Homeಚಳವಳಿಭಾರತದ ಸ್ವಾತಂತ್ರ್ಯ ಸಂಗ್ರಾಮ: ಹಿಂದೂ ಮುಸ್ಲಿಂ ಐಕ್ಯತೆಯ ಅಪೂರ್ವ ಕಥನ

ಭಾರತದ ಸ್ವಾತಂತ್ರ್ಯ ಸಂಗ್ರಾಮ: ಹಿಂದೂ ಮುಸ್ಲಿಂ ಐಕ್ಯತೆಯ ಅಪೂರ್ವ ಕಥನ

ಗದರ್ ಚಳವಳಿಯಲ್ಲಿ ಭಾಗವಹಿಸಿ ಮುಂದೆ ಕಮ್ಯುನಿಷ್ಟ್ ಆಂದೋಲನದಲ್ಲಿ ಭಾಗಿಯಾದ ಸೋಹನ್ ಸಿಂಗ್ ಭಕ್ನಾ ಅವರು ಹೇಳಿದಂತೆ “ನಾವು ಸಿಖ್ಖರೋ ಪಂಜಾಬಿಗಳೋ ಆಗಿರಲಿಲ್ಲ, ದೇಶಭಕ್ತಿಯೇ ನಮ್ಮ ಧರ್ಮವಾಗಿತ್ತು”.

- Advertisement -
- Advertisement -

ಭಾರತದ ಸ್ವಾತಂತ್ರ‍್ಯ ಹೋರಾಟದ ಸುದೀರ್ಘ ಚರಿತ್ರೆಯಲ್ಲಿ ನಮಗೆ ಕಾಣುವ ಒಂದು ಮುಖ್ಯವಾದ ಅಂಶ ಭಾರತದಲ್ಲಿ ವಸಾಹತುಶಾಹಿ ಶೋಷಣೆ ನಡೆಸುತ್ತಿದ್ದ ಬ್ರಿಟಿಷ್ ಪ್ರಭುತ್ವದ ವಿರುದ್ಧ ಹಿಂದು ಮುಸ್ಲಿಮರೆಲ್ಲರೂ ಜಂಟಿಯಾಗಿ ನಡೆಸಿದ ಚಳವಳಿ. ಬ್ರಿಟಿಷರು ಮೊದಲಿನಿಂದಲೂ ಭಾರತವನ್ನು ಹಿಂದೂ-ಮುಸ್ಲಿಂ-ಕ್ರೈಸ್ತ ಎಂದು ವಿಭಜಿಸಿಯೇ ಆಳ್ವಿಕೆ ನಡೆಸಲು ನೋಡಿದರು. ಅದರಲ್ಲಿ ಅವರು ಸಾಕಷ್ಟು ಯಶಸ್ವಿಯೂ ಆಗಿದ್ದರು. ಆದರೂ ಸಹ ಬ್ರಿಟಿಷರಿಗೆ ಎದುರಾದ ಪ್ರತಿರೋಧ ಕೇವಲ ಒಂದು ಧರ್ಮ, ಒಂದು ಜಾತಿ ಅಥವಾ ಒಂದು ಸಮುದಾಯದಿಂದ ಆಗಿರಲಿಲ್ಲ.

ಬ್ರಿಟಿಷ್ ವಿರೋಧಿ ಚಳವಳಿಯುದ್ದಕ್ಕೂ ಭಾರತದಲ್ಲಿ ಹಿಂದೂ ಮುಸ್ಲಿಮರಿಬ್ಬರೂ ಐಕ್ಯತೆ ಸಾಧಿಸಿಕೊಂಡೇ ಸ್ವಾತಂತ್ರ‍್ಯ ಸಂಗ್ರಾಮ ನಡೆಸಿದ ಅನೇಕ ಉದಾಹರಣೆಗಳಲ್ಲಿ ಕೆಲವು ಮುಖ್ಯ ಉದಾಹರಣೆಗಳನ್ನು ನೋಡೋಣ.

