ಇಂದು ಮಾರುಕಟ್ಟೆಯಲ್ಲಿ ದವಸ-ಧಾನ್ಯಗಳ ಮತ್ತು ತರಕಾರಿಗಳ ಬೆಲೆಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿವೆ. ದೇಶದಲ್ಲಿ 45 ವರ್ಷದಲ್ಲಿಯೇ ಅತ್ಯಧಿಕ ನಿರುದ್ಯೋಗವಿದೆ. ಒಕ್ಕೂಟ ಸರ್ಕಾರವಾಗಲಿ ಅಥವಾ ಕರ್ನಾಟಕ ಸರ್ಕಾರವಾಗಲಿ ತಮ್ಮ 2022-23ನೆಯ ಸಾಲಿನ ಬಜೆಟ್ಟಿನಲ್ಲಿ ವಿಶೇಷ ಉದ್ಯೋಗ ಕಾರ್ಯಕ್ರಮಗಳನ್ನು ಘೋಷಿಸಿಲ್ಲ. ಕೋವಿಡ್ ಪೆಂಡಮಿಕ್‌ನ ಆಘಾತದಿಂದ ಆರ್ಥಿಕತೆಯು ಇನ್ನೂ ಚೇತರಿಸಿಕೊಂಡಿಲ್ಲ. ಸರ್ಕಾರವು ಇವುಗಳ ಬಗ್ಗೆ ಗಮನ ನೀಡುತ್ತಿಲ್ಲ ಅಥವಾ ಅದಕ್ಕೆ ಗಮನ ನೀಡುವ ಅಗತ್ಯ ಕಾಣುತ್ತಿಲ್ಲ. ಏಕೆಂದರೆ ಸರ್ಕಾರವು ಬೆಲೆ ಏರಿಕೆಯನ್ನೂ ಸೇರಿಸಿಕೊಂಡು ನಮ್ಮ ಎಲ್ಲ ಸಮಸ್ಯೆಗಳಿಗೂ ಅನ್ಯ ಧರ್ಮೀಯರು ಕಾರಣ ಎಂಬ ಧಾರ್ಮಿಕ ಅಮಲನ್ನು ಜನರ ತಲೆಯಲ್ಲಿ ತುಂಬುತ್ತಿದೆ. ಇದರಿಂದ ಜನರು ಸರ್ಕಾರವನ್ನು ಬೆಲೆ ಏರಿಕೆ ಕುರಿತಂತೆ ಪ್ರಶ್ನೆ ಮಾಡುವುದಕ್ಕೆ ಪ್ರತಿಯಾಗಿ ಭಾವನಾತ್ಮಕ ಸಂಗತಿಗಳಲ್ಲಿ ತಮ್ಮೆಲ್ಲ ಶಕ್ತಿಯನ್ನು ಧಾರೆಯೆರೆಯುತ್ತಿದ್ದಾರೆ.
ಹಿಜಾಬ್, ಹಲಾಲ್, ಲವ್ ಜಿಹಾದ್, ಆಜಾನ್, ವ್ಯಾಪಾರಕ್ಕೆ ನಿರ್ಬಂಧ, ಮತಾಂತರ, ಬಹುಜನರ ಆಹಾರ ಸಂಸ್ಕೃತಿಯ ಮೇಲೆ ಆಕ್ರಮಣ ಮುಂತಾದವುಗಳಲ್ಲಿ ಆಳುವ ವರ್ಗ, ಸರ್ಕಾರಗಳು ಮುಳುಗಿಹೋಗಿವೆ. ದೇಶದಾದ್ಯಂತ ಅನ್ಯ ಧರ್ಮೀಯರ ಮೇಲೆ ವ್ಯವಸ್ಥಿತವಾಗಿ ಹಲ್ಲೆಗಳು ನಡೆಯುತ್ತಿವೆ, ಅವರನ್ನು ಹೀಯಾಳಿಸುವುದು ವ್ಯಾಪಕವಾಗಿದೆ. ಅವರ ವಿರುದ್ಧ ದ್ವೇಷಪೂರಿತ (ಹೇಟ್ ಸ್ಪೀಚ್) ಮಾತುಗಳನ್ನು ಸಾಧು-ಸಂತರನ್ನು ಸೇರಿಸಿಕೊಂಡು ಅನೇಕ ಕೋಮುವಾದಿ ಗುಂಪುಗಳು ಆಡುತ್ತಿವೆ. ಇವೆಲ್ಲವುಗಳ ನಡುವೆ ಬೆಲೆ ಏರಿಕೆಯನ್ನು ತಡೆಯುವ ಜವಾಬ್ದಾರಿಯನ್ನು ಸರ್ಕಾರ ನಿರ್ವಹಿಸುತ್ತಿಲ್ಲ. ಜನರೂ ಕೂಡ ಇದು ಸರ್ಕಾರದ ಜವಾಬ್ದಾರಿ ಎಂಬುದನ್ನು ಮನಗಾಣುತ್ತಿಲ್ಲ. 2019ರಲ್ಲಿ ಉಳ್ಳಾಗಡ್ಡಿಯ ಬೆಲೆಗಳು ಅತಿಯಾಗಿ ಏರುತ್ತಿದ್ದುದರ ಬಗ್ಗೆ ಪ್ರಶ್ನೆ ಕೇಳಿದಾಗ ವಿತ್ತ ಮಂತ್ರಿಗಳು ’ನಾವು ಮನೆಯಲ್ಲಿ ಉಳ್ಳಾಗಡ್ಡಿ ತಿನ್ನುವುದಿಲ್ಲ” ಎಂದು ತಮ್ಮ ಸ್ವಂತ ಪಥ್ಯಾಪಥ್ಯಗಳನ್ನು ದೇಶದ 135 ಕೋಟಿ ಜನರ ಮೇಲೆ ಹೇರಿದ್ದರು. ಅಂದರೆ, ಉಳ್ಳಾಗಡ್ಡಿಯ ಬೆಲೆಯ ಏರಿಕೆಯನ್ನು ನಿಯಂತ್ರಿಸುವುದು ತಮ್ಮ ಜವಾಬ್ದಾರಿಯಲ್ಲ ಎಂಬುದನ್ನು ಸಂಸತ್ತಿನಲ್ಲಿ ಅಪರೋಕ್ಷವಾಗಿ ವಿತ್ತ ಮಂತ್ರಿಗಳು ಹೇಳಿದ್ದರು. ಈಗಲೂ ’ಬೆಲೆ ಏರಿಕೆಯಾಗುತ್ತಿದೆ; ಆದರೆ ಅದು ಮಿತಿಮೀರಿಲ್ಲ’ ಎಂದು ಅವರು ಸಮಜಾಯಿಷಿ ಹೇಳುತ್ತಿದ್ದಾರೆ. ಬೆಲೆ ಏರಿಕೆ ಬಗ್ಗೆ ಆಡಳಿತದ ಜವಾಬ್ದಾರಿ ಸ್ಥಾನದಲ್ಲಿರುವವರು ಮಾತನಾಡುತ್ತಿಲ್ಲ. ಕ್ರಮಗಳನ್ನು ತೆಗೆದುಕೊಳ್ಳುವುದು ದೂರವೇ ಉಳಿಯಿತು!
