ ಒಂದರಷ್ಟು ಶ್ರೀಮಂತ ಜನಕ್ಕೆ ಹೋಗುತ್ತಿತ್ತು. ಈ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಅಸಮಾನತೆ ಹದಗೆಡುತ್ತಿತ್ತು.

- Advertisement -
- Advertisement -

ಕೃಪೆ: ನ್ಯೂಯಾರ್ಕ್ ಟೈಮ್ಸ್

ಅನುವಾದ : ಟಿ.ಎಸ್ ವೇಣುಗೋಪಾಲ್

ಬಲವಾದ ಸರ್ಕಾರವಿರುವ ದೇಶಗಳಲ್ಲಿ ಅಂತಿಮವಾಗಿ ಆರ್ಥಿಕತೆ ದುರ್ಬಲವಾಗುತ್ತದೆ. ಭಾರತ ಕೂಡ ಅದೇ ಹಾದಿ ಹಿಡಿಯುವ ಅಪಾಯದಲ್ಲಿದೆ. ಈ ಮೊದಲು ಇಲ್ಲಿ ಆರ್ಥಿಕತೆ ತೃಪ್ತಿಕರವಾಗೇ ಇತ್ತು.

ಜಾಗತಿಕ ಬ್ಯಾಂಕ್ ಬೇರೆ ಬೇರೆ ದೇಶಗಳಲ್ಲಿ ಉದ್ದಿಮೆ ನಡೆಸಲು ಇರುವ ವಾತಾವರಣ ಎಷ್ಟು ಅನುಕೂಲಕರವಾಗಿದೆ ಎಂಬುದನ್ನು ತೌಲನಿಕವಾಗಿ ಅಧ್ಯಯನ ಮಾಡಿ ಒಂದು ವರದಿಯನ್ನು ಪ್ರತಿ ವರ್ಷ ಪ್ರಕಟಿಸುತ್ತದೆ. ಈ ವರ್ಷವೂ ಅದು 190 ದೇಶಗಳಲ್ಲಿ ಅಂತಹ ಒಂದು ಅಧ್ಯಯನ ಮಾಡಿ ಒಂದು ವರದಿಯನ್ನು ಪ್ರಕಟಿಸಿದೆ. ಕಳೆದ ವರ್ಷ ಭಾರತ 77ನೇ ಸ್ಥಾನದಲ್ಲಿತ್ತು. ಈಗ ಅದರ ಸ್ಥಿತಿ ಸುಧಾರಿಸಿ ಅದು 63ನೇ ಸ್ಥಾನಕ್ಕೆ ಬಂದಿದೆ. ಭಾರತದ ಹಾಗೆ ಸೌದಿ ಅರೇಬಿಯಾ, ಪಾಕಿಸ್ಥಾನ ಮತ್ತು ಚೀನಾ ಮೊದಲಾದ ಹತ್ತು ದೇಶಗಳು ಈ ವರದಿಯಲ್ಲಿ ಪ್ರಗತಿಯನ್ನು ಸಾಧಿಸಿದೆ. ಆದರೆ ಭಾರತದಲ್ಲಿ ಪ್ರಮುಖ ಸೂಚಿಗಳು ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿವೆ.

2014ರಲ್ಲಿ ಅಧಿಕಾರಕ್ಕೆ ಬಂದರೆ ಭಾರತವನ್ನು ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಪ್ರಬಲವಾದ ಆರ್ಥಿಕ ಶಕ್ತಿಯನ್ನಾಗಿ ಮಾಡುತ್ತೇನೆ ಎಂಬ ಭರವಸೆಯನ್ನು ನರೇಂದ್ರ ಮೋದಿಯವರು ನೀಡಿದ್ದರು. ಆಯ್ಕೆಯೂ ಆದರು. ಈ ವರ್ಷ ಮತ್ತೆ ಚುನಾಯಿತರಾದ ಮೇಲೆ ಭಾರತವನ್ನು 2024ರವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುತ್ತೇನೆ ಎಂದು ಘೋಷಿಸಿದ್ದಾರೆ. ಅಂದರೆ ಆರ್ಥಿಕತೆಯನ್ನು ಈಗ ಇರುವುದರ ದುಪ್ಪಟ ಬೆಳೆಸುವುದಾಗಿ ತಿಳಿಸಿದ್ದಾರೆೆ.

ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ ಭಾರತದ ವರಮಾನದ ಬೆಳವಣಿಗೆಯ ದರ ಈ ವರ್ಷದ ಎರಡನೆ ಪಾದದಲ್ಲಿ ಕೇವಲ ಶೇಕಡ 5ರಷ್ಟಿದೆ. ಕಳೆದ ವರ್ಷ ಅದು ಶೇಕಡ 8ರಷ್ಟಿತ್ತು. 2019ರಲ್ಲಿ ಭಾರತದ ಬೆಳವಣಿಗೆಯ ದರ ಶೇಕಡ 7.3ರಷ್ಟು ಇರುತ್ತದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಏಪ್ರಿಲಿನಲ್ಲಿ ಅಂದಾಜು ಮಾಡಿತ್ತು. ಆದರೆ ಈಗಿನ ಪರಿಸ್ಥಿತಿಯನ್ನು ಗಮನಿಸಿ ತನ್ನ ಅಂದಾಜನ್ನು ಅದು ಶೇಕಡ 6.1ಕ್ಕೆ ಇಳಿಸಿದೆ. 2003ರಿಂದ 2011ರವರೆಗೆ ಬೆಳವಣಿಗೆ ದರ ಸುಮಾರಾಗಿ ಶೇಕಡ 8.5ರಷ್ಟಿತ್ತು. 2005ರಿಂದ 2008ರ ಅವಧಿಯಲ್ಲಿ ಭಾರತದ ಆರ್ಥಿಕತೆಯ ವಾರ್ಷಿಕ ಬೆಳವಣಿಗೆ ಶೇಕಡ 9ಕ್ಕಿಂತ ಹೆಚ್ಚಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದು ದಿಢೀರನೆ ತೀರಾ ಕಮ್ಮಿಯಾಗಿದೆ. ಇದು ತೀರಾ ಅನಿರೀಕ್ಷಿತ, ಅಷ್ಟೇ ಕಳವಳಕಾರಿಯಾದ ಸಂಗತಿ.

ವಿವರಗಳನ್ನು ಗಮನಿಸಿದರೆ ಈ ಕುಸಿತ ಸ್ಪಷ್ಟವಾಗುತ್ತದೆ. ಪ್ರಯಾಣಿಕರ ಕಾರು ಮಾರಾಟ ಕೆಲ ದಿನಗಳಿಂದ ಇಳಿಯುತ್ತಿದೆ. 2018ಕ್ಕೆ ಹೋಲಿಸಿದರೆ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಅದು ಶೇಕಡ 23ರಷ್ಟು ಕುಸಿದಿದೆ. ಇದನ್ನು ಭಾರತೀಯ ಆಟೋಮೊಬೈಲ್ ಉತ್ಪಾದಕರ ಸಂಘವು ತಿಳಿಸಿದೆ. ರಫ್ತು ಹಲವು ದಿನಗಳಿಂದ ಮಂದಗೊಂಡಿದೆ. ಸ್ಟಾಂಡರ್ಡ್ ಅಂಡ್ ಪೂರ್ ಸಂಘಟನೆಯು ಭಾರತೀಯ ಹಣಕಾಸು ವಲಯದ ಹೆಚ್ಚುತ್ತಿರುವ ಅಪಾಯದ ಬಗ್ಗೆ ಎಚ್ಚರಿಸಿದೆ. ಈಗಿನ ನಿರುದ್ಯೋಗ ದರ ಕಳೆದ 45ವರ್ಷಗಳಲ್ಲೇ ಅತಿ ಹೆಚ್ಚಿನ ಮಟ್ಟವನ್ನು ತಲುಪಿದೆ.

