“ಗಾಝಾ ಪಟ್ಟಿಯನ್ನು ಅಮೆರಿಕ ವಶಕ್ಕೆ ಪಡೆದುಕೊಂಡು ಅಭಿವೃದ್ದಿಪಡಿಸಲಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬಳಿಕವೂ “ಪ್ಯಾಲೆಸ್ತೀನ್ ಕುರಿತ ಭಾರತದ ದೀರ್ಘಕಾಲದ ನಿಲುವು ಬದಲಾಗಿಲ್ಲ” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಶುಕ್ರವಾರ (ಫೆಬ್ರವರಿ 7) ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಶ್ರಿ, “ಗಾಝಾ ಪಟ್ಟಿ, ಪ್ಯಾಲೆಸ್ತೀನ್ ಬಗ್ಗೆ ಭಾರತದ ನಿಲುವು ಏನೆಂದು ನಿಮಗೆ ಗೊತ್ತಿದೆ. ಅದು ದೀರ್ಘಕಾಲದ ನಿಲುವು, ಬದಲಾಗಿಲ್ಲ” ಎಂದಿದ್ದಾರೆ.
ಗಾಝಾ ಪಟ್ಟಿಯಿಂದ ಪ್ಯಾಲೆಸ್ತೀನಿಯರನ್ನು ಹೊರದಬ್ಬಿ, ಆ ಪ್ರದೇಶವನ್ನು ಅಮೆರಿಕ ತನ್ನ ವಶಕ್ಕೆ ಪಡೆಯಲಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಬಗ್ಗೆ ಭಾರತದ ನಿಲುವು ಏನು ಎಂದು ಕೇಳಿದ ಪ್ರಶ್ನೆಗೆ ಮಿಶ್ರಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
“ಎರಡೂ ಕಡೆಯವರು (ಇಸ್ರೇಲ್- ಪ್ಯಾಲೆಸ್ತೀನ್) ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸುರಕ್ಷಿತ, ಮಾನ್ಯತೆ ಪಡೆದ ಗಡಿಗಳೊಂದಿಗೆ ಇಸ್ರೇಲ್‌ನೊಂದಿಗೆ ಶಾಂತಿಯುತವಾಗಿ ಸಹಬಾಳ್ವೆ ನಡೆಸುವ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ಪ್ಯಾಲೆಸ್ತೀನ್ ರಾಷ್ಟ್ರ ರಚನೆಯಾಗಬೇಕು. ಇದು ಪ್ಯಾಲೆಸ್ತೀನ್ ಕುರಿತ ಭಾರತದ ದೀರ್ಘಕಾಲದ ನಿಲುವು” ಎಂದು ಮಿಶ್ರಿ ಹೇಳಿದ್ದಾರೆ.
ಆದರೆ, ಗಾಝಾ ಜನತೆಯನ್ನು ಅವರ ಜನ್ಮ ನಾಡಿನಿಂದ ಹೊರದಬ್ಬಿ, ಆ ಪ್ರದೇಶವನ್ನು ಅಮೆರಿಕದ ತೆಕ್ಕೆಗೆ ಪಡೆಯುವ ಟ್ರಂಪ್ ಹೇಳಿಕೆ ದ್ವಿರಾಷ್ಟ್ರ ರಚನೆ ಪ್ರಸ್ತಾವದ ಅಂತ್ಯವನ್ನು ಸೂಚಿಸುತ್ತದೆ.
ದ್ವಿರಾಷ್ಟ್ರ ರಚನೆಯನ್ನು ಈ ಹಿಂದೆ ಸಾರ್ವಜನಿಕವಾಗಿ ವಿರೋಧಿಸಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲೇ ಟ್ರಂಪ್ ಹೇಳಿಕೆ ನೀಡಿರುವುದು ಕೂಡ ಗಮನಾರ್ಹ.
“ಗಾಝಾವನ್ನು ಯುದ್ಧದ ಬಳಿಕ ಇಸ್ರೇಲ್ ನಮಗೆ ಹಸ್ತಾಂತರಿಸಲಿದೆ. ಅದನ್ನು ವಶಪಡಿಸಿಕೊಳ್ಳಲು ಅಮೆರಿಕ ಸೇನೆಯ ಅಗತ್ಯವಿಲ್ಲ” ಎಂದು ಟ್ರಂಪ್ ಮತ್ತೊಂದು ಹೇಳಿಕೆ ನೀಡಿದ್ದಾರೆ. ಈ ಎಲ್ಲಾ ಹೇಳಿಕೆಗಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಹಮತ ಸೂಚಿಸಿರುವುದು ಆತಂಕವನ್ನು ಸೃಷ್ಟಿಸಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳು ಟ್ರಂಪ್ ಹೇಳಿಕೆಯನ್ನು ಖಂಡಿಸಿವೆ. ಪ್ಯಾಲೆಸ್ತೀನ್ ಸ್ವತಂತ್ರ ರಾಷ್ಟ್ರ ರಚನೆಯನ್ನು ಬೆಂಬಲಿಸಿವೆ.