ಆಂಗ್ಲೋ ಮೈಸೂರು ಯುದ್ಧಗಳಲ್ಲಿ ಹೈದರ್ ಮತ್ತು ಟಿಪ್ಪೂ ಇಬ್ಬರೂ ತಮ್ಮೊಂದಿಗೆ ಮರಾಠರನ್ನು ಹಾಗೂ ಹೈದರಾಬಾದಿನ ನಿಜಾಮನನ್ನು ಸೇರಿಸಿಕೊಂಡೇ ಸಮಾನ ಶತ್ರುವಾದ ಬ್ರಿಟಿಷರನ್ನು ಹೊಡೆದೋಡಿಸುವ ಪಣ ತೊಟ್ಟಿದ್ದರು. ಇದಕ್ಕಾಗಿ ಇಬ್ಬರೂ ಸಾಕಷ್ಟು ಹೆಣಗಿದರು. ಮೈಸೂರ ರಾಜ್ಯದ ಮಂತ್ರಿ ದಿವಾನ್ ಪೂರ್ಣಯ್ಯನೂ ಸೇರಿದಂತೆ ಹಲವು ಮುಸ್ಲಿಮೇತರ ಅಧಿಕಾರಿಗಳನ್ನು ಹೊಂದಿದ್ದ ರಾಜ್ಯವಾಗಿದ್ದು ಬ್ರಿಟಿಷರ ವಿರುದ್ಧ ವಿರೋಚಿತವಾಗಿ ಸೆಣಸಿದ ಯುದ್ಧಗಳಲ್ಲಿ ಬಹುತೇಕರು ಮುಸ್ಲಿಮೇತರ ಸೈನಿಕರೇ ಆಗಿದ್ದರು.

ಬ್ರಿಟಿಷ್ ಇತಿಹಾಸರಕಾರರು ಮತ್ತು ಮತಾಂಧರು ಹೈದರ್ ಟಿಪ್ಪೂ ಇಬ್ಬರನ್ನೂ ಮುಸ್ಲಿಂ ಮತಾಂಧ ಎಂದು ಬಿಂಬಿಸಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾಗ್ಯೂ ಇವರು ಅಳವಡಿಸಿದ್ದ ನೀತಿಗಳು ಅತ್ಯಂತ ಜಾತ್ಯತೀತ ಮತ್ತು ಧಾರ್ಮಿಕ ಸಹಿಷ್ಣುತೆಯ ನೀತಿಗಳಾಗಿದ್ದವು ಎಂಬುದನ್ನು ನೋಡಬಹುದು. 1799ರಲ್ಲಿ ನಾಲ್ಕನೆಯ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪೂವನ್ನು ಕೊಂದು ಮೈಸೂರು ಸೈನ್ಯವನ್ನು ಮಣಿಸುವ ಮೂಲಕವೇ ಬ್ರಿಟಿಷರು ಇಡೀ ಭಾರತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಇದಾದ ನಂತರದಲ್ಲಿ ಹಿಂದೂ ಮುಸ್ಲಿಮರನ್ನು ಯೋಜಿತವಾಗಿ ಒಡೆಯುವ ಕೆಲಸವನ್ನು ಬ್ರಿಟಿಷರು ಮಾಡಿಕೊಂಡು ಬಂದರು. 1857ರಲ್ಲಿ ಮಂಗಲ್ ಪಾಂಡೆ ಎಂಬ ಬ್ರಿಟಿಷ್ ಸೈನ್ಯದ ಸಿಪಾಯಿಯಿಂದ ಆರಂಭಗೊಂಡ ಬ್ರಿಟಿಷ್ ವಿರೋಧಿ ಬಂಡಾಯವು ಸಹ ಬ್ರಿಟಿಷರ ಒಡೆದು ಆಳುವ ನೀತಿಯನ್ನು ವಿರೋಧಿಸಿಯೇ ಆರಂಭಗೊಂಡಿದ್ದನ್ನು ನೋಡಬಹುದು.