ಇದನ್ನೂ ಓದಿ: ಆರ್ಥಿಕ ಕುಸಿತದ ಸರಳ ಚಿತ್ರಣ: ಸಮಸ್ಯೆ ಹೂಡಿಕೆಯದ್ದಲ್ಲ, ಬೇಡಿಕೆಯದ್ದು

ಆರ್ಥಿಕ ಬೆಳವಣಿಗೆ ನಿಧಾನವಾಗುತ್ತಿರುವುದರ ಜೊತೆಗೆ ಅಸಮಾನತೆಯು ಹೆಚ್ಚುತ್ತಿದೆ. ಆಕ್ಸ್ಫಾಮ್ ಪ್ರಕಾರ 2017ರಲ್ಲಿ ಶೇಕಡ 73ರಷ್ಟು ಸಂಪತ್ತು ಶೇಕಡ ಒಂದರಷ್ಟು ಶ್ರೀಮಂತ ಜನಕ್ಕೆ ಹೋಗುತ್ತಿತ್ತು. ಈ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಅಸಮಾನತೆ ಹದಗೆಡುತ್ತಿತ್ತು. ಆದರೆ ಬೆಳವಣೆಗೆ ನಿಧಾನವಾಗುತ್ತಿರುವುದರಿಂದ ಮತ್ತು ನಿರುದ್ಯೋಗ ಹೆಚ್ಚುತ್ತಿರುವುದರಿಂದ ಅದರ ಪರಿಣಾಮ ಹೆಚ್ಚು ನೋವು ಉಂಟುಮಾಡುತ್ತಿದೆ.

ಕೆಲವು ಅಂದಾಜಿನ ಪ್ರಕಾರ ಆರ್ಥಿಕ ಬೆಳವಣಿಗೆ ಋಣಾತ್ಮಕವಾಗುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಭಾರತದಲ್ಲಿ ಉದ್ದಿಮೆ ನಡೆಸಲು ಬೇಕಾದ ವಾತಾವರಣ ಸುಧಾರಿಸುವುದಕ್ಕೆ ಹೇಗೆ ಸಾಧ್ಯ?

ಒಂದು ದೇಶದಲ್ಲಿನ ಉದ್ಧಿಮ ನಡೆಸಲು ಇರುವ ಪರಿಸ್ಥಿತಿ ಎಷ್ಟು ಸಲೀಸಾಗಿದೆ ಎಂದು ನಿರ್ಧರಿಸಲು ವಿಶ್ವಬ್ಯಾಂಕ್ ಆಯಾ ದೇಶದಲ್ಲಿ ಲಿಖಿತರೂಪದಲ್ಲಿನ ಕಾನೂನನ್ನು ಗಮನಿಸುತ್ತದೆಯೇ ಹೊರತು ವಿನಃ ಆಚರಣೆಯಲ್ಲಿ ಅದು ಹೇಗೆ ಕೆಲಸ ಮಾಡುತ್ತಿದೆ ಅನ್ನುವುದನ್ನು ಪರಿಗಣಿಸುವುದಿಲ್ಲ. ವಿಶ್ವಬ್ಯಾಂಕಿನ ವರದಿಯೇ ಹೇಳುವಂತೆ “ವ್ಯವಹಾರ ನಡೆಸುವುದಕ್ಕೆ ವಾತಾವರಣ ಎಷ್ಟು ಸುಲಲಿತವಾಗಿದೆ ಎಂದು ಲೆಕ್ಕಹಾಕುವುದಕ್ಕೆ ಬಳಸುವ ಅಂಕಿಅಂಶದಲ್ಲಿ ಸುಮಾರು ಮೂರನೇ ಎರಡು ಭಾಗ ಕಾನೂನಿನ ಪಠ್ಯವನ್ನು ಆಧರಿಸಿರುತ್ತದೆ.” ಅಂದರೆ ಸರ್ಕಾರಗಳು ಬೇಕಾದರೆ ತಮ್ಮ ದೇಶದ ಸೂಚ್ಯಾಂಕವನ್ನು ಉತ್ತಮ ಪಡಿಸಿಕೊಳ್ಳುವುದಕ್ಕೆ ಅದಕ್ಕೆ ಬೇಕಾದ ಹಾಗೆ ನಿಯಮಗಳನ್ನು ಮಾರ್ಪಡಿಸಿಕೊಳ್ಳಬಹುದು. ಆದರೆ ಆ ಬದಲಾವಣೆಗಳು ವಾಸ್ತವದಲ್ಲಿ ಏನೂ ಪರಿಣಾಮ ಬೀರದೆಯೂ ಇರಬಹುದು.