ಅಮೆರಿಕದ ನೆರವನ್ನು ಸ್ವೀಕರಿಸುತ್ತಿರುವ, ಅದರ ಜೊತೆ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಿರುವ ಈಜಿಫ್ಟ್ ಟ್ರಂಪ್ ಹೇಳಿಕೆಯನ್ನು ಖಂಡಿಸಿದೆ. ಪ್ಯಾಲೆಸ್ತೀನಿಯರು ತಮ್ಮ ನಾಡನ್ನು ತೊರೆಯುವಂತೆ ಒತ್ತಾಯಿಸುವುದನ್ನು ಒಪ್ಪುವುದಿಲ್ಲ ಎಂದು ಈಜಿಫ್ಟ್ ಹೇಳಿದೆ. ಗಾಝಾದ ಜನತೆಗೂ ನೆರವು ನೀಡುತ್ತಿರುವ ಪ್ರಮುಖ ರಾಷ್ಟ್ರಗಳಲ್ಲಿ ಈಜಿಫ್ಟ್ ಕೂಡ ಒಂದು.
ಮುಂದಿನ ವಾರ ಜೋರ್ಡಾನ್ ರಾಜ ಅಬ್ದುಲ್ಲಾ ಅವರು ಡೊನಾಲ್ಟ್ ಟ್ರಂಪ್ ಅವರನ್ನ ಭೇಟಿಯಾಗಲಿದ್ದಾರೆ. ಅದಕ್ಕೂ ಮುನ್ನ ಗಾಝಾ ವಶಪಡಿಸಿಕೊಳ್ಳುವ ಟ್ರಂಪ್ ಹೇಳಿಕೆಯನ್ನು ವಿರೋಧಿಸಿದ್ದಾರೆ. ಜೋರ್ಡಾನ್ ಕೂಡ ಅಮೆರಿಕದ ಜೊತೆ ಉತ್ತಮ ಸಂಬಂಧ ಹೊಂದಿದೆ. ಗಾಝಾ ಜನತೆಗೆ ನೆರವು ನೀಡುತ್ತಿರುವ ಮತ್ತು ಕದನ ವಿರಾಮ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾಷ್ಟ್ರವಾಗಿದೆ.
ಅಕ್ಟೋಬರ್ 7, 2023ರಿಂದ ಗಾಝಾದಲ್ಲಿ ಇಸ್ರೇಲ್ ನಡೆಸಿದ ನರಮೇಧದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮಗಳು 45,500 ಜನರಷ್ಟೇ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡುತ್ತಿವೆ. ಆದರೆ, ಗಾಝಾದ ಕುರಿತು ನಿರಂತರ ಸುದ್ದಿ ಬಿತ್ತರಿಸುವ ಅಲ್-ಜಝೀರಾ ಸುದ್ದಿ ಸಂಸ್ಥೆ ಹಮಾಸ್ ಆರೋಗ್ಯ ಇಲಾಖೆಯನ್ನು ಉಲ್ಲೇಖಿಸಿ 60 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದಾಗಿ ಹೇಳಿದೆ.
ಕದನ ವಿರಾಮದ ಬಳಿಕ ದಕ್ಷಿಣ ಗಾಝಾದಿಂದ ಸುಮಾರು 3 ಲಕ್ಷಕ್ಕಿಂತಲೂ ಅಧಿಕ ಜನರು ಉತ್ತರ ಗಾಝಾದ ಮೂಲ ಸ್ಥಳಗಳಿಗೆ ಬಂದಿದ್ದಾರೆ. ಉತ್ತರ ಗಾಝಾವನ್ನು ಇಸ್ರೇಲ್ ಸಂಪೂರ್ಣ ನಾಶ ಮಾಡಿದೆ. ಅಲ್ಲಿ ಕಟ್ಟಡಗಳ ಅವಶೇಷಗಳಡಿ ಸಾವಿರಾರು ಮೃತದೇಹಗಳು ಸಿಗುತ್ತಿವೆ. ಇದರಿಂದ ಸಾವನ್ನಪ್ಪಿದವರ ಸಂಖ್ಯೆ ಹಠಾತ್ ಏರಿಕೆಯಾಗಿದೆ ಎಂದು ಅಲ್-ಜಝೀರಾ ವರದಿ ತಿಳಿಸಿದೆ.
ರಾಷ್ಟ್ರ ವಿರೋಧಿ ಹೇಳಿಕೆ ಆರೋಪ | ರಾಹುಲ್ ಗಾಂಧಿ ವಿರುದ್ಧ ಒಡಿಶಾದಲ್ಲಿ ಎಫ್‌ಐಆರ್