ಬಂಗಾಳದ ‘ವಂಗಭಂಗ’ ಚಳವಳಿ:

1905ನೇ ಇಸವಿಯಲ್ಲಿ ಬ್ರಿಟಿಷರು ಬಂಗಾಳದ ವಿಭಜನೆಯನ್ನು ಘೋಷಿಸಿದಾಗ ಇದನ್ನು ವಿರೋಧಿಸಿ ನಡೆದ ಆಂದೋಲನ ಸ್ವಾತಂತ್ರ‍್ಯ ಚಳವಳಿಯಲ್ಲೇ ಒಂದು ಹೊಸ ಮೈಲಿಗಲ್ಲಾಯಿತು. ಜುಲೈ 20, 1905ರಂದು ಲಾರ್ಡ್ ಕರ್ಜನ್ ಆದೇಶವೊಂದನ್ನು ಹೊರಡಿಸಿ ಬಂಗಾಳ ಪ್ರಾಂತ್ಯವನ್ನು ಇಬ್ಬಾಗ ಮಾಡಲಾಗಿದೆಯೆಂದು ಘೋಷಿಸಿದ. ಬಂಗಾಳವು ಒಂದೇ ಪ್ರಾಂತ್ಯವಾಗಿದ್ದು ಆಡಳಿತಾತ್ಮಕವಾಗಿ ಬಹಳ ದೊಡ್ಡ ಭೂಭಾಗವಾಗಿರುವುದರಿಂದ ಆಡಳಿತವನ್ನು ಸುಲಭಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವನು ಹೇಳಿದ್ದ. ಆದರೆ ಭಾರತ ಸರ್ಕಾರದ ಗೃಹಸಚಿವನಾಗಿದ್ದ ರಿಸ್ಲೇ ಡಿಸೆಂಬರ್ 6, 1904ರಂದು ಹೀಗೆ ದಾಖಲಿಸಿದ್ದ. “ಬಂಗಾಲ ಐಕ್ಯವಾಗಿದ್ದರೆ ಅದೇ ಒಂದು ಶಕ್ತಿ. ಬಂಗಾಲ ಇಬ್ಬಾಗವಾದರೆ ಹಲವು ದಾರಿಗಳಲ್ಲಿ ಎಳೆದುಕೊಂಡು ಹೋಗುತ್ತದೆ. ಕಾಂಗ್ರೆಸ್ ನಾಯಕರಿಗೆ ಅನ್ನಿಸುತ್ತಿರುವುದು ಸಹ ಹೀಗೇ, ಅವರ ಆತಂಕಗಳು ಸರಿಯಾಗಿವೆಯಲ್ಲದೆ ಇಡೀ ಯೋಜನೆಯ ಅನುಕೂಲತೆಯೂ ಆಗಿದೆ. ಅದನ್ನು ಎರಡು ಭಾಗವಾಗಿಸಿ ಆ ಮೂಲಕ ನಮ್ಮ ಆಳ್ವಿಕೆಗೆ ವಿರೋಧಪಕ್ಷವಾಗಿ ಪ್ರಬಲವಾಗಿರುವ ಶಕ್ತಿಯನ್ನು ದುರ್ಬಲಗೊಳಿಸುವುದು ನಮ್ಮ ಮುಖ್ಯ ಧ್ಯೇಯಗಳಲ್ಲಿ ಒಂದಾಗಿದೆ”.

