ಕೋವಿಡ್ ಮನುಷ್ಯರನ್ನು ಮಾನವೀಯಗೊಳಿಸಬೇಕಿತ್ತು. ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಸರಿ ದಾರಿಯಲ್ಲಿ ನಡೆಯಲು ದೊಡ್ಡ ಪಾಠವಾಗಬೇಕಿತ್ತು. ಆದರೆ ಈ ಸಮಾಜ ಅದಕ್ಕೆ ತದ್ವಿರುದ್ಧವಾಗಿಯೇ ವರ್ತಿಸುತ್ತಿದೆ. ಕೋವಿಡ್ ಸಾಂಕ್ರಾಮಿಕದಿಂದ ಜಗತ್ತೆ ತತ್ತರಿಸಿದ್ದರು ಸಹ ಕೆಲವರು ತಮ್ಮ ವಿಕೃತತೆಯನ್ನು ಮುಂದುವರೆಸಿರುವುದು ಈ ಘಟನೆ ಸಾಕ್ಷಿಯಾಗಿದೆ. ಕೊರೋನಾ ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಮರಳುತ್ತಿದ್ದ ಮಹಿಳೆಯನ್ನು ಯುವಕರ ಗುಂಪು ಬೆನ್ನತ್ತಿ ಸಾಮೂಹಿಕವಾಗಿ ಅತ್ಯಾಚಾರಗೈದ ಬರ್ಬರ ಘಟನೆ ಅಸ್ಸಾಂನ ಚರೈದಿಯೋ ಜಿಲ್ಲೆಯಲ್ಲಿ 29 ಮೇ ಶನಿವಾರ ಸಂಜೆ ಏಳುಗಂಟೆ ಹೊತ್ತಿಗೆ ನಡೆದಿದೆ.
ಬೊರ್ಹಾತ್ ನಾಗರಮತಿ ಪ್ರದೇಶದ ಚಹ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆ ಕೆಲವು ದಿನಗಳ ಹಿಂದೆ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಐಸೊಲೇಶನ್ ನಲ್ಲಿದ್ದ ಸಂತ್ರಸ್ತೆ, ಆಕೆಯ ಪತಿ ಮತ್ತು ಮಗಳು ಆರೋಗ್ಯ ಬಿಗಡಾಯಿಸಿದ ಪರಿಣಾಮ ಸಾಪೇಕಾತಿ ಮಾಡೆಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯಿಂದ ಗುಣಮುಖರಾದ ಮಹಿಳೆಯ ಪತಿ ಮೇ 27 ಗುರುವಾರದಂದು ಆಸ್ಪತ್ರೆಯಿಂದ ಮರಳಿದ್ದರು. ಶನಿವಾರ ಏಪ್ರಿಲ್ 29 ರಂದು ಮಹಿಳೆ ಮತ್ತು ಮಗಳು ಕೂಡ ಆಸ್ಪತ್ರೆಯಿಂದ ಬಿಡುಗಡೆಯಾದರು.
ವ್ಯವಸ್ಥೆಯ ಕ್ರೌರ್ಯವೋ ಅಥವಾ ಮಹಿಳೆಯ ದುರಾದೃಷ್ಟವೋ ಅಸ್ಸಾಂ ನಲ್ಲಿ ಕೊರೋನಾ ಕರ್ಪ್ಯೂ ಜಾರಿಯಿರುವ ಕಾರಣ ಆಸ್ಪತ್ರೆಯಿಂದ ಮಹಿಳೆ ಮತ್ತು ಆಕೆಯ ಮಗಳಿಗೆ ಮನೆಗೆ ಮರಳಲು ಯಾವುದೇ ವಾಹನ ವ್ಯವಸ್ಥೆ ಇರಲಿಲ್ಲ. ಮಹಿಳೆ ಆಸ್ಪತ್ರೆಯವರ ಬಳಿ ತನ್ನ ಮನೆ ಆಸ್ಪತ್ರೆಯಿಂದ 25 ಕಿಲೋ ಮೀಟರ್ ದೂರವಿದೆ. ದಯವಿಟ್ಟು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ. ಆದರೆ ಆಸ್ಪತ್ರೆಯವರು ಮಹಿಳೆ ಮನವಿಗೆ ಸ್ಪಂದಿಸದೇ ಅಮಾನವೀಯವಾಗಿ ವರ್ತಿಸಿದರು. ತನ್ನ ಮನೆಗೆ ತೆರಳಲು ಬೇರೆ ಗತಿಯಿಲ್ಲದ ಮಹಿಳೆ ತನ್ನ ಮಗಳ ಜೊತೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಈ ವೇಳೆ ಯುವಕರ ಗುಂಪೊಂದು ಮಹಿಳೆಯ ಬೆನ್ನತ್ತಿ ಆಕೆಯ ಮಗಳ ಮುಂದೆಯೇ ಬರ್ಬರವಾಗಿ ಅತ್ಯಾಚಾರಗೈದಿದ್ದಾರೆ.
ಶನಿವಾರ, ಮೇ 29 ರ ಸಂಜೆ 7 ಗಂಟೆ ಸಮಯಕ್ಕೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಓಡಿದ ಸಂತ್ರಸ್ತೆಯ ಮಗಳು ಹತ್ತಿರದ ಗ್ರಾಮಸ್ಥರಿಗೆ ವಿಷಯವನ್ನು ತಿಳಿಸಿದ್ದಾಳೆ. ಗ್ರಾಮಸ್ಥರು ಪೊಲೀಸರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.
ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಗ್ರಾಮಸ್ಥರು ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಪೊಲೀಸರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ಮಹಿಳೆಯು ಚಿಂತಾಜನಕ ಸ್ಥಿತಿಯನ್ನು ತಲುಪಿದ್ದರು. ಸದ್ಯ ಸಂತ್ರಸ್ತ ಮಹಿಳೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಚರೈದಿಯೋ ಜಿಲ್ಲಾ ಪೊಲೀಸರು ಆರೋಪಿಗಳ ಬಂಧನಕ್ಕೆ ತೀವ್ರವಾದ ಶೋಧ ನಡೆಸಿದ್ದಾರೆ. ಈ ನಡುವೆ ಸ್ಥಳೀಯ ಶಾಸಕ ಧರ್ಮೇಶ್ವರ್ ಕೋನ್ವಾರ್ ಸಂತ್ರಸ್ತ ಮಹಿಳೆಯ ಮನೆಗೆ ಭೇಟಿ ನೀಡಿ ಬರ್ಬರ ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ್ದಾರೆ. ಕೋವಿಡ್ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡಂತ ಪರಿಸ್ಥಿತಿಯಲ್ಲೂ ಮಹಿಳೆಯ ಮನವಿಗೆ ಸ್ಪಂದಿಸದೇ ಆ್ಯಂಬುಲೆನ್ಸ್ ಅಥವಾ ಯಾವುದೇ ವಾಹನ ವ್ಯವಸ್ಥೆ ಕಲ್ಪಿಸದ ಆಸ್ಪತ್ರೆಯ ಅಮಾನವೀಯ ಕ್ರೌರ್ಯವೇ ಘಟನೆಗೆ ಕಾರಣವೆಂದು ದೂರಿದ್ದಾರೆ. ಜೊತೆಗೆ ಆಸ್ಪತ್ರೆ ಆಡಳಿತದ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ದೇಶಾದ್ಯಂತ ಜನರು ಕೊರೋನಾ ಸಾಂಕ್ರಾಮಿಕದಿಂದ ಸಾವು ನೋವಿನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕುಟುಂಬಸ್ಥರು ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಈ ನಡುವೆ ಕನಿಷ್ಟ ಅಂತಃಕರಣವಿಲ್ಲದ ವ್ಯವಸ್ಥೆ ತನ್ನ ಅಮಾನವೀಯ ಕ್ರೌರ್ಯದಿಂದ ಮಹಿಳೆಯನ್ನು ಇಂತಹ ದುಸ್ಥಿತಿಗೆ ದೂಡಿದೆ. ವ್ಯವಸ್ಥೆಯ ಕ್ರೌರ್ಯದ ನಡುವೆ ಮನುಷ್ಯನ ನೀಚತನ ಸೇರಿ ನಡೆಯುವ ಹೇಯ ಅಮಾನವೀಯ ಕೃತ್ಯಕ್ಕೆ ಅಸ್ಸಾಂ ನ ಮಹಿಳೆ ಒಳಗಾಗಿದ್ದಾರೆ. ಇಂತಹ ನೀಚ ಕೃತ್ಯಕ್ಕೆ ಮುಂದಾದ ಆರೋಪಿಗಳನ್ನು ಬಂಧಿಸಬೇಕು. ವ್ಯವಸ್ಥೆಯ ಕ್ರೌರ್ಯವನ್ನು ನಿಲ್ಲಿಸಲು ಸರ್ಕಾರಗಳು ಮುಂದಾಗಿ ಒಂದಷ್ಟು ಮಾನವೀಯ ಅಂತಃಕರಣದಿಂದ ಜನರ ಜೀವದ ರಕ್ಷಣೆಗೆ ಮುಂದಾಗ ಬೇಕಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕೋವಿಡ್ ಮೃತದೇಹಗಳನ್ನು ನದಿಗೆ ಎಸೆಯುತ್ತಿರುವ ಯುವಕರು: ಅಮಾನವೀಯ ಘಟನೆ ವೈರಲ್