ಆದರೆ ನಿಜವಾದ ಪ್ರಗತಿಯ ವಿಷಯದಲ್ಲಿ ಇದು ಸಾಧ್ಯವಿಲ್ಲ. ಅಲ್ಲಿ ವಾಸ್ತವದಲ್ಲಿ ಕಾನೂನು ಹೇಗೆ ಕೆಲಸ ಮಾಡುತ್ತವೆ ಅನ್ನುವುದು ಮುಖ್ಯವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಇಡೀ ಸಮಾಜದಲ್ಲಿ ಒಡಕು ಹೆಚ್ಚುತ್ತಿದೆ. ಸರ್ಕಾರದ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ಕೊನೆಯ ಪಕ್ಷ ಪ್ರಮುಖ ಆರ್ಥಿಕ ಅಂಶಗಳ ವಿಷಯದಲ್ಲಂತೂ ಈ ವಿಶ್ವಾಸದ ಕೊರತೆಯನ್ನು ಕಾಣಬಹುದು. ಹೂಡಿಕೆಯ ಕುಸಿತ ವಿಶ್ವಾಸದ ಕುಸಿತವನ್ನು ಪರೋಕ್ಷವಾಗಿ ಸೂಚಿಸುತ್ತದೆ. ಅದನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ. ಅರ್ಥಶಾಸ್ತ್ರಜ್ಞರು “ಹೂಡಿಕೆ” ಅನ್ನುವಾಗ ರಾಷ್ಟ್ರೀಯ ಉತ್ಪನ್ನದ ಒಂದು ಭಾಗ ಮಾತ್ರವನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಅದರಲ್ಲಿ ಆಹಾರ, ಬಟ್ಟೆ, ವಸತಿ ಇತ್ಯಾದಿ ಬಳಕೆಯ ವಸ್ತುಗಳು ಸೇರುವುದಿಲ್ಲ. ಕೇವಲ ಮುಂದಿನ ಉತ್ಪಾದಕತೆಯನ್ನು ಹೆಚ್ಚಿಸಬಲ್ಲ ಯಂತ್ರಗಳು, ಫ್ಯಾಕ್ಟರಿಗಳು ಮತ್ತು ಮೂಲಭೂತ ಸೌಕರ್ಯಗಳು ಮಾತ್ರ ಸೇರಿರುತ್ತವೆ.

ಇದನ್ನೂ ಓದಿ: ದೇಶದ ಆರ್ಥಿಕ ಬಿಕ್ಕಟ್ಟು ನಿಜವೇ? ಹೇಗೆ?

