ಸಾವಿರಾರು ವರ್ಷಗಳ ಇತಿಹಾಸವಿರುವ ಒಲಿಂಪಿಕ್ಸ್ ಕ್ರೀಡಾಕೂಟ ಜಗತ್ತಿನ ಅತಿ ಜನಪ್ರಿಯ ಮತ್ತು ಹೆಚ್ಚು ವರದಿಯಾಗುವ ಅಂತಾರಾಷ್ಟ್ರೀಯ ಕ್ರೀಡಾಕೂಟ ಎಂಬುದರಲ್ಲಿ ಎರಡು ಮಾತಿಲ್ಲ. ಈ ಕ್ರೀಡಾಕೂಟದಲ್ಲಿ ಕನಿಷ್ಠ ಒಂದು ಪದಕವನ್ನಾದರೂ ಗಳಿಸಬೇಕು ಎಂಬುದು ಎಲ್ಲಾ ದೇಶಗಳ ಮಹತ್ವಾಕಾಂಕ್ಷೆಯಾಗಿರುತ್ತದೆ. ಇನ್ನೂ ಒಲಿಂಪಿಕ್ಸ್ ಪದಕ ಗಳಿಸುವುದು ಕ್ರೀಡಾಪಟುಗಳ ಪಾಲಿಗೆ ಜೀವನದ ಕನಸಾಗಿರುತ್ತದೆ.
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಸಾಹಸವೇ ಸರಿ. ದ್ವಿತೀಯ ಮಹಾಯುದ್ಧದ ನಂತರ ಯಾವುದೇ ಸಾಂಪ್ರದಾಯಿಕವಾದ ನೇರ ಯುದ್ಧದಲ್ಲಿ ಮುಖಾಮುಖಿಯಾಗಲಾರದ ಅಮೆರಿಕ, ರಷ್ಯಾ, ಜಪಾನ್, ಚೀನಾ, ಜರ್ಮನಿ ಸೇರಿದಂತೆ ಅನೇಕ ಮುಂದುವರೆದ ರಾಷ್ಟ್ರಗಳ ಪಾಲಿಗೆ ಒಲಿಂಪಿಕ್ಸ್ ಕ್ರೀಡಾಕೂಟ ಯುದ್ಧಭೂಮಿಯೇ ಆಗಿದೆ ಎಂದರೆ ಅತಿಶಯೋಕ್ತಿಯೇನಲ್ಲ.
ಇದೇ ಕಾರಣಕ್ಕೆ ಈ ಎಲ್ಲಾ ದೇಶಗಳೂ, ಪ್ರತಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಡಜನ್‌ಗಟ್ಟಲೆ ಪದಕಗಳನ್ನು ಗೆಲ್ಲುವ ಕಡೆಗೆ ಗಮನವಹಿಸುತ್ತವೆ. ಆದರೆ, ಭಾರತದಂತಹ ಮುಂದುವರೆಯುತ್ತಿರುವ ರಾಷ್ಟ್ರಗಳ ಪಾಲಿಗೆ ಕ್ರೀಡಾಪಟುವೊಬ್ಬ ಒಂದು ವೈಯಕ್ತಿಕ ಪದಕವನ್ನು ಗೆಲ್ಲುವುದೂ ಸಹ ಸಾಧನೆಯೇ ಸರಿ ಎಂಬಂತಾಗಿರುವುದು ವಿಪರ್ಯಾಸ!

ಭಾರತದ ಒಲಿಂಪಿಕ್ಸ್ ಸಾಧನೆಯ ಕಡೆಗೆ ಗಮನ ಹರಿಸಿದರೆ ಪದಕ ಗಳಿಸಿದ ಸಂಖ್ಯೆ ಕಡಿಮೆಯೇ. ಅದಕ್ಕೆ ಕಾರಣಗಳೂ ನೂರೆಂಟಿವೆ. ಅಸಲಿಗೆ ಭಾರತವು 1900ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿತು. ಆ ವರ್ಷ ಭಾರತದಿಂದ ಸ್ಪರ್ಧಿಸಿದ ಏಕೈಕ ಕ್ರೀಡಾಪಟು ನಾರ್ಮನ್ ಪಿಚ್ಚರ್ಡ್.
