ಪಾಸ್‌ಪೋರ್ಟ್‌ನಲ್ಲಿ ಜನ್ಮಸ್ಥಳ ಅರುಣಾಚಲ ಪ್ರದೇಶ ಎಂದು ಉಲ್ಲೇಖಿಸಿದ್ದಕ್ಕೆ ಭಾರತೀಯ ಮೂಲದ ಮಹಿಳೆಗೆ ಚೀನಾದ ಶಾಂಘೈ ವಿಮಾನ ನಿಲ್ದಾಣದಲ್ಲಿ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ನವೆಂಬರ್ 21ರಂದು ಅರುಣಾಚಲ ಪ್ರದೇಶ ಮೂಲದ, ಪ್ರಸ್ತುತ ಲಂಡನ್‌ನಲ್ಲಿ ವಾಸವಿರುವ ಪೇಮಾ ವಾಂಗ್ ಥೋಂಗ್‌ಡಾಕ್ ಎಂಬ ಮಹಿಳೆ ಲಂಡನ್‌ನಿಂದ ಜಪಾನ್‌ಗೆ ಚೀನಾ ಮೂಲಕ ಪ್ರಯಾಣಿಸುತ್ತಿದ್ದರು. ಅವರು ಶಾಂಘೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ಇಮಿಗ್ರೇಷನ್ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ಸುಮಾರು 18 ಗಂಟೆಗಳ ಕಾಲ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯ ಪಾಸ್‌ಪೋರ್ಟ್‌ನಲ್ಲಿ ಆಕೆಯ ಜನ್ಮಸ್ಥಳ ಅರುಣಾಚಲ ಪ್ರದೇಶ ಎಂದು ಬರೆಯಲಾಗಿತ್ತು. ಚೀನಾ ಅರುಣಾಚಲ ಪ್ರದೇಶವನ್ನು ತನ್ನ ಭೂಭಾಗ (ಝಾಂಗ್ನಾನ್ ಅಥವಾ ದಕ್ಷಿಣ ಟಿಬೆಟ್) ಎಂದು ವಾದಿಸುತ್ತಿದೆ. ಆದ್ದರಿಂದ ಮಹಿಳೆಯ ಪಾಸ್‌ಪೋರ್ಟ್ ‘ಅಮಾನ್ಯ’ ಎಂದ ಅಧಿಕಾರಿಗಳು, “ನೀನು ಚೀನಾದವಳು, ಭಾರತೀಯಳಲ್ಲ” ಎಂದು ಅಪಮಾನಿಸಿದ್ದಾರೆ ಎಂಬುವುದಾಗಿ ವರದಿಯಾಗಿದೆ.
ಮಹಿಳೆಗೆ 18 ಗಂಟೆಗಳ ಕಾಲ ಆಹಾರ ಕೊಟ್ಟಿಲ್ಲ. ಶೌಚಾಲಯಕ್ಕೆ ತೆರಳಲು ಮಾತ್ರ ಅನುಮತಿಸಿದ್ದರು. ಜಪಾನ್‌ಗೆ ಹೋಗುವ ವಿಮಾನ ಹತ್ತಲು ಬಿಟ್ಟಿಲ್ಲ. ಹೊಸ ಟಿಕೆಟ್ ಖರೀದಿಸಲು ಹೆಚ್ಚುವರಿ ಹಣ ಖರ್ಚು ಮಾಡಿಸಿದರು ಎಂದು ಆರೋಪಿಸಲಾಗಿದೆ.