ದುಡಿಯುವ ಜನ ಹೇರಳವಾಗಿ ಇರುವ ರಾಷ್ಟ್ರಗಳಲ್ಲಿ ಹೂಡಿಕೆ ಹೆಚ್ಚಿದಂತೆ ಒಟ್ಟಾರೆಯಾಗಿ ಬೆಳವಣಿಗೆಯೂ ಹೆಚ್ಚುತ್ತದೆ. ಇದನ್ನು ಆರ್ಥಿಕ ಸಿದ್ಧಾಂತಗಳೂ ಹೇಳುತ್ತವೆ, ವಾಸ್ತವ ಬದುಕಿನಲ್ಲೂ ಇದಕ್ಕೆ ಪುರಾವೆಗಳು ಸಿಗುತ್ತವೆ. ರಾಬರ್ಟ್ ಸೊಲೊ ಅವರ ಪ್ರಖ್ಯಾತ ಸಿದ್ಧಾಂತವೂ ಇದನ್ನೇ ಹೇಳುತ್ತದೆ. ಹಾಗೆಯೇ ಹಲವು ರಾಷ್ಟ್ರಗಳ ಉದಾಹರಣೆಗಳು, ಅದರಲ್ಲೂ ವಿಶೇಷವಾಗಿ 1980ರಲ್ಲಿ ಅತ್ಯಂತ ವೇಗವಾಗಿ ಬೆಳೆದ ಇಸ್ಟ್ ಏಶ್ಯನ್ ಆರ್ಥಿಕತೆಗಳು ಈ ಅಂಶವನ್ನು ಪುಷ್ಠೀಕರಿಸುತ್ತವೆ.

1947ರಲ್ಲಿ ಸ್ವಾತಂತ್ರ್ಯ ಬಂದ ಮೇಲೆ ಬಹು ವರ್ಷಗಳ ಕಾಲ ಇಂಡಿಯಾದಲ್ಲಿ ಹೂಡಿಕೆಯ ಪ್ರಮಾಣ ಕಡಿಮೆಯೇ ಇತ್ತು. 1970ರವರೆಗೆ ಭಾರತದ ಹೂಡಿಕೆ ಜಿಡಿಪಿಯ ಶೇಕಡ 20ನ್ನು ಮೀರಿರಲಿಲ್ಲ. 2004-05ರಲ್ಲಿ ಅದು ಮೊಟ್ಟಮೊದಲಿಗೆ ಶೇಕಡ 30ರ ಗಡಿಯನ್ನು ದಾಟಿತು. 2011-12ರಲ್ಲಿ ಶೇಕಡ 39ರಷ್ಟಾಗಿತ್ತು. 1980ರಲ್ಲಿ ಭಾರತ ಬಹುಮಟ್ಟಿಗೆ ಇಸ್ಟ್ ಏಷಿಯನ್ ಆರ್ಥಿಕತೆಯನ್ನು ಹೋಲುತ್ತಿತ್ತು. ಅವುಗಳ ಹಾಗೆಯೇ ಬೆಳೆಯಿತು. ನಂತರ ಹೂಡಿಕೆ ಇಳಿಮುಖವಾಗತೊಡಗಿತು. 2016-17ರಲ್ಲಿ ಅದು ಮತ್ತೆ ಶೇಕಡ 30ಕ್ಕೆ ಬಂತು.

ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಅದರ ಬಗ್ಗೆ ಉದ್ದಿಮೆದಾರರಿಗೆ ಹೆಚ್ಚಿನ ವಿಶ್ವಾಸ ಹೆಚ್ಚಿರುತ್ತದೆ. ಆರ್ಥಿಕತೆ ಕುಸಿದರೆ ಅದರ ಬಗ್ಗೆ ವಿಶ್ವಾಸವೂ ಕುಸಿಯುತ್ತದೆ. ಇದು ನಿರೀಕ್ಷಿತವೇ. ಸಧ್ಯದ ಪರಿಸ್ಥಿತಿ ಹಾಗೂ ಭವಿಷ್ಯದಲ್ಲಿ ಅದು ಚೆನ್ನಾಗಿರುತ್ತದೆ ಎಂಬ ವಿಶ್ವಾಸ ಇದ್ದರೆ ಉದ್ದಿಮೆ ಹಣ ಹೂಡುತ್ತದೆ. ಇಲ್ಲದೇ ಹೋದರೆ ಬಂಡವಾಳ ಹೂಡುವುದಕ್ಕೆ ಹಿಂದೇಟು ಹಾಕುತ್ತವೆ. ಸರ್ಕಾರ ಮಾರ್ಕೆಟ್ಟಿನಲ್ಲಿ ತೀವ್ರವಾಗಿ ಹಸ್ತಕ್ಷೇಪ ಮಾಡಿದರೆ ವಿಶ್ವಾಸ ಕೆಡುತ್ತದೆ. ಉದಾಹರಣೆಗೆ 2016ರಲ್ಲಿ ಸರ್ಕಾರ ನೋಟನ್ನು ರದ್ದುಗೊಳಿಸಲು ನಿರ್ಧರಿಸಿದಾಗ ವಿಶ್ವಾಸಕ್ಕೆ ಹೊಡೆತ ಬಿತ್ತು. ಹಾಗೆಯೇ ರಾಜಕೀಯದಲ್ಲಿ ಅಥವಾ ಅಧಿಕಾರಶಾಹಿಯಲ್ಲಿ ಅಸಹನೆ ಕಂಡಬಂದಾಗಲೂ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ.

