ಲೋಕಸಭೆಯ ಚೊಚ್ಚಲ ಭಾಷಣದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಸಂಸದೆ ಪ್ರಿಯಾಂಕಾ ಗಾಂಧಿ “ಭಾರತದ ಸಂವಿಧಾನ ಸಂಘದ ನಿಯಮ ಪುಸ್ತಕವಲ್ಲ” ಎಂದು ಕುಟುಕಿದರು.
ದೇಶವು ಹೆಚ್ಚು ದಿನ ಹೇಡಿಗಳ ಕೈಯ್ಯಲ್ಲಿ ಇರಲ್ಲ ಎಂದಿರುವ ಪ್ರಿಯಾಂಕಾ, 2024ರ ಚುನಾವಣೆಯಲ್ಲಿ ಬಿಜೆಪಿಗೆ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂಬುವುದು ಗೊತ್ತಾಗಿದೆ ಎಂದು ಹೇಳಿದರು.
ದೇಶದ ಸಂವಿಧಾನ ಸಂಘದ ನಿಯಮ ಪುಸ್ತಕವಲ್ಲ. ಅದನ್ನು ಪ್ರಧಾನಿ ನರೇಂದ್ರ ಮೋದಿ ಅರ್ಥ ಮಾಡಿಕೊಂಡಿಲ್ಲ.ಸಂವಿಧಾನವು ನ್ಯಾಯ, ಏಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕವಚವಾಗಿದೆ. ಕಳೆದ 10 ವರ್ಷಗಳಲ್ಲಿ ಸಂವಿಧಾನವನ್ನು ನಾಶ ಮಾಡಲು ಬಿಜೆಪಿ ಎಲ್ಲಾ ಪ್ರಯತ್ನಗಳನ್ನು ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.
ಮಣಿಪುರ, ಸಂಭಾಲ್ ಹಿಂಸಾಚಾರದ ವಿಷಯದಲ್ಲಿ ಮೌನ ತಾಳಿರುವ ಪ್ರಧಾನಿ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ ಎಂದರು.
ಸಂಭಾಲ್‌ನಲ್ಲಿ ನಡೆದ ಕೋಮು ಹಿಂಸಾಚಾರ, ಉನ್ನಾವ್‌ನಲ್ಲಿ ಮಹಿಳೆಯ ಅತ್ಯಾಚಾರ, ಆಗ್ರಾದಲ್ಲಿ ಕಾರ್ಮಿಕನೊಬ್ಬನ ಹತ್ಯೆ ಮಣಿಪುರದ ಜನಾಂಗೀಯ ಹಿಂಸೆಯನ್ನು ಉಲ್ಲೇಖಿಸಿದ ಪ್ರಿಯಾಂಕಾ, ಕೇಂದ್ರ ಸರ್ಕಾರ ಸಂವಿಧಾನದ ಸುರಕ್ಷತೆಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ : ‘ಒಬ್ಬ ವ್ಯಕ್ತಿಗಾಗಿ 142 ಕೋಟಿ ಜನರನ್ನು ಕಡೆಗಣಿಸಲಾಗಿದೆ’ : ಪ್ರಿಯಾಂಕಾ ಗಾಂಧಿ


