ಕೋವಿಶೀಲ್ಡ್, ಕೋವಾಕ್ಸೀನ್ ನಂತರ ಭಾರತದಲ್ಲಿ ಮೂರನೇ ದೇಶಿ ನಿರ್ಮಿತ ‘ಕೋವಿಡ್ 19’ ಹೆಸರಿನ ಹೊಸ ಕೊರೋನಾ ವ್ಯಾಕ್ಸೀನ್ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಹೈದರಾಬಾದ್ ಮೂಲದ ಬಯೋಲಾಜಿಕಲ್ E ಸಂಸ್ಥೆಯೊಂದಿಗೆ ಕೇಂದ್ರ ಸರ್ಕಾರ 30 ಕೋಟಿ ವ್ಯಾಕ್ಸೀನ್ ಗಳ ಪೂರೈಕೆಗೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ. ಕೇಂದ್ರ ಸರ್ಕಾರದಿಂದ ತುರ್ತಿ ಪರಿಸ್ಥಿತಿಯ ಬಳಕೆಗೆ ಅನುಮತಿಯನ್ನು ನಿರೀಕ್ಷಿಸುತ್ತಿರುವ ಬಯೊಲಾಜಿಕಲ್ ಈ ಸಂಸ್ಥೆ ಸದ್ಯದಲ್ಲೇ ತನ್ನ ವ್ಯಾಕ್ಸೀನ್ ಅನ್ನು ದೇಶದಲ್ಲಿ ಬಿಡುಗಡೆಮಾಡಲು ಸಜ್ಜಾಗಿದೆ.
ದೇಶದ ಅತ್ಯಂತ ಹಳೆಯ ವ್ಯಾಕ್ಸೀನ್ ತಯಾರಿಕಾ ಕಂಪನಿಯಾದ ಬಯೋಲಾಜಿಕಲ್ E ತನ್ನ ಹೊಸ ವ್ಯಾಕ್ಸೀನ್ ನ ಪ್ರತಿ ಡೋಸ್ ಗೆ 500 ರೂಪಾಯಿಯಂತೆ ಮುಕ್ತ ಮಾರುಕಟ್ಟೆಯಲ್ಲಿ ಮಾರಲು ಸಿದ್ಧತೆ ನಡೆಸಿದೆ ಎಂದು ಕಂಪನಿಯ ಮೂಲಗಳಿಂದ ತಿಳಿದು ಬಂದಿದೆ.
ಎರಡು ಡೋಸ್‌ಗಳಲ್ಲಿ ಜನರಿಗೆ ಬಯೊಲಾಜಿಕಲ್ ಈ ಸಂಸ್ಥೆ ಕೊರೋನಾ ವ್ಯಾಕ್ಸೀನ್ ಅನ್ನು ನೀಡಲು ಮುಂದಾಗಿದೆ. ಭಾರತದ ಜೊತೆಗೆ ವಿಶ್ವದ ಅತ್ಯಂತ ಕಡಿಮೆ ಬೆಲೆಯ ವ್ಯಾಕ್ಸೀನ್ ಇದಾಗಿರಲಿದೆ ಎಂದು ಕಂಪನಿಯ ಮೂಲಗಳು ಹೇಳಿವೆ.
ಈಗಾಗಲೇ ಫೇಸ್ 1 ಮತ್ತು ಫೇಸ್ 2 ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ ಕಂಪನಿಯ ವ್ಯಾಕ್ಸೀನ್ ಉತ್ತಮ ಫಲಿತಾಂಶವನ್ನು ನೀಡಿದ್ದು ಸದ್ಯ ಸರ್ಕಾರದ ಅನುಮತಿಗಾಗಿ ಕಂಪನಿ ಕಾಯುತ್ತಿದೆ.