ಅರ್ಥಶಾಸ್ತ್ರಜ್ಞರು ಇದನ್ನು ಒಪ್ಪುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ಒಂದು ದೇಶದ ಆರ್ಥಿಕ ಸ್ಥಿತಿ, ಆ ದೇಶದ ಆರ್ಥಿಕ ನೀತಿಯಷ್ಟೇ ಅದರ ರಾಜಕೀಯವನ್ನು ಆಧರಿಸಿರುತ್ತದೆ. ಸ್ವಾತಂತ್ರ್ಯ ಬಂದ ಪ್ರಾರಂಭದಲ್ಲಿ ಭಾರತ ರಾಜಕೀಯ ಸಂಸ್ಥೆಗಳನ್ನು ಸಂಘಟಿಸಿತು. ಪ್ರಜಾಸತ್ತೆ, ವಾಕ್ ಸ್ವಾತಂತ್ರ್ಯ, ಮುಕ್ತ ಮಾಧ್ಯಮ, ಧರ್ಮ ನಿರಪೇಕ್ಷತೆ, ಹಾಗೂ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆ ಇವುಗಳಿಗೆ ಒತ್ತು ನೀಡಿತು. ಎರಡನೆಯ ಮಹಾಯುದ್ಧದ ನಂತರ ಎಲ್ಲಾ ದೇಶಗಳು ಸಾಮ್ರಾಜ್ಯಶಾಹಿಯ ಬಂಧನದಿಂದ ಸ್ವಾತಂತ್ರ್ಯಗೊಳ್ಳುತ್ತಿದ್ದಂತೆ ಇತರ ಕೆಲವು ಪ್ರಗತಿಪರ ನಾಯಕರು – ಉದಾಹರಣೆಗೆ ಇಂಡೋನೇಷಿಯ ಹಾಗೂ ಘಾನ ದೇಶಗಳ ನಾಯಕರು – ಪ್ರಯತ್ನಿಸಿದರು. ಆದರೆ ಅಂತಹ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ದಂಗೆ, ಗೊಂದಲ ಅಥವಾ ಘರ್ಷಣೆಗಳು ನಡೆದು ಒಂದಾದ ಮೇಲೆ ಒಂದು ದೇಶದಲ್ಲಿ ಪ್ರಜಾಸತ್ತೆ ನಾಶವಾಗುತ್ತಾ ಹೋಯಿತು. ಅಲ್ಲೆಲ್ಲಾ ಮಿಲಿಟರಿ ಆಡಳಿತ ಅಥವಾ ಧಾರ್ಮಿಕ ಘರ್ಷಣೆಗಳು ಪ್ರಾರಂಭವಾದವು. ಭಾರತ ತನ್ನ ಉದಾರವಾದೀ ಸಂವಿಧಾನ, ಚುನಾವಣೆ ಹಾಗೂ ಬಲವಾದ ಸುಪ್ರಿಂ ಕೋರ್ಟು ಇವುಗಳಿಂದಾಗಿ ಅದಕ್ಕೊಂದು ಅಪವಾದವಾಗಿ ಉಳಿದುಕೊಂಡಿತು.