ರಿಸ್ಲೆಯ ಈ ಮಾತುಗಳು ಬ್ರಿಟಿಷ್ ಪ್ರಭುತ್ವ ತನಗೆ ಎದುರಾದ ಪ್ರಬಲ ವಿರೋಧವನ್ನು ನಿಶಕ್ತಗೊಳಿಸುವ ಕಾರಣದಿಂದಲೇ ಬಂಗಾಳವನ್ನು ಇಬ್ಬಾಗಿಸುವ ಕೆಲಸಕ್ಕೆ ಮುಂದಾಗಿತ್ತು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಅಂದಿನ ಸ್ವಾತಂತ್ರ‍್ಯ ಹೋರಾಟದ ಮುಂದಾಳುಗಳು ಬಂಗಾಳವನ್ನು ಹಿಂದೂ-ಮುಸ್ಲಿಂ ಆಧಾರದಲ್ಲಿ ಬ್ರಿಟಿಷರು ವಿಭಜಿಸಿರುವುದನ್ನು ಸಹಿಸದಾದರು. ಈ ಸಂದರ್ಭದಲ್ಲಿ ಸುಧಾರಣಾವಾದಿ ಹೋರಾಟಗಾರರು ಮತ್ತು ಉಗ್ರ ಹೋರಾಟಗಾರರು ಇಬ್ಬರೂ ಪರಸ್ಪರ ಸಹಕರಿಸಿಕೊಂಡು ನಡೆದರು. ಆಗಸ್ಟ್ 7, 1905ರಂದು ಆರಂಭವಾದ ವಿಭಜನಾ ವಿರೋಧಿ ಹೋರಾಟ ಮುಂದಿನ 5 ವರ್ಷಗಳ ಕಾಲ ಯಾವ ಬಗೆಯ ತೀವ್ರತೆಯನ್ನು ಮುಟ್ಟಿತೆಂದರೆ ಇಡೀ ದೇಶದ ರಾಷ್ಟ್ರೀಯ ಚಳವಳಿಯನ್ನೇ ಉನ್ನತ ಮಟ್ಟಕ್ಕೆ ಕೊಂಡೊಯ್ದಿತು. ಈ ವಿಭಜನಾ ವಿರೋಧಿ ಚಳವಳಿಯ ಆರಂಭದಲ್ಲಿ ರವೀಂದ್ರನಾಥ್ ಟ್ಯಾಗೋರ್ ಬರೆದ “ಅಮರ್ ಸೋನಾರ್ ಬಾಂಗ್ಲಾ” ಗೀತೆಯನ್ನೇ ಬಾಂಗ್ಲಾದೇಶ 1971ರಲ್ಲಿ ರಾಷ್ಟ್ರಗೀತೆಯಾಗಿ ಅಂಗೀಕರಿಸಿತು. 1905ರಿಂದ ಬಂಗಾಳದ ಬೀದಿಬೀದಿಗಳಲ್ಲಿ ಸಹಸ್ರ ಸಹಸ್ರ ಹಿಂದೂ ಮುಸ್ಲಿಮರು “ವಂದೇ ಮಾತರಂ” ಘೋಷಣೆಯನ್ನು ಮೊಳಗಿಸಿ “ನಮ್ಮನ್ನು ವಿಭಜಿಸಬೇಡಿ” ಎಂಬ ಸಂದೇಶವನ್ನು ಬ್ರಿಟಿಷ್ ಸರ್ಕಾರಕ್ಕೆ ನೀಡಿದ್ದರು. ಮುಂದಿನ ದಿನಗಳಲ್ಲಿ ಈ ಚಳವಳಿ ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿ “ಸ್ವದೇಶಿ ಆಂದೋಲನ”ಕ್ಕೆ ಭದ್ರ ಬುನಾದಿ ಹಾಕಿತು. ಇದು ಇಡೀ ಬಂಗಾಳದ ಸಂಸ್ಕೃತಿಯ ಮೇಲೆ ದೊಡ್ಡ ಪರಿಣಾಮ ಬೀರಿತು.

ಅಂದು ಟ್ಯಾಗೋರ್, ರಜನಿಕಾಂತ್ ಸೇನ್, ಸೈಯದ್ ಅಬು ಮೊಹಮ್ಮದ್ ಮುಂತಾದ ಬಂಗಾಲಿ ಕವಿಗಳು ರಚಿಸಿ ದೇಶಭಕ್ತಿ ಗೀತೆಗಳು ಇಂದಿಗೂ ಜನಜನಿತವಾಗಿವೆ. ಈ ಸ್ವದೇಶಿ ಆಂದೋಲನದಲ್ಲಿ ಹೆಸರಾಂತ ಬ್ಯಾರಿಸ್ಟರ್ ಅಬ್ದುಲ್ ರಸೂಲ್, ಹೋರಾಟಗಾರ ಲಿಯಾಖತ್ ಹುಸೇನ್, ಉದ್ಯಮಿ ಗುಜ್ನವಿ, ಮೌಲಾನಾ ಅಬುಲ್ ಕಲಾಂ ಆಜಾದ್ ಮೊದಲಾದವರು ಭಾಗವಹಿಸಿದರು. ಬ್ರಿಟಿಷರು ಈ ಆಂದೋಲನವನ್ನು ಕ್ರೂರವಾಗಿ ಹತ್ತಿಕ್ಕಲು ಯತ್ನಿಸಿದಷ್ಟೂ ಪ್ರತಿರೋಧವೂ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಎಷ್ಟೋ ಜನರನ್ನು ಮರಣದಂಡನೆಗೆ ಗುರಿಪಡಿಸಲಾಯಿತು, ನೂರಾರು ನಾಯಕರನ್ನು ಗಡೀಪಾರು ಮಾಡಲಾಯಿತು, ಸಾವಿರಾರು ಜನರನ್ನು ಜೈಲಿಗೆ ತಳ್ಳಲಾಯಿತು. 1906ರಿಂದ 1909ರ ನಡುವೆ 550ಕ್ಕೂ ಹೆಚ್ಚು ಈ ಹೋರಾಟಕ್ಕೆ ಸಂಬAಧಿಸಿದ ಪ್ರಕರಣಗಳು ಬಂಗಾಳದ ವಿವಿಧ ಕೋರ್ಟುಗಳಲ್ಲಿ ವಿಚಾರಣೆಗೊಂಡಿದ್ದಾಗಿ ದಾಖಲಾಗಿದೆ. ಅಂತಿಮವಾಗಿ `1911ರಲ್ಲಿ ಬ್ರಿಟಿಷರು ಬಂಗಾಳವನ್ನು ಮತ್ತೆ ಸೇರಿಸಿರುವುದಾಗಿ ಘೋಷಿಸಿದರು.

