Homeಕರ್ನಾಟಕಆರ್‌ಎಸ್‌ಎಸ್ ಎನ್ನುವ ಛಾಯಾ ಪ್ರಭುತ್ವದ (ಶ್ಯಾಡೋ ಸರ್ಕಾರ) ಆರಂಭದ ದಿನಗಳು

ಆರ್‌ಎಸ್‌ಎಸ್ ಎನ್ನುವ ಛಾಯಾ ಪ್ರಭುತ್ವದ (ಶ್ಯಾಡೋ ಸರ್ಕಾರ) ಆರಂಭದ ದಿನಗಳು

- Advertisement -
- Advertisement -

1925ರಂದು ಸ್ಥಾಪನೆಯಾದ ಆರ್‌ಎಸ್‌ಎಸ್ ಸಂಘಟನೆ ನೂರು ವರ್ಷಗಳ ನಂತರ ಒಂದು ’ಡೀಪ್ ಸ್ಟೇಟ್’ ಆಗಿ ಬೆಳೆದಿದೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ, ಸಮಾಜದ ಎಲ್ಲಾ ವಲಯಗಳಲ್ಲಿ ತನ್ನ ಸಿದ್ಧಾಂತದ ಹಿತಾಸಕ್ತಿಯನ್ನು ಹಬ್ಬಿಸಿದೆ. ಪ್ರಭುತ್ವದ ನೀತಿಯನ್ನು ಪ್ರಭಾವಿಸುವ ಮಟ್ಟಕ್ಕೆ ವ್ಯಾಪಿಸಿಕೊಂಡಿದೆ. ಭಾರತದಂತಹ ಆಂಶಿಕ ಪ್ರಜಾಪ್ರಭುತ್ವದಲ್ಲಿ ಆರ್‌ಎಸ್‌ಎಸ್ ಒಂದು ಛಾಯಾ ಪ್ರಭುತ್ವವಾಗಿದೆ (ಶ್ಯಾಡೋ ಸರ್ಕಾರ).

ಇದರ ಕುರಿತು ವಿವರವಾಗಿ ಚರ್ಚಿಸಬೇಕಿದೆ. ಇದರ ಆರಂಭವೂ ಸಹ ಕುತೂಹಲಕಾರಿಯಾಗಿದೆ.

ವಾಲ್ಟರ್ ಅಂಡರ್ಸನ್ ’1916ರಲ್ಲಿ ಲಕ್ನೋದಲ್ಲಿನ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವಿನ ಒಡಂಬಡಿಕೆಯ ಪ್ರಕಾರ ಆಯ್ಕೆಯಾದ ವಿಧಾನಸಭೆಗಳಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಪ್ರಾತಿನಿಧ್ಯವನ್ನು ಒಪ್ಪಿಕೊಂಡಾಗ, ಹಿಂದೂ-ಮುಸ್ಲಿಂ ಸೌಹಾರ್ದದ ಸಣ್ಣ ಅವಧಿಯೊಂದು ಉದ್ಘಾಟನೆಯಾಯಿತು. ಮೊದಲ ಜಾಗತಿಕ ಯುದ್ಧದ ಅಂತ್ಯದಲ್ಲಿ ಇಸ್ತಾಂಬುಲ್‌ನ ಖಲೀಫನನ್ನು ದುರ್ಬಲಗೊಳಿಸುವ ಸಲುವಾಗಿ ಬ್ರಿಟಿಷ್ ಮತ್ತು ಅವರ ಮಿತ್ರರ ನಡುವೆ ಒಪ್ಪಂದವಾಗಿತ್ತು. ಇದರಿಂದ ರಕ್ಷಿಸಲು ಶುರುವಾದ ಮುಸ್ಲಿಂ ಖಿಲಾಫತ್ ಚಳರವಳಿಯನ್ನು ಬೆಂಬಲಿಸಲು ಗಾಂಧೀಜಿ ಮತ್ತು ಕಾಂಗ್ರೆಸ್‌ನ ದೊಡ್ಡ ಬಣವೊಂದು ಒಪ್ಪಿದಾಗ, ಪರಸ್ಪರ ಸಹಕಾರದ ಬಾಗಿಲುಗಳು ತೆರೆದುಕೊಂಡವು. ಇದರ ಮುಂದುವದ ಭಾಗವಾಗಿ ಗಾಂಧೀಜಿ ಅಸಹಕಾರ ಚಳವಳಿಯನ್ನು ಖಿಲಾಫತ್ ಚಳವಳಿಯೊಂದಿಗೆ ಸಂಯೋಜಿಸಿದರು. ಇದನ್ನು ಔಪಚಾರಿಕವಾಗಿ 1 ಆಗಸ್ಟ್, 1920ರಂದು ಉದ್ಘಾಟಿಸಿದ್ದರೂ, ಕಾಂಗ್ರೆಸ್‌ನ ವಿಶೇಷ ಅಧಿವೇಶನದಲ್ಲಿ (ಸೆಪ್ಟೆಂಬರ್ 4-9, 1920, ಕಲ್ಕತ್ತಾ) ಕಾಂಗ್ರೆಸ್‌ನ ಅನುಮೋದನೆಯನ್ನು ಪಡೆದರು. ಆ ನಿರ್ಣಯದಲ್ಲಿ ಎರಡು ಕುಂದುಕೊರತೆಗಳನ್ನು ಪಟ್ಟಿ ಮಾಡಲಾಗಿತ್ತು: (1) ಮುಸ್ಲಿಮರ ಖಿಲಾಫತ್ ಪ್ರಶ್ನೆ ಕುರಿತು ಬ್ರಿಟಿಷ್‌ರು ತೃಪ್ತಿಕರವಾದ ಸೂಚನೆ ನೀಡದಿರುವುದು; (2) ಬ್ರಿಟಿಷ್‌ರು ಪಂಜಾಬ್‌ನಲ್ಲಿ ತಮ್ಮ ಅಧಿಕಾರಿಗಳ ಕ್ರೂರ ಕಾರ್ಯಗಳಿಗೆ ಶಿಕ್ಷೆ ನೀಡದಿರುವುದು. ಈ ನಿರ್ಣಯಗಳಲ್ಲಿ ಸರಣಿ ಬಹಿಷ್ಕಾರಗಳನ್ನು ಸೂಚಿಸಲಾಗಿತ್ತು. ಕಾಂಗ್ರೆಸ್ ಅಧಿವೇಶನದಲ್ಲಿ ಈ ಬೆಳವಣಿಗೆಗೆ ದೊಡ್ಡ ವಿರೋಧವಿತ್ತು. ವಿಷಯಗಳ ಸಮಿತಿಯಲ್ಲಿ ಏಳು ಮತಗಳ ಅಂತರದಿಂದ ಇದು ಅಂಗೀಕರಿಸಲ್ಪಟ್ಟಿತು. ಬಂಗಾಳ ಮತ್ತು ಕೇಂದ್ರ ಪ್ರಾಂತ್ಯಗಳಿಂದ ಬಂದ ಪ್ರತಿನಿಧಿಗಳು ಮೊಂಟ್ಯಾಗ್ಯೂ-ಚೆಲ್ಮ್ಸ್‌ಫರ್ಡ್ ಸುಧಾರಣೆಗಳಿಂದ ಸ್ಥಾಪನೆಯಾಗುವ ಹೊಸ ಶಾಸಕಾಂಗ ಸಂಸ್ಥೆಗಳಿಗೆ ಬಹಿಷ್ಕಾರದ ಕುರಿತು ತೀವ್ರ ತಕರಾರು ವ್ಯಕ್ತಪಡಿಸಿದರು. ಅನೇಕ ಮಹಾರಾಷ್ಟ್ರದ ಕಾಂಗ್ರೆಸ್ ಪ್ರತಿನಿಧಿಗಳು ಅಸಹಕಾರ ಚಳವಳಿಯ ಉದ್ದೇಶಗಳು ಮತ್ತು ಸಾಧನೆಗಳ ಕುರಿತು ಸ್ಪಷ್ಟವಾಗಿ ಅಸಮ್ಮತಿ ವ್ಯಕ್ತಪಡಿಸಿದರು. ಸಭೆಯ ನಂತರ, ಅಕ್ಟೋಬರ್ 3ರಂದು ಗಾಂಧೀಜಿ ಮುಖ್ಯ ಹೋಮ್‌ರೂಲ್ ಲೀಗ್‌ರನ್ನು ಒಗ್ಗೂಡಿಸಿ, ಅದರ ಹೆಸರು ಮತ್ತು ಪಂಥವನ್ನು ಬದಲಾಯಿಸಿದರು. ಬಾಂಬೆ ಪ್ರಾಂತದಿಂದ ಬಂದ 19 ಪ್ರಮುಖ ಸದಸ್ಯರು ತಕ್ಷಣ ರಾಜೀನಾಮೆ ನೀಡಿದರು. 10 ಡಿಸೆಂಬರ್ 1920ರಂದು ತಿಲಕರ ಪ್ರಮುಖ ಸಹವರ್ತಿ ಜಿ.ಎಸ್. ಖರ್ಪಡೆ ಅವರು ಗಾಂಧೀಜಿಯ ಯೋಜನೆಯನ್ನು ಖಂಡಿಸುವ ನಿಲುವಳಿಯನ್ನು ಪ್ರಕಟಿ ’ಈಗ ಬೋಧಿಸುತ್ತಿರುವ ಅಸಹಕಾರ ಚಳವಳಿಯು ತಾಳಿಕೆ ಬರುವಂತಹ ಶಕ್ತಿಗಳನ್ನು ಸೃಷ್ಟಿಸಬಹುದು, ಆದರೆ ರಾಜಕೀಯ ಹೋರಾಟಕ್ಕೆ ಅಗತ್ಯವಾದ ಶಕ್ತಿ, ಸಂಪನ್ಮೂಲಗಳು ಮತ್ತು ವ್ಯವಹಾರಿಕ ಜ್ಞಾನವನ್ನು ಬೆಳೆಸಲಾರದೆಂದು ಹೇಳಿದರು’ ಎಂದು ಬರೆಯುತ್ತಾರೆ. (ಇಪಿಡಬ್ಲಿಯು, 11 ಮಾರ್ಚ 1972)

ಗಾಂಧಿಜೀ

1920ರ ಡಿಸೆಂಬರ್ ಕಡೆಯ ವಾರದಲ್ಲಿ ನಾಗಪುರದಲ್ಲಿ ಕಾಂಗ್ರೆಸ್‌ನ ನಿಗದಿತ ಅಧಿವೇಶನ ನಡೆಯಿತು. ಗಾಂಧೀಜಿಯ ಕಾರ್ಯಕ್ರಮಗಳಿಗೆ ತೀವ್ರವಾಗಿ ವಿರೋಧಿಸುತ್ತಿದ್ದ ತಿಲಕರ ಹತ್ತಿರದ ಸಹವರ್ತಿಗಳಾಗಿದ್ದ ಕಾಂಗ್ರೆಸ್ ನಾಯಕರ ಕ್ಷೇತ್ರದಲ್ಲಿ ಗಾಂಧೀಜಿ ಕಾಂಗ್ರೆಸ್‌ನ ನಿರ್ವಿವಾದ ನಾಯಕರಾಗಿ ಹೊರಹೊಮ್ಮಿದರು. ಇದೊಂದು ವೈರುಧ್ಯ. ಅದೇ ಕಾಲದಲ್ಲಿ ಆರ್‌ಎಸ್‌ಎಸ್‌ನ ಸ್ಥಾಪಕರಲ್ಲೊಬ್ಬರಾದ ಕೇಶವ ಬಾಲಕೃಷ್ಣ ಹೆಡ್ಗೇವಾರ್ ನಾಗಪುರದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. 1920ರ ಈ ನಾಗಪುರ ಕಾಂಗ್ರೆಸ್ ಅಧಿವೇಶನಕ್ಕಾಗಿ ಹೆಡ್ಗೇವಾರ್ ಯುವ ಕಾಂಗ್ರೆಸ್ ಸ್ವಯಂಸೇವಕರನ್ನು ಸಂಘಟಿಸಿದರು. ಹೆಡ್ಗೇವಾರ್ ಸಂಘಟಿಸಿದ ಸ್ವಯಂಸೇವಕ ಹೆಸರು ಮತ್ತು ಸಮವಸ್ತ್ರವನ್ನು ಮುಂದೆ ಆರ್‌ಎಸ್‌ಎಸ್ ತನ್ನ ಸಂಘಟನೆಯ ಸಂಕೇತವಾಗಿ ಅಳವಡಿಸಿಕೊಂಡಿತು.

105 ವರ್ಷಗಳ ಹಿಂದೆಯೇ ಮುಸ್ಲಿಂವಿರೋಧಿ ಧೋರಣೆಯ ಮನಸ್ಸುಗಳು ಕಾಂಗ್ರೆಸ್‌ನ ಪಕ್ಷದೊಳಗೆ ಮುಲುಕುತ್ತಿದ್ದವು ಎನ್ನುವುದಕ್ಕೆ ಮೇಲಿನ ಘಟನೆಗಳು ಉದಾಹರಣೆಯಾಗಿವೆ. ಆರ್‌ಎಸ್‌ಎಸ್ ಸ್ಥಾಪಕರಲ್ಲಿ ಒಬ್ಬರಾದ ಹೆಡ್ಗೇವಾರ್ ಅವರು ಇದರ ಭಾಗವಾಗಿಯೇ ಬೆಳೆದರು, ಕಾಂಗ್ರೆಸ್ ಪಕ್ಷ ಮೂಲಕ ರಾಜಕೀಯ ಜೀವನದ ಆರಂಭಿಸಿದರು. ಬಾಲ ಗಂಗಾಧರ ತಿಲಕರ ಪ್ರಭಾವದಲ್ಲಿದ್ದು, ಅವರ ಸ್ವರಾಜ್ ಪಕ್ಷದ ಸದಸ್ಯರಾಗಿ ಆರಂಭದಲ್ಲಿ ಚಟುವಟಿಕೆ ನಡೆಸಿದರು. 1915-21ರ ಅವಧಿಯಲ್ಲಿ ಪ್ರಮುಖ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ತಮ್ಮ ವಿದ್ಯಾರ್ಥಿ ದಿನಗಳಲ್ಲಿ ನಾಗಪುರದಲ್ಲಿ ಸ್ವದೇಶಿ ಮತ್ತು ಬಹಿಷ್ಕಾರ ಚಳವಳಿಗಳನ್ನು ಬೆಂಬಲಿಸಿದರು. 1918ರಲ್ಲಿ ಮಹಾರಾಷ್ಟ್ರ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಸದಸ್ಯರಾದರು. 1923ರಲ್ಲಿ ನಾಗಪುರದಲ್ಲಿ ಆರ್‌ಎಸ್‌ಎಸ್ ಸ್ಥಾಪನೆಗೆ ಮುಂದಾದರೂ ಸಹ 1925ರವರೆಗೆ ಕಾಂಗ್ರೆಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಒಟ್ಟಾರೆಯಾಗಿ, ಹೆಡ್ಗೇವಾರ್ ಕಾಂಗ್ರೆಸ್‌ನಲ್ಲಿ ಹಿಂದೂ ರಾಷ್ಟ್ರೀಯವಾದದ ಯುಶಕ್ತಿಯನ್ನು ಸಂಘಟಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದರು. ಮುಂದೆ ಪ್ರತ್ಯೇಕ ಹಿಂದೂ ಸಂಘಟನೆಯ ಅಗತ್ಯವನ್ನು ಗುರುತಿಸಿ, ಆರ್‌ಎಸ್‌ಎಸ್‌ನ್ನು ಸ್ಥಾಪಿಸಿ ಕಾಂಗ್ರೆಸ್‌ನಿಂದ ದೂರವಾದರು. ಅವರ ಒಂದು ದಶಕದ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಅವಧಿಯಲ್ಲಿ ಆ ಪಕ್ಷದಲ್ಲಿ ಮುಸ್ಲಿಂ ವಿರೋಧಿ ಸ್ವಯಂಸೇವಕರನ್ನು ರೂಪಿಸುವಲ್ಲಿ ಯಶಸ್ವಿಯಾದರು. ಇಂದಿಗೂ ಅಲ್ಲಿನ ಅನೇಕ ಪ್ರಮುಖ ಮುಖಂಡರಲ್ಲಿ ಸುಪ್ತವಾಗಿರುವ ಈ ಮನಸ್ಥಿತಿಯು ಸಂದರ್ಭ ಸಿಕ್ಕಾಗಲೆಲ್ಲಾ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾಗುತ್ತಿದೆ.

ತಮ್ಮ ವಿದ್ಯಾರ್ಥಿ ದಿನಗಳಲ್ಲಿ ತಿಲಕ್, ಬಿ.ಎಸ್.ಮೂಂಜೆ ಅವರ ಪ್ರಭಾವದಲ್ಲಿ ಬೆಳೆದ ಹೆಡ್ಗೇವಾರ್ ಯುವಜನತೆಗೆ ಮಿಲಿಟರಿ ತರಬೇತಿ ಮತ್ತು ರಾಜಕೀಯವಾಗಿ ಚಿತ್ಪಾವನ ಬ್ರಾಹ್ಮಣರ ಸಂಘಟನೆ ಎರಡನ್ನೂ ಒಟ್ಟೊಟ್ಟಿಗೇ ಕಲಿಸಿದರು. 1920ರ ನಾಗಪುರದ ಕಾಂಗ್ರೆಸ್ ಅಧಿವೇಶನದಲ್ಲಿ ತಮ್ಮ ಸಹವರ್ತಿ ಚಿತ್ಪಾವನ ಬ್ರಾಹ್ಮಣ ವಿ.ಎಲ್.ಪರಾಂಜಪೆ ಜೊತೆಗೂಡಿ 1200 ಸ್ವಯಂಸೇವಕರನ್ನು ಸಂಘಟಿಸಿದ್ದರು. ಈ ರೀತಿಯಲ್ಲಿ ಚಿತ್ಪಾವನ ಬ್ರಾಹ್ಮಣರ ಕೂಟವಾಗಿ ತಿಲಕರ ಮಾರ್ಗದರ್ಶನದಲ್ಲಿ ಮೂಂಜೆ, ಪರಾಂಜಪೆ ಮತ್ತು ಹೆಡ್ಗೇವಾರ್ ಅವರು ಆಗಿನ ಕಾಂಗ್ರಸ್ ಪಕ್ಷದ ಪ್ರಭಾವ, ಜನಪ್ರಿಯತೆ ಮತ್ತು ಕಾರ್ಯಕರ್ತರನ್ನು ಬಳಸಿಕೊಂಡು ತಮ್ಮ ’ಬ್ರಾಹ್ಮಣಶಾಹಿ-ಹಿಂದುತ್ವ ರಾಷ್ಟ್ರೀಯವಾದ’ದ ಸಿದ್ಧಾಂತದ ಬೀಜಗಳನ್ನು ಬಿತ್ತಿದರು. ಈ ಮೂಲಕ ಆರ್‌ಎಸ್‌ಎಸ್ ಸ್ಥಾಪನೆಗೆ ಪೂರ್ವ ಸಿದ್ಧತೆ ಮಾಡಿಕೊಂಡರು. ಆದರೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಇದರ ಅರಿವೂ ಇಲ್ಲದೆ ಪರೋಕ್ಷವಾಗಿ ಆರ್‌ಎಸ್‌ಎಸ್ ಬೆಳವಣಿಗೆಗೆ ಕಾರಣರಾಗಿದ್ದು ವಿರೋಧಾಭಾಸ.

1920-21ರ ಸಂದರ್ಭದಲ್ಲಿ ಖಿಲಾಫತ್ ಚಳುವಳಿಯನ್ನು ಬೆಂಬಲಿಸಿ ಪ್ರಚೋದನಾತ್ಮಕ ಹೇಳಿಕೆ ನೀಡಿದ ಕಾರಣಕ್ಕಾಗಿ ಹೆಡ್ಗೇವಾರ್ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಇವರ ಜೀವನಚರಿತ್ರೆಯನ್ನು ಪ್ರಕಟಿಸಿರುವ ಆರ್‌ಎಸ್‌ಎಸ್ ಅದರಲ್ಲಿ ಒಂದು ಕಡೆ ’ಸ್ವಾತಂತ್ರ್ಯ ಹೋರಾಟದ ಸಂದರ್ಭ ಹೆಡ್ಗೇವಾರ್ ಅವರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿತು. ಬೇರೆ ದಾರಿಯನ್ನು ಹುಡುಕಬೇಕೆಂದು ಅವರು ನಿರ್ಧರಿಸಿದರು. ಆಗಿನ ಸ್ವಾತಂತ್ರ್ಯ ಹೋರಾಟದ ಶೈಲಿಗಿಂತ ಭಿನ್ನವಾಗಿ ಅವರು ಶಾಖಾ ಶೈಲಿಯ ಹೊಸ ಮಾದರಿಯನ್ನು ಕಟ್ಟಲು ಶ್ರಮಿಸಿದರು’ ಎಂದು ಹೇಳಿದೆ. ಮುಂದಿನ ವರ್ಷಗಳಲ್ಲಿ ಸ್ವಾತಂತ್ರ ಚಳವಳಿಯ ಐಕ್ಯತೆಯನ್ನು ಮುರಿಯಲು ಜನರನ್ನು ಧರ್ಮದ ಆಧಾರದಲ್ಲಿ ಪ್ರತ್ಯೇಕಿಸಬೇಕೆಂಬ ಮಹಮದ್ ಅಲಿ ಜಿನ್ನಾ ಆರಿಸಿಕೊಂಡ ದಾರಿಯನ್ನು ಹೆಡ್ಗೇವಾರ್ 1921ರ ಸಂದರ್ಭದಲ್ಲಿಯೇ ಕಂಡುಕೊಂಡಿದ್ದರು. 1930ರಲ್ಲಿ ಎರಡನೇ ಬಾರಿ ಮತ್ತು ಕಡೆಯ ಬಾರಿ ಹೆಡ್ಗೇವಾರ್ ಜೈಲಿಗೆ ಹೋದರು. ಅದರ ಕಾರಣಗಳೂ ಸಹ ಕುತೂಹಲಕಾರಿಯಾಗಿವೆ. ಆರ್‌ಎಸ್‌ಎಸ್ ಪ್ರಕಟಿಸಿದ ಅದೇ ಜೀವನಚರಿತ್ರೆಯಲ್ಲಿ ಈ ಕೆಳಗಿನಂತೆ ಬರೆಯಲಾಗಿದೆ: ’1930ರಲ್ಲಿ ಗಾಂಧಿಯವರು ಸರ್ಕಾರದ ವಿವಿಧ ಕಾನೂನುಗಳನ್ನು ಭಂಗ ಮಾಡಲು ಕರೆ ಕೊಟ್ಟರು. ಸ್ವತಃ ಗಾಂಧಿಯವರು ದಂಡಿ ಸತ್ಯಾಗ್ರಹವನ್ನು ಪ್ರಾರಂಭಿಸುವುದರ ಮೂಲಕ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಡಾಕ್ಟರ್ ಸಾಹೇಬರು (ಹೆಡ್ಗೇವಾರ್) ಸಂಘ ಪರಿವಾರವು ಈ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ ವೈಯಕ್ತಿಕವಾಗಿ ಭಾಗವಹಿಸ ಬಯಸುವವರು ಅವರ ಇಷ್ಟ ಎಂದು ಎಲ್ಲಾ ಕಡೆಗೂ ಘೋಷಿಸಿದರು’. ಇದರ ಅರ್ಥ ಸಂಘ ಪರಿವಾರದ ಸದಸ್ಯರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿತ್ತು. ಕುತೂಹಲವೆಂದರೆ ಹೆಡ್ಗೇವಾರ್ ಸಾಹೇಬರು ಈ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು.

ಬಾಲ ಗಂಗಾಧರ ತಿಲಕ

ಇದರ ಹಿಂದಿನ ತಂತ್ರಗಳನ್ನು ಕುರಿತು ಜೀವನಚರಿತ್ರೆಯಲ್ಲಿ ಹೀಗೆ ಬರೆಯಲಾಗಿದೆ: ’ಡಾ. (ಹೆಡ್ಗೇವಾರ್) ಸಾಹೇಬರು ಸ್ವಾತಂತ್ರಪ್ರಿಯರನ್ನು, ನಿಸ್ವಾರ್ಥ ಹೋರಾಟಗಾರರನ್ನು ಜೈಲಿನಲ್ಲಿ ಭೇಟಿಯಾಗಿ ಸಂಘ ಪರಿವಾರದ ಕುರಿತಾಗಿ ಚರ್ಚಿಸಲು ಬಯಸಿದರು. ಆ ಮೂಲಕ ಅವರ ಮನಸ್ಸನ್ನು ಗೆಲ್ಲಲು ಬಯಸಿದ್ದರು ಮತ್ತು ಅವರನ್ನು ಸಂಘದ ಸದಸ್ಯರನ್ನಾಗಿ ಮಾಡಲು ಉತ್ಸುಕರಾಗಿದ್ದರು. ಹೀಗಾಗಿ ಜೈಲಿನಲ್ಲಿದ್ದಾಗಲೂ ಡಾಕ್ಟರ್ ಸಾಹೇಬರು ಸುಮ್ಮನೆ ಕೂಡಲಿಲ್ಲ. ಕಾಂಗ್ರೆಸ್ ನಾಯಕರನ್ನು ನಿರಂತರ ಭೇಟಿಯಾಗುತ್ತಿದ್ದರು. ಸಂಘ ಪರಿವಾರದ ಆಶಯಗಳನ್ನು ಅವರಿಗೆ ಮನದಟ್ಟು ಮಾಡಿಕೊಡುತ್ತಿದ್ದರು. ಆರೆಸ್ಸೆಸ್ ಸಂಘಟನೆಯನ್ನು ವಿಸ್ತಾರಗೊಳಿಸುವ ಯೋಜನೆಯೊಂದಿಗೆ ಅವರು ಜೈಲಿನಿಂದ ಹೊರಬಂದರು’. ಮೇಲಿನ ಮಾತುಗಳಿಂದ ನಿಚ್ಚಳವಾಗಿ ನಮಗೆ ಗೋಚರವಾಗುವುದೇನೆಂದರೆ ಹೆಡ್ಗೇವಾರ್ ಅವರು ಕೇವಲ ತಮ್ಮ ಸಂಘಟನೆಯ ಬಲವರ್ಧನೆಗೋಸ್ಕರ ಮತ್ತು ಅದರ ಚಟುವಟಿಕೆಗಳನ್ನು ವಿಸ್ತಾರಗೊಳಿಸುವುದಕ್ಕೋಸ್ಕರ ಮಾತ್ರ ಜೈಲಿಗೆ ಹೋದರು ಹೊರತಾಗಿ ಯಾವುದೇ ದೇಶಪ್ರೇಮದಿಂದಲ್ಲ. ಅವರ ಉದ್ದೇಶ ಆಗಿನ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಒಡೆಯುವುದಾಗಿತ್ತು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸಂಘ ಪರಿವಾರದ ಈ ಗುಪ್ತ ಕಾರ್ಯಸೂಚಿಗಳು ಗೊತ್ತಾಗಿ 1934ರಲ್ಲಿ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯು ಕಾಂಗ್ರೆಸ್ ಸದಸ್ಯರು ಆರೆಸ್ಸೆಸ್, ಹಿಂದೂ ಮಹಾಸಭಾದ ಸದಸ್ಯರಾಗುವುದನ್ನು ನಿಷೇಧಿಸಿತು. ಆದರೆ ಕಾಂಗ್ರೆಸ್ ಕರೆಯ ಮೇಲೆ ಎರಡು ಬಾರಿ ಜೈಲಿಗೆ ಹೋದ ಹೆಡ್ಗೇವಾರ್ ಅಲ್ಲಿ ಕಾಂಗ್ರೆಸ್ ಪಕ್ಷವನ್ನೇ ಒಡೆಯುವ ಕಾರ್ಯಕ್ಕೆ ಕೈ ಹಾಕಿದ್ದರು.

18 ಮಾರ್ಚ್ 1999ರಂದು ನವದೆಹಲಿಯಲ್ಲಿ ಆಗಿನ ಪ್ರಧಾನ ಮಂತ್ರಿ ವಾಜಪೇಯಿಯವರು ಹೆಡ್ಗೇವಾರ್ ಅವರ 110ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ, ’ಸ್ವಾತಂತ್ರ್ಯ ಹೋರಾಟಗಾರ’ ಹೆಡ್ಗೇವಾರ್ ಭಾವಚಿತ್ರದ ಸ್ಟಾಂಪ್‌ಅನ್ನು ಬಿಡುಗಡೆಗೊಳಿಸಿದರು. ಆರ್‌ಎಸ್‌ಎಸ್ ನಾಯಕನ ಕುರಿತಾದ ಸ್ಟಾಂಪ್‌ಅನ್ನು ಬಿಡುಗಡೆಗೊಳಿಸಿದ್ದು ಇತಿಹಾಸದಲ್ಲೇ ಪ್ರಥಮ. ಆದರೆ ಹೆಡ್ಗೇವಾರ್ ಅವರನ್ನು ಆರ್‌ಎಸ್‌ಎಸ್ ಸಂಸ್ಥಾಪಕ ಎನ್ನುವ ಕಾರಣಕ್ಕೆ ಮತ್ತು ಆ ಮೂಲಕ ಹಿಂದೂ ರಾಷ್ಟ್ರವೆನ್ನುವ ಸಿದ್ಧಾಂತವನ್ನು ಪ್ರೋತ್ಸಾಹಿಸಿದರು ಎನ್ನುವ ಕಾರಣಕ್ಕೆ ಅಧಿಕೃತವಾಗಿ ಗೌರವಿಸಲಾಗಿದೆ.

ಇದನ್ನೂ ಓದಿ: ಆರ್‌ಎಸ್‌ಎಸ್‌ನವರು ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸಿದ್ದರು, ಇವರ ಬಗ್ಗೆ ಎಚ್ಚರ ಇರಲಿ : ಸಿಎಂ ಸಿದ್ದರಾಮಯ್ಯ

ವಾಲ್ಟರ್ ಅಂಡರ್ಸನ್ ’20 ಆಗಸ್ಟ್ 1923ರಂದು ಹಿಂದೂ ಮಹಾಸಭಾ ಆಯೋಜಿಸಿದ್ದ ಸಮಾವೇಶದಲ್ಲಿ ಅನೇಕ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು. ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯಗಳಿದ್ದ ಅನೇಕ ಹಿಂದೂ ಸಂಘಟನೆಗಳು ಈ ಸಾಮಾನ್ಯ ಹಿಂದೂ ವೇದಿಕೆಯಲ್ಲಿ ಒಗ್ಗೂಡಿದವು. ಅಲ್ಲಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಮಹತ್ವದ್ದಾಗಿದ್ದವು, ಏಕೆಂದರೆ ಅವು ಹಿಂದೂ ಇಂಡಿಯಾದ ಹಿಂದೂ-ಮುಸ್ಲಿಂ ಸಂಬಂಧಗಳು ಕ್ಷೀಣಿಸುತ್ತಿರುವುದರ ಬಗ್ಗೆ ಮತ್ತು ಹಿಂದೂ ಸಮುದಾಯದ ದೌರ್ಬಲ್ಯಗಳ ಬಗ್ಗೆ ಆತಂಕಗಳನ್ನು ಪ್ರತಿಬಿಂಬಿಸುತ್ತಿದ್ದವು. ಹಿಂದೂ ಸಮುದಾಯದಲ್ಲಿ ವಿಭಜನೆ ಆ ಸಭೆಯ ಮುಖ್ಯ ವಿಷಯವಾಗಿತ್ತು. ಮುಸ್ಲಿಮರು ಒಗ್ಗೂಡಿದ್ದು, ಹಿಂದುಗಳಿಗೆ ಶಿಕ್ಷೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಊಹಿಸಲಾಯಿತು. ಈ ಹಿಂದೂ ಮಹಾಸಭಾ ಅಧಿವೇಶನಕ್ಕೆ ಅಧ್ಯಕ್ಷರಾಗಿದ್ದ ಮದನ್ ಮೋಹನ್ ಮಾಳವೀಯ ಅವರು ತಮ್ಮ ಭಾಷಣದಲ್ಲಿ, ’ಸಮಾನರ ನಡುವೆ ಮಾತ್ರ ಗೆಳೆತನ ಸಾಧ್ಯ. ಹಿಂದುಗಳು ತಮ್ಮನ್ನು ಬಲಿಷ್ಠಗೊಳಿಸಿಕೊಂಡು, ಮೊಹಮ್ಮಡನರಲ್ಲಿನ ವರ್ಗವನ್ನು ಎಚ್ಚರಿಸಿದರೆ ಅವರು ಹಿಂದುಗಳನ್ನು ದೋಚಲು ಮತ್ತು ಅಪಮಾನ ಮಾಡಲು ಸಾಧ್ಯವಿಲ್ಲ, ಇದನ್ನು ತಿಳಿದುಕೊಂಡರೆ ಗಟ್ಟಿಯಾದ ತಳಹದಿಯ ಮೇಲೆ ಏಕತೆಯು ಸ್ಥಾಪನೆಯಾಗುತ್ತದೆ’ ಎಂದು ಹೇಳಿದರು. ಅವರ ಉದ್ದೇಶ ಎಲ್ಲಾ ಬಾಲಕ-ಬಾಲಕಿಯರಿಗೆ ಶಿಕ್ಷಣ ನೀಡುವುದು, ಅಖಾಡಾಗಳನ್ನು (ವ್ಯಾಯಾಮಶಾಲೆಗಳು) ಪ್ರಾರಂಭಿಸುವುದು, ಹಿಂದೂ ಮಹಾಸಭೆಯ ನಿರ್ಧಾರಗಳನ್ನು ಜನರು ಪಾಲಿಸುವಂತೆ ಮಾಡಲು ಸ್ವಯಂಸೇವಕ ವಾಹಿನಿಯನ್ನು ಸ್ಥಾಪಿಸುವುದು’ ಎಂದು ಅಂಡರ್ಸನ್ ಬರೆಯುತ್ತಾರೆ. (ಇಪಿಡಬ್ಲಿಯು, 11 ಮಾರ್ಚ 1972)

ಡಿಸೆಂಬರ್ 1886ರಲ್ಲಿ ಎರಡನೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸುವುದರ ಮೂಲಕ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ ಮಾಳವೀಯ 1909-1918ರ ಒಂಬತ್ತು ವರ್ಷಗಳ ಅವಧಿಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. 1916ರ ಲಖ್ನೋ ಒಪ್ಪಂದದ ಅಡಿಯಲ್ಲಿ ಮುಸ್ಲಿಂರಿಗೆ ಪ್ರತ್ಯೇಕ ಮತಕ್ಷೇತ್ರ ಕಲ್ಪಿಸುವುದನ್ನು ವಿರೋಧಿಸಿದರು. 1933ರ ಕಲ್ಕತ್ತ (ಈಗಿನ ಕೊಲ್ಕತ್ತ) ಅಧಿವೇಶನದಲ್ಲಿ ನಾಲ್ಕನೇ ಬಾರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. 20ನೇ ಶತಮಾನದ ಆರಂಭದ ವರ್ಷಗಳಲ್ಲಿ ಕಾಂಗ್ರೆಸ್ ಪ್ರತಿಪಾದಿಸುತ್ತಿದ್ದ ಸರ್ವಧರ್ಮಗಳನ್ನು ಒಳಗೊಳ್ಳುವ ಸುಧಾರಣವಾದಿ ಸಿದ್ಧಾಂತವನ್ನು ಅಲ್ಲಿದ್ದ ಆರ್ಯ ಸಮಾಜದ ಮುಖಂಡರಾದ ಮಾಳವೀಯ, ಲಾಲಾ ಲಜಪತ್ ರಾಯ್‌ರಂತಹ ಹಿಂದೂ ಸಂಪ್ರದಾಯವಾದಿಗಳಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. 1906ರಲ್ಲಿ ಸ್ಥಾಪಿತಗೊಂಡ ಮುಸ್ಲಿಂ ಲೀಗ್‌ನ್ನು ಎದುರಿಸಲು ತಮ್ಮದೇ ಆದ ಒಂದು ಹಿಂದೂ ಸಂಘಟನೆಯ ಅವಶ್ಯಕತೆಯನ್ನು ಮನಗಂಡ ಈ ಹಿಂದೂ ಸಂಪ್ರದಾಯವಾದಿಗಳು 1915ರಲ್ಲಿ ಹರಿದ್ವಾರದಲ್ಲಿ ’ಹಿಂದೂ ಮಹಾ ಸಭಾ’ ಸಂಘಟನೆಯನ್ನು ಸ್ಥಾಪಿಸಿದರು. ಇದರ ಮುಖ್ಯ ಉದ್ದೇಶ ಮುಸ್ಲಿಂ ಧರ್ಮದಲ್ಲಿರುವವರನ್ನು ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುವುದು, ಹಿಂದೂಗಳಿಗೆ ರಾಜಕೀಯ, ಶೈಕ್ಷಣಿಕ ಅವಕಾಶಗಳಿಗಾಗಿ ಹೋರಾಟಗಳನ್ನು ನಡೆಸುವುದು. ಹಿಂದೂ ಸನಾತನವಾದದಲ್ಲಿ ನಂಬಿಕೆ ಇಟ್ಟಿದ್ದ ಈ ಸಂಘಟನೆ ಮುಂದುವರಿದ ಬ್ರಾಹ್ಮಣರ ನಾಯಕತ್ವದಲ್ಲಿತ್ತು. ಮಹಿಳೆ ಕುರಿತಾಗಿ ಕರ್ಮಠ ನಂಬಿಕೆಗಳಿದ್ದವು. 1920ರ ಹೊತ್ತಿಗೆ ಮಾಳವೀಯ, ಲಜಪತ್‌ರಾಯ್‌ರಂತಹ ಸುಧಾರಣವಾದಿಗಳ ಪ್ರಭಾವ ಕಡಿಮೆಯಾಗುತ್ತ ಹಿಂದೂ ಮತೀಯವಾದಿಗಳಾದ ಡಾ.ಮೂಂಜೆ, ಸಾವರ್ಕರ್, ಕೇಲ್ಕರ್‌ರಂತಹವರ ಪ್ರಭಾವ ದಟ್ಟವಾಗತೊಡಗಿತು. ಇವರು ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿಯೂ ಸಕ್ರಿಯವಾಗಿದ್ದರು.

ವಾಜಪೇಯಿ

1923ರಲ್ಲಿ ಜರುಗಿದ ಹಿಂದೂ ಮಹಾಸಭಾದ ಸಮಾವೇಶದಲ್ಲಿ ಅಧ್ಯಕ್ಷ ಭಾಷಣದಲ್ಲಿ ಮಾಳವೀಯ ಅವರು ವರ್ಣಾಶ್ರಮ ಪದ್ಧತಿ ಮತ್ತು ಜಾತಿ ಪದ್ಧತಿಗಳು ಹಿಂದೂ ನಾಗರಿಕತೆಯ ಹಿರಿಮೆಯನ್ನು ಸಾರುತ್ತವೆ ಎಂದು ಹೇಳಿದ್ದರು. ಇಂತಹ ಕಾಲಘಟ್ಟದಲ್ಲಿಯೇ ಚಿತ್ಪಾವನ ಬ್ರಾಹ್ಮಣ ನಾಥುರಾಮ್ ಗೋಡ್ಸೆಯಂತಹ ಮತಧರ್ಮಾಂಧ ಹಿಂದೂ ಮಹಾಸಭಾವನ್ನು ಸೇರಿದ್ದು. ಈ ರೀತಿಯಲ್ಲಿ ಹೆಡ್ಗೇವಾರ್, ಮಾಳವೀಯ, ಲಜಪತ್‌ರಾಯ್ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯ ಸ್ಥಾನಗಳನ್ನು ಅಲಂಕರಿಸಿ ಹಿಂದೂ ರಾಷ್ಟ್ರೀಯತೆ, ಚಾತುರ್ವರ್ಣ ಬ್ರಾಹ್ಮಣವಾದಿ ಸಿದ್ಧಾಂತಗಳನ್ನು ಬಿತ್ತಿದರು. ಇದಕ್ಕೆ ಗಾಂಧಿ, ನೆಹರೂರಂತಹ ಸೆಕ್ಯುಲರ್ ಮುಖಂಡರು ಸಾಕ್ಷಿಯಾಗಿದ್ದು ಒಂದು ವೈರುಧ್ಯವಾಗಿದೆ. ಇವರ ಮೌನ ಸಮ್ಮತಿ ಪ್ರತಿಕ್ರಾಂತಿಗೆ ದಾರಿ ಮಾಡಿ ಕೊಟ್ಟಿತೇ ಎನ್ನುವ ಪ್ರಶ್ನೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಅಂಡರ್ಸನ್, ’1923ರ ಅಕ್ಟೋಬರ್‌ನಲ್ಲಿ, ನಾಗಪುರದ ಮುಸ್ಲಿಂ ಮತ್ತು ಹಿಂದೂ ಸಮುದಾಯಗಳು ಮಸೀದಿಗಳ ಮುಂದೆ ಸಂಗೀತ ನಡೆಸುವುದರ ಬಗೆಗಿನ ವಿವಾದ ಪರಸ್ಪರ ಸಂಘರ್ಷಕ್ಕೆ ಕಾರಣವಾಯಿತು. 30 ಅಕ್ಟೋಬರ್ 1923ರಂದು ಜಿಲ್ಲಾ ಕಲೆಕ್ಟರ್ ದಿಂಡಿ ಮೆರವಣಿಗೆಯನ್ನು ನಿಷೇಧಿಸಿದರು. ಆಗ ಇನ್ನೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿದ್ದ ಹೆಡ್ಗೇವಾರ್ ಸರ್ಕಾರದ ನಿಷೇಧವನ್ನು ಮೀರಲು ಪ್ರಯತ್ನಿಸಿದ ಹಿಂದೂ ನಾಯಕರಲ್ಲಿ ಒಬ್ಬರಾಗಿದ್ದರು. ನಾಗಪುರದ ಹಿಂದಿನ ಆಡಳಿತ ಕುಟುಂಬದ ವಾರಸುದಾರ ರಾಜಾ ಲಕ್ಷ್ಮಣರಾವ್ ಭೋನ್ಸ್ಲೆ ಅವರ ಅಧ್ಯಕ್ಷತೆಯಲ್ಲಿ ಹಿಂದೂ ಸಭೆಯೊಂದು ಸಂಘಟಿಸಲ್ಪಟ್ಟಿತು. ಮೂಂಜೆ ಉಪಾಧ್ಯಕ್ಷರಾಗಿದ್ದು, ಹೆಡ್ಗೇವಾರ್ ಕಾರ್ಯದರ್ಶಿಯಾಗಿದ್ದರು. ಈ ಪ್ರಚೋದಿತ ಸಭೆಯ ಕಾರಣ ನಗರದಲ್ಲಿ ಗಲಭೆಗಳು ಪ್ರಾರಂಭವಾದವು. ಈ ಸಮಯದಲ್ಲಿ ಹೆಡ್ಗೇವಾರ್ ಮಹಸಾಭಾದ ಮತ್ತೊಬ್ಬ ಮುಖಂಡ ವಿ.ಆರ್. ಸಾವರ್ಕರ್‌ರ ’ಉಪಖಂಡದಲ್ಲಿರುವ ಹಿಂದೂ ಜನರೇ ಒಂದು ರಾಷ್ಟ್ರ, ಹಿಂದುವಾಗಿರುವುದಕ್ಕೆ ಯಾವುದೇ ನಿರ್ದಿಷ್ಟ ಧಾರ್ಮಿಕ ತತ್ವದ ಅಗತ್ಯವಿಲ್ಲ ಎಂದು ಪ್ರತಿಪಾದಿಸುವ ಹಿಂದುತ್ವದ ಕೈಬರಹದ ಹಸ್ತಪ್ರತಿಯನ್ನು ಓದಿದರು. ಅದು ಹಿಂದೂ ರಾಷ್ಟ್ರದ ಬಗ್ಗೆ ಅವರ ಚಿಂತನೆಯನ್ನು ಆಳವಾಗಿ ಪ್ರಭಾವಿಸಿತು’ ಎಂದು ಬರೆಯುತ್ತಾರೆ. (ಇಪಿಡಬ್ಲಿಯು, 11 ಮಾರ್ಚ 1972). ಸಾವರ್ಕರ್‌ರಂತಹ ಹಿಂದೂ ರಾಷ್ಟ್ರೀಯವಾದಿಗಳು ಆರ್ಯರು ಉಪಖಂಡದ ಹೊರಗಿನಿಂದ ಬಂದ ಆಕ್ರಮಣಕಾರರ ಸರಣಿಯಲ್ಲಿ ಒಬ್ಬರಾಗಿದ್ದರು ಎನ್ನುವ ಇತಿಹಾಸದ ದೃಷ್ಟಿಕೋನಕ್ಕೆ ವಿರುದ್ಧವಾಗಿದ್ದರು. ಆರ್ಯರ ಇತಿಹಾಸ ಸಿಂಧ್ ಕಣಿವೆಯಲ್ಲಿಯೇ ಇದೆ ಎಂದು ಪ್ರತಿಪಾದಿಸಿರು. ಇವರ ಈ ಚಿಂತನೆಗಳು ಹೆಡ್ಗೇವಾರ್ ಅವರನ್ನು ಪ್ರಭಾವಿಸಿತು.

ಈ ಹಿನ್ನೆಲೆಯಲ್ಲಿ ಡಾ.ಕೆ.ಬಿ.ಹೆಡ್ಗೇವಾರ್, ಬಿ.ಎಸ್.ಮೂಂಜೆ, ಎಲ್.ವಿ.ಪರಾಂಜಪೆ, ಬಿ.ಪಿ.ಥಾಲ್ಕರ್, ಸಾವರ್ಕರ್ ಬ್ರಾಹ್ಮಣಶಾಹಿಯ ಪುನರುತ್ಥಾನಕ್ಕಾಗಿ ಪಣ ತೊಟ್ಟಿದ್ದರು. ಇವರೆಲ್ಲಾ ಚಿತ್ಪಾವನ ಬ್ರಾಹ್ಮಣರಾಗಿದ್ದರು. 1925ರಲ್ಲಿ ಒಟ್ಟಾಗಿ ಸೇರಿ ಆರೆಸ್ಸೆಸ್ ಸಂಘಟನೆಯನ್ನು ಸ್ಥಾಪಿಸಿದರು. ಇಪ್ಪತ್ತರ ದಶಕದಲ್ಲಿ ತೀವ್ರವಾಗಿದ್ದ ಮುಸ್ಲಿಂರ ರಾಜಕೀಯ ಬೆಳವಣಿಗೆ ಮತ್ತು ದಲಿತರ ಹೋರಾಟಗಳಿಂದ ಆತಂಕಕ್ಕೆ ಒಳಗಾಗಿ ಆರ್‌ಎಸ್‌ಎಸ್‌ನ್ನು ಸಂಘಟಿಸಲಾಯಿತು ಎಂದು ಹೆಡ್ಗೇವಾರ್ ಹೇಳುತ್ತಾರೆ (ಸಂಘವೃಕ್ಷಕೀ ಬೀಜ್ – ಸಿ.ಪಿ.ಭಿಷಿಕರ್). ಅಂಬೇಡ್ಕರ್ ಅವರು ಸಂಸತ್ತಿನಲ್ಲಿ ಮಂಡಿಸಿದ ಕ್ರಾಂತಿಕಾರಿ ಮಸೂದೆ ಹಿಂದೂ ಮಹಿಳಾ ಮಸೂದೆಯನ್ನು ಗೋಳ್ವಲ್ಕರ್ ಮತ್ತಿತರ ಆರೆಸ್ಸೆಸ್ ನಾಯಕರು ವಿರೋಧಿಸುತ್ತಾರೆ. ಏಕೆಂದರೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮಹಿಳೆಯರಿಗೆ ಸಮಾನ ಹಕ್ಕನ್ನು ಕೊಡುವ ಈ ಮಸೂದೆ ಹಿಂದೂ ಧರ್ಮದ ಸನಾತನ ಪದ್ಧತಿಗೆ ವಿರುದ್ಧವಾದದ್ದು ಎಂದು ಇವರು ವಾದಿಸುತ್ತಾರೆ. ಇಂದು ಆರೆಸ್ಸೆಸ್ ಬಹುಮತ ಸಾಧಿಸಿದೆ.

ಡಾ.ಕೆ.ಬಿ.ಹೆಡ್ಗೇವಾರ್ 1925 ಇಸವಿಯಲ್ಲಿ ವಿಜಯದಶಮಿಯ ದಿನದಂದು ಮಹಾರಾಷ್ಟ್ರದ ನಾಗಪುರ ನಗರದಲ್ಲಿ ಆರ್‌ಎಸ್‌ಎಸ್ ಸಂಘಟನೆಗೆ ಚಾಲನೆ ನೀಡಿದರು. ದೇವತೆಗಳ ರಾಜ ’ರಾಮ’ ರಾಕ್ಷಸರ ರಾಜ ’ರಾವಣ’ನನ್ನು ಸಂಹರಿಸಿದ ದಿನವೆಂದೇ ಆ ದಿನವನ್ನು ಆಯ್ದುಕೊಂಡರು. ಇಂದಿಗೂ ವಿಜಯದಶಮಿ ದಿನದಂದು ಆರ್‌ಎಸ್‌ಎಸ್ ಮುಖ್ಯಸ್ಥರು ನಾಗಪುರದ ತನ್ನ ಹೆಡ್ ಕ್ವಾಟ್ರಸ್‌ನಿಂದ ದೇಶಾದ್ಯಂತ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಹೆಡ್ಗೇವಾರ್ ಅವರು ’ಅಲ್ಪಸಂಖ್ಯಾತರಾದ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ರು ಭಾರತದ ಭಾಗವಾಗಿರುವುದಿಲ್ಲ ಎಂದು ಘೋಷಿಸಿದ ದಿನ ಹಿಂದೂಸ್ತಾನ ತನ್ನ ಏಕತೆ ಸಾಧಿಸುತ್ತದೆ’ ಎಂದು ಹೇಳುವುದರ ಮೂಲಕ ಆರ್‌ಎಸ್‌ಎಸ್‌ನ ಪ್ರಧಾನ ಧಾರೆಯ ಚಿಂತನೆಯನ್ನು ರೂಪಿಸಿದರು. ಈ ಚಿಂತನೆಯ ಬೇರಿನ ಮೂಲಕ ಬ್ರಾಹ್ಮಣಶಾಹಿ ’ಹಿಂದೂ ರಾಷ್ಟ್ರೀಯತೆ’ಯ ಸಿದ್ಧಾಂತ ರೂಪುಗೊಂಡಿತು. ಸಂಘ ಪರಿವಾರದ ಉದಾರವಾದಿ ಮುಖವಾಡ ವಾಜಪೇಯಿಯವರ ಅನೇಕ ಕವನಗಳಲ್ಲಿ ’ಹಿಂದೂ ಹಿಂದೂ ನನ್ನ ಪರಿಚಯ’ ಎಂಬ ಸಾಲುಗಳಲ್ಲಿ ಮತ್ತೆಮತ್ತೆ ಕಾಣಿಸುತ್ತದೆ. ’ಹಿಂದೂ ರಾಷ್ಟ್ರೀಯತೆ’ಯ ಪರಿಕಲ್ಪನೆಯನ್ನು ಬಳಸಿಕೊಂಡು ಆರ್‌ಎಸ್‌ಎಸ್ ತನ್ನನ್ನು ತಾನು ಅಪ್ರತಿಮ ದೇಶಪ್ರೇಮಿ ಎಂದು ಬಿಂಬಿಸಿಕೊಳ್ಳಲು ಸತತವಾಗಿ ಕಳೆದ ನೂರು ವರ್ಷಗಳ ಕಾಲ ಪರಿಶ್ರಮ ಪಟ್ಟಿದೆ.

ಭಾರತದ ರಾಜಕೀಯದ ಕುರಿತಾಗಿ ಸಂಶೋಧನೆ ನಡೆಸಿದ ಇಟಾಲಿಯನ್ ಸಂಶೋಧಕಿ ’ಮಾರ್ಜಿಯಾ ಕೆಸೋಲರಿ’ ಇಟಾಲಿಯನ್ ಫ್ಯಾಸಿಸ್ಟ್‌ನ ಪ್ರತಿನಿಧಿಗಳು (ಮುಸಲೋನಿ ಮತ್ತಿತರರು) ಮತ್ತು ಹಿಂದೂ ರಾಷ್ಟ್ರೀಯವಾದಿಗಳ ನಡುವಿನ ನೇರ ಸಂಪರ್ಕಗಳನ್ನು ವಿವರವಾಗಿ ಪರಿಶೀಲಿಸಿದಾಗ ಇದು ಹಿಂದೂ ರಾಷ್ಟ್ರೀಯವಾದಿಗಳು ಫ್ಯಾಸಿಸಂನ ಕುರಿತಾಗಿ ಕೇವಲ ಮೇಲ್ಮಟ್ಟದ ಕುತೂಹಲದ ಅಥವಾ ಕೆಲವು ವ್ಯಕ್ತಿಗಳ ಆ ಕ್ಷಣದ ಕೌತುಕದಿಂದ ಬೆಳಸಿಕೊಂಡ ಆಸಕ್ತಿ ಎಂದು ಹೇಳಲಾಗುವುದಿಲ್ಲ. ಆದರೆ ಹಿಂದೂ ರಾಷ್ಟ್ರೀಯವಾದಿಗಳು ಫ್ಯಾಸಿಸಂಅನ್ನು ಒಂದು ಸಂಪ್ರದಾಯವಾದಿ ನೆಲೆಯ ಕ್ರಾಂತಿ ಎಂದು ನಂಬುತ್ತಾರೆ ಮತ್ತು ಇಟಾಲಿಯನ್ ಮಾದರಿಯ ಸರ್ವಾಧಿಕಾರಿ ಆಡಳಿತದ ಕುರಿತಾಗಿ ಅಧ್ಯಯನ ನಡೆಸಿದ್ದಾರೆ’ ಎಂದು ಹೇಳುತ್ತಾರೆ.

ಬಿ.ಎಸ್.ಮೂಂಜೆ

ಆರ್‌ಎಸ್‌ಎಸ್ ಸ್ಥಾಪಕರಲ್ಲಿ ಒಬ್ಬರಾದ ಮೂಂಜೆ ಅವರು 19, ಮಾರ್ಚ್ 1931ರಂದು ಇಟಾಲಿಯನ್ ಸರ್ವಾಧಿಕಾರಿ ಮುಸಲೋನಿಯವರನ್ನು ವ್ಯಕ್ತಿಗತವಾಗಿ ಭೇಟಿಯಾಗುತ್ತಾರೆ. ಅದನ್ನು ಮೂಂಜೆ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದಾರೆ; ಅದರ ಸಾರಾಂಶ ಹೀಗಿದೆ: ’ನಾನು ಅವರ (ಮುಸಲೋನಿ) ಕೈ ಕುಲುಕಿದೆ ಮತ್ತು ನಾನು ಡಾ.ಮೂಂಜೆ ಎಂದು ಪರಿಚಯಿಸಿಕೊಂಡೆ. ಅವರಿಗೆ ನನ್ನ ಕುರಿತಾಗಿ ತಿಳಿವಳಿಕೆ ಇತ್ತು ಮತ್ತು ಇಂಡಿಯಾದ ಸ್ವಾತಂತ್ರ ಹೋರಾಟವನ್ನು ಹತ್ತಿರದಿಂದ ಗಮನಿಸುತ್ತಿದ್ದರು. ನಾನು ನಮ್ಮ ಸ್ವಯಂಸೇವಕರಿಗೆ ಮಿಲಿಟರಿ ತರಬೇತಿಯ ಅವಶ್ಯಕತೆ ಇದೆ ಮತ್ತು ನಮ್ಮ ಹುಡುಗರು ಇಂಗ್ಲೆಂಡ್, ಫ್ರ್ರಾನ್ಸ್, ಜರ್ಮನಿಯ ಮಿಲಿಟರಿ ಶಾಲೆಗಳಗೆ ಭೇಟಿ ಕೊಡುತ್ತಿದ್ದಾರೆ. ನಾನು ಈಗ ಇದೇ ಉದ್ದೇಶಕ್ಕಾಗಿ ಇಟಲಿಗೆ ಬಂದಿದ್ದೇನೆ ಮತ್ತು ನನ್ನ ಮಿಲಿಟಿರಿ ಶಾಲೆಯ ಭೇಟಿಯನ್ನು ನಿಮ್ಮ ಅಧಿಕಾರಿಗಳು ಸುಗಮವಾಗಿಸಿದ್ದಾರೆ. ನಾನು ಈ ಮುಂಜಾನೆ ಮತ್ತು ಮಧ್ಯಾಹ್ನ ಫ್ಯಾಸಿಸ್ಟ್ ಸಂಸ್ಥೆಗಳನ್ನು ನೋಡಿದೆ ಮತ್ತು ಅದರಿಂದ ತುಂಬಾ ಪ್ರಭಾವಿತನಾಗಿದ್ದೇನೆ. ಇಟಲಿಗೆ ಈ ಮಾದರಿಯ ಫ್ಯಾಸಿಸ್ಟ್ ಸಂಘಟನೆಗಳ ಅವಶ್ಯಕತೆ ಇದೆ. ಈ ಫ್ಯಾಸಿಸಂ ಸಂಘಟನೆಗಳಲ್ಲಿ ನನಗೆ ಅಂತಹ ವಿವಾದ ಎನ್ನುವಂತಹ ಅಂಶಗಳೇನು ಕಾಣಿಸಲಿಲ್ಲ. ನನ್ನ ಮಾತುಗಳಿಂದ ಮಸಲೋನಿ ಖುಷಿಯಾಗಿದ್ದರು’.

1940ರಲ್ಲಿ ಮಥುರಾದಲ್ಲಿ ಹಿಂದೂ ಮಹಾಸಭಾದ 22ನೇ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಾ ಸಾವರ್ಕರ್ ಅವರು ’ಕೇವಲ ನಾಜಿ ಎನ್ನುವ ಕಾರಣಕ್ಕೆ ಹಿಟ್ಲರ್‌ನನ್ನು ಒಬ್ಬ ರಾಕ್ಷಸ ಎಂದು ಕರೆಯುವುದು ತಪ್ಪಾಗುತ್ತದೆ. ಏಕೆಂದರೆ ನಾಜಿಯಿಸಂ ಜರ್ಮನಿಯನ್ನು ಕಾಪಾಡಿದೆ….’ ಎಂದು ಭಾಷಣ ಮಾಡುತ್ತಾ ಮುಂದುವರಿದು ನೆಹರೂ ಅವರನ್ನು ಹೀಗಳೆಯುತ್ತ, ’ಜರ್ಮನಿ, ಜಪಾನ್, ರಷ್ಯಾ ರಾಷ್ಟ್ರಗಳಿಗೆ ಒಂದು ನಿರ್ದಿಷ್ಟ ಮಾದರಿಯ ವ್ಯವಸ್ಥೆಯನ್ನು ಆರಿಸಿಕೊಳ್ಳಬೇಕೆಂದು ಹೇಳಲು ನಾವ್ಯಾರು? ಜರ್ಮನಿಗೆ ಏನು ಬೇಕೆಂದು ನೆಹರೂವಿಗಿಂತಲೂ ಹಿಟ್ಲರ್‌ಗೆ ಚೆನ್ನಾಗಿ ಗೊತ್ತು. ಅದರಲ್ಲಿಯೂ ಈ ನಾಜಿಸಂನ ಸ್ಪರ್ಶದಿಂದ ಜರ್ಮನಿ, ಇಟಲಿ ರಾಷ್ಟ್ರಗಳು ಇಂದು ಶಕ್ತಿಶಾಲಿಯಾಗಿ ಬೆಳೆದಿವೆ, ಪುನವೃದ್ಧಿಯಾಗಿವೆ’ ಎಂದು ಹೇಳಿದ್ದಾರೆ. ಅದರ ಸ್ವರೂಪದ ಕುರಿತಾಗಿ ಅವರಲ್ಲಿ ಯಾವುದೇ ಗೊಂದಲಗಳಿಲ್ಲ.

ಇದು ಆರೆಸ್ಸಸ್‌ಗೆ ಫ್ಯಾಸಿಸಂ ಕುರಿತು ಇರುವ ಒಲವನ್ನು ಸಾಬೀತುಪಡಿಸುತ್ತದೆ

ಅಂಡರ್ಸನ್, ’1943ರಲ್ಲಿ ಬ್ರಿಟಿಷ್ ಇಂಡಿಯಾ ಆಡಳಿತದಲ್ಲಿ ಆರ್‌ಎಸ್‌ಎಸ್‌ನಲ್ಲಿ 76,000 ಸದಸ್ಯರಿದ್ದರು. ಇವರಲ್ಲಿ ಅರ್ಧ ಭಾಗ ಕೇಂದ್ರ ಪ್ರಾಂತ್ಯ, 20,476 ಬಾಂಬೆ ಪ್ರಾಂತ್ಯ, 14000 ಪಂಜಾಬ್ ಪ್ರಾಂತ್ಯದಲ್ಲಿದ್ದರು. ಅಧಿಕಾರಿಗಳ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಪೂನಾ ಒಂದರಲ್ಲಿಯೇ ಎರಡು ಸಾವಿರ ಸ್ವಯಂಸೇವಕರಿದ್ದರು’ ಎಂದು ಬರೆಯುತ್ತಾರೆ.

ಮತ್ತೊಂದೆಡೆ 1937ರವರೆಗೆ ಹಿಂದೂ ಮಹಾಸಭಾ ಕೆಲವು ಪ್ರಮುಖ ವ್ಯಕ್ತಿಗಳು ಸೇರಿಕೊಂಡ ಸಣ್ಣ ಗುಂಪಾಗಿತ್ತು. ಅಲ್ಲಿನ ಸೌಮ್ಯವಾದಿಗಳಾಗಿದ್ದ ಲಜಪತ್‌ರಾಯ್ ಮತ್ತು ಶಾರದಾನಂದ ಮತ್ತು ತೀವ್ರವಾದಿಗಳಾಗಿದ್ದ ಪರ್ಮಾನಂದ್, ಮೂಂಜೆ ಮತ್ತು ಕೇಳ್ಕರ್ ನಡುವೆ ಜಾತಿ ನಿರ್ಬಂಧ ಮತ್ತು ರಾಜಕೀಯ ಪ್ರವೇಶದ ಕುರಿತಂತೆ ಭಿನ್ನಾಭಿಪ್ರಾಯಗಳಿದ್ದವು. 1937ರಲ್ಲಿ ಮಹಾಸಭಾದ ಅಧ್ಯಕ್ಷರಾಗಿ ಆಯ್ಕೆಯಾದ ಸಾವರ್ಕರ್ ಈ ಬಿಕ್ಕಟ್ಟುಗಳನ್ನು ಬಗೆಹರಿಸಿ, ಅದನ್ನು ಹಿಂದೂಗಳು ಪ್ರತಿನಿಧಿಸುವ ರಾಜಕೀಯ ಸಂಸ್ಥೆಯನ್ನಾಗಿ ನಿರ್ಮಿಸುವುದಕ್ಕೆ ಬದ್ಧನಾಗಿದ್ದರು. ಹಾಗೆಯೇ ಹಿಂದೂ ಮಹಾಸಭಾವನ್ನು ರಾಜಕೀಯ ಸಂಸ್ಥೆಯಾಗಿ ಪರಿವರ್ತಿಸುವ ಮೂಲಕ ಆರ್‌ಎಸ್‌ಎಸ್ ಮಹಾಸಭೆಗೆ ನೀಡಿದ್ದ ಬೆಂಬಲವು ಸ್ಥಗಿತಗೊಳ್ಳುವುದಕ್ಕೆ ಕಾರಣರಾದರು. ಅದೇ ಸಂದರ್ಭದಲ್ಲಿ ಅನೇಕ ಆರ್‌ಎಸ್‌ಎಸ್ ಸದಸ್ಯರು ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದರು. ಮತ್ತು ಆರ್‌ಎಸ್‌ಎಸ್ ಕಾಂಗ್ರೆಸ್‌ಗೆ ನೇರವಾಗಿ ವಿರೋಧಿಯಾಗಿರುವ ಗುಂಪೊಂದಿಗೆ ಸಂಬಂಧ ಹೊಂದುವುದನ್ನು ಬಯಸಲಿಲ್ಲ. ಆದರೆ 1934ರವರೆಗೂ ಹಿಂದೂಮಹಾಸಭಾದ ಅನೇಕ ಸದಸ್ಯರು ರಾಷ್ಟ್ರೀಯ ಕಾಂಗ್ರೆಸ್‌ನ ಮುಖಂಡರಾಗಿದ್ದರು. ತಾತ್ಪರ್ಯವೆಂದರೆ ಹಿಂದೂ ಮಹಾಸಭಾ, ಆರ್‌ಎಸ್‌ಎಸ್ ಸೇರಿದಂತೆ ಒಟ್ಟು ಹಿಂದೂ ಮತಧರ್ಮಾಂಧ ಸಂಘಟನೆಗಳ ಸ್ವಯಂಸೇವಕರು ನಲವತ್ತರ ದಶಕದವರೆಗೂ ಕಾಂಗ್ರೆಸ್ ಜೊತೆಗೆ ನಂಟು ಉಳಿಸಿಕೊಂಡಿದ್ದರು. ಇತಿಹಾಸದ ಈ ವಾಸ್ತವ ಮುಂದೆ ಇಂಡಿಯಾ ಭವಿಷ್ಯವು ಮತಧರ್ಮಾಂಧತೆ ಕಡೆಗೆ ಹೊರಳಲು ಪ್ರೇರಕವಾಯಿತು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಮಹಾಸಭಾ ಸೇನೆಯಲ್ಲಿ ಹಿಂದೂಗಳನ್ನು ದಾಖಲಿಸುವುದು ಮತ್ತು ಬ್ರಿಟಿಷರೊಂದಿಗೆ ಮಾತುಕತೆ ನಡೆಸಿ ವಿವಿಧ ಸರ್ಕಾರಿ ಮಂಡಳಿಗಳಲ್ಲಿ ಪ್ರತಿನಿಧಿತ್ವ ಪಡೆಯುವ ಪ್ರಯತ್ನವನ್ನು ಮಾಡಿತು. ಆದರೆ ಈ ಕ್ರಮವು ವಿಫಲವಾಯಿತು. 1945ರ ಜೂನ್‌ನಲ್ಲಿ ಶಿಮ್ಲಾ ಸಮ್ಮೇಳನದಲ್ಲಿ ಬ್ರಿಟಿಷರು ಕಾಂಗ್ರೆಸ್‌ಅನ್ನು ಜಾತಿ ಹಿಂದೂಗಳ ಪ್ರತಿನಿಧಿಯಾಗಿ ಮತ್ತು ಮುಸ್ಲಿಂಲೀಗ್‌ಅನ್ನು ಮುಸ್ಲಿಮರ ಪ್ರತಿನಿಧಿಯಾಗಿ ಪರಿಗಣಿಸಿದರು. ಯುವಕರ, ರೈತರ ಅಥವಾ ಆರ್‌ಎಸ್‌ಎಸ್ ರೀತಿ ಮಿಲಿಟೆಂಟ್ ಸ್ವಯಂಸೇವಕರ ಪಡೆಯಿಲ್ಲದೆ ಹಿಂದೂ ಮಹಾಸಭಾದ ದೌರ್ಬಲ್ಯವು ಇನ್ನಷ್ಟು ಸ್ಪಷ್ಟವಾಗಿ ಕಂಡುಬಂದಿತು.

ಇದೆಲ್ಲದರ ಮಧ್ಯೆ 1925-1947ರ ನಡುವಿನ ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಭಾಗವಹಿಸಲಿಲ್ಲ ಎನ್ನುವ ಚಾರಿತ್ರಿಕ ಸತ್ಯವನ್ನು ಸಂಘ ಪರಿವಾರ ಎಷ್ಟು ಮರೆಮಾಚಿದರೂ ಸಹ ಅದು ಮತ್ತೆಮತ್ತೆ ಪುಟಿದು ಮೇಲೇಳುತ್ತಲೇ ಇರುತ್ತದೆ. ಹೆಡ್ಗೇವಾರ್ ನಂತರ ಆರ್‌ಎಸ್‌ಎಸ್‌ನ ಸರಸಂಚಾಲಕರಾದ ಗೋಳ್ವಲ್ಕರ್ ಅವರ ’ಬಂಚ್ ಆಫ್ ಥಾಟ್ಸ್’ ಪುಸ್ತಕದ 152-153ನೆ ಪುಟದಲ್ಲಿ ’ದೇಶದ ಕುರಿತು ನಮ್ಮ ಸಾಮಾನ್ಯ ದೃಷ್ಟಿಕೋನವು ಪ್ರಾದೇಶಿಕ ರಾಷ್ಟ್ರೀಯತೆಯ ಸಿದ್ಧಾಂತಗಳ ಮೂಲಕ ರೂಪುಗೊಂಡಿದೆ.. ಇದು ನಿಜದ ಹಿಂದೂ ರಾಷ್ಟ್ರೀಯತೆಯ ಕುರಿತು ಚಿಂತನೆಗಳು ಮತ್ತು ಸಕಾರಾತ್ಮಕ ನಿಲುವುಗಳನ್ನು ಹಿನ್ನಲೆಗೆ ತಳ್ಳಿತು.. ಅನೇಕ ಸ್ವಾತಂತ್ರ್ಯ ಚಟ್‌ವಳಿಗಳನ್ನು ’ಬ್ರಿಟಿಷ್ ವಿರೋಧಿ ಚಳವಳಿ’ಗಳನ್ನಾಗಿ ಮಾತ್ರ ರೂಪಿಸಿತು. ಬ್ರಿಟಿಷ್ ವಿರೋಧವನ್ನು ’ದೇಶಭಕ್ತಿ ಮತ್ತು ರಾಷ್ಟ್ರೀಯತೆ’ ಎಂದು ಬಿಂಬಿಸಲಾಯಿತು. ಇಂತಹ ಪ್ರತಿಕ್ರಿಯಾತ್ಮಕ ದೃಷ್ಟಿಕೋನವು ಇಡೀ ಸ್ವಾತಂತ್ರ್ಯ ಹೋರಾಟದ ಮೇಲೆ, ಅದರ ಮುಖಂಡರು ಮತ್ತು ಜನತೆಯ ಮೇಲೆ ದುಷ್ಪರಿಣಾಮ ಬೀರಿತು’ ಎಂದು ಬರೆಯುತ್ತಾರೆ

ವಿ.ಆರ್. ಸಾವರ್ಕರ್‌

ಇತಿಹಾಸಕಾರರಾದ ಪೊ.ಮೃದುಲಾ ಮುಖರ್ಜಿ ’ಆರ್‌ಎಸ್‌ಎಸ್ ಸ್ಥಾಪನೆಯಾಗಿ ಎರಡು ವರ್ಷಗಳ ನಂತರ ಭಾರತದಾದ್ಯಂತ ಸೈಮನ್ ಕಮಿಷನ್ ವಿರುದ್ಧ ದೊಡ್ಡ ಮಟ್ಟದಲ್ಲಿ ಆಂದೋಲನ ಪ್ರಾರಂಭವಾಯಿತು. ಆದರೆ ಇದರಲ್ಲಿ ಆರ್‌ಎಸ್‌ಎಸ್ ಭಾಗವಹಿಸಲಿಲ್ಲ. ಡಿಸೆಂಬರ್ 1929ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ನೆಹರೂ ಲಾಹೋರ್‌ನಲ್ಲಿ ನಡೆದ ಪಕ್ಷದ ವಾರ್ಷಿಕ ಅಧಿವೇಶನದಲ್ಲಿ ರಾಷ್ಟ್ರೀಯ ಧ್ವಜವನ್ನು ಅನಾವರಣಗೊಳಿಸುತ್ತಾ ಸಂಪೂರ್ಣ ಸ್ವಾತಂತ್ರ್ಯ ನಮ್ಮ ಗುರಿ ಎಂದು ಘೋಷಿಸಿದರು. 26 ಜನವರಿ 1930ರಂದು ’ಸ್ವಾತಂತ್ರ್ಯ ದಿನಾಚರಣೆ’ಯಾಗಿ ಆಚರಿಸಬೇಕೆಂದು ಕಾಂಗ್ರೆಸ್ ನಿರ್ಧರಿಸಿತು.. ಆದರೆ ಹೆಡ್ಗೇವಾರ್ ಅವರು ’ಆರ್‌ಎಸ್‌ಎಸ್‌ಗೆ ಸಂಪೂರ್ಣ ಸ್ವಾತಂತ್ರ್ಯದಲ್ಲಿ ನಂಬಿಕೆ ಇದೆ, ಆದರೆ ಅದು ರಾಷ್ಟ್ರ ಲಾಂಛನವಾದ ತ್ರಿವರ್ಣ ಧ್ವಜದ ಬದಲಿಗೆ ಭಗವಾಧ್ವಜ ಹಾರಿಸಲು ಇಚ್ಛಿಸುತ್ತದೆ… ಅಂದರೆ ಆರ್‌ಎಸ್‌ಎಸ್ ಸ್ವಾತಂತ್ರ್ಯ ಚಳ್ಛವಳಿಯಿಂದ ದೂರವುಳಿಯಲು ಬಯಸುತ್ತದೆ.. ಆದರೆ ತನ್ನನ್ನು ರಾಷ್ಟ್ರೀಯವಾದಿ ಎಂದು ಕರೆದುಕೊಳ್ಳುತ್ತದೆ’ ಎಂದು ಬರೆಯುತ್ತಾರೆ.

ಆ ಮೂಲಕ ಅವರ ಮನಸ್ಸನ್ನು ಗೆಲ್ಲಲು ಬಯಸಿದ್ದರು ಮತ್ತು ಅವರನ್ನು ಸಂಘದ ಸದಸ್ಯರನ್ನಾಗಿ ಮಾಡಲು ಉತ್ಸುಕರಾಗಿದ್ದರು. ಹೀಗಾಗಿ ಜೈಲಿನಲ್ಲಿದ್ದಾಗಲೂ ಡಾಕ್ಟರ್ ಸಾಹೇಬರು ಸುಮ್ಮನೆ ಕೂಡಲಿಲ್ಲ. ಕಾಂಗ್ರೆಸ್ ನಾಯಕರನ್ನು ನಿರಂತರ ಭೆಟಿಯಾಗುತ್ತಿದ್ದರು. ಸಂಘ ಪರಿವಾರದ ಆಶಯಗಳನ್ನು ಅವರಿಗೆ ಮನದಟ್ಟು ಮಾಡಿಕೊಡುತ್ತಿದ್ದರು. ಆರ್‌ಎಸ್‌ಎಸ್ ಸಂಘಟನೆಯನ್ನು ವಿಸ್ತಾರಗೊಳಿಸುವ ಯೋಜನೆಯೊಂದಿಗೆ ಅವರು ಜೈಲಿನಿಂದ ಹೊರಬಂದರು’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ: ಆರ್‌ಎಸ್‌ಎಸ್‌ ಶಿಬಿರಗಳಲ್ಲಿ ಲೈಂಗಿಕ ದೌರ್ಜನ್ಯ ಆರೋಪ

1930ರ ದಶಕದ ಹೊತ್ತಿಗೆ ಹೆಡ್ಗೇವಾರ್ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಭಾಗವಹಿಸುವುದರಲ್ಲಿ ಆಸಕ್ತಿ ತೋರಲಿಲ್ಲ. ಬ್ರಿಟಿಷರ ಆಡಳಿತವನ್ನು ’ಮುಂಜಾಗ್ರತೆ ಕ್ರಮ’ ಎಂದು ಬಣ್ಣಿಸಿದರು. ಇದೇ ಕಾರಣಕ್ಕಾಗಿ 1939ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ಪದವಿಗೆ ರಾಜಿನಾಮೆ ಕೊಟ್ಟಿದ್ದ ಸುಭಾಷ್ ಚಂದ್ರ ಭೋಸ್‌ರನ್ನು ಭೇಟಿಯಾಗಲು ನಿರಾಕರಿಸಿದರು. ತಮ್ಮ ಸಹವರ್ತಿ ಗೋಪಾಲ್ ಮುಕುಂದ್ ಹುದ್ದರ್ ಅವರು ಬೋಸ್ ಅವರ ಜೊತೆ ಭೇಟಿಗೆ ದಿನಾಂಕ ನಿಗದಿಪಡಿಸಲು ಬಯಸಿದಾಗ ಆರೋಗ್ಯದ ಸಮಸ್ಯೆ ನೆಪವೊಡ್ಡಿ ನಿರಾಕರಿಸಿದರು.

ಭಾರತದಾದ್ಯಂತ ಕಾಂಗ್ರೆಸ್ ನೇತೃತ್ವದಲ್ಲಿ ಬ್ರಿಟಿಷ್ ವಿರುದ್ಧದ ಸ್ವಾತಂತ್ರ ಚವಳಿ ತೀವ್ರವಾಗಿದ್ದ ಸಂದರ್ಭದಲ್ಲಿ 1941ರಲ್ಲಿ ಭಾಗಲ್ಪುರದಲ್ಲಿ ಜರುಗಿದ ಹಿಂದೂ ಮಹಾಸಭಾದ 23ನೇ ಸಮಾವೇಶದಲ್ಲಿ ಮಾತನಾಡುತ್ತಾ ಸಾವರ್ಕರ್ ಅವರು ’ಭಾರತೀಯರಿಗೆ ಬ್ರಿಟಿಷ್ ಸೈನ್ಯವನ್ನು ಸೇರಿಕೊಳ್ಳಲು’ ಆದೇಶಿಸಿದರು. ಇಂತಹ ನಿಲುವನ್ನು ಸಾಮ್ರಾಜ್ಯಶಾಹಿ ಜೊತೆಗಿನ ಸಹಕಾರ ಎಂದು ಖಂಡಿಸುವ ಕೆಲವು ಮೂರ್ಖರ ಮಾತುಗಳನ್ನು ಕೇಳಬೇಡಿ ಎಂದು ಆಗ್ರಹಿಸಿದರು. ಇದು ಸಾವರ್ಕರ್ ಅವರ ಮಿಲಿಟೆಂಟ್ ಹಿಂದೂಯಿಸಂ ತತ್ವಕ್ಕೆ ಹತ್ತಿರವಾಗಿತ್ತು. ಇದೇ ಸಂದರ್ಭದಲ್ಲಿ ಹಿಂದೂ ಮಹಾಸಭಾ ಸಂಘಟನೆಯು ಈ ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿತ್ತು.

ಮೃದುಲಾ ಮುಖರ್ಜಿ ಅವರು, ’ಹಿಂದೂ ಮಹಾಸಭಾದ ಅಧ್ಯಕ್ಷರಾದ ನಂತರ ಸಾವರ್ಕರ್ ಕೂಡಲೇ ಎರಡು ದೇಶಗಳ ಸಿದ್ಧಾಂತವನ್ನು ಪ್ರಕಟಿಸಿದರು. ಹಿಂದೂ ಮತ್ತು ಮುಸ್ಲಿಮರು ಪ್ರತ್ಯೇಕ ದೇಶಗಳು ಎಂದ ಸಾವರ್ಕರ್ ಚಿಂತನೆಯನ್ನು ನಂತರ ಜಿನ್ನಾ ಅನುಸರಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಗಾಂಧಿ, ಕಾಂಗ್ರೆಸ್, ಮುಸ್ಲಿಂ ವಿರುದ್ಧ ಕಿಡಿಕಾರಿದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ತಮ್ಮೊಂದಿಗೆ ಸಮಾಲೋಚಿಸದೆ ಬಾರತವನ್ನು ಬ್ರಿಟಿಷರ ಸಹವರ್ತಿ ಎಂದು ನಿರ್ಧರಿಸುವುದನ್ನು ವಿರೋಧಿಸಿ ಪ್ರಾಂತೀಯ ಸರ್ಕಾರಗಳನ್ನು ರಚಿಸಿದ್ದ ಕಾಂಗ್ರಸ್ ಮಂತ್ರಿಮಂಡಲಗಳು ರಾಜಿನಾಮೆ ನೀಡಿದರು. ಕೂಡಲೆ ಮುಸ್ಲಿಂಲೀಗ್ ತಾನು ಸರ್ಕಾರಗಳನ್ನು ರಚಿಸುವುದಕ್ಕೆ ಸಿದ್ಧ ಎಂದು ಹೇಳಿತು. ಇವರನ್ನು ಮೀರಿಸುವಂತೆ ಆಗ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಸಾವರ್ಕರ್ ಅಕ್ಟೋಬರ್ 1939ರಂದು ಬ್ರಿಟಿಷ್ ವೈಸರಾಯ್‌ಗೆ, ’ಹಿಂದೂ ಮತ್ತು ಬ್ರಿಟಿಷರು ಸ್ನೇಹಿತರು, ಕಾಂಗ್ರೆಸ್ ಸರ್ಕಾರಗಳು ರಾಜಿನಾಮೆ ನೀಡಿದರೆ ಹಿಂದೂ ಮಹಾಸಭಾ ಸರ್ಕಾರ ರಚಿಸಲು ತಯಾರಿದೆ’ ಎಂದು ಘೋಷಿಸಿದರು. (Linlithgow, Viceroy, to Zetland, Secretary of State, 7 October 1939, Zetland Papers, Vol. 18, Reel No. 6) ಎಂದು ಬರೆಯುತ್ತಾರೆ.

ಪ್ರಾಂತೀಯ ಸರ್ಕಾರಗಳಿಗೆ ಕಾಂಗ್ರೆಸ್ ಮಂತ್ರಿಗಳ ರಾಜೀನಾಮೆಯ ಹಿನ್ನಲೆಯಲ್ಲಿ ಹಿಂದೂ ಮಹಾಸಭಾ ಸಂಘಟನೆಯು ತನ್ನ ರಾಜಕೀಯ ವಿರೋಧಿ ಮುಸ್ಲಿಂ ಲೀಗ್‌ನೊಂದಿಗೆ ಕೈಜೋಡಿಸಿ ಬಂಗಾಳ ಮತ್ತು ಸಿಂಧ್ ಪ್ರಾಂತಗಳಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿತು. ಮುಸ್ಲಿಂ ಓಲೈಕೆಯನ್ನು ವಿರೋಧಿಸುತ್ತಿದ್ದ ಹಿಂದೂ ಮಹಾಸಭಾದ ನಾಯಕರು ಅಧಿಕಾರಕ್ಕಾಗಿ ಅದೇ ಮುಸ್ಲಿಂ ಸಂಘಟನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಮತ್ತು ಪರೋಕ್ಷವಾಗಿ ಬ್ರಿಟಿಷ್ ಆಡಳಿತವನ್ನು ಸಮರ್ಥಿಸಿದ್ದರು ಮತ್ತು ನೇರವಾಗಿಯೇ ಸ್ವಾತಂತ್ರ್ಯ ಚಳವಳಿಯನ್ನು ತಿರಸ್ಕರಿಸಿದ್ದರು. 1940ರ ಮುಸ್ಲಿಂಲೀಗ್ ಅಧಿವೇಶನದಲ್ಲಿ ಪಾಕಿಸ್ತಾನ ಪರ ನಿಲುವಳಿ ಮಂಡಿಸಿದ್ದ ಫಜುಲ್ ಹಕ್ ನೇತೃತ್ವದ ಬಂಗಾಳ ಸರ್ಕಾರದಲ್ಲಿ ಆಗ ಹಿಂದೂ ಮಹಾಸಭಾದ ಮುಖಂಡರಾಗಿದ್ದ ಶ್ಯಾಮ ಪ್ರಸಾದ ಮುಖರ್ಜಿ ಮಂತ್ರಿಯಾಗಿದ್ದರು. ಆಗ ಭಾರತದಲ್ಲಿ ಕ್ವಿಟ್ ಇಂಡಿಯಾ ಹೋರಾಟ ತೀವ್ರವಾಗಿದ್ದ ಸಂದರ್ಭದಲ್ಲಿ ಮಹಾಸಭಾದ ಮುಖಂಡರು ಮುಸ್ಲಿಂಲೀಗ್ ಜೊತೆಗೂಡಿ ಸರ್ಕಾರ ರಚಿಸಿದ್ದು, ಬ್ರಿಟಿಷ್ ಆಡಳಿತದ ಪರವಾಗಿದ್ದರು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಇದೇ ಸಂದರ್ಭದಲ್ಲಿ ಬಂಗಾಳ ಸರ್ಕಾರಕ್ಕೆ ಪತ್ರ ಬರೆಯುವ ಮುಖರ್ಜಿ ’ಕಾಂಗ್ರೆಸ್ ನಡೆಸುವ ಯಾವುದೇ ಬಗೆಯ ಹೋರಾಟವನ್ನು ಹತ್ತಿಕ್ಕಬೇಕು’ ಎಂದು ಹೇಳಿದ್ದರು. ’ಶಾಂತಿನಿಕೇತನ್ ಮತ್ತು ಢಾಕಾ ವಿವಿಯಲ್ಲಿ ಬೋಧಿಸಿದ ಇಟಾಲಿಯನ್ ಪ್ರೊಫೆಸರ್ ಒಬ್ಬರು, ಶ್ಯಾಮ ಪ್ರಸಾದ ಮುಖರ್ಜಿ ಆಗಿನ ಬೆಂಗಾಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಫ್ಯಾಸಿಸಂ ಸಿದ್ಧಾಂತ ಬಿತ್ತುವಲ್ಲಿ ಮುಖ್ಯ ಪಾತ್ರ ವಹಿಸಿದ್ದರೆಂದು ಬರೆಯುತ್ತಾರೆ’ ಎಂದು ಮೃದುಲಾ ಮುಖರ್ಜಿ ಹೇಳುತ್ತಾರೆ. (Casolari, In The Shadow of the Swastika, p16.)

ಮಹಮದ್ ಅಲಿ ಜಿನ್ನಾ

1942ರ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಮತ್ತೊಬ್ಬ ಆರೆಸ್ಸೆಸ್ ನೇತಾರ ಗುರೂಜಿ ಗೋಳ್ವಲ್ಕರ್ ’ಈ ಚಳವಳಿಯಿಂದ ಕೆಟ್ಟ ಪರಿಣಾಮಗಳು ಉಂಟಾಗಲಿವೆ. 1920-21ರ ಸ್ವಾತಂತ್ರ್ಯ ಚಳವಳಿಯ ನಂತರ ನಮ್ಮ ಹುಡುಗರು ಮಿಲಿಟೆಂಟ್‌ಗಳಾಗಿ ತಯಾರಾದರು. ಇದರ ಅರ್ಥ ಸ್ವಾತಂತ್ರ್ಯ ಚಳವಳಿಯ ನಾಯಕರ ಮೇಲೆ ಕೆಸರನ್ನು ಎರಚುತ್ತಿಲ್ಲ. ನಿಜವೇನೆಂದರೆ ನಾವು ಪರಿಣಾಮಗಳನ್ನು ಸರಿಯಾಗಿ ನಿಯಂತ್ರಣದಲ್ಲಿ ಇಡಲಿಲ್ಲ. 1942ರ ನಂತರ ಕಾನೂನಿನ ಕುರಿತಾಗಿ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಜನರು ಭಾವಿಸತೊಡಗಿದರು.. 1942ರಲ್ಲಿಯೂ ಸಹ ಜನಸಾಮಾನ್ಯರಲ್ಲಿ ಬಲವಾದ ಭಾವನಾತ್ಮಕವಾದ ಭಾವನೆಗಳಿದ್ದವು. ಆ ಸಂದರ್ಭದಲ್ಲಿಯೂ ಸಂಘವು ತನ್ನ ಮಾಮೂಲಿ ದಿನಚರಿಯನ್ನು ಮುಂದುವರಿಸುತ್ತಿತ್ತು. ಯಾವುದನ್ನೂ ನೇರವಾಗಿ ಮಾಡಬಾರದೆಂದು ಸಂಘ ಪರಿವಾರ ನಿರ್ಧರಿಸಿತ್ತು’ ಎಂದು ಭಾಷಣ ಮಾಡಿದರು. ಗೋಳ್ವಲ್ಕರ್‌ರ ಈ ಮಾತುಗಳು ಸ್ವಾತಂತ್ರ್ಯ ಚಳವಳಿಯ ಕುರಿತಾಗಿ ಆರ್‌ಎಸ್‌ಎಸ್‌ಗೆ ಇದ್ದ ಅಸಡ್ಡೆ ಮತ್ತು ನಿರ್ಲಕ್ಷವನ್ನು ಸ್ಪಷ್ಟವಾಗಿ ದಾಖಲಿಸುತ್ತವೆ.

ಎಚ್.ವಿ.ಆರ್. ಐಯ್ಯಂಗಾರ್ ಗೃಹ ಕಾರ್ಯದರ್ಶಿ, ಬಾಂಬೆ ಅವರು 16, ಫೆಬ್ರವರಿ 1944ರಂದು ’ಸಂಘ ಪರಿವಾರವು ಬ್ರಿಟಿಷ್ ಕಾನೂನಿನ ಒಳಗೆ ಕಾರ್ಯ ನಿರ್ವಹಿಸುತ್ತಿದ್ದರು, ಆಗಸ್ಟ್ 1942ರಲ್ಲಿನ ಚಳರವಳಿಯಿಂದ ದೂರ ಉಳಿದಿದ್ದರು’ ಎಂದು ಬರೆಯುತ್ತಾರೆ. (Home Department (Political) Proceedings, File 28/8/42-Poll(I) and File 28/3/43-Poll(I).)

ಸ್ವಾತಂತ್ರ್ಯ ಬಂದ ನಂತರವೂ ಆರ್