ಬ್ರಿಟಿಷ್ ಮೂಲದ, ಕೊಲ್ಕತ್ತಾದಲ್ಲಿ ಜನಿಸಿದ್ದ ನಾರ್ಮನ್ ಪಿಚರ್ಡ್ ಅಥ್ಲೆಟಿಕ್ಸ್‌ನಲ್ಲಿ ಎರಡು ಬೆಳ್ಳಿಯ ಪದಕಗಳನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದರೂ ಸಹ ನಂತರದ ದಿನಗಳಲ್ಲಿ ಭಾರತ ಕ್ರೀಡಾಪಟುಗಳ ವೈಯಕ್ತಿಕ ಸಾಧನೆಯಲ್ಲಿ ಪದಕ ಗೆಲ್ಲಲು ಒಂದು ಶತಮಾನವೇ ಕಾಯಬೇಕಾದಂತಹ ಪರಿಸ್ಥಿತಿ ಎದುರಾದದ್ದು ವಿಪರ್ಯಾಸ. ಆದರೆ, ವಿಶ್ವ ಹಾಕಿಯಲ್ಲಿ ಮಾತ್ರ ಭಾರತದ್ದು ಅಚ್ಚಳಿಯದ ಸಾಧನೆ ಇದೆ.
1920ರಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತವು ಮೊದಲ ಬಾರಿಗೆ ಗುಂಪು ಸ್ಪರ್ಧೆಯಾದ ಹಾಕಿಗೆ ತಂಡವನ್ನು ಕಳುಹಿಸಿತ್ತು. ಒಂದು ಕಾಲದಲ್ಲಿ, ಸುಮಾರು ವರ್ಷಗಳ ಕಾಲ, ಭಾರತದ ರಾಷ್ಟ್ರೀಯ ಹಾಕಿ ತಂಡವು ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಬಲಿಷ್ಠ ತಂಡವಾಗಿತ್ತು. 1920 ಮತ್ತು 1989ರ ನಡುವೆ ನಡೆದ ಹನ್ನೆರಡು ಒಲಿಂಪಿಕ್ಸ್‌ನಲ್ಲಿ ಹನ್ನೊಂದು ಬಾರಿ ಪದಕ ಗೆದ್ದ ಹಿರಿಮೆ ಭಾರತಕ್ಕಿದೆ. ಇದರಲ್ಲಿ ಒಟ್ಟು 8 ಚಿನ್ನದ ಪದಕಗಳು. 1928-1956ರವರೆಗೆ ಸತತ ಆರು ಚಿನ್ನದ ಪದಕಗಳನ್ನು ಭಾರತ ಗೆದ್ದಿತ್ತು ಎಂಬುದು ಇತಿಹಾಸ.
ಆದರೂ, ವೈಯಕ್ತಿಕ ಸಾಧನೆಯ ವಿಭಾಗದಲ್ಲಿ ಚಿನ್ನದ ಕನಸನ್ನು ಪೂರೈಸಲು ಅಭಿನವ್ ಬಿಂದ್ರಾ ಅವರೇ ಬರಬೇಕಾಗಿತ್ತು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ, ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಚಿನ್ನ ಗೆಲ್ಲುವ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದೇ ವರ್ಷ ವಿಜೇಂದರ್ ಸಿಂಗ್ ಮಿಡಲ್ ವೇಟ್ ವಿಭಾಗದಲ್ಲಿ ಕಂಚಿನ ಪದಕದೊಂದಿಗೆ ಬಾಕ್ಸಿಂಗ್‌ನಲ್ಲಿ ದೇಶಕ್ಕೆ ಮೊದಲ ಪದಕವನ್ನು ತಂದುಕೊಟ್ಟರು.
