ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರನ್ನು ಬುಧವಾರ (ಜನವರಿ 8, 2025) ದುಬೈನಲ್ಲಿ ಭೇಟಿಯಾಗಿದ್ದಾರೆ.
ತಾಲಿಬಾನ್ ಸರ್ಕಾರದ ಸಚಿವರೊಂದಿಗೆ ವಿದೇಶಾಂಗ ಕಾರ್ಯದರ್ಶಿ ಮಾತುಕತೆ ನಡೆಸಿರುವುದನ್ನು ಇದೇ ಮೊದಲ ಬಾರಿಗೆ ಭಾರತ ಬಹಿರಂಗವಾಗಿ ಒಪ್ಪಿಕೊಂಡಿದೆ. 2021ರಲ್ಲಿ ಅಫ್ಘಾನಿಸ್ತಾವನ್ನು ತಾಲಿಬಾನ್ ನಿಯಂತ್ರಣಕ್ಕೆ ಪಡೆದ ಬಳಿಕ, ಇದೇ ಮೊದಲ ಬಾರಿಗೆ ಭಾರತದೊಂದಿಗೆ ಮಾತುಕತೆ ನಡೆಸಿದೆ ಎಂದು ವರದಿಗಳು ಹೇಳಿವೆ.
ಅಫ್ಗಾನಿಸ್ತಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಾಮಗ್ರಿಗಳ ಪೂರೈಕೆ ಸಂಬಂಧ ಈ ವೇಳೆ ಉಭಯ ದೇಶಗಳ ಪ್ರತಿನಿಧಿಗಳು ಮಾತುಕತೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.
“ಭಾರತದ ಮಹತ್ವದ ಪ್ರಾದೇಶಿಕ ಮತ್ತು ಆರ್ಥಿಕ ಪಾಲುದಾರ” ಎಂದು ತಾಲಿಬಾನ್ ಹೇಳಿಕೊಂಡಿದೆ.
“ಅಫ್ಘಾನಿಸ್ತಾನದೊಂದಿಗಿನ ಸಂಬಂಧವನ್ನು ವಿಸ್ತರಿಸುವ ಮತ್ತು ಇರಾನ್‌ನ ಚಾಬಹಾರ್ ಬಂದರಿನ ಮೂಲಕ ವ್ಯಾಪಾರವನ್ನು ಹೆಚ್ಚಿಸುವ ಬಗ್ಗೆ ಭಾರತ ಚರ್ಚೆ ನಡೆಸಿದೆ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
“ಅಫ್ಘಾನಿಸ್ತಾನದ ಸಮತೋಲಿತ ಮತ್ತು ಆರ್ಥಿಕ ಕೇಂದ್ರಿತ ವಿದೇಶಾಂಗ ನೀತಿಗೆ ಅನುಗುಣವಾಗಿ, ಇಸ್ಲಾಮಿಕ್ ಎಮಿರೇಟ್ ಭಾರತದೊಂದಿಗೆ ಮಹತ್ವದ ಪ್ರಾದೇಶಿಕ ಮತ್ತು ಆರ್ಥಿಕ ಪಾಲುದಾರನಾಗಿ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ” ಎಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯ ಬುಧವಾರ ತಡರಾತ್ರಿ ಹೇಳಿಕೆಯಲ್ಲಿ ವಿವರಿಸಿದೆ.
ಭಾರತವು ತನ್ನ ಪ್ರತಿಸ್ಪರ್ಧಿ ಪಾಕಿಸ್ತಾನದ ಕರಾಚಿ ಮತ್ತು ಗ್ವಾದರ್ ಬಂದರುಗಳನ್ನು ಬೈಪಾಸ್ ಮಾಡಿ ಸರಕು ಸಾಗಾಟ ಮಾಡಲು ಚಾಬಹಾರ್ ಬಂದರನ್ನು ಅಭಿವೃದ್ಧಿಪಡಿಸುತ್ತಿದೆ.
ಇದನ್ನೂ ಓದಿ : ಶೀಶ್ ಮಹಲ್ to ರಾಜ್‌ಮಹಲ್ : ಏನಿದು ದೆಹಲಿಯ ಬಂಗಲೆ ಗಲಾಟೆ?


