ಟೊರೊಂಟೊ: ಡಿಸೆಂಬರ್ 6ರ ಮುಂಜಾನೆ ಕೆನಡಾದ ಅಲ್ಬರ್ಟಾ ಪ್ರಾಂತ್ಯದ ರಾಜಧಾನಿ ಎಡ್ಮಂಟನ್‌ನಲ್ಲಿ ಹರಿಯಾಣದ ವಿದ್ಯಾರ್ಥಿ ಹರ್ಷನ್‌ದೀಪ್ ಸಿಂಗ್ ಅಂತಾಲ್ ನನ್ನು ಶುಕ್ರವಾರದಂದು ಹತ್ಯೆ ಮಾಡಲಾಗಿದೆ. ವಿದ್ಯಾರ್ಥಿಯು ನಗರದ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಹತ್ಯೆ ನಡೆದಿದೆ. ಇದಕ್ಕೆ ಸಂಬಂಧಿಸಿ ಎಡ್ಮಂಟನ್ ಪೋಲಿಸ್ ಸರ್ವಿಸ್ (ಇಪಿಎಸ್) ಇಬ್ಬರನ್ನು ಬಂಧಿಸಿದೆ.
ತನ್ನ ಪ್ರಜೆಯ ಆಘಾತಕಾರಿ ಹತ್ಯೆಗೆ ಭಾರತ ಸಂತಾಪ ವ್ಯಕ್ತಪಡಿಸಿದೆ.
ನಾವು ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಮತ್ತು ಸಂತ್ರಸ್ತ ಕುಟುಂಬಕ್ಕೆ ಅಗತ್ಯವಿರುವ ಸಹಾಯವನ್ನು ಒದಗಿಸುತ್ತೇವೆ ಎಂದು ಭಾನುವಾರದ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ವ್ಯಾಂಕೋವರ್‌ನಲ್ಲಿರುವ ಭಾರತದ ದೂತಾವಾಸವು ಹೇಳಿದೆ.
ಶನಿವಾರ ಕೆನಡಾ ಪೊಲೀಸರು (ಇಪಿಎಸ್) ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಮತ್ತು ಅವರನ್ನು ಇವಾನ್ ರೈನ್ (30), ಮತ್ತು ಜುಡಿತ್ ಸಾಲ್ಟಿಯಾಕ್ಸ್(30) ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯರಾತ್ರಿ 12:30ಕ್ಕೆ (ಸ್ಥಳೀಯ ಕಾಲಮಾನ) ಡೌನ್‌ಟೌನ್ ಬ್ರಾಂಚ್ ನ ಗಸ್ತು ಅಧಿಕಾರಿಗಳಿಗೆ ಅಪಾರ್ಟ್‌ಮೆಂಟ್ ಕಟ್ಟಡದೊಳಗೆ ಗುಂಡಿನ ಸದ್ದು ಕೇಳಿ ಅಲ್ಲಿಗೆ ಆಗಮಿಸಿದರು. ಅಲ್ಲಿ 20 ವರ್ಷದ ಭದ್ರತಾ ಸಿಬ್ಬಂದಿ ಹರ್ಷನದೀಪ್ ಸಿಂಗ್ ಹತ್ಯೆಯಾಗಿರುವುದನ್ನು ಪತ್ತೆ ಮಾಡಿದರು. ತಕ್ಷಣ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಸಾಗಿಸಿದರಾದರೂ ಸಿಂಗ್ ದಾರಿ ಮಧ್ಯೆ ಸಾವನ್ನಪ್ಪಿದನು ಎಂದು ಇಪಿಎಸ್‌ನ ಪ್ರಕಟಣೆ ತಿಳಿಸಿದೆ.
ಸಿಂಗ್ ಸಾವಿನಲ್ಲಿ ಬೇರೆ ಯಾರೋ ಭಾಗಿಯಾಗಿದ್ದಾರೆಂದು ತನಿಖಾಧಿಕಾರಿಗಳು ನಂಬುವುದಿಲ್ಲ ಮತ್ತು ಬಂಧಿತರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂದು ( ಸೋಮವಾರ) ಶವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಅದು ಹೇಳಿದೆ.
ಇಪಿಎಸ್ ನ ನರಹತ್ಯೆಗೆ ಸಂಬಂಧಿಸಿ ಸಿಬ್ಬಂದಿ ಸಾರ್ಜೆಂಟ್ ರಾಬ್ ಬಿಲಾವೆ ಅವರು, “ಸಾಮಾನ್ಯವಾಗಿ” ಮರಣವು ಕೊಲೆ ಎಂದು ದೃಢೀಕರಿಸದ ಹೊರತು ಸತ್ತವರ ಹೆಸರನ್ನು ಬಿಡುಗಡೆ ಮಾಡುವುದಿಲ್ಲ. ಆದರೆ ಈ ನಿದರ್ಶನದಲ್ಲಿ ತನಿಖಾ ಉದ್ದೇಶಕ್ಕಾಗಿ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ನಿವಾರಿಸುವ ಪ್ರಯತ್ನದ ಭಾಗವಾಗಿ ಸಿಂಗ್ ಅವರ ಹೆಸರನ್ನು ಬಹಿರಂಗಪಡಿಸಲಾಗಿದೆ ಎಂದಿದ್ದಾರೆ.
ಅಂತಾಲ್ ಅವರು ಒಂದೂವರೆ ವರ್ಷಗಳ ಹಿಂದೆ ಅಂತರರಾಷ್ಟ್ರೀಯ ವಿದ್ಯಾರ್ಥಿಯಾಗಿ ಕೆನಡಾಕ್ಕೆ ಬಂದರು. ಆತನು ದಯೆಯುಳ್ಳ ಮತ್ತು ಕಠಿಣ ಪರಿಶ್ರಮದ ಯುವಕನಾಗಿದ್ದನು. ಈ ಅವಿವೇಕದ ಹತ್ಯೆಯು ಅವನ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರನ್ನು ಛಿದ್ರಗೊಳಿಸಿದೆ ಮತ್ತು ಈ ಅಘಾತಕಾರಿ ನಷ್ಟವನ್ನು ನಿಭಾಯಿಸಲು ಸಂತ್ರಸ್ತನ ಕುಟುಂಬ ಹೆಣಗಾಡುತ್ತಿದೆ ಎಂದು ಸಂತ್ರಸ್ತನ ಕುಟುಂಬಕ್ಕಾಗಿ ಆನ್‌ಲೈನ್ ಹಣ ಸಂಗ್ರಹಿಸುತ್ತಿರುವ ನಿಧಿಸಂಗ್ರಹಣೆಗಾರನೊಬ್ಬ ಹೇಳಿದ್ದಾನೆ.
ಸಿಂಗ್ ತನ್ನ ಹೆತ್ತವರನ್ನು ಮತ್ತು ಸಹೋದರಿಯನ್ನು ಅಗಲಿದ್ದಾರೆ. ಕುಟುಂಬವು ಹರಿಯಾಣದ ಅಂಬಾಲಾದ ಪಿಂಡ್ ಮಾತೆಹ್ರಿ ಜತ್ತನ್‌ನಲ್ಲಿ ನೆಲೆಸಿದೆ ಎಂದು ವರದಿ ಮಾಡಲಾಗಿದೆ.
ಈ ಹತ್ಯೆಯಿಂದ ಸಮುದಾಯವು ಹೇಗೆ ಬೆಚ್ಚಿಬಿದ್ದಿದೆ ಎಂಬುದಕ್ಕೆ ನಿಧಿಸಂಗ್ರಹಕಾರನು ಈಗಾಗಲೇ ಭಾನುವಾರ ಸಂಜೆಯ ವೇಳೆಗೆ ಕೆನಡಾದ ಡಾಲರ್ 120,000 (ಸುಮಾರು ₹ 75 ಲಕ್ಷ) ಸಂಗ್ರಹಿಸಿದ್ದೆ ಸಾಕ್ಷಿಯಾಗಿದೆ.
ಬಂಧಿತರಲ್ಲಿ ಒಬ್ಬಾತ ಅಪರಾಧದ ಇತಿಹಾಸವನ್ನು ಹೊಂದಿದ್ದಾನೆ ಎಂದು ಔಟ್ಲೆಟ್ ವೆಸ್ಟರ್ನ್ ಸ್ಟ್ಯಾಂಡರ್ಡ್ ಉಲ್ಲೇಖಿಸಿದೆ. ಪಾತಾಕಿ ರೇನ್ ನ ಕ್ರಿಮಿನಲ್ ಇತಿಹಾಸ ನೋಡಿದರೆ ಆತನ ಬಿಡುಗಡೆ ಕುರಿತು ಪ್ರಶ್ನೆ ಉದ್ಭವಿಸುತ್ತದೆ ಮತ್ತು ಕೆನಡಾದ ನ್ಯಾಯ ವ್ಯವಸ್ಥೆಯ ಪರಿಣಾಮ ಬೀರುವಂತಹದ್ದು ಎಂದು ಅದು ಹೇಳಿದೆ.
ಇದನ್ನೂ ಓದಿ…ಮುಂದುವರಿದ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳ ಸಾವು; ರಾಜ್ಯಗಳಿಂದ ಉತ್ತರ ಕೇಳಿದ ಎನ್‌ಎಚ್‌ಆರ್‌ಸಿ