ಬಯೊಲಾಜಿಕಲ್ ಈ ಸಂಸ್ಥೆಯ ಹೊಸ ವ್ಯಾಕ್ಸೀನ್ ಭಾರತ, ಆಫ್ರಿಕ, ದಕ್ಷಿಣ ಅಮೆರಿಕಾ ಮತ್ತು ಏಷ್ಯಾದ ದೇಶಗಳಲ್ಲಿನ ವ್ಯಾಕ್ಸೀನ್ ಕೊರತೆಯನ್ನು ನೀಗಿಸಲಿದೆ ಎಂದು ಬಯೊಲಾಜಿಕಲ್ ಈ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮಹಿಮಾ ಡಾಲ್ಟಾ ತಿಳಿಸಿದ್ದಾರೆ
ಬಯೊಲಾಜಿಕಲ್ E ಸಂಸ್ಥೆ ಅಮೆರಿಕಾದ ಟೆಕ್ಸಾಸ್ ನ ಚಿಲ್ಡ್ರನ್ ಹಾಸ್ಪಿಟಲ್ ಸೆಂಟರ್ ಫಾರ್ ವ್ಯಾಕ್ಸೀನ್ ಡೆವಲಪ್‌ಮೆಂಟ್ ಎಂಬ ಔಷಧ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಹೊಸ ವ್ಯಾಕ್ಸೀನ್ ಅನ್ನು ಅಭಿವೃದ್ಧಿಪಡಿಸಿದೆ. “ಭಾರತದಲ್ಲಿ ಕೋವಿಡ್ ವಿರುದ್ಧ ಹೋರಾಟದಲ್ಲಿ ನಾವು ಬಯೋಲಾಜಿಕಲ್ E ಸಂಸ್ಥೆಯ ಜೊತೆ ಕೈಜೋಡಿಸಲು ಅತ್ಯಂತ ಹೆಮ್ಮೆಯಾಗುತ್ತದೆ. ಜಗತ್ತು ಒಗ್ಗಟ್ಟಾಗಿ ಕೊರೋನಾ ವಿರುದ್ಧ ಹೋರಾಡುತ್ತಿದೆ” ಎಂದು ಟೆಕ್ಸಾಸ್ ಚಿಲ್ಡ್ರನ್ ಹಾಸ್ಪಿಟಲ್ ಸೆಂಟರ್ ನ ಪ್ರೊಫೆಸರ್ ಪೀಟರ್ ಹೊಟೇಝ್ ತಿಳಿಸಿದ್ದಾರೆ.
ಕಳೆದ ವರ್ಷ ಬಯೋಲಾಜಿಕಲ್ E ಔಷದೋತ್ಪಾದನಾ ಕಂಪನಿ ಅಮೆರಿಕಾದ ಜಾನ್ಸನ್ ಆ್ಯಂಡ್ ಜಾನ್ಸನ್ ನ ಭಾಗವಾಗಿರುವ ಜಾನ್ಸೆನ್ ಫಾರ್ಮಾಸುಟಿಕಲ್ NV ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ Ad26.COV2.S. ಕೋವಿಡ್ 19 ಲಸಿಕೆಯ ಉತ್ಪಾದನೆಯ ಹಕ್ಕುಗಳನ್ನು ಬಯೋಲಾಜಿಕಲ್ E ಸಂಸ್ಥೆ ಪಡೆದುಕೊಂಡಿದೆ.
ದೇಶದ ಅತ್ಯಂತ ಹಳೆಯ ಔಷಧ ಉತ್ಪಾದನಾ ಕಂಪನಿ ಬಯೋಲಾಜಿಕಲ್ E 1953 ರಲ್ಲಿ ಕೆವಿಕೆ ರಾಜು ಅವರು ಕಂಪನಿಯನ್ನು ಆರಂಭಿಸಿದ್ದರು. ಆ ಸಂದರ್ಭದಲ್ಲಿ ದೇಶದ ಮೊಟ್ಟಮೊದಲ ಖಾಸಗಿ ಔಷಧ ತಯಾರಿಕ ಕಂಪಿನಿಯಾಗಿ ಬಯೋಲಾಜಿಕಲ್ E ಸಂಸ್ಥೆ ಗುರುತಿಸಿಕೊಂಡಿತ್ತು. ಇದುವರೆಗೆ ಜಗತ್ತಿನ 100 ದೇಶಗಳಿಗೆ ವಿವಿಧ ವ್ಯಾಕ್ಸೀನ್ ಪೂರೈಸುತ್ತಿರುವ ಬಯೋಲಾಜಿಕಲ್ E ಕಂಪನಿ ಇತರ ವೈದ್ಯಕೀಯ ಔಷಧಿಗಳನ್ನು ಭಾರತ ಮತ್ತು ಅಮೆರಿಕಾದ ಮಾರುಕಟ್ಟೆಗೆ ಪೂರೈಕೆ ಮಾಡುತ್ತಿದೆ.
ಭಾರತ ಸರ್ಕಾರದ ಅನುಮತಿಯ ನಂತರ ಕಂಪನಿಯು ದೊಡ್ಡ ಮಟ್ಟದಲ್ಲಿ COVID-19 ಹೆಸರಿನ ವ್ಯಾಕ್ಸೀನ್ ಅನ್ನು ಉತ್ಪಾದನೆಗೆ ತೊಡಗಲಿದೆ. ಭಾರತದಲ್ಲಿ ಜನರ ಕೈಗೆಟುಕ ದರದಲ್ಲಿ ಔಷಧೋತ್ಪನ್ನಗಳನ್ನು ವ್ಯಾಕ್ಸೀನ್ ಗಳನ್ನು ಪೂರೈಸುವುದು ಸಂಸ್ಥೆಯ ಉದ್ಧೇಶ ಬಯೋಲಾಜಿಕಲ್ E ಸಂಸ್ಥೆ ಮುಖ್ಯಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ; ಲಸಿಕೆ ಕುರಿತು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆಗಳು: ಕಟಕಟೆಯಲ್ಲಿ ಮೋದಿ ಸರ್ಕಾರ!


