ಎಲ್ಲಾ ರೀತಿಯ ಯುಎಸ್‌ಏಡ್ ವಿದೇಶಿ ನೆರವನ್ನು 90 ದಿನಗಳ ಕಾಲ ಸ್ಥಗಿತಗೊಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ ಬಳಿಕ ಹೈದರಾಬಾದ್‌ನಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಆರೋಗ್ಯ ಸೌಲಭ್ಯ ಒದಗಿಸುತ್ತಿದ್ದ ‘ಮಿತ್ರ್ ಕ್ಲಿನಿಕ್’ ಮುಚ್ಚಲ್ಪಟ್ಟಿದೆ ಎಂದು ವರದಿಯಾಗಿದೆ.
ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಅಮೆರಿಕದಿಂದ ಇತರ ರಾಷ್ಟ್ರಗಳಿಗೆ ನೀಡಲಾಗುತ್ತಿರುವ ವಿವಿಧ ರೀತಿಯ ನೆರವುಗಳ ಕುರಿತು ಪರಿಶೀಲನೆಗೆ ಮುಂದಾಗಿದ್ದು, ಯುಎಸ್‌ಏಡ್ ಮೂಲಕ ನೀಡಲಾಗುತ್ತಿದ್ದ ಹಲವು ವಿದೇಶಿ ನೆರವುಗಳನ್ನು ಸ್ಥಗಿತಗೊಳಿಸಿದೆ.
ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಅಮೆರಿಕದ ಸರ್ಕಾರಿ ದಕ್ಷತೆಯ ಇಲಾಖೆಯು ವೆಚ್ಚಗಳಲ್ಲಿ ಕಡಿತ ಮಾಡಲು ಈ ಕ್ರಮ ಕೈಗೊಂಡಿದೆ. ಟ್ರಂಪ್ ಮತ್ತು ಎಲಾನ್ ಮಸ್ಕ್ ಇಬ್ಬರೂ ಅಮೆರಿಕದಿಂದ ಇತರ ರಾಷ್ಟ್ರಗಳಿಗೆ ಹಣ ಹರಿಯುವುದನ್ನು ತಡೆಯಲು ಮುಂದಾಗಿದ್ದಾರೆ.
ಇದರಿಂದ ಯುಎಸ್‌ಏಡ್ ಮೂಲಕ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಹೈದರಾಬಾದ್‌ನ ಟ್ರಾನ್ಸ್‌ಜೆಂಡರ್ ಕ್ಲಿನಿಕ್ ಕೂಡ ಅದರಲ್ಲಿ ಒಂದು. ಯುಎಸ್‌ಏಡ್ ಸ್ಥಗಿತದಿಂದ ಈ ಕ್ಲಿನಿಕ್‌ನಲ್ಲಿ ಹೆಚ್‌ಐವಿಗೆ ಚಿಕಿತ್ಸೆ ನೀಡುವ ಪ್ರಾಜೆಕ್ಟ್ ಅಕ್ಸೆಲರೇಟ್ ಕೂಡ ಬಂದ್ ಆಗಿದೆ.
ಜನವರಿ 2021ರಲ್ಲಿ ಸ್ಥಾಪನೆಯಾದ ‘ಮಿತ್ರ್ ಕ್ಲಿನಿಕ್’ ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಕೇಂದ್ರಿತ ಆರೋಗ್ಯ ಕೇಂದ್ರಗಳಲ್ಲಿ ಒಂದಾಗಿದ್ದು, ಸಾಮಾನ್ಯ ಆರೋಗ್ಯ ಸಮಾಲೋಚನೆಗಳು, ಹೆಚ್ಐವಿ ಸಮಾಲೋಚನೆ ಮತ್ತು ಚಿಕಿತ್ಸೆ, ಮಾನಸಿಕ ಆರೋಗ್ಯ ಸಹಾಯ, ಲಿಂಗ ದೃಢೀಕರಣ ಸೇವೆಗಳು ಮತ್ತು ಕಾನೂನು ಮತ್ತು ಸಾಮಾಜಿಕ ಯೋಜನೆಗಳನ್ನು ಪಡೆಯಲು ಸಹಾಯದಂತಹ ಅಗತ್ಯ ಸೇವೆಗಳನ್ನು ಇದು ಒದಗಿಸುತ್ತಿತ್ತು.
LGBTQIA+ ಸಮುದಾಯದ ಆರೋಗ್ಯ ಅಗತ್ಯಗಳನ್ನು ಪೂರೈಸುವಲ್ಲಿ, ವಿಶೇಷವಾಗಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಲ್ಲಿನ ಹೆಚ್‌ಐವಿ ಸಮಸ್ಯೆಯನ್ನು ಎದುರಿಸುವಲ್ಲಿ ಈ ಚಿಕಿತ್ಸಾಲಯವು ಪ್ರಮುಖ ಪಾತ್ರ ವಹಿಸುತ್ತಿತ್ತು.
2024ರ ಮಧ್ಯದ ವೇಳೆಗೆ, ಸುಮಾರು 4,900 ಕ್ಕೂ ಹೆಚ್ಚು ವ್ಯಕ್ತಿಗಳು ಈ ಕ್ಲಿನಿಕ್‌ನಲ್ಲಿ ನೋಂದಾಯಿಸಿಕೊಂಡಿದ್ದರು. ಮಾಸಿಕ 150–200 ವ್ಯಕ್ತಿಗಳಿಗೆ ಕ್ಲಿನಿಕ್ ಸೇವೆ ಒದಗಿಸುತ್ತಿತ್ತು. ಗಮನಾರ್ಹವಾಗಿ, ಕ್ಲಿನಿಕ್ ಏಳು ಟ್ರಾನ್ಸ್‌ಜೆಂಡರ್ ಸಿಬ್ಬಂದಿಯನ್ನು ನೇಮಿಸಿಕೊಂಡಿತ್ತು. ಅವರಿಗೆ ಉದ್ಯೋಗ ಮತ್ತು ಸಮುದಾಯದ ಪ್ರಜ್ಞೆಯನ್ನು ನೀಡಿತ್ತು.