ಗದರ್ ವೀರರ ಬಂಡಾಯ:

1914ರಿಂದ 1917ರ ನಡುವೆ ಬ್ರಿಟಿಷರ ಎದೆನಡುಗಿಸಿದ ಮತ್ತೊಂದು ಬಂಡಾಯವೆಂದರೆ ಪ್ರಸಿದ್ಧ ಗದರ್ ವೀರರ ಬಂಡಾಯ. ವಿದೇಶಗಳಲ್ಲಿ ಅದರಲ್ಲೂ ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯರು ಕಟ್ಟಿಕೊಂಡಿದ್ದ ಗುಪ್ತ ಕ್ರಾಂತಿಕಾರಿ ಸಂಘಟನೆಯೇ ಗದರ್ ಪಕ್ಷವಾಗಿತ್ತು. ಸಶಸ್ತ್ರ ದಂಗೆಯ ಮೂಲಕ ಬ್ರಿಟಿಷರಿಂದ ಅಧಿಕಾರವನ್ನು ಪಡೆಯಬೇಕೆಂಬ ಹಂಬಲದಿಂದ ಸಂಘಟಿತಗೊಂಡಿದ್ದ ಗದರ್ ಹೋರಾಟಗಾರರು 1915ರಲ್ಲಿ ನಡೆಸಿದ ಬಂಡಾಯ ವಿಫಲಗೊಂಡು ಸುಮಾರು 40 ಪ್ರಮುಖ ನಾಯಕರಿಗೆ ಮರಣದಂಡನೆಯಾದರೆ 200 ವೀರರು ಜೀವಾವಧಿ ಜೈಲುಶಿಕ್ಷೆಗೆ ಗುರಿಯಾದರು. ಸಾವಿರಾರು ಮಂದಿ ಜೈಲಿಗೆ ತಳ್ಳಲ್ಪಟ್ಟರು.

