Homeಮುಖಪುಟರಾಜ್ಯಗಳು ವ್ಯಾಟ್‌ ಕಡಿತಗೊಳಿಸಿ ಇಂಧನ ಬೆಲೆ ಏರಿಕೆ ತಗ್ಗಿಸಿ: ಮೋದಿ ಮನವಿಯ ಹಿಂದಿನ ವಾಸ್ತವವೇನು?

ರಾಜ್ಯಗಳು ವ್ಯಾಟ್‌ ಕಡಿತಗೊಳಿಸಿ ಇಂಧನ ಬೆಲೆ ಏರಿಕೆ ತಗ್ಗಿಸಿ: ಮೋದಿ ಮನವಿಯ ಹಿಂದಿನ ವಾಸ್ತವವೇನು?

ಕೆಲವು ರಾಜ್ಯಗಳ ಹೆಸರನ್ನು ಉಲ್ಲೇಖಿಸಿರುವ ಪ್ರಧಾನಿ ಮೋದಿ ‘ವ್ಯಾಟ್‌‌’ (ಮೌಲ್ಯವರ್ಧಿತ ತೆರಿಗೆ) ಹೆಚ್ಚಳದಿಂದ ಇಂಧನ ಬೆಲೆ ಏರಿಕೆಯಾಗುತ್ತಿದೆ ಎಂದಿದ್ದಾರೆ. ಆದರೆ ಮೋದಿನಾಮಿಕ್ಸ್‌ ವಾಸ್ತವಾಂಶಗಳು ಬೇರೆಯೇ ಇವೆ...

- Advertisement -
- Advertisement -

“ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ರಾಜ್ಯಗಳು ಕಡಿಮೆ ಮಾಡಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ದೇಶದ ವಿವಿಧ ನಗರಗಳಲ್ಲಿನ ಇಂಧನ ಬೆಲೆಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, “ವ್ಯಾಟ್ ಅನ್ನು ಕಡಿಮೆ ಮಾಡಿದ ರಾಜ್ಯಗಳು ಕಡಿಮೆ ಇಂಧನ ಬೆಲೆಗಳನ್ನು ಹೊಂದಿವೆ‘” ಎಂದು ತಿಳಿಸಿದ್ದಾರೆ.

ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಹಕಾರಿ ‌ಒಕ್ಕೂಟ ವ್ಯವಸ್ಥೆಯ ಕುರಿತು ಮಾತನಾಡಿರುವ ಅವರು, “ದೇಶವು ಸಹಕಾರಿ ಒಕ್ಕೂಟದ ಮೂಲಕ ಕೋವಿಡ್ ವಿರುದ್ಧ ಸುದೀರ್ಘವಾಗಿ ಹೋರಾಡಿದೆ. ಜಾಗತಿಕ ಆರ್ಥಿಕ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೂ ಇದೇ ರೀತಿಯ ಸಹಕಾರ ಬೇಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಒಂದು ಸಣ್ಣ ಉದಾಹರಣೆ ಕೊಡುತ್ತೇನೆ. ನಾಗರಿಕರ ಮೇಲಿನ ಹೊರೆ ಕಡಿಮೆ ಮಾಡಲು ಕೇಂದ್ರವು ಕಳೆದ ನವೆಂಬರ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ. ರಾಜ್ಯಗಳು ತಮ್ಮ ತೆರಿಗೆಯನ್ನು ಕಡಿಮೆ ಮಾಡಿ ಮತ್ತು ಅದರ ಲಾಭವನ್ನು ಜನರಿಗೆ ವರ್ಗಾಯಿಸಲು ವಿನಂತಿಸಿದ್ದೇವೆ” ಎಂದಿದ್ದಾರೆ.

“ಕೆಲವು ರಾಜ್ಯಗಳು ತೆರಿಗೆ ಕಡಿತಗೊಳಿಸಿವೆ. ಆದರೆ ಕೆಲವು ರಾಜ್ಯಗಳು ಜನರಿಗೆ ಅನುಕೂಲ ಮಾಡಿಕೊಡಲಿಲ್ಲ. ಇದರಿಂದಾಗಿ ಈ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚುತ್ತಲೇ ಇವೆ. ಇದು ಒಂದು ರೀತಿಯಲ್ಲಿ ಈ ರಾಜ್ಯಗಳ ಜನರಿಗೆ ಮಾತ್ರ ಅನ್ಯಾಯವಾಗಿದೆ. ಇದು ನೆರೆಯ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತದೆ” ಎಂದು ಆರೋಪಿಸಿದ್ದಾರೆ.

ವ್ಯಾಟ್‌ ಕಡಿಮೆ ಮಾಡದ ರಾಜ್ಯಗಳನ್ನು ಪಟ್ಟಿ ಮಾಡಿರುವ ಮೋದಿ, “ನಾನು ಯಾರನ್ನೂ ಟೀಕಿಸುವುದಿಲ್ಲ, ಕೇವಲ ಚರ್ಚಿಸುತ್ತಿದ್ದೇನೆ” ಎಂದಿದ್ದಾರೆ. “ಯಾವುದೋ ಕಾರಣಕ್ಕಾಗಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳು ಇಂಧನದ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಲು ಒಪ್ಪಲಿಲ್ಲ. ಹೆಚ್ಚಿನ ಬೆಲೆಗಳ ಹೊರೆ ನಾಗರಿಕರ ಮೇಲೆ ಬಿದ್ದಿದೆ” ಎಂದು ತಿಳಿಸಿದ್ದಾರೆ.

“ತಮ್ಮ ತೆರಿಗೆಯನ್ನು ಕಡಿಮೆ ಮಾಡುವ ರಾಜ್ಯಗಳು ಆದಾಯದಲ್ಲಿ ನಷ್ಟವನ್ನು ಅನುಭವಿಸುವುದು ಸಹಜ. ಆದರೆ ಹಲವಾರು ರಾಜ್ಯಗಳು ಏನಾದರಾಗಲಿ ಎಂದು ಸಕಾರಾತ್ಮಕ ಹೆಜ್ಜೆ ಇರಿಸಿವೆ” ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

ಮುಂದಿನ ವರ್ಷ ಚುನಾವಣೆಗಳನ್ನು ಎದುರಿಸಲಿರುವ ಕರ್ನಾಟಕ ಮತ್ತು ಗುಜರಾತ್‌ ರಾಜ್ಯಗಳನ್ನು ಉಲ್ಲೇಖಿಸಿರುವ ಪ್ರಧಾನಿ ಮೋದಿ, “ಕರ್ನಾಟಕವು ತೆರಿಗೆಯನ್ನು ಕಡಿತಗೊಳಿಸದಿದ್ದರೆ, ಕಳೆದ ಆರು ತಿಂಗಳ ಅವಧಿಯಲ್ಲಿ ಅದು ಹೆಚ್ಚುವರಿಯಾಗಿ ₹ 5,000 ಕೋಟಿಗಳಷ್ಟು ಆದಾಯವನ್ನು ಸಂಗ್ರಹಿಸುತ್ತಿತ್ತು. ಗುಜರಾತ್ ಕೂಡ ₹ 3,500-4,000 ಕೋಟಿಗಳಷ್ಟು ಹೆಚ್ಚು ಸಂಗ್ರಹಿಸುತ್ತಿತ್ತು” ಎಂದಿದ್ದಾರೆ. “ವ್ಯಾಟ್ ಅನ್ನು ಕಡಿಮೆ ಮಾಡದ ರಾಜ್ಯಗಳು ಸಾವಿರಾರು ಕೋಟಿ ಹೆಚ್ಚುವರಿ ಆದಾಯ ಗಳಿಸಿದವು” ಎಂದು ದೂರಿದ್ದಾರೆ.

ಮೋದಿನಾಮಿಕ್ಸ್‌ ವಾಸ್ತವವೇನು?

ಮೋದಿಯವರ ಅರ್ಥಶಾಸ್ತ್ರ ಪರಿಕಲ್ಪನೆಯ ಕುರಿತು ಪ್ರತಿಕ್ರಿಯೆ ನೀಡಿದ ಆರ್ಥಿಕ ವಿಶ್ಲೇಷಕರಾದ ಶಿವಸುಂದರ್‌ ವಾಸ್ತವಾಂಶಗಳನ್ನು ‘ನಾನುಗೌರಿ.ಕಾಂ’ನೊಂದಿಗೆ ಹಂಚಿಕೊಂಡರು.

ರಾಜಕೀಯ ಹಾಗೂ ಆರ್ಥಿಕ ವಿಶ್ಲೇಷಕರಾದ ಶಿವಸುಂದರ್‌‌

“ಇಂಧನಗಳ ಮೇಲೆ ಕೇಂದ್ರ ಸರ್ಕಾರದ ತೆರಿಗೆ, ರಾಜ್ಯ ಸರ್ಕಾರ ವಿಧಿಸುವ ವ್ಯಾಟ್‌ ಎಷ್ಟಿದೆ ಎಂಬ ಟೇಬಲ್‌ಗಳು ಕಣ್ಣಮುಂದಿವೆ. ಕೇಂದ್ರದ ತೆರಿಗೆ ರಾಜ್ಯದ ತೆರಿಗೆಗಿಂತ ಯಾವಾಗಲೂ ದ್ವಿಗುಣವಾಗಿರುತ್ತದೆ. ಮೊದಲೆಲ್ಲ ಇದು ಕಡಿಮೆ ಇರುತ್ತಿತ್ತು. ಉದಾಹರಣೆಗೆ 2013ರಲ್ಲಿ 6 ರೂ. ರಾಜ್ಯದ ತೆರಿಗೆಯಾಗಿದ್ದರೆ, 13 ರೂ. ಕೇಂದ್ರದ ತೆರಿಗೆಯಾಗಿರುತ್ತಿತ್ತು. ಈಗ ಕೇಂದ್ರದ ತೆರಿಗೆ 32 ರೂ. ಆಗಿದೆ. ರಾಜ್ಯ ವಿಧಿಸುವ ತೆರಿಗೆ ಸರಾಸರಿ 19 ರೂ. ಇದೆ. ಕೇಂದ್ರದ ತೆರಿಗೆಯೇ ಹೆಚ್ಚಿದೆ” ಎಂದು ಶಿವಸುಂದರ್‌ ವಿವರಿಸಿದರು.

ಇದನ್ನೂ ಓದಿರಿ: 5 ದಿನ ಪೊಲೀಸ್ ಕಸ್ಟಡಿಗೆ ಜಿಗ್ನೇಶ್: 2ನೇ ಪ್ರಕರಣದಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿ ದೂರಿದ್ದೇನು?

ಮುಂದುವರಿದು, “ಜಿಎಸ್‌ಟಿ ಜಾರಿಯಾದ ಮೇಲೆ ರಾಜ್ಯ ಸರ್ಕಾರಗಳಿಗೆ ಹೊಡೆತ ಬಿದ್ದಿದೆ. ಹಿಂದೆಲ್ಲ ಕಮರ್ಷಿಯಲ್‌‌ ಟ್ಯಾಕ್ಸ್‌, ಸೇಲ್ಸ್‌ ಟ್ಯಾಕ್ಸ್‌ ಸೇರಿದಂತೆ ಹಲವು ಟ್ಯಾಕ್ಸ್‌ಗಳಿದ್ದವು. ಅವುಗಳೆಲ್ಲ ಜಿಎಸ್‌ಟಿಯಲ್ಲಿ ವಿಲೀನವಾದವು. ಈಗ ಕೇಂದ್ರಕ್ಕೆ ತೆರಿಗೆ ಹೋಗಿ, ಅಲ್ಲಿಂದ ರಾಜ್ಯದ ಪಾಲು ಬರಬೇಕು. ಹೀಗಾಗಿ ರಾಜ್ಯಗಳು ಪೆಟ್ರೊಲಿಯಂ, ಲಿಕ್ಕರ್‌ ಮತ್ತು ಸ್ಟ್ಯಾಂಪ್‌ ಅಂಡ್ ಡ್ಯೂಟೀಸ್ ಮೂಲಗಳನ್ನು ಅವಲಂಭಿಸಿವೆ. ‘ನೇರ ತೆರಿಗೆ’ (ಡೈರೆಕ್ಟ್‌ ಟ್ಯಾಕ್ಸ್‌) ಕೂಡ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ರಾಜ್ಯ ಸರ್ಕಾರಗಳು ನೇರ ತೆರಿಗೆ ಹಾಕಲು ಸಾಧ್ಯವಿಲ್ಲ. ಒಟ್ಟಾರೆ ತೆರಿಗೆಯಲ್ಲಿ ಶೇ. 35ರಷ್ಟು ನೇರ ತೆರಿಗೆ ಬರುತ್ತದೆ. ಇದರಲ್ಲಿ ರಾಜ್ಯಕ್ಕೂ ಪಾಲಿರುತ್ತದೆ. ಮೊದಲು ಶೇ. 42 ರಾಜ್ಯಕ್ಕೆ ಪಾಲಿರುತ್ತಿತ್ತು. ಈಗ ಅದನ್ನು ಶೇ.32ಕ್ಕೆ ಇಳಿಸಿದ್ದಾರೆ. ಟ್ಯಾಕ್ಸ್‌ ಮೇಲೆ ಸೆಸ್‌ ಹಾಕುತ್ತಾರೆ. ಅದನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಇಂಧನಗಳ ಮೇಲೆ ರಾಜ್ಯ ಸರ್ಕಾರಗಳು ತೆರಿಗೆ ಹಾಕದಿದ್ದರೆ ಬೇರೆ ದಾರಿಗಳಿಲ್ಲ. ಜಿಎಸ್‌ಟಿ ಸಿಸ್ಟಮ್‌ ಇದಕ್ಕೆ ಕಾರಣ. ಜಿಎಸ್‌ಟಿಯಲ್ಲೂ ಸರಿಯಾಗಿ ರಾಜ್ಯದ ಪಾಲು ಕೊಡುತ್ತಿಲ್ಲ. ಹೀಗಾಗಿ ಇಂಧನದ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಮೊದಲು ಇಳಿಸಿ ಮಾರ್ಗದರ್ಶಿಯಾಗಿ ಉಳಿಯಬೇಕು” ಎಂದರು.

“ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲಿ ತೆರಿಗೆಯನ್ನು ಇಳಿಸಿಲ್ಲ. ಕೋವಿಡ್ ನಂತರದ ಸ್ಥಿತಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿ ತೆರಿಗೆಯನ್ನು ಇಳಿಸಿದ್ದಾರೆಯೇ? ಜನರ ಜೇಬಲ್ಲಿ ಉಳಿದ ದುಡ್ಡು ಸರ್ಕಾರಕ್ಕೆ ನಷ್ಟ ಎಂದು ಹೇಳಲು ಸಾಧ್ಯವೆ? ಜನರು ಹಣವನ್ನು ಖರ್ಚು ಮಾಡುತ್ತಾರಲ್ಲವೇ? ಯಾವುದಕ್ಕೆ ಖರ್ಚು ಮಾಡಿದರೂ ಶೇ. 18 ತೆರಿಗೆಯನ್ನು ಕಟ್ಟುತ್ತಾರಲ್ಲವೇ? ಜನರ ಬಳಿ ಹಣ ಉಳಿಸಿಕೊಂಡರೆ ರಾಜ್ಯ ಸರ್ಕಾರಕ್ಕೆ ನಷ್ಟವಾಯಿತು ಎಂಬ ದೃಷ್ಟಿಕೋನವೇ ತಪ್ಪು” ಎಂದು ಎಚ್ಚರಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...