2012ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ 83 ಸದಸ್ಯರ ಭಾರತೀಯ ತಂಡವು ವಿವಿಧ ಆಟಗಳಲ್ಲಿ ಭಾಗವಹಿಸಿ ಒಟ್ಟು ದಾಖಲೆಯ ಆರು ಪದಕಗಳೊಂದಿಗೆ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಉತ್ತಮ ಸಾಧನೆ ಮಾಡಿತು. 1900ರಲ್ಲಿ ನಾರ್ಮನ್ ಪ್ರಿಚರ್ಡ್ ನಂತರ, ಕುಸ್ತಿಪಟು ಸುಶೀಲ್ ಕುಮಾರ್ ಒಂದಕ್ಕಿಂತ ಹೆಚ್ಚು ವೈಯಕ್ತಿಕ ಒಲಿಂಪಿಕ್ ಪದಕಗಳನ್ನು (2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಮತ್ತು 2012 ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ) ಪಡೆದ ಮೊದಲ ಭಾರತೀಯ ಎಂದು ಖ್ಯಾತರಾದರು.
ಅದೇವರ್ಷ ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದರು. ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಸಿಕ್ಕ ಮೊದಲ ಒಲಿಂಪಿಕ್ ಪದಕ ಇದಾಗಿತ್ತು. ಮಹಿಳಾ ಫ್ಲೈವೇಯ್ಟ್‌ನಲ್ಲಿ ಕಂಚಿನ ಪದಕ ಗೆದ್ದು, ಬಾಕ್ಸಿಂಗ್ ಕ್ರೀಡೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಮೇರಿ ಕೋಮ್ ಪಾತ್ರರಾದರು.
2016ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ದಾಖಲೆಯ 117 ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಮಹಿಳಾ ಫ್ರೀಸ್ಟೈಲ್ 58 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದು, ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶಟ್ಲರ್ ಪಿ.ವಿ. ಸಿಂಧು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಮತ್ತು ಭಾರತದ ಅತ್ಯಂತ ಕಿರಿಯ ಒಲಿಂಪಿಕ್ಸ್ ಪದಕ ವಿಜೇತ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವರ್ಷ ಮತ್ತೆ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಿದೆ. ಯಾವ ಯಾವ ಆಟಗಾರರ ಮೇಲೆ ನಿರೀಕ್ಷೆ ಇದೆ? ಭಾರತ ಯಾವ ಕ್ರೀಡೆಗಳಲ್ಲಿ ಪದಕ ಗೆಲ್ಲುವ ಭರವಸೆ ಇದೆ?
ಭಾರತದ ಪದಕ ಗಳಿಕೆಯ ರೇಸ್ ವೇಗ ಪಡೆಯುವುದೇ?
ಈ ಹಿಂದಿನ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ 117 ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದು ಸಾಧನೆಯಾಗಿತ್ತು. ಆದರೆ, ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ 127 ಭಾರತದ ಕ್ರೀಡಾಪಟುಗಳು ಭಾಗವಹಿಸಲಿದ್ದು ಹಿಂದಿನ ಬಾರಿಯ ಕ್ರೀಡಾಕೂಟಕ್ಕಿಂತ ಭಾಗವಹಿಸುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚೇನಾಗಿಲ್ಲ. ಈ ಪೈಕಿ 67 ಪುರುಷರು ಮತ್ತು 52 ಮಹಿಳಾ ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಭಾರತದ ಒಲಿಂಪಿಕ್ಸ್ ತಂಡದಲ್ಲಿ ಸ್ಥಾನ ಪಡೆದಿರುವ 45 ವರ್ಷದ ಸ್ಕೀಟ್ ಶೂಟರ್ ಮೈರಾಜ್ ಅಹಮದ್ ಖಾನ್ ಅತ್ಯಂತ ಹಿರಿಯ ಕ್ರೀಡಾಪಟುವಾದರೆ, 18 ವರ್ಷದ 10 ಮೀಟರ್ ಏರ್ ರೈಫಲ್ ಶೂಟರ್ ದಿವ್ಯಾಂಶ್ ಸಿಂಗ್ ಪನ್ವಾರ್ ಅತ್ಯಂತ ಕಿರಿಯ ಕ್ರೀಡಾರ್ಥಿ.
ಈ ಬಾರಿಯ ಒಲಿಂಪಿಕ್ಸ್‌ನಲ್ಲಿಯೂ ಪುರುಷರ ಹಾಕಿ ತಂಡದ ಮೇಲೆ ಸಾಕಷ್ಟು ನಿರೀಕ್ಷೆ ಮತ್ತು ವಿಶ್ವಾಸ ಇದೆ. ನಾಯಕ ಮನ್ಪ್ರೀತ್ ನೇತೃತ್ವದ ಹಾಕಿ ತಂಡ ಇತರೆ ತಂಡಗಳಿಗಿಂತ ಸಾಕಷ್ಟು ಬಲಿಷ್ಠವಾಗಿದೆ. ಹೀಗಾಗಿ ಭಾರತವೇ ಈ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಫೇವರಿಟ್ ತಂಡ ಎನ್ನಲಾಗುತ್ತಿದೆ. ಭಾರತದ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೈ ಸಹ ಭಾರತ ಈ ಬಾರಿ ಪದಕ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ, ಈ ವರ್ಷದ ಒಲಿಂಪಿಕ್ಸ್ ಹಾಕಿ ತಂಡದಲ್ಲಿ ಕರ್ನಾಟಕದ ಒಬ್ಬ ಹಾಕಿಪಟುವೂ ಸ್ಥಾನ ಪಡೆದಿಲ್ಲ ಎಂಬುದು ತುಸು ಬೇಸರದ ಸಂಗತಿಯೇ ಹೌದು. ಕರ್ನಾಟಕದ ಹಾಕಿಪಟುಗಳು ಒಂದು ಕಾಲದಲ್ಲಿ ಭಾರತ ಹಾಕಿ ತಂಡದ ಬೆನ್ನೆಲುಬಾಗಿದ್ದರು ಎಂಬುದು ಉಲ್ಲೇಖಾರ್ಹ. ಇದಲ್ಲದೆ, ರಾಣಿ ರಾಂಪಾಲ್ ನೇತೃತ್ವದ ಮಹಿಳಾ ಹಾಕಿ ತಂಡದ ಮೇಲೂ ಸಾಕಷ್ಟು ವಿಶ್ವಾಸವಿದೆ.
ಹಾಕಿ ನಂತರದ ಭಾರತದ ಭರವಸೆ ಬ್ಯಾಡ್ಮಿಂಟನ್ ತಂಡದ ಮೇಲಿದೆ ಎಂದರೂ ತಪ್ಪಾಗಲಾರದು. ಮಾಜಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ನೇತೃತ್ವದ ತಂಡದಲ್ಲಿ ಬಿ. ಸಾಯಿಪ್ರಣೀತ್, ಸಾತ್ವಿಕ್ ಸಾಯಿರಾಜ್, ಚಿರಾಗ್ ಶೆಟ್ಟಿ, ರಾಂಕಿರೆಡ್ಡಿ ಸ್ಥಾನ ಪಡೆದಿದ್ದು, ಈ ವಿಭಾಗದಲ್ಲಿ ಖಚಿತವಾಗಿ ಪದಕ ಬರುವ ನಿರೀಕ್ಷೆ ಇದೆ.
