ಶನಿವಾರ (ಜ.17) ಮಧ್ಯಪ್ರದೇಶದ ಇಂದೋರ್‌ಗೆ ಭೇಟಿ ನೀಡಿದ ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಇತ್ತೀಚೆಗೆ ಸಂಭವಿಸಿದ ಕಲುಷಿತ ನೀರು ದುರಂತದ ಸಂತ್ರಸ್ತರನ್ನು ಭೇಟಿಯಾದರು.
ಕಲುಷಿತ ನೀರು ಕುಡಿದು ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿರುವ ರೋಗಿಗಳನ್ನು ಭೇಟಿಯಾದ ರಾಹುಲ್ ಗಾಂಧಿ ಆರೋಗ್ಯ ವಿಚಾರಿಸಿದ್ದು, ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಇನ್ನು ಸಾವಿಗೀಡಾದವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ವರದಿಗಳ ಪ್ರಕಾರ, ಮೊದಲು ಇಂದೋರ್ ನಗರದ ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ವರು ರೋಗಿಗಳನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದು, ಅವರ ಆರೋಗ್ಯ ವಿಚಾರಿಸಿದ್ದಾರೆ. ಅವರ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ದುರಂತ ಸಂಭವಿಸಿದ ಭಾಗೀರಥಿಪುರಕ್ಕೆ ತೆರಳಿದ ರಾಹುಲ್ ಗಾಂಧಿ ಸಾವಿಗೀಡಾದವರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಭಾಗೀರಥಿಪುರದಲ್ಲಿ ಕಲುಷಿತ ನೀರು ಕುಡಿದು ತೊಂದರೆಗೊಳಗಾದವರನ್ನು ನಾನು ಭೇಟಿಯಾದೆ. ಅನೇಕರ ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ದೇಶಕ್ಕೆ ‘ಸ್ಮಾರ್ಟ್ ಸಿಟಿ’ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಇದು ಸ್ಮಾರ್ಟ್ ಸಿಟಿಯ ಹೊಸ ಮಾದರಿಯಾಗಿದೆ. ಇಲ್ಲಿ ಕುಡಿಯುಲು ನೀರಿಲ್ಲ, ಜನರನ್ನು ಬೆದರಿಸಲಾಗುತ್ತಿದೆ. ಇಂದೋರ್‌ನಲ್ಲಿ ಶುದ್ಧ ನೀರು ಲಭ್ಯವಿಲ್ಲ. ಕಲುಷಿತ ನೀರು ಕುಡಿದು ಜನರು ಸಾವನ್ನಪ್ಪಿದ್ದಾರೆ. ಇದು ಸರ್ಕಾರದ ‘ನಗರ ಮಾದರಿ” ಎಂದಿದ್ದಾರೆ.
“ಇದು ಇಂದೋರ್‌ಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಇತರ ನಗರಗಳಲ್ಲಿಯೂ ನಡೆಯುತ್ತಿದೆ. ಸರ್ಕಾರ ಇದಕ್ಕೆ ಹೊಣೆ ಹೊರಬೇಕು ಮತ್ತು ಸಂತ್ರಸ್ತರಿಗೆ ಸರಿಯಾದ ಪರಿಹಾರ ಸಿಗಬೇಕು. ಇಂದಿಗೂ ಇಲ್ಲಿ ಶುದ್ಧ ನೀರು ಲಭ್ಯವಿಲ್ಲ. ವಿರೋಧ ಪಕ್ಷದ ನಾಯಕನಾಗಿ, ನಾನು ಅವರ ಪರ ಧ್ವನಿ ಎತ್ತಲು ಬಂದಿದ್ದೇನೆ; ಇದು ನನ್ನ ಜವಾಬ್ದಾರಿ – ನಾನು ಸಂತ್ರಸ್ತ ಕುಟುಂಬಗಳೊಂದಿಗೆ ನಿಲ್ಲುತ್ತೇನೆ” ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಮತ್ತು ಗಂಧ್ವಾನಿ ಕ್ಷೇತ್ರವನ್ನು ಪ್ರತಿನಿಧಿಸುವ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಅವರು ರಾಹುಲ್ ಗಾಂಧಿಯವರ ಜೊತೆಗಿದ್ದರು. ಭೇಟಿಗೂ ಮುನ್ನ ಭಾಗೀರಥಪುರದಲ್ಲಿ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದರು, ಅನೇಕ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.
ಭಾಗೀರಥಪುರದ ನಿವಾಸಿಗಳು ಕಲುಷಿತ ನೀರಿನಿಂದ 24 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದಾಗ್ಯೂ, ಮಧ್ಯಪ್ರದೇಶ ಹೈಕೋರ್ಟ್‌ಗೆ ಸಲ್ಲಿಸಿದ ತನ್ನ ಸ್ಥಿತಿಗತಿ ವರದಿಯಲ್ಲಿ, ರಾಜ್ಯ ಸರ್ಕಾರವು ಐದು ತಿಂಗಳ ಶಿಶು ಸೇರಿದಂತೆ ಏಳು ಜನರು ಬಲಿಯಾಗಿರುವುದಾಗಿ ಹೇಳಿದೆ. ಈ ನಡುವೆ ಸರ್ಕಾರಿ ಸ್ವಾಮ್ಯದ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನ ಸಮಿತಿಯು 15 ಸಾವುಗಳು ಯಾವುದೋ ರೀತಿಯಲ್ಲಿ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿರಬಹುದು ಎಂದಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಈ ಹಿಂದೆ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಆರ್ಥಿಕ ನೆರವು ಮತ್ತು ಎಲ್ಲಾ ಸಂತ್ರಸ್ತ ವ್ಯಕ್ತಿಗಳಿಗೆ ಉಚಿತ ಚಿಕಿತ್ಸೆಯನ್ನು ಘೋಷಿಸಿದ್ದರು. ಕೆಲವು ಸಾವುಗಳು ಇತರ ಕಾರಣಗಳಿಂದ ಸಂಭವಿಸಿದ್ದರೂ, ಮಾನವೀಯ ಆಧಾರದ ಮೇಲೆ ಎಲ್ಲಾ ದುಖಿಃತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.