ಸ್ವಾತಂತ್ರ್ಯ ಬಂದ ಪ್ರಾರಂಭದ ದಶಕಗಳಲ್ಲಿ ಇಂಡಿಯಾದಲ್ಲಿ ಆರ್ಥಿಕ ಬೆಳವಣಿಗೆ ನಿಧಾನವಾಗೇ ಸಾಗಿತ್ತು. ಭಾರತ ಪ್ರಾರಂಭದಲ್ಲಿ ಪ್ರಗತಿಪರ ರಾಜಕೀಯದಲ್ಲಿ ತೊಡಗಿಸಿಕೊಂಡಿತ್ತು. ಅದು ಸರಿಯಾದ ಆಯ್ಕೆಯೇ ಎನ್ನುವುದನ್ನು ಕುರಿತಂತೆ ಚರ್ಚೆ ಸಾಧ್ಯ (ಅದು ಸರಿಯಾದ ಆಯ್ಕೆ ಎಂದು ನನಗೆ ತೋರುತ್ತದೆ). ಆದರೆ ಆ ಆಯ್ಕೆಯನ್ನು ಮಾಡಿಕೊಂಡ ಮೇಲೆ ಅದರಿಂದ ದಕ್ಕಿದ ರಾಜಕೀಯ ಬಂಡವಾಳವನ್ನು, ಅದರಲ್ಲೂ ವಿಶೇಷವಾಗಿ 1990ರ ಮೊದಲ ಭಾಗದಲ್ಲಿ ಮತ್ತು 2003ರಲ್ಲಿ ಅದ್ಭುತವಾಗಿ ಯಶಸ್ಸು ಸಾಧಿಸಿದ ಮೇಲೆ ಈಗ ಕಳೆದುಕೊಳ್ಳುವುದು ಅಪರಾಧವಾಗುತ್ತದೆ. ಭಾರತದ ಆರ್ಥಿಕತೆಯ ಬುನಾದಿ ಇನ್ನೂ ಬಲವಾಗಿಯೇ ಇದೆ.

ನಮ್ಮಲ್ಲಿ ಉದಾರವಾದೀ ಪ್ರವೃತ್ತಿಯು ನಾಶವಾಗಿದ್ದರಿಂದ ವಿಶ್ವಾಸ ಕುಸಿದಿದೆ. ಆರ್ಥಿಕ ಹಿಂಜರಿಕೆ ಉಂಟಾಗಿದೆ. ಭಾರತ ಮತ್ತೆ ತನ್ನ ಪ್ರಗತಿಪರ ಪರಂಪರೆಯನ್ನು ಕಂಡುಕೊಳ್ಳಬೇಕಾಗಿದೆ. ಅದನ್ನು ಆಧರಿಸಿ ನಮ್ಮ ಆರ್ಥಿಕತೆಯನ್ನು ಕಟ್ಟಬೇಕಾಗಿದೆ. ಹಾಗೆ ಮಾಡುವುದರಿಂದ ನಮ್ಮ ಆರ್ಥಿಕತೆಯನ್ನು ಮತ್ತೆ ಬೆಳೆಸಬಹುದು.

(ಕೌಶಿಕ್ ಬಸು ಅವರು ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ಇಂಟರ್ ನ್ಯಾಷನಲ್ ಸ್ಟಡೀಸ್ ಹಾಗು ಎಕಾನಮಿಕ್ಸ್ ಪ್ರಾಧ್ಯಾಪಕರು. 2009ರಿಂದ 2012ವರೆಗೆ ಭಾರತ ಸರ್ಕಾರದ ಪ್ರಮುಖ ಸಲಹೆಗಾರರಾಗಿದ್ದರು. 2012ರಿಂದ 2016ರವರೆಗೆ ಜಾಗತಿಕ ಬ್ಯಾಂಕಿನ ಪ್ರಮುಖ ಅರ್ಥಶಾಸ್ತ್ರಜ್ಞರಾಗಿದ್ದರು.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...