ಬಾಕ್ಸಿಂಗ್ ಪುರುಷರ ಗುಂಪಿನಲ್ಲಿ 91 ಕೆಜಿ ವಿಭಾಗದಲ್ಲಿ ಸತೀಶ್ ಕುಮಾರ್, 75 ಕೆಜಿ ವಿಭಾಗದಲ್ಲಿ ಆಶೀಶ್ ಕುಮಾರ್ ಪದಕದ ಪೈಪೋಟಿಯಲ್ಲಿದ್ದರೆ, 69 ಕೆಜಿ ಮಹಿಳಾ ವಿಭಾಗದಲ್ಲಿ ಲೋಲಿನಾ ಬೋರ್ಗೊಹೇನ್, 75 ಕೆಜಿ ವಿಭಾಗದಲ್ಲಿ ಪೂಜಾ ರಾಣಿ ಪದಕ ಗೆಲ್ಲುವ ಫೇವರಿಟ್ ಕ್ರೀಡಾಪಟುಗಳು ಎಂದು ಬಿಂಬಿಸಲಾಗಿದೆ. ಇನ್ನೂ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಹೆಮ್ಮೆ ಮೇರಿ ಕೋಮ್ ಈ ವರ್ಷವೂ ವಿಶ್ವ ಬಾಕ್ಸಿಂಗ್ ರಿಂಗ್‌ನ ಕೇಂದ್ರ ಬಿಂದು ಎಂದರೆ ತಪ್ಪಾಗಲಾರದು.
50 ಮೀಟರ್ ಮಹಿಳಾ ರೈಫಲ್ ಶೂಟಿಂಗ್‌ನಲ್ಲಿ ಅಂಜುಮ್ ಮೌದ್ಗಿಲ್ ಮತ್ತು ತೇಜಸ್ವಿನಿ ಸಾವಂತ್ ಸ್ಪರ್ಧಿಸುತ್ತಿದ್ದರೆ, 10 ಮೀಟರ್ ರೈಫಲ್ ಶೂಟಿಂಗ್‌ನಲ್ಲಿ ಅಪೂರ್ವಿ ಚಂಡೇಲಾ, ಎಲಾವೆನಿಲ್ ವಲರಿವನ್, ಮನು ಭಾಕರ್, ಯಶಸ್ವಿನಿ ಸಿಂಗ್ ದೇಸ್ವಾಲ್ ಮೇಲೆ ಸಾಕಷ್ಟು ಭರವಸೆ ಇದೆ. ಅದೇ ರೀತಿ ಎಲವೆನಿಲ್ ವಲರಿವನ್, 25 ಮೀ ಪಿಸ್ತೂಲ್‌ನಲ್ಲಿ ರಾಹಿ ಸರ್ನೊಬತ್ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
ಇನ್ನು ಟೆನಿಸ್ ಮಹಿಳಾ ಡಬಲ್ಸ್‌ನಲ್ಲಿ ಅಂಕಿತಾ ರಾಣಿ ಜೊತೆಗೆ ಸಾನಿಯಾ ಮಿರ್ಜಾ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಸಮಿತ್ ನಗಲ್ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೂ ಸಾನಿಯಾ ಮಿರ್ಜಾ ಜೋಡಿ ಸಾಮಾನ್ಯವಾಗಿಯೇ ಎಲ್ಲರ ಕೇಂದ್ರ ಬಿಂದುವಾಗಿದೆ. ಆದರೆ, ಪುರುಷರ ಡಬಲ್ಸ್‌ನಲ್ಲಿ ಮಹೇಶ್ ಭೂಪತಿ ಕಣಕ್ಕೆ ಇಳಿಯದೇ ಇರುವುದು ಟೆನಿಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಕುಸ್ತಿ ಸ್ಪರ್ಧೆಯಲ್ಲಿ 86 ಕೆಜಿ ವಿಭಾಗದಲ್ಲಿ ದೀಪಕ್ ಪುನಿಯ 57 