ಭಾರತದಲ್ಲಿನ ಯಾವುದೇ ಮುಸ್ಲಿಮರು ಔರಂಗಜೇಬ್ ವಂಶಸ್ಥರಲ್ಲ ಮತ್ತು ದೇಶದ ರಾಷ್ಟ್ರೀಯವಾದಿ ಮುಸ್ಲಿಮರು ಮೊಘಲ್ ಚಕ್ರವರ್ತಿಯನ್ನು ತಮ್ಮ ನಾಯಕ ಎಂದು ಗುರುತಿಸುವುದಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾನುವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂಬತ್ತು ವರ್ಷ ಪೂರೈಸಿದ ಸ್ಮರಣಾರ್ಥ ಬಿಜೆಪಿ ಸಾರ್ವಜನಿಕ ಬ್ಯಾಲಿಯನ್ನು ಆಯೋಜಿಸಿತ್ತು.
ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಔರಂಗಜೇಬ್ ನಮ್ಮ ನಾಯಕ ಹೇಗೆ ಆಗುತ್ತಾನೆ? ನಮ್ಮ ರಾಜ ಒಬ್ಬನೇ ಅದು ಛತ್ರಪತಿ ಶಿವಾಜಿ ಮಹಾರಾಜ್… ಭಾರತದಲ್ಲಿರುವ ಮುಸ್ಲಿಮರು ಔರಂಗಜೇಬನ ವಂಶಸ್ಥರಲ್ಲ. ಔರಂಗಜೇಬನ ವಂಶಸ್ಥರು ಯಾರು ಎಂದು ಹೇಳಿ? ಈ ದೇಶದ ರಾಷ್ಟ್ರೀಯವಾದಿ ಮುಸ್ಲಿಮರು ಅವರನ್ನು ಒಪ್ಪುವುದಿಲ್ಲ. ಮುಸ್ಲಿಮರು ಛತ್ರಪತಿ ಶಿವಾಜಿ ಮಹಾರಾಜರನ್ನು ಮಾತ್ರ ತಮ್ಮ ನಾಯಕ ಎಂದು ಗುರುತಿಸುತ್ತಾರೆ” ಎಂದು ಅವರು ಹೇಳಿದರು.
‘ಇದ್ದಕ್ಕಿದ್ದಂತೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಔರಂಗಜೇಬ್‌ನ ಮಕ್ಕಳು ಹುಟ್ಟಿಕೊಂಡಿದ್ದಾರೆ. ಔರಂಗಜೇಬ್ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಇದರಿಂದ ಉದ್ವಿಗ್ನತೆ ಉಂಟಾಗಿದೆ. ಔರಂಗಜೇಬ್‌ನ ಮಕ್ಕಳು ಎಲ್ಲಿಂದ ಬರುತ್ತಾರೆ? ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ನಾವು ಕಂಡು ಹಿಡಿಯುತ್ತೇವೆ’ ಎಂದು ಫಡ್ನವಿಸ್ ಟೀಕಿಸಿದ್ದಾರೆ.
ಇದನ್ನೂ ಓದಿ: ಫಡ್ನವೀಸ್‌ಗೆ ದಕ್ಕದ ಸಿಎಂ ಪಟ್ಟ: ಬಿಜೆಪಿ ಹೈಕಮಾಂಡ್ ಎದುರು ಮಂಡಿಯೂರಿದ್ದೇಕೆ?
ಠಾಕ್ರೆ ಅವರನ್ನು ಟೀಕಿಸಿದ ಫಡ್ನವೀಸ್, ”ಅವರು ತಮ್ಮ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿಯಿಂದ “ಸ್ಕ್ರಿಪ್ಟ್ ರೈಟರ್‌ಗಳನ್ನು” ಎರವಲು ಪಡೆದಿದ್ದಾರೆ ಏಕೆಂದರೆ ಅವರಿಗೆ ಭಾಷಣಗಳನ್ನು ಬರೆಯಲು ಅವರ ಸ್ವಂತ ಬಣದಲ್ಲಿ ಯಾರೂ ಉಳಿದಿಲ್ಲ” ಎಂದು ಹೇಳಿದರು.
ಕಾಂಗ್ರೆಸ್-ಎನ್‌ಸಿಪಿ ಜೊತೆಗೂಡಿ ಮಹಾ ವಿಕಾಸ್ ಅಘಾಡಿ ಸರ್ಕಾರ ರಚಿಸಿದಾಗ, ನಾನು ಮತ್ತೆ ಬರುತ್ತೇನೆ ಎಂದು ಠಾಕ್ರೆ ಅವರಿಗೆ ಈ ಹಿಂದೆಯೇ ಹೇಳಿದ್ದೆ, ನಾನು ಮತ್ತೆ ಅಧಿಕಾರಕ್ಕೆ ಬರುವುದು ಮಾತ್ರವಲ್ಲ, ನನ್ನೊಂದಿಗೆ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿಯನ್ನಾಗಿ ತಂದಿದ್ದೇನೆ ಎಂದರು.
ಜೂನ್ 8ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕೆಲವು ಯುವಕರು ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ್ದರು. ಘಟನೆ ಬಳಿಕ ಕೊಲ್ಲಾಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.