ಜನರಿಗೆ ಬದುಕು ಬಾಣಲೆಯಿಂದ ಬೆಂಕಿಗೆ; ಅಮೃತಕಾಲದ ಹುದುಲುವಿನಲ್ಲಿ ಸರ್ಕಾರ
ಇಂದು ಸರ್ಕಾರವು ಹೆಜ್ಜೆಹೆಜ್ಜೆಗೂ ಅಮೃತ ಕಾಲದ(1947-2047) ಬಗ್ಗೆ ಮಾತನಾಡುತ್ತಿದೆ. ನಮ್ಮ ಸ್ವಾತಂತ್ರ್ಯದ 2047ರ ಶತಮಾನೋತ್ಸವವನ್ನು ಸರ್ಕಾರ ಅಮೃತಕಾಲ ಎಂದು ಕರೆಯುತ್ತಿದೆ. ನಮ್ಮ ಸರ್ಕಾರಗಳಿಗೆ ’ಇಂದು’ ಮುಖ್ಯವಾಗಿಲ್ಲ. ಒಂದೋ ಅದು ಭೂತದ ಬಗ್ಗೆ ಮಾತನಾಡುತ್ತದೆ; ಇಲ್ಲವೇ ಭವಿಷ್ಯದ ಬಗ್ಗೆ ಮಾತನಾಡುತ್ತದೆ. ಆದರೆ ಜನರ ಬದುಕು ಇವೆರಡರ ನಡುವಿನ ’ಸದ್ಯ’ದ ಬೆಲೆ ಏರಿಕೆಯಿಂದ ಮತ್ತು ನಿರುದ್ಯೋಗದಿಂದ
ಜರ್ಜರಿತವಾಗುತ್ತಿದೆ. ಒಕ್ಕೂಟ ಸರ್ಕಾರವು 2017-18ರಲ್ಲಿ ನಮ್ಮ ಜಿಡಿಪಿಯನ್ನು 2024-25ರಲ್ಲಿ 5 ಟ್ರಲಿಯನ್ ಡಾಲರ್ ಮಾಡುವ ಬಗ್ಗೆ ಗುರಿ ಹಾಕಿಕೊಂಡಿತ್ತು. ರೈತರ ವರಮಾನವನ್ನು ದುಪ್ಪಟ್ಟು ಮಾಡುವುದಕ್ಕೆ 2022ರ ಗಡಿಯನ್ನು ನಿರ್ಧರಿಸಿತ್ತು. ಆದರೆ 2022-23ನೆಯ ಸಾಲಿನ ಬಜೆಟ್ಟಿನಲ್ಲಿ ಈ ಗುರಿ-ಗಡಿಗಳ ಬಗ್ಗೆ ಚಕಾರವೆತ್ತದೆ 2047ರ ಅಮೃತ ಕಾಲದ ಬಗ್ಗೆ ಮಾತನಾಡಲಾಗಿದೆ.
ಸಗಟು ಬೆಲೆ ಸೂಚ್ಯಂಕದ ಪ್ರಕಾರ 2021ರ ಅಕ್ಟೋಬರ್‌ನಲ್ಲಿದ್ದ ಹಣದುಬ್ಬರ ಪ್ರಮಾಣ ಶೇ.13.83. ಇದು ಮಾರ್ಚ್ 2022ರಲ್ಲಿ ಶೇ.14.55 ರಷ್ಟಾಗಿದೆ. ಎಲ್‌ಪಿಜಿಯಲ್ಲಿನ ಬೆಲೆ ಏರಿಕೆಯು ಅಕ್ಟೋಬರ್ 2021ರಲ್ಲಿ ಶೇ.0.64ರಷ್ಟಿದ್ದುದು ಮಾರ್ಚ್ 2022ರಲ್ಲಿ ಇದು ಶೇ.24.88ರಷ್ಟಾಗಿದೆ. ತರಕಾರಿ ಬೆಲೆಗಳ ಹಣದುಬ್ಬರ ಅಕ್ಟೋಬರ್ 2021ರಲ್ಲಿ ಶೇ.1.87ರಷ್ಟಿದ್ದುದು ಮಾರ್ಚ್ 2022ರಲ್ಲಿ ಇದು ಶೇ.19.88ರಷ್ಟಾಗಿದೆ. ಇವೆಲ್ಲವೂ ಸಗಟು ಬೆಲೆ ಸೂಚ್ಯಂಕದ ಹಣದುಬ್ಬರ. ಇದರ ಆಧಾರದ ಮೇಲೆ ಚಿಲ್ಲರೆ ಬೆಲೆ ಸೂಚ್ಯಂಕದ ಹಣದುಬ್ಬರವನ್ನು ಅಂದಾಜು ಮಾಡಬಹುದು. ಸಗಟು ಬೆಲೆಗಳಲ್ಲಿನ ಏರಿಕೆಯು ಉತ್ಪಾದಕರ ಮಟ್ಟದಲ್ಲಿನ ವಿದ್ಯಮಾನವಾದರೆ ಚಿಲ್ಲರೆ ಬೆಲೆಗಳಲ್ಲಿನ ಹಣದುಬ್ಬರವು ಗ್ರಾಹಕರ ಮಟ್ಟದಲ್ಲಿನ ವಿದ್ಯಮಾನವಾಗಿದೆ. ಉತ್ಪಾದಕರ ಮಟ್ಟದಲ್ಲಿನ ಹಣದುಬ್ಬರವು ಗ್ರಾಹಕರ ಮಟ್ಟಕ್ಕೆ ಹರಿದುಬರಲು ಸ್ವಲ್ಪ ಕಾಲ ಹಿಡಿಯುತ್ತದೆ. ಆದರೆ ಇದು ಚಿಲ್ಲರೆ ಹಣದುಬ್ಬರದ ಮೇಲೆ ತೀವ್ರ ಪರಿಣಾಮವನ್ನಂತೂ ಬೀರುತ್ತದೆ.