ಈ ಚಾರಿತ್ರಿಕ ಗದರ್ ಚಳವಳಿಯ ಕುರಿತು ಪ್ರಖ್ಯಾತ ಪತ್ರಕರ್ತರಾಗಿದ್ದ ಖುಷ್ವಂತ್ ಸಿಂಗ್ 1961ರ ಫೆಬ್ರವರಿ 26ರಂದು ಪ್ರಕಟವಾದ ಇಲ್ಲಸ್ಟ್ರೇಟೆಡ್ ವೀಕ್ಲಿ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಹೀಗೆ ಹೇಳಿದ್ದಾರೆ. “ಮೊದಲ ಮಹಾಯುದ್ಧದ ಆರಂಭದ ತಿಂಗಳುಗಳಲ್ಲಿ, ತಮ್ಮ ದೇಶವನ್ನು ವಿಮೋಚನೆಗೊಳಿಸಬೇಕೆಂಬ ಮಹತ್ವಾಕಾಂಕ್ಷೆಯ ಪ್ರಯತ್ನವೊಂದನ್ನು ವಿದೇಶಗಳಲ್ಲಿ ಅದರಲ್ಲೂ ಅಮೆರಿಕ ಮತ್ತು ಕೆನಡಾಗಳಲ್ಲಿ ನೆಲೆಸಿದ್ದ ಭಾರತೀಯರು ನಡೆಸಿದ್ದರು. ಇದರಲ್ಲಿ ಹೆಚ್ಚಿನ ಗದರ್ ಪಂಥೀಯರು ಸಿಖ್ಖರಾಗಿದ್ದು, ಕೆನಡಾ, ಅಮೆರಿಕ, ಶಾಂಘೈ, ಹಾಂಗ್‌ಕಾಂಗ್ ಮತ್ತು ಸಿಂಗಪುರಗಳಲ್ಲಿರುವ ಸಿಖ್ಖರ ದೇವಸ್ಥಾನಗಳೇ ಇವರ ಚಟುವಟಿಕೆಯ ಕೇಂದ್ರಗಳಾಗಿದ್ದರೂ ಈ ಬಂಡಾಯದ ಹಲವರು ನಾಯಕರು ದೇಶದ ಇತರ ಭಾಗಗಳಿಂದ ಬಂದವರಾಗಿದ್ದರು. ಹರದಯಾಳ್, ರಾಸ್ ಬಿಹಾರಿ ಬೋಸ್, ಬರ್ಕುತುಲ್ಲಾಹ್, ಸೇಠ್ ಹುಸೇನ್ ರಹೀಮ್, ತಾರಕ್ ನಾಥ್ ದಾಸ್ ಮತ್ತು ವಿಷ್ಣು ಗಣೇಶ್ ಪಿಂಗ್ಲೇ.. ಹೀಗೆ.

1857ರ ನಂತರದಲ್ಲಿ ಸ್ವಾತಂತ್ರ‍್ಯಕ್ಕಾಗಿ ನಡೆಸಿದ ಮೊದಲ ಹಿಂಸಾತ್ಮಕ ಬಂಡಾಯ ಗದರ್ ಬಂಡಾಯವಾಗಿತ್ತು. ಸಾವಿರಾರು ಗದರ್ ಯೋಧರ್ ತಮ್ಮ ಜೀವಗಳನ್ನು ಕಳೆದುಕೊಂಡರು ಗದರ್ ಚಳವಳಿಯಲ್ಲಿ ಭಾಗವಹಿಸಿ ಮುಂದೆ ಕಮ್ಯುನಿಷ್ಟ್ ಆಂದೋಲನದಲ್ಲಿ ಭಾಗಿಯಾದ ಸೋಹನ್ ಸಿಂಗ್ ಭಕ್ನಾ ಅವರು ಹೇಳಿದಂತೆ “ನಾವು ಸಿಖ್ಖರೋ ಪಂಜಾಬಿಗಳೋ ಆಗಿರಲಿಲ್ಲ, ದೇಶಭಕ್ತಿಯೇ ನಮ್ಮ ಧರ್ಮವಾಗಿತ್ತು”. ಗದರ್ ಚಳವಳಿಯು ದೇಶದಲ್ಲಿ ನಡೆದ ಮುಂದಿನ ಸ್ವಾತಂತ್ರ‍್ಯ ಚಳುವಳಿಗೆ ಬಲವಾದ ಬುನಾದಿ ಹಾಕಿಕೊಟ್ಟ ಜಾತ್ಯತೀತ ಸ್ವರೂಪದ ದೇಶಪ್ರೇಮಿ ಬಂಡಾಯವಾಗಿತ್ತು. ಭಗತ್‌ಸಿಂಗ್‌ರಂತಹ ಯೋಧರಿಗೂ ಗದರ್ ಚಳವಳಿ ಪ್ರೇರಣೆ ನೀಡಿತ್ತು ಎಂಬುದನ್ನು ಗಮನಿಸಬಹುದು.