ಕೊನೆಗೆ, ಶಾಂಘೈಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಧ್ಯಪ್ರವೇಶಿಸಿ ಮಹಿಳೆಯನ್ನು ಬಿಡುಗಡೆಗೊಳಿಸಿದೆ. ಭಾರತ ಸರ್ಕಾರ ಅರುಣಾಚಲ ಪ್ರದೇಶ ತನ್ನ ಭೂಭಾಗ ಎಂಬ ಚೀನಾದ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ’ ಎಂದು ಪುನರುಚ್ಚರಿಸಿದೆ. ಪ್ರಸ್ತುತ ಮಹಿಳೆ ಸುರಕ್ಷಿತವಾಗಿದ್ದಾರೆ. ತಲುಪುವಲ್ಲಿಗೆ ತಲುಪಿದ್ದಾರೆ ಎಂದು ವರದಿಗಳು ಹೇಳಿವೆ.
ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ-ಭಾರತ
“ಮಾನ್ಯ ಪಾಸ್‌ಪೋರ್ಟ್ ಹೊಂದಿದ್ದ ಮತ್ತು ಶಾಂಘೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಜಪಾನ್‌ಗೆ ತೆರಳುತ್ತಿದ್ದ ಅರುಣಾಚಲ ಪ್ರದೇಶದ ಭಾರತೀಯ ಪ್ರಜೆಯನ್ನು ಅನಿಯಂತ್ರಿತವಾಗಿ ಬಂಧಿಸಿದ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯದ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. ಇದು ಸ್ವಯಂ-ಸ್ಪಷ್ಟ ಸತ್ಯ. ಚೀನಾದ ಕಡೆಯಿಂದ ಬರುವ ಯಾವುದೇ ನಿರಾಕರಣೆ ಈ ನಿರ್ವಿವಾದ ವಾಸ್ತವವನ್ನು ಬದಲಾಯಿಸುವುದಿಲ್ಲ” ಎಂದು ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಮುಂದುವರಿದು, “ಈ ವಿಷಯವನ್ನು ಭಾರತ ಸರ್ಕಾರ ಚೀನಾದೊಂದಿಗೆ ಅತ್ಯಂತ ಕಟುವಾಗಿ ಪ್ರಸ್ತಾಪಿಸಿದೆ. ಚೀನಾದ ಅಧಿಕಾರಿಗಳು ಇನ್ನೂ ತಮ್ಮ ಕೃತ್ಯಕ್ಕೆ ಸರಿಯಾದ ವಿವರಣೆ ನೀಡಲು ಸಾಧ್ಯವಾಗಿಲ್ಲ. ಅವರ ಈ ಕ್ರಮವು ಅಂತಾರಾಷ್ಟ್ರೀಯ ವಿಮಾನ ಪ್ರಯಾಣವನ್ನು ನಿಯಂತ್ರಿಸುವ ಹಲವು ಒಡಂಬಡಿಕೆಗಳನ್ನು (ಕನ್ವೆನ್ಷನ್‌ಗಳನ್ನು) ಉಲ್ಲಂಘಿಸಿದೆ. ಅಷ್ಟೇ ಅಲ್ಲ, ಚೀನಾ ತಾನೇ ಜಾರಿಗೊಳಿಸಿರುವ ನಿಯಮವನ್ನೂ ಮೀರಿದೆ. ಆ ನಿಯಮದ ಪ್ರಕಾರ ಎಲ್ಲ ದೇಶಗಳ ಪ್ರಜೆಗಳಿಗೂ 24 ಗಂಟೆಗಳವರೆಗೆ ವೀಸಾ ಇಲ್ಲದೆ ಟ್ರಾನ್ಸಿಟ್ (ಮಧ್ಯದಲ್ಲಿ ನಿಲುಗಡೆ) ಅನುಮತಿ ಇದೆ. ಆದರೂ ಚೀನಾದ ಅಧಿಕಾರಿಗಳು ಭಾರತೀಯ ಮಹಿಳೆಯನ್ನು 18 ಗಂಟೆಗಳ ಕಾಲ ತಡೆಹಿಡಿದು ತಮ್ಮ ಸ್ವಂತ ನಿಯಮವನ್ನೂ ಉಲ್ಲಂಘಿಸಿದ್ದಾರೆ” ಎಂದು ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.