ಚಿಲ್ಲರೆ ಬೆಲೆಗಳ ಸೂಚ್ಯಂಕದ ಹಣದುಬ್ಬರವು ಜನವರಿ 22ರಲ್ಲಿ ಶೇ.6.01ರಷ್ಟಿದ್ದುದು ಮಾರ್ಚ್‌ನಲ್ಲಿ ಶೇ.6.95ಕ್ಕೇರಿದೆ. ಇದು ಕಳೆದ 17 ತಿಂಗಳುಗಳಲ್ಲಿ ಅತಿ ಹೆಚ್ಚಿನ ಹಣದುಬ್ಬರವಾಗಿದೆ. ಎಲ್ಲಕಿಂತ
ಮುಖ್ಯವಾಗಿ ಇದು ರಿಸರ್ವ್ ಬ್ಯಾಂಕು ಹಾಕಿಕೊಂಡಿರುವ ಹಣದುಬ್ಬರದ ಗಡಿ ಶೇ.6 ಮೀರಿದೆ.
ಹಣದುಬ್ಬರ ಎಂಬ ಬೆಂಕಿಯಿಂದ ಬಡವರ ಬದುಕು ಬೆಂದುಹೋಗುತ್ತಿದೆ. ಕೂಲಿಯೊಂದನ್ನೇ ಅವಲಂಬಿಸಿರುವ ಕೂಲಿಕಾರರ ಬದುಕು ಇದರಿಂದ ಸಂಕಷ್ಟಕ್ಕೀಡಾಗಿದೆ. ಏಕೆಂದರೆ ಹಣದುಬ್ಬರ ಕಾಲದಲ್ಲಿ ಕೂಲಿ ಹೆಚ್ಚುವುದಿಲ್ಲ. ಆದರೆ ಕೂಲಿ ಹಣದ ಖರೀದಿ ಸಾಮರ್ಥ್ಯವು ಕಡಿಮೆಯಾಗುತ್ತದೆ. ಉದಾ: ದಿನಗೂಲಿ ರೂ.500ಕ್ಕೆ ಹಣದುಬ್ಬರಕ್ಕೆ ಹಿಂದೆ 10 ಕೆ.ಜಿ ಅಕ್ಕಿ ಬರುತ್ತಿತ್ತು ಎಂದಿಟ್ಟುಕೊಳ್ಳಿ (ಪ್ರತಿ ಕೆ.ಜಿ ಅಕ್ಕಿ ಬೆಲೆ ರೂ.50). ಹಣದುಬ್ಬರದಿಂದ ಅಕ್ಕಿಯ ಬೆಲೆ ಕೆ.ಜಿ.ಗೆ ರೂ.62.50ರಷ್ಟಾಗಿದೆ. ಈಗ ರೂ.500ಕ್ಕೆ 8 ಕೆ.ಜಿ ಅಕ್ಕಿ ಮಾತ್ರ ಸಿಗುತ್ತದೆ. ಹಣದುಬ್ಬರದಿಂದ ಹಣದ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಕೂಲಿಯಲ್ಲಿ ಕಡಿಮೆಯಾಗುವುದಿಲ್ಲ. ಆದರೆ ಕೂಲಿಯ ನೈಜ ಮೌಲ್ಯ ಕುಸಿತಕ್ಕೆ ಒಳಗಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹಣದುಬ್ಬರದಿಂದ ಕಾರ್ಮಿಕರ, ರೈತಾಪಿ ವರ್ಗದ ಮತ್ತು ಅಸಂಘಟಿತ ವಲಯದ ದುಡಿಮೆಗಾರರ (ನೈಜ) ವರಮಾನ ಕುಸಿಯುತ್ತದೆ. ತೆರಿಗೆಗಳು ಹೇಗೆ ಜನರ ವರಮಾನದಲ್ಲಿ ಕಡಿತವನ್ನುಂಟುಮಾಡುತ್ತವೋ ಅದೇ ರೀತಿಯಲ್ಲಿ ಹಣದುಬ್ಬರವು ಜನರ ವರಮಾನದ ಕೊಳ್ಳುವ ಮೌಲ್ಯವನ್ನು ಕಡಿಮೆಮಾಡುತ್ತದೆ. ಯಾರಿಗೆ ಉಳಿತಾಯ ಮಾಡುವ ಸಾಮರ್ಥ್ಯವಿರುತ್ತದೋ ಮತ್ತು ಎಲೀಟ್ ವರ್ಗಕ್ಕೆ ಸೇರಿರುತ್ತಾರೋ ಅವರಿಗೆ
ಹಣದುಬ್ಬರ ಬಿಸಿ ತಾಕುವುದಿಲ್ಲ ಅಥವಾ ತಾಕಿದರೂ ಅದರಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಅವರಿಗಿರುತ್ತದೆ. ಇಂತಹ ವ್ಯವಸ್ಥೆಯಲ್ಲಿ ಸರ್ಕಾರವು ದುಡಿಮೆಗಾರರ, ಕಾರ್ಮಿಕರ, ರೈತಾಪಿಗಳ, ಮಹಿಳೆಯರ ಮುಂತಾದ ’ಉಳಿದವರ ಪರ’ ನಿಲ್ಲದೆ ’ಉಳ್ಳವರ ಪರ’ ನಿಂತರೆ ಅಲ್ಲಿ ಬಡವರ ಬದುಕಿನ ಬವಣೆಯು ತೀವ್ರವಾಗಿರುತ್ತದೆ. ಇಂದು ನಮ್ಮ ಸಮಾಜದಲ್ಲಿ ಇಂತಹ ಸ್ಥಿತಿಯಿದೆ.
ಪೂರೈಕೆಯದ್ದಲ್ಲ ಸಮಸ್ಯೆ, ಸಮಗ್ರ ಬೇಡಿಕೆಯದ್ದು!