ಟ್ರಾನ್ಸ್‌ಜೆಂಡರ್ ಕ್ಲಿನಿಕ್ ನೋಂದಾಯಿಸಿಕೊಂಡ ಒಟ್ಟು ರೋಗಿಗಳಲ್ಲಿ ಶೇಖಡ 6ರಷ್ಟು ಜನರು ಹೆಚ್‌ಐವಿ ಪಾಸಿಟಿವ್ ದೃಢಪಟ್ಟವರು ಇದ್ದರು. ಈ ಪೈಕಿ ಶೇಖಡ 83ರಷ್ಟು ಮಂದಿ ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ಚಿಕಿತ್ಸೆ ಪಡೆಯುತ್ತಿದ್ದರು. ಈ ಮಾಹಿತಿ ಕ್ಲಿನಿಕ್‌ನ ಮಹತ್ವವನ್ನು ಒತ್ತಿ ಹೇಳುತ್ತದೆ.
ಯುಎಸ್‌ಏಡ್‌ನ ಎಲ್ಲಾ ವಿದೇಶಿ ನೆರವುಗಳನ್ನು ಸ್ಥಗಿತಗೊಳಿಸುವ ಟ್ರಂಪ್ ಆದೇಶ ಜಗತ್ತಿನಾದ್ಯಂತ ವಿವಿಧ ಮಹತ್ವದ ಯೋಜನೆಗಳ ಮೇಲೆ ಭವಿಷ್ಯದಲ್ಲಿ ದೊಡ್ಡ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.
ಟ್ರಂಪ್ ಅವರ ಇಂತಹ ನೀತಿಗಳು ವಿಶ್ವದಾದ್ಯಂತ ದುರ್ಬಲ ಜನಸಂಖ್ಯೆಯ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರುತ್ತವೆ. ‘ಮಿತ್ರ್ ಕ್ಲಿನಿಕ್’ ಮುಚ್ಚುವಿಕೆಯು ಅದನ್ನು ಎತ್ತಿ ತೋರಿಸಿದೆ. ಕ್ಲಿನಿಕ್ ಮುಚ್ಚಿದ್ದರಿಂದ ಸಾವಿರಾರು ಜನರು ನಿರ್ಣಾಯಕ ಆರೋಗ್ಯ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ. ಅದರ ಸಿಬ್ಬಂದಿ ನಿರುದ್ಯೋಗಿಗಳಾಗಿದ್ದಾರೆ.
ಕ್ಲಿನಿಕ್‌ನಲ್ಲಿ ಕೆಲವು ಜೀವ ಉಳಿಸುವ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಮುಂದುವರಿಸಲು ಅನುಮತಿಸಲಾಗಿದೆಯಾದರೂ, ಟ್ರಾನ್ಸ್‌ಜೆಂಡರ್ ಸಮುದಾಯದ ಮೇಲೆ ಕ್ಲಿನಿಕ್ ಮುಚ್ಚುವಿಕೆ ದೀರ್ಘಕಾಲೀನ ಪರಿಣಾಮ ಬೀರಿಲಿದೆ ಎಂದು ವರದಿಗಳು ಹೇಳಿವೆ.
ಕ್ಲಿನಿಕ್ ಸ್ಥಗಿತಕ್ಕೆ ಎಲಾನ್ ಮಸ್ಕ್ ಪ್ರತಿಕ್ರಿಯೆ
ಭಾರತದ ಮೊಟ್ಟ ಮೊದಲ ಟ್ರಾನ್ಸ್‌ಜೆಂಡರ್ ಆರೋಗ್ಯ ಸೌಲಭ್ಯ, ‘ಮಿತ್ರ್ ಕ್ಲಿನಿಕ್’ ಮುಚ್ಚಿದೆ ಎಂಬ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಉದ್ಯಮಿ ಹಾಗೂ ಅಮೆರಿಕದ ಸರ್ಕಾರಿ ದಕ್ಷತೆಯ ಇಲಾಖೆಯ ಮುಖ್ಯಸ್ಥ ಎಲಾನ್ ಮಸ್ಕ್, “ಅದಕ್ಕೆ ಅಮೆರಿಕದ ತೆರಿಗೆದಾರರ ಹಣವನ್ನು ಬಳಸಲಾಗುತ್ತಿತ್ತು” ಎಂದು ಹೇಳಿದ್ದಾರೆ. ಇದು ಭಾರೀ ಟೀಕೆಗೆ ಕಾರಣವಾಗಿದೆ. ” “ಹಾಗಾದರೆ ಆರೋಗ್ಯ ಸೇವೆಗೆ ಹಣ ವ್ಯಯಿಸುವುದು ವ್ಯರ್ಥವೇ?” ಎಂದು ಹಲವು ಪ್ರಶ್ನಿಸಿದ್ದಾರೆ.
That’s what American tax dollars were funding https://t.co/E4IQSoj9NV
— Elon Musk (@elonmusk) February 28, 2025