ಮುಂದಿನ ದಿನಗಳಲ್ಲಿ ಸ್ವಾತಂತ್ರ‍್ಯ ಚಳವಳಿ ಹಲವು ಧಾರೆಗಳಲ್ಲಿ ನಡೆದಿದ್ದನ್ನು ನೋಡಬಹುದು. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಸಂಘಟನೆಗೊಂಡು ದೇಶದಾದ್ಯಂತ ಬ್ರಿಟಿಷ್ ವಿರೋಧಿ ಹೋರಾಟದ ಜಾಲವನ್ನು ಒಂದು ಕಡೆ ನಿರ್ಮಿಸುತ್ತಿದ್ದಂತೆ ಮತ್ತೊಂದು ಕಡೆ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಖದೇವ್, ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಪಾಖ್ ಉಲ್ಲಾಖಾನ್ ಮೊದಲಾದವರು ಹಿಂದೂಸ್ತಾನ್ ರಿಪಬ್ಲಿಕನ್ ಅಸೋಶಿಯೇಶನ್ ಎಂಬ ಕ್ರಾಂತಿಕಾರಿ ಪಕ್ಷವನ್ನು ಕಟ್ಟಿಕೊಂಡು ಕ್ರಾಂತಿಕಾರಿ ಹೋರಾಟದಲ್ಲಿ ತೊಡಗಿಕೊಂಡರು. ಇದನ್ನೇ 1928ರಲ್ಲಿ ಹಿಂದೂಸ್ತಾನ್ ಸೋಷಲಿಷ್ಟ್ ರಿಪಬ್ಲಿಕನ್ ಆರ್ಮಿ ಎಂದು ಮರುನಾಮಕರಣ ಮಾಡಿಕೊಂಡು ನಮ್ಮ ಧ್ಯೇಯ ಕೇವಲ ಬಿಳಿಯರಿಂದ ಕರಿಯರಿಗೆ ಅಧಿಕಾರದ ಹಸ್ತಾಂತರವಲ್ಲ ಬದಲಿಗೆ ಮಾರ್ಕ್ಸ್‌ವಾದದ ಆಧಾರದಲ್ಲಿ ರಷ್ಯಾದಲ್ಲಿ ನಡೆದ ಕ್ರಾಂತಿಯ ಮಾದರಿಯಲ್ಲಿ ಸಮಾಜವಾದಿ ಸಮಾಜ ಕಟ್ಟುವುದು ಎಂದು ಘೋಷಿಸಿಕೊಂಡರು. ಹೆಚ್ಚುಕಡಿಮೆ ಇದೇ ಸಂದರ್ಭದಲ್ಲಿ ಆರಂಭಗೊಂಡಿದ್ದ ಭಾರತೀಯ ಕಮ್ಯುನಿಷ್ಟ್ ಪಕ್ಷದ ನೇತೃತ್ವದಲ್ಲಿಯೂ ಹಲವಾರು ಪ್ರಮುಖ ಬಂಡಾಯಗಳು ನಡೆದವು.

ಈ ಎಲ್ಲಾ ಆಂದೋಲನಗಳಲ್ಲಿ ಹಿಂದೂ-ಮುಸ್ಲಿಂ ಐಕ್ಯತೆ ಪ್ರಬಲವಾಗಿತ್ತು. ಗಡಿನಾಡ ಗಾಂಧಿ ಎಂದು ಕರೆಯಲ್ಪಡುವ ಅಬ್ದುಲ್ ಗಫಾರ್ ಖಾನ್‌ರಂತವರು ಗಾಂಧೀಜಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಬಲತಂದುಕೊಟ್ಟರೆ ರಾಮ್ ಪ್ರಸಾದ್ ಬಿಸ್ಮಿಲ್- ಅಶ್ಪಾಖ್ ಉಲ್ಲಾಖಾನ್‌ರಂತಹ ದಿಟ್ಟ ವೀರರು ಸಾವಿನಲ್ಲೂ ಜೊತೆಯಾಗಿ ದೇಶದ ಸ್ವಾತಂತ್ರ‍್ಯದ ಹೋರಾಟ ಹಿಂದೂ-ಮುಸ್ಲಿಮರಿಬ್ಬರ ನೆತ್ತರಿಂದ ಶಕ್ತಿ ಪಡೆದುಕೊಂಡ ಹೋರಾಟ ಎಂಬುದನ್ನು ನಿರೂಪಿಸಿದರು. ಗಣೇಶ್ ಶಂಕರ್ ವಿದ್ಯಾರ್ಥಿ ಎಂಬ ಮಹಾನ್ ಹೋರಾಟಗಾರನಂತೂ ಹಿಂದೂ ಮುಸ್ಲಿಮರನ್ನು ಐಕ್ಯಗೊಳಿಸುವ ಪ್ರಯತ್ನದಲ್ಲಿ ಕೋಮುವಾದಿಗಳಿಂದಲೇ ಕೊಲೆಯಾದ ದುರಂತವನ್ನೂ ಸ್ಮರಿಸಬಹುದು.

ಇದೇ ಸಂದರ್ಭದಲ್ಲಿಯೇ ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳ ಮೇಲ್ವರ್ಗಗಳಲ್ಲಿ ಕಾಣಿಸಿಕೊಂಡ ಹಿತಾಸಕ್ತಿ ರಾಜಕೀಯವನ್ನು ಮುಂದಿನ ದಿನಗಳಲ್ಲಿ ಬ್ರಿಟಿಷರು ಚೆನ್ನಾಗಿಯೇ ಬಳಸಿಕೊಂಡದ್ದು, ದೇಶವು ಭಾರತ-ಪಾಕಿಸ್ತಾನಗಳಾಗಿ ವಿಭಜನೆಯಾದದ್ದು ಬೇರೆ ಕತೆ. ಆದರೆ ಇಡೀ ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ, ತಮ್ಮ ಬದುಕು ವೃತ್ತಿಗಳನ್ನು ತೊರೆದು ದೇಶದ ಸ್ವಾತಂತ್ರ‍್ಯಕ್ಕಾಗಿ ಮುಡುಪಾಗಿಟ್ಟ ಸಹಸ್ರ ಸಹಸ್ರ ದೇಶಪ್ರೇಮಿಗಳು ಹಿಂದು-ಮುಸ್ಲಿಂಇಬ್ಬರೂ ಆಗಿದ್ದರು.

ಮುಂದಿನ ದಿನಗಳಲ್ಲಿ ಭಾರತದ ಸಂವಿಧಾನ ಸಭೆ ರೂಪುಗೊಂಡು, ಸಂವಿಧಾನ ರಚನೆಯಾಗುವಾಗ ರೂಪುಗೊಂಡ ಪೀಠಿಕೆಯ ವಾಕ್ಯಗಳಲ್ಲಿ ಈ ಸ್ವಾತಂತ್ರ್ಯ ಹೋರಾಟದ ಆಶೋತ್ತರವಿರುವುದನ್ನು ನಾವು ನೋಡಬಹುದು. ಇದೇ ಕಾರಣದಿಂದಲೇ 1976ರಲ್ಲಿ 42ನೆಯ ತಿದ್ದುಪಡಿಯ ಮೂಲಕ ಪೀಠಿಕೆಯಲ್ಲಿ “ಜಾತ್ಯತೀತ” ಎಂಬ ಪದವನ್ನು ಸೇರಿಸುವ ಮೂರ್ನಾಲ್ಕು ವರ್ಷಗಳ ಮೊದಲೇ ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಪ್ರಕರಣದಲ್ಲಿ ಸುಪ್ರೀಂಕೋರ್ಟು ತಿಳಿಸಿದ ಸಂವಿಧಾನದ ಮೂಲರಚನೆಯ ತತ್ವದಲ್ಲಿ (Basic structure doctrine) ‘ಜಾತ್ಯತೀತತೆ”ಯು ಭಾರತದ ಸಂವಿಧಾನದ ಒಂದು ಮುಖ್ಯ ತಳಹದಿಯಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ.

ಈ ಕಾರಣದಿಂದಲೇ ನಾವು ‘ಸೆಕ್ಯುಲರ್’ ತತ್ವದ ಬಗ್ಗೆ ಮಾತಾಡುವಾಗ, ನಮ್ಮನ್ನು ನಾವು ಸೆಕ್ಯುಲರ್ ಎಂದುಕೊಳ್ಳುವಾಗ ಅದರೊಳಗಿನ ಕಸುವು ಭಾರತದ ಸ್ವಾತಂತ್ರ‍್ಯ ಹೋರಾಟದಿಂದಲೇ ಪಡೆದುಕೊಂಡಿದ್ದು ಎಂಬ ಅರಿವು ಸೆಕ್ಯುಲರಿಸಂ ಹೆಚ್ಚು ಅಪಾಯ ಎದುರಿಸುತ್ತಿರುವ ಈ ದಿನಗಳಲ್ಲಿ ಅತ್ಯಂತ ಮುಖ್ಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...