ದೇಶವನ್ನು ಕಾಡುತ್ತಿರುವ ಹಸಿವು, ಬಡತನ, ನಿರುದ್ಯೋಗ, ಅಪೌಷ್ಟಿಕತೆ, ಜಿಡಿಪಿಯ ಕುಂಠಿತ ಬೆಳವಣಿಗೆ ಮುಂತಾದವುಗಳಿಗೆ ಸದ್ಯದ ಸರ್ಕಾರವು ’ಪೂರೈಕೆ ಅರ್ಥಶಾಸ್ತ್ರ’ದಲ್ಲಿ ಪರಿಹಾರವನ್ನು ಕಾಣಲು ಪ್ರಯತ್ನಿಸುತ್ತದೆ. ಈ ಕಾರಣಕ್ಕೆ ಇದು ಬಂಡವಾಳದ ಬಗ್ಗೆ, ಅದರಲ್ಲೂ ವಿದೇಶಿ ಬಂಡವಾಳದ ಬಗ್ಗೆ, ವೆಲ್ತ್ ಕ್ರಿಯೇಟರ್‍ಸ್ ಬಗ್ಗೆ, ಕಾರ್ಪೊರೆಟ್ ತೆರಿಗೆಯಲ್ಲಿ ಕಡಿತ ಮಾಡುವುದರ ಬಗ್ಗೆ ಸರ್ಕಾರ ಮಾತನಾಡುತ್ತದೆ. ಯಾವಾಗ ನಮ್ಮ ಜಿಡಿಪಿಯು ಕುಸಿಯುವುದಕ್ಕೆ ಆರಂಭಿಸಿತೋ, ಅಂದಿನ 2017-18ರಿಂದಲೂ ರಘುರಾಮ್ ರಾಜನ್, ಅಮರ್ತ್ಯ ಸೆನ್, ಅಭಿಜಿತ್ ಬ್ಯಾನರ್ಜಿ, ಪ್ರಭಾತ್ ಪಟ್ನಾಯಕ್ ಮುಂತಾದ ಅರ್ಥಶಾಸ್ತ್ರಜ್ಞರು ನಮ್ಮಲ್ಲಿರುವುದು ’ಸಮಗ್ರ ಬೇಡಿಕೆ’ಗೆ ಸಂಬಂಧಿಸಿದ ಸಮಸ್ಯೆ ಎಂದು ಹೇಳುತ್ತಾ ಬಂದಿದ್ದಾರೆ. ಉತ್ಪಾದನೆ ಎಷ್ಟು ಮುಖ್ಯವೋ ಅದಕ್ಕಿಂತ ಇಂದು ನಮ್ಮಲ್ಲಿ ವಿತರಣೆ ನಿರ್ಣಾಯಕ. ಆದ್ದರಿಂದ ಜನರ ಕೈಯಲ್ಲಿ ಹೆಚ್ಚು ಹೆಚ್ಚು ಹಣ ದೊರೆಯುವಂತೆ ಮಾಡಬೇಕು, ಜನಕಲ್ಯಾಣ ಕಾರ್ಯಕ್ರಮಗಳನ್ನು ವಿಸ್ತೃತವಾಗಿ ಕೈಗೊಳ್ಳಬೇಕು, ನರೇಗಾ ಕಾರ್ಯಕ್ರಮದಂತಹ ಉದ್ಯೋಗ ಖಾತ್ರಿ ಕಾರ್ಯಕ್ರಮವನ್ನು ನಗರ ಪ್ರದೇಶಗಳಲ್ಲಿಯೂ ಆರಂಭಿಸಬೇಕು ಎಂದು ಸಲಹೆ-ಶಿಫಾರಸ್ಸು ಮಾಡುತ್ತಾ ಬಂದಿದ್ದಾರೆ. ರಾಮಚಂದ್ರ ಗುಹಾ ಹೇಳುವಂತೆ ಈ ಸರ್ಕಾರಕ್ಕೆ ಆರ್ಥಿಕ ತಜ್ಞರ ಬಗ್ಗೆ ವಿಶ್ವಾಸವಿಲ್ಲ. ಇವರ ಸಲಹೆಗಳನ್ನು ಮೂಲೆಗೆ ತಳ್ಳಿ ಸರ್ಕಾರವು ಖಾಸಗೀಕರಣಕ್ಕೆ, ಕಾರ್ಪೊರೆಟೀಕರಣಕ್ಕೆ, ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿನ ಬಂಡವಾಳವನ್ನು ಹಿಂತೆಗೆದುಕೊಳ್ಳುವುದಕ್ಕೆ ಗಮನ ನೀಡುತ್ತಾ ಬಂದಿದೆಯೇ ವಿನಾ ಜನರ ದೈನಂದಿನ ನೋವು-ಸಂಕಟಗಳ ಬಗ್ಗೆ ಸ್ಪಂದಿಸುತ್ತಿಲ್ಲ.
ಈ ಸರ್ಕಾರಕ್ಕೆ ಸಾರ್ವಜನಿಕ ವಿತರಣೆ ಆದ್ಯತೆಯ ಕ್ಷೇತ್ರವಾಗಿ ಉಳಿದಿಲ್ಲ. ಇದರ ಗಮನವೆಲ್ಲಾ ಖಾಸಗಿ ವಲಯದಲ್ಲಿನ ಉತ್ಪಾದನೆಯ ಬಗ್ಗೆ ಇದೆ. ಉದಾ: 2022-23ನೆಯ ಸಾಲಿನ ಬಜೆಟ್ಟಿನಲ್ಲಿ ಆಹಾರ ಸಬ್ಸಿಡಿ ಅನುದಾನವನ್ನು 2021-22ರ ರೂ.2.86 ಲಕ್ಷ ಕೋಟಿಯಿಂದ 2022-23ರಲ್ಲಿ ರೂ.2.06 ಲಕ್ಷ ಕೋಟಿಗೆ ಇಳಿಸಲಾಗಿದೆ. ಇಲ್ಲಿ ಕಡಿತ ಶೇ.27.97. ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಅನುದಾನ 2021-22ರಲ್ಲಿ ರೂ.3.02 ಲಕ್ಷ ಕೋಟಿಯಿತ್ತು. ಇದನ್ನು 2022-23ರಲ್ಲಿ ರೂ.2.16 ಲಕ್ಷ ಕೋಟಿಗೆ ಇಳಿಸಲಾಗಿದೆ. ಇಲ್ಲಿನ ಕಡಿತ ಶೇ.28.48. ನರೇಗಕ್ಕೆ 2021-22ರಲ್ಲಿದ್ದ ಅನುದಾನ ರೂ.98000 ಕೋಟಿ. ಇದನ್ನು 2022-23ರಲ್ಲಿ ರೂ.73000 ಕೋಟಿಗೆ ಇಳಿಸಲಾಗಿದೆ. ಇಲ್ಲಿನ ಕಡಿತ ಶೇ.25.51. ಹೀಗೆ ವಿತರಣಾ ವ್ಯವಸ್ಥೆಯನ್ನು ಸರ್ಕಾರ ಕಡೆಗಣಿಸುತ್ತಿದೆ. ಇದರಿಂದಾಗಿ ಹಣದುಬ್ಬರದ ಭಯಾನಕ-ಹಾನಿಕಾರಕ ಪರಿಣಾಮಗಳನ್ನು ಕಾರ್ಮಿಕರು, ಅಸಂಘಟಿತ
ವಲಯದ ದುಡಿಮೆಗಾರರು, ಮಹಿಳೆಯರು, ರೈತರು ಎದುರಿಸುವುದು ಈಗ ಕಷ್ಟವಾಗುತ್ತಿದೆ.
ಹಣದುಬ್ಬರವು ಸಮಾಜದಲ್ಲಿ ಅಸಮಾನತೆಯನ್ನು ಉಲ್ಬಣಗೊಳಿಸುತ್ತದೆ. ನಮ್ಮದು ಮೂಲತಃ ಅಸಮಾನತೆಯ ಸಮಾಜ. ಇದನ್ನು ಸದ್ಯದ ಸರ್ಕಾರದ ನೀತಿಗಳು ಮತ್ತಷ್ಟು ತೀವ್ರಗೊಳಿಸುತ್ತಿವೆ. ಸರ್ಕಾರದ ಅಧಿಕೃತ ಸಂಸ್ಥೆ ನೀತಿ ಆಯೋಗ ಪ್ರಕಟಿಸಿರುವಂತೆ ದೇಶದಲ್ಲಿನ ಬಹುಮುಖಿ ಬಡತನದ ಪ್ರಮಾಣ ಶೇ.25.01. ಮತ್ತೊಂದು ಅಧಿಕೃತ ಸಂಸ್ಥೆ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ-5 ವರದಿಯಂತೆ ಕರ್ನಾಟಕದಲ್ಲಿ 6ರಿಂದ 59 ತಿಂಗಳ ವಯೋಮಾನದ ಒಟ್ಟು ಮಕ್ಕಳಲ್ಲಿ ಅನೀಮಿಯ ಎದುರಿಸುತ್ತಿರುವ ಮಕ್ಕಳ ಪ್ರಮಾಣ 2015-16ರಲ್ಲಿ ಶೇ.60.9ರಷ್ಟಿದ್ದುದು 2019-20ರಲ್ಲಿ ಇದು ಶೇ.65.5ಕ್ಕೇರಿದೆ. ಇದೇ ರೀತಿಯಲ್ಲಿ 15ರಿಂದ 49 ವರ್ಷಗಳ ವಯೋಮಾನದ ಒಟ್ಟು ಮಹಿಳೆಯರಲ್ಲಿ ಅನೀಮಿಯ ಎದುರಿಸುತ್ತಿರಿವವರ ಪ್ರಮಾಣ 2015-16ರಲ್ಲಿ ಶೇ.44.8ರಷ್ಟಿದ್ದುದು 2019-20ರಲ್ಲಿ ಇದು ಶೇ.47.8ಕ್ಕೇರಿದೆ. ರಕ್ತಹೀನತೆಯನ್ನು ’ಮುಚ್ಚಿಟ್ಟ ಹಸಿವು’ ಎಂದು ಕರೆಯುತ್ತಾರೆ. ಬಡತನವನ್ನು ಮತ್ತು ಅಪೌಷ್ಟಿಕತೆಯನ್ನು ಎದುರಿಸುತ್ತಿರುವ ಕುಟುಂಬಗಳ ಬದುಕು ಹಣದುಬ್ಬರದಿಂದ ದಿಕ್ಕೆಟ್ಟುಬಿಡುತ್ತದೆ. ಭೀಕರ ಭಾಷಣದಲ್ಲಿ ಮುಳುಗಿರುವ ಪ್ರಸ್ತುತ ಸರ್ಕಾರಕ್ಕೆ ಇವ್ಯಾವುವೂ ಗಂಭೀರ ಸಮಸ್ಯೆಗಳಾಗಿ ಕಾಣುತ್ತಿಲ್ಲ.
ಮಹಿಳೆಯರನ್ನು ಒಳಗೊಂಡಂತೆ ಜನರ ಬದುಕು, ಅವರ ಜೀವನೋಪಾಯಗಳಿಗಿಂತ ಸರ್ಕಾರಕ್ಕೆ ವರಮಾನ, ಬಂಡವಾಳ, ಉತ್ಪಾದನೆಗಳು ಮುಖ್ಯವಾಗಿದೆ. ಆದರೆ ಇವೆಲ್ಲವೂ ಅಭಿವೃದ್ಧಿಯ ಸಾಧನಗಳು ಮತ್ತೀಗ ಜನರ ಬದುಕು ಹಣದುಬ್ಬರದಿಂದ ಛಿದ್ರಛಿದ್ರವಾಗುತ್ತಿದೆ. ಇಂದು ನಾವು ಎದುರಿಸುತ್ತಿರುವ ಹಣದುಬ್ಬರಕ್ಕೆ ದೇಶದ ಬೃಹತ್ ಅಸಂಘಟಿತ ವಲಯ ನಿರ್ವಹಿಸುತ್ತಿದ್ದ ಸರಕು-ಸೇವೆಗಳ ’ವಿತರಣಾ ಜಾಲ’ (ಸಪ್ಲೇ ಚೈನ್) ಕಿತ್ತುಹೋಗಿರುವುದು ಒಂದು ಮುಖ್ಯ ಕಾರಣವಾಗಿದೆ. ದೇಶದಲ್ಲಿನ ’ಎಮ್‌ಎಸ್‌ಎಮ್‌ಈ’ ವ್ಯವಸ್ಥೆಯು ಅಲ್ಲೋಲಕಲ್ಲೋಲವಾಗುವುದಕ್ಕೆ ಡಿಮಾನಿಟೈಸೇಶನ್ ಎಣ್ಣೆ ಸುರಿದರೆ ಕೋವಿಡ್ ಪೆಂಡಮಿಕ್ ವ್ಯವಸ್ಥೆ ಅದನ್ನು ಬುಡಮೇಲು ಮಾಡಿದೆ. ನಮ್ಮ ವಿತರಣಾ ಜಾಲದ ಮುಖ್ಯ ಆಧಾರ ’ಎಮ್‌ಎಸ್‌ಎಮ್‌ಈ’ಗಳು. ಅದೀಗ ದುಸ್ಥಿತಿಯಲ್ಲಿದೆ. ಎಮ್‌ಎಸ್‌ಎಮ್‌ಈ ಎನ್ನುವುದು ಸಣ್ಣ ವ್ಯವಸ್ಥೆಯಲ್ಲ. ನಮ್ಮ ದೇಶದಲ್ಲಿ 634 ಲಕ್ಷ ಎಮ್‌ಎಸ್‌ಎಮ್‌ಈ ಘಟಕಗಳಿವೆ. ಇವುಗಳಲ್ಲಿ 11.09 ಕೋಟಿ ಉದ್ಯೋಗಿಗಳಿದ್ದಾರೆ. ವಾರ್ಷಿಕ ಇದರಲ್ಲಿನ ಉತ್ಪಾದನೆ ರೂ.57.42 ಲಕ್ಷ ಕೋಟಿ. ಇವುಗಳ ಪುನಶ್ಚೇತನಕ್ಕೆ ಸತ್ವಯುತವಾದ ಕಾರ್ಯಕ್ರಮವನ್ನು ಸರ್ಕಾರ ಹಾಕಿಕೊಂಡಿಲ್ಲ. ಹಣದುಬ್ಬರದ ಹೆಚ್ಚಿನ ಆಘಾತವನ್ನು ಈ ವಲಯ ಅನುಭವಿಸುತ್ತಿದೆ.
ಹಣದುಬ್ಬರವನ್ನು ತಡೆಯುವುದು ಹೇಗೆ?
ನಮ್ಮಲ್ಲಿರುವ ಹಣದುಬ್ಬರವನ್ನು ತಡೆಯುವುದಕ್ಕೆ ಹಣಕಾಸು (ಮಾನಿಟರಿ) ನೀತಿ ಅಥವಾ ವಿತ್ತೀಯ (ಫಿಸ್ಕ್‌ಲ್) ನೀತಿಗಳಿಂದ ಸಾಧ್ಯವಿಲ್ಲ. ಹಣದ ಸರಬರಾಜನ್ನು ಕಡಿಮೆ ಮಾಡುವುದರಿಂದ ಸಮಸ್ಯೆಯು ಬಗೆಹರಿಯುವುದಿಲ್ಲ. ಇಲ್ಲಿ ಅತ್ಯಗತ್ಯವಾಗಿರುವುದು ಸೂಕ್ತವಾದ ವರಮಾನ ನೀತಿ. ಈ ಬಗ್ಗೆ ಕೆಳಕಂಡ ಕ್ರಮಗಳನ್ನು ನಾವು ಯೋಚಿಸಬಹುದು.
1. ನಮ್ಮ ದೇಶದಲ್ಲಿ ಶತಕೋಟಿ ಒಡೆಯರಾದವರು ಎಷ್ಟು ತೆರಿಗೆ ನೀಡುತ್ತಿದ್ದಾರೋ ಅಷ್ಟೇ ತೆರಿಗೆಯನ್ನು ಬಡವರು, ಕಾರ್ಮಿಕರು, ರೈತರು, ಮಹಿಳೆಯರು ನೀಡುತ್ತಿದ್ದಾರೆ. ಉದಾ: 2021-22ರಲ್ಲಿ ಉಳ್ಳವರು ನೀಡಿದ್ದ ತೆರಿಗೆ ರೂ.12.50 ಲಕ್ಷ ಕೋಟಿ (ಕಾರ್ಪೊರೆಟ್ ತೆರಿಗೆ ಮತ್ತು ವರಮಾನ ತೆರಿಗೆ). ಆದರೆ ಉಳಿದವರು, ಅಂದರೆ ಬಡವರು, ಕಾರ್ಮಿಕರು, ಅಸಂಘಟಿತ ವಲಯದ ದುಡಿಮೆಗಾರರು, ಮಹಿಳೆಯರು ನೀಡಿದ್ದ ತೆರಿಗೆ ರೂ.12.58 ಲಕ್ಷ ಕೋಟಿ (ಕಸ್ಟಮ್ಸ್, ಯೂನಿಯನ್ ಎಕ್ಸೈಸ್ ತೆರಿಗೆ, ಜಿಎಸ್‌ಟಿ). ಹಣದುಬ್ಬರ ತಡೆಯುವುದಕ್ಕೆ ನಮಗೆ ಬೇಕಾಗಿರುವುದು ಮೇಲಿನ ತೆರಿಗೆ ವಿನ್ಯಾಸಕ್ಕೆ ಭಿನ್ನವಾದ ತೆರಿಗೆ ವಿನ್ಯಾಸ. ಉಳ್ಳವರ ಮೇಲೆ ಹೆಚ್ಚಿನ ತೆರಿಗೆ ಹೇರಬೇಕು (ಪ್ರತ್ಯಕ್ಷ ತೆರಿಗೆಗಳು); ಉಳಿವದರ ಮೇಲೆ ಕಡಿಮೆ ತೆರಿಗೆ ಹೇರಬೇಕು (ಅಪ್ರತ್ಯಕ್ಷ ತೆರಿಗೆಗಳು). ಇದರಿಂದ ಹಣದುಬ್ಬರದ ಪರಿಣಾಮಗಳನ್ನು ಬಡವರು, ದುಡಿಮೆಗಾರರು, ಮಹಿಳೆಯರು ತಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
2. ಹೀಗೆ ಪ್ರತ್ಯಕ್ಷ ತೆರಿಗೆಗಳ ಮೂಲಕ ಸಂಗ್ರಹಿಸಿದ ತೆರಿಗೆಯನ್ನು ಸಮಾಜದಲ್ಲಿನ ಬಡವರು, ಕಾರ್ಮಿಕರು, ಅಸಂಘಟಿತ ವಲಯದ ದುಡಿಮೆಗಾರರು, ಪ.ಜಾ., ಪ.ಪಂ., ಒಬಿಸಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ
ವಿನಿಯೋಗಿಸಬೇಕು. ಹಣದುಬ್ಬರದ ಸಂದರ್ಭದಲ್ಲಿ ಸಾಮಾಜಿಕ ನೆರವಿನ ಕಾರ್ಯಕ್ರಮಗಳನ್ನು ವಿಸ್ತೃತವಾಗಿ ಹಮ್ಮಿಕೊಳ್ಳಬೇಕು. ಅತ್ಯಂತ ದರುದೃಷ್ಟದ ಸಂಗತಿಯೆಂದರೆ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮಕ್ಕೆ 2020-21ರಲ್ಲಿ ನೀಡಿದ್ದ ಅನುದಾನ ರೂ.42443 ಕೋಟಿ. ಆದರೆ ಇದಕ್ಕೆ 2022-23ರಲ್ಲಿ ನೀಡಿರುವ ಅನುದಾನ ರೂ. 9652 ಕೋಟಿ. ಇಲ್ಲಿ ಕಡಿತ ಶೇ.77.25ರಷ್ಟಾಗಿದೆ. ಇದು ಹಣದುಬ್ಬರದ ಹಾನಿಕಾರಕ ಪರಿಣಾಮಗಳಿಂದ ದುರ್ಬಲ ವರ್ಗವನ್ನು ಇನ್ನಷ್ಟು ಹೈರಾಣುಗೊಳಿಸುತ್ತದೆ.
3. ಈಗ ರದ್ದುಪಡಿಸಿರುವ ವೆಲ್ತ್ ಟ್ಯಾಕ್ಸ್‌ಅನ್ನು (ಸಂಪತ್ತಿನ ತೆರಿಗೆ) ಪುನಃ ಜಾರಿಗೊಳಿಸಬೇಕು. ಏಕೆಂದರೆ ನಮ್ಮಲ್ಲಿ ಸಂಪತ್ತನ್ನು ಗುಡ್ಡೆ ಹಾಕಿಕೊಳ್ಳುತ್ತಿರುವ ಬಿಲಿಯನ್ನರುಗಳ ಸಂಖ್ಯೆ ಹೆಚ್ಚುತ್ತಿದೆ. ಉದಾ: ಪೆಂಡಮಿಕ್‌ನ ಮಾರ್ಚ್ 2020ರಿಂದ ನವೆಂಬರ್ 2021ರ ಅವಧಿಯಲ್ಲಿ ಬಿಲಿಯನ್ನರುಗಳ ಸಂಪತ್ತು ರೂ.24.14 ಲಕ್ಷ ಕೋಟಿಯಿಂದ ರೂ. 53.16 ಲಕ್ಷ ಕೋಟಿಗೇರಿದೆ. ಈ ಸಂಪತ್ತಿನ ಮೇಲೆ ಶೇ.10 ರಷ್ಟು ತೆರಿಗೆ ಹೇರಿದರೆ ರೂ.5.32 ಲಕ್ಷ ಕೋಟಿ ದೊರೆಯುತ್ತದೆ. ಇದನ್ನು ಅನುದಾನದ ಕೊರತೆಯಿಂದ ಸೊರಗುತ್ತಿರುವ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ವಿನಿಯೋಗಿಸಬಹುದು.
4. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಬಲಪಡಿಸಬೇಕು. ಅಮರ್ತ್ಯ ಸೆನ್ ತನ್ನ ಪ್ರಸಿದ್ಧ ಕೃತಿ ’ಫೆಮೀನ್ ಆಂಡ್ ಪಾವರ್ಟಿ’ಯಲ್ಲಿ ’ಹಸಿವು’ ಎಂಬುದು ಕೆಲವರಿಗೆ ಆಹಾರ ದೊರೆಯದಿರುವ ಸಮಸ್ಯೆಯೇ ವಿನಾ ಅಲ್ಲಿ ಆಹಾರ ಇಲ್ಲದಿರುವುದರ ಸಮಸ್ಯೆಯಲ್ಲ ಎಂದು ಹೇಳಿದ್ದಾರೆ. ಉತ್ಪಾದನೆಗೆ ಎಷ್ಟು ಗಮನ ನೀಡಲಾಗುತ್ತದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ವಿತರಣಾ ವ್ಯವಸ್ಥೆಗೂ ನೀಡಬೇಕು. ಇಂದು ಸರ್ಕಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ರದ್ದುಪಡಿಸುವ ಹುನ್ನಾರ ನಡೆಸಿದೆ. ಇದು ಸಲ್ಲ.
5. ಆಹಾರ ಪದಾರ್ಥಗಳ ಕಳ್ಳ ಸಾಗಾಣಿಕೆ, ಕಳ್ಳ ದಾಸ್ತಾನು, ಅತ್ಯಗತ್ಯ ವಸ್ತುಗಳ ಕೊರತೆಯನ್ನು ಕೃತಕವಾಗಿ ಸೃಷ್ಟಿಸುವುದನ್ನು ತಡೆಯಲು 1955ರಿಂದ ’ಅಗತ್ಯ ವಸ್ತುಗಳ ಕಾಯಿದೆ’ ಇತ್ತು. ಆದರೆ ಇದನ್ನು ಒಕ್ಕೂಟ ಸರ್ಕಾರ 2020ರಿಂದ ರದ್ದುಪಡಿಸಲು ಪ್ರಯತ್ನಿಸುತ್ತಿದೆ. ಇದನ್ನು ರದ್ದುಪಡಿಸಬಾರದು. ಇದರ ಕಟ್ಟುನಿಟ್ಟಿನ ಅನುಷ್ಠಾನದಿಂದ ಹಣದುಬ್ಬರವನ್ನು ತಡೆಯಬಹುದು.
6. ತಜ್ಞರ ಪ್ರಕಾರ ಇಂದು ಹಣದುಬ್ಬರ ತಡೆಯಲು ಒಂದು ಪರಿಣಾಮ ಕ್ರಮವೆಂದರೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಒಕ್ಕೂಟ ಸರ್ಕಾರ ತಗ್ಗಿಸಬೇಕೆಂಬುದಾಗಿದೆ. ಇಂದು ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಶೇ.43.6ರಷ್ಟಿದ್ದರೆ ಡೀಸೆಲ್ ಮೇಲಿನ ಅಬಕಾರಿ ಸುಂಕ ಶೇ.38.04ರಷ್ಟಾಗುತ್ತದೆ. ಇದೇ ರೀತಿಯಲ್ಲಿ ರಾಜ್ಯ ಸರ್ಕಾರಗಳು ಪೆಟ್ರೋಲ್-ಡೀಸೆಲ್‌ಗಳ ಮೇಲೆ ಮೌಲ್ಯವರ್ಧಿತ ತೆರಿಗೆಯನ್ನು ವಿಧಿಸುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ತೆರಿಗೆಗಳು 2014ರಿಂದ 2021ರ ನಡುವೆ ಕ್ರಮವಾಗಿ ಶೇ.200 ಮತ್ತು ಶೇ.600 ರಷ್ಟು ಏರಿಕೆಯಾಗಿದೆ. ಈ ತೆರಿಗೆಯನ್ನು ತಗ್ಗಿಸುವುದರಿಂದ ಅದನ್ನು ಅವಲಂಬಿಸಿರುವ ವಲಯಗಳಲ್ಲಿ ಬೆಲೆ ಏರಿಕೆಯ ಒತ್ತಡ ಕಡಿಮೆಯಾಗುತ್ತದೆ.
7. ವಿತ್ತೀಯ ಮತ್ತು ಹಣಕಾಸು ಕ್ರಮಗಳಾದ ಹಣದ ಸರಬರಾಜನ್ನು ಕಡಿಮೆ ಮಾಡುವುದರಿಂದ ಮತ್ತು ಬಡ್ಡಿಯನ್ನು ಹೆಚ್ಚಿಸುವುದರಿಂದ ಆರ್ಥಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಈ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಮತ್ತೆ ಕಾರ್ಮಿಕ ವರ್ಗಕ್ಕೆ, ಅಸಂಘಟಿತ ವಲಯದ ದುಡಿಮೆಗಾರರಿಗೆ, ಮಹಿಳೆಯರಿಗೆ ಮತ್ತಷ್ಟು ಸಂಕಷ್ಟಗಳುಂಟಾಗಬಹುದು. ಈ ಕ್ರಮಗಳನ್ನು ಅತ್ಯಂತ ಅಪರೂಪವಾಗಿ ಬಳಸಬೇಕು.
8. ಕೊನೆಯದಾಗಿ ಆರ್ಥಿಕತೆಯನ್ನು ಸಂಪೂರ್ಣವಾಗಿ ಮಾರುಕಟ್ಟೆ ವ್ಯವಸ್ಥೆಗೆ ವಹಿಸಿಕೊಟ್ಟರೆ ಹಣದುಬ್ಬರವನ್ನು ತಡೆಯುವುದು ಕಷ್ಟವಾಗುತ್ತದೆ. ಏಕೆಂದರೆ ಖಾಸಗಿ ವಲಯದ ಮೂಲ ಉದ್ದೇಶ ಲಾಭ ಮತ್ತು ಗರಿಷ್ಟ ಲಾಭ ಮಾಡಿಕೊಳ್ಳುವುದಾಗಿದೆ. ಖಾಸಗಿ ಮಾರುಕಟ್ಟೆಯನ್ನು ಅತ್ಯಂತ ಸೀಮಿತ ನೆಲೆಯಲ್ಲಿ ಮತ್ತು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಸಾಮಾಜಿಕ ಸೌಹಾರ್ದತೆಯು ಆರ್ಥಿಕತೆಗೆ ಅಗತ್ಯವಾಗಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಹರಣ ಮಾಡುವುದರಿಂದ ಆರ್ಥಿಕತೆಗೂ ಲಾಭವಾಗುವುದಿಲ್ಲ ಮತ್ತು ಬಹುಸಂಖ್ಯಾತರಿಗೂ ಅನುಕೂಲವಾಗುವುದಿಲ್ಲ. ಹಣದುಬ್ಬರ ಆರ್ಥಿಕ ವಿದ್ಯಮಾನ ನಿಜ. ಇದರ ಮೇಲೆ ಸಾಮಾಜಿಕ ಸಂಗತಿಗಳ ಪರಿಣಾಮಗಳಿರುತ್ತವೆ. ಆರ್ಥಿಕ ಸಂಘರ್ಷದಿಂದ ಉತ್ಪಾದನಾ ವಲಯದಲ್ಲಿ ವ್ಯತ್ಯಯವುಂಟಾಗುತ್ತದೆ. ಇದು ಹಣದುಬ್ಬರದ ಮೇಲೂ ಪರಿಣಾಮ ಬೀರುತ್ತದೆ.
ಹಣದುಬ್ಬರ ಎಂದರೇನು?
ಹಣದುಬ್ಬರ ಎಂದರೆ ಹಣದ ಮೌಲ್ಯದಲ್ಲಿನ ಕುಸಿತ ಎಂದು ಹೇಳಬಹುದು. ಅಂದರೆ ಸರಕು-ಸೇವೆಗಳ ಬೆಲೆಗಳಲ್ಲಿ ಏರಿಕೆ ಆಗಿರುವುದರಿಂದ ಹಣದ ಕೊಳ್ಳುವ ಶಕ್ತಿಯಲ್ಲಿ ಕಡಿತವಾಗಿದೆ ಎಂದು ಅರ್ಥ. ಇದನ್ನು ಒಂದು ನಿದಶನದ ಮೂಲಕ ವಿವರಿಸಬಹುದು. ಜನವರಿ 2022ರಲ್ಲಿ ಅಕ್ಕಿಯ ಬೆಲೆ ಕೆಜಿಗೆ ರೂ.40 ಎಂದಿಟ್ಟುಕೊಳ್ಳಿ. ಈಗ ಮಾರ್ಚ್ 2022ರಲ್ಲಿ ಅಕ್ಕಿಯ ಬೆಲೆ ರೂ50. ಹೀಗೆ ಅಕ್ಕಿಯ ಬೆಲೆ ರೂ.40 ಇದ್ದುದು ಈಗ ರೂ.50 ಆಗಿದೆ ಎಂಬುದು ಹಣದುಬ್ಬರವಲ್ಲ. ಎರಡು ಕಾಲಘಟ್ಟಗಳ ನಡುವೆ ಬೆಲೆಗಳಲ್ಲಿ ಉಂಟಾಗುವ ಏರಿಕೆಯ ನಡೆಯನ್ನು ಹಣದುಬ್ಬರ ಎನ್ನುತ್ತೇವೆ. ಮೇಲಿನ ಅಕ್ಕಿಯ ಬೆಲೆಯ ಉದಾಹರಣೆಯಲ್ಲಿ ಹಣದುಬ್ಬರ ಶೇ.25. ಒಂದು ವೇಳೆ 22ರ ಏಪ್ರಿಲ್‌ನಲ್ಲಿ ಅಕ್ಕಿನ ಬೆಲೆಯು ಕೆಜಿಗೆ ರೂ.45 ರಷ್ಟಾಯಿತು ಎಂದಿಟ್ಟುಕೊಳ್ಳಿ. ಇಲ್ಲಿ ಬೆಲೆ ಇಳಿದಿದೆ. ಆದರೆ ಹಣದುಬ್ಬರ ಜನವರಿ 2022ರಿಂದ ಮಾರ್ಚ್ 2022ರಲ್ಲಿ ಶೇ.25 ರಷ್ಟಿತ್ತು. ಈಗ ಜನವರಿ 2022ರಿಂದ ಏಪ್ರಿಲ್ 2022ರಲ್ಲಿ ಹಣದುಬ್ಬರ ಶೇ.12.5ರಷ್ಟಾಗಿದೆ. ಇಲ್ಲಿ ಬೆಲೆ ಇಳಿದಿದೆ. ಆದರೆ ಹಣದುಬ್ಬರ ಇದೆ. ಹಣದುಬ್ಬರ-ಬೆಲೆ ಏರಿಕೆ ಬಗ್ಗೆ ಮೇಲಿನ ಸೂಕ್ಷ್ಮವನ್ನು ಗಮನಿಸಬೇಕು.

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ರಾಜ್ಯಗಳು ವ್ಯಾಟ್ ಕಡಿತಗೊಳಿಸಿ ಇಂಧನ ಬೆಲೆ ಏರಿಕೆ ತಗ್ಗಿಸಿ: ಮೋದಿ ಮನವಿಯ ಹಿಂದಿನ ವಾಸ್ತವವೇನು?


