ಪದೇ ಪದೇ ಕೋವಿಡ್ ಕುರಿತಂತೆ ಏನನ್ನೋ ಅವೈಜ್ಞಾನಿಕವಾದುದನ್ನು ಹೇಳುವ ಮೂಲಕ, ಯಾವುದೋ ಔಷ಼ಧಿಯನ್ನು ಕೋವಿಡ್‌ಗೆ ರಾಮಬಾಣ ಎಂದು ಸುದ್ದಿ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವ ಬಾಬಾ ರಾಮದೇವ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೇಶದ ವೈದ್ಯರ ಪ್ರಾತಿನಿಧಿಕ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಒತ್ತಾಯಿಸಿದೆ.
ಇತ್ತೀಚೆಗೆ ರಾಮದೇವ್ ಅವರು ಅಲೋಫಥಿಕ್ ವಿಜ್ಞಾನ (ಆಧುನಿಕ ವೈದ್ಯ ವಿಜ್ಞಾನ) ಮತ್ತು ಅಲೊಪಥಿಕ್ ವೈದ್ಯರ ಕುರಿತಾಗಿ ಕ್ಷುಲ್ಲಕವಾಗಿ ಮಾತನಾಡಿದ್ದರು.
‘ಕೋವಿಡ್ ವಿರುದ್ಧದ ಹೋರಾಟದಲ್ಲಿ ಅಲೋಪಥಿಕ್ ವೈದ್ಯರು ಮುಂಚೂಣಿಯಲ್ಲಿದ್ದಾರೆ. ಈವರೆಗೆ 1,200 ವೈದ್ಯರು ಈ ಕಾರಣಕ್ಕೇ ಜೀವ ಕಳೆದುಕೊಂಡಿದ್ದಾರೆ. ಅಂತಹವರನ್ನು ಅವಮಾನಿಸುವ ಕೆಲಸವನ್ನು ಮಾಡುವ ಮೂಲಕ ಬಾಬಾ ರಾಮದೇವ್ ಎಂಬ ಸ್ವಯಂಘೋಷಿತ ದೇವಮಾನವ, ವೈದ್ಯರು ಮತ್ತು ರೋಗಿಗಳ ನಡುವೆ ಅವಿಶ್ವಾಸ ಮಾಡಿಸುವ ಕೆಲಸವನ್ನು ಮಾಡುತ್ತ ಬಂದಿದ್ದಾರೆ. ಇದು ವೈದ್ಯ ಸಮೂಹಕ್ಕೆ ಹಿನ್ನಡೆ ಮಾಡುವ ಕೆಲಸವಾಗಿದೆ. ವಿಜ್ಞಾನದ ಬದಲು ಮೌಢ್ಯವನ್ನು ಅವರು ಹರಡುತ್ತಿದ್ದಾರೆ. ಕೂಡಲೇ ರಾಮದೇವ್ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು’ ಎಂದು ಐಎಂಎ ಒತ್ತಾಯ ಮಾಡಿದೆ.
ವೃತ್ತಿಪರರು ದೇಶದ ಆರೋಗ್ಯ ರಕ್ಷಣೆಯನ್ನು ವೃತ್ತಿಪರ ರೀತಿಯಲ್ಲಿ ನಿರ್ವಹಿಸಬೇಕು. ಅವೈಜ್ಞಾನಿಕ ಅನಕ್ಷರತೆಯನ್ನು ಕಿವುಡು ಕಿವಿ ಮತ್ತು ಕುರುಡು ಕಣ್ಣುಗಳಿಂದ ಚಿಕಿತ್ಸೆ ನೀಡುವುದು ಅಷ್ಟೇನೂ ವೃತ್ತಿಪರತೆಯಲ್ಲ ಎಂದು ಐಎಂಎ ಚಾಟಿ ಬೀಸಿದೆ.
ಬಾಬಾ ರಾಮದೇವ್ ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ತಮ್ಮ ಪತಂಜಲಿ ಕಂಪನಿಯಿಂದ ಯಾವುದೇ ವೈಜ್ಞಾನಿಕ ಟ್ರಯಲ್ಸ್‌ಗಳಿಲ್ಲದೇ ಕೊರೊನಿಲ್ ಎಂಬ ಔಷಧಿ ಬಿಡುಗಡೆ ಮಾಡಿದ್ದರು. ಆಗಲೂ ಸರ್ಕಾರ ಸುಮ್ಮನೇ ಇತ್ತು ಎಂಬುದನ್ನು ಇಲ್ಲಿ ಗಮನಿಸಬಹುದು.
ಇತ್ತೀಚೆಗೆ ಕೆಲ ತಿಂಗಳ ಹಿಂದೆ ಅವರು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಸಮ್ಮುಖದಲ್ಲಿ ತಮ್ಮ ಕೊರೊನಿಲ್ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣಿತ ಔಷಧಿ ಎಂದು ಸುಳ್ಳು ಹೇಳಿ ಮತ್ತೊಮ್ಮೆ ಸಿಕ್ಕು ಬಿದ್ದಿದ್ದರು.
ಈಗ ಇಡೀ ವೈದ್ಯಕೀಯ ಸಮೂಹವನ್ನೇ ಗೇಲಿ ಮಾಡುವ ಮೂಲಕ, ಅಸಂಸದೀಯ ಪದಗಳ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರನ್ನು ಅವಮಾನಿಸಲು ನೋಡಿದ್ದಾರೆ,
ಈಗ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಐಎಂಎ ಅಧಿಕೃತ ಒತ್ತಾಯ ಮಾಡಿದೆ.
ಇದನ್ನೂ ಓದಿ; ಬ್ಲ್ಯಾಕ್ ಫಂಗಸ್ (ಮ್ಯುಕಾರ್ ಮೈಕೋಸಿಸ್ MucorMycosis) ಕುರಿತ ಪ್ರಶ್ನೆಗಳಿಗೆ ವೈದ್ಯರ ಸರಳ ಉತ್ತರಗಳು