ಕೆಜಿಯಲ್ಲಿ ರವಿಕುಮಾರ್ ದಹಿಯಾ, 65 ಕೆಜಿಯಲಿ ಬಜರಂಗ ಪುನಿಯ, ಮಹಿಳೆಯರ 53 ಕೆಜಿ ವಿಭಾಗದಲ್ಲಿ ವಿನೇಶ್ ಪೋಗಾಟ್, 50 ಕೆಜಿಯಲ್ಲಿ ಸೀಮಾ ಬಿಸ್ಲಾ, 57 ಕೆಜಿ ಅನ್ಷು ಮಲ್ಲಿಕ್, 62ಕೆಜಿಯಲ್ಲಿ ಸೋನಮ್ ಮಲ್ಲಿಕ್ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
ಆರ್ಚರ್‌ಗಳಾದ ದೀಪಿಕಾ ಕುಮಾರಿ ಹಾಗೂ ಅತನು ದಾಸ್, ಟೇಬಲ್ ಟೆನ್ನಿಸ್ ಆಟಗಾರರಾದ ಜಿ ಸಥಿಯನ್ ಹಾಗೂ ಎ ಶರತ್ ಕಮಾಲ್ ಜಿಮ್ನ್ಯಾಸ್ಟಿಕ್ ಪಟು ಪ್ರಣತಿ ನಾಯಕ್ ಈ ಬಾರಿ ತಮ್ಮ ಸಾಮರ್ಥ್ಯವನ್ನು ಪಣಕ್ಕೆ ಒಡ್ಡಲಿದ್ದಾರೆ.
ಈಜು ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಶ್ರೀಹರಿ ನಟರಾಜ್ ಮತ್ತು ಸಾಜನ್ ಪ್ರಕಾಶ್ ಹಾಗೂ ಮಹಿಳೆಯರ ವಿಭಾಗದಲ್ಲಿ ಮಾನಾ ಪಟೇಲ್ ಪದಕಕ್ಕಾಗಿ ಮೊದಲ ಬಾರಿಗೆ ಸೆಣಸಲಿದ್ದಾರೆ.
ಓಟದಲ್ಲಿ ಮಹಿಳೆಯರ ವಿಭಾಗದಲ್ಲಿ ದ್ಯುತಿ ಚಾಂದ್ ಮತ್ತು ಪುರುಷರ ವಿಭಾಗದಲ್ಲಿ ಗುರುಪ್ರೀತ್ ಸಿಂಗ್ ಕಣಕ್ಕಿಳಿದರೆ ಕರ್ನಾಟಕದ ವತಿಯಿಂದ ಧನಲಕ್ಷ್ಮಿ ಮತ್ತು ಶುಭಾ 4400 ಮೀ ಮಿಶ್ರ ರಿಲೇಯಲ್ಲಿ ಸ್ಪರ್ಧಿಸಲಿದ್ದಾರೆ.
ಇನ್ನು ವೈಯಕ್ತಿಕ ವಿಭಾಗದಲ್ಲಿ ಭಾಗವಹಿಸುತ್ತಿರುವ ಭಾರತದ ಅಥ್ಲೀಟ್‌ಗಳ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಭಾರತ ಹಿಂದೆಂದಿಗಿಂತಲೂ ಈ ಬಾರಿ ಅಧಿಕ ಪದಕಗಳನ್ನು ಗೆಲ್ಲಲಿದೆ ಎಂಬ ಭರವಸೆಯೂ ಇದೆ. ಭರವಸೆಗೆ ತಕ್ಕಂತೆ ಭಾರತದ ಆಟಗಾರರು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅತ್ಯಧಿಕ ಪದಕಗಳನ್ನು ಗೆಲ್ಲಲಿ ಎಂಬುದೇ ಎಲ್ಲರ ಆಶಯ.
ಇದನ್ನೂ ಓದಿ: ಪೆಗಾಸಸ್ ಹಗರಣ: ಎಸ್‌ಐಟಿ ತನಿಖೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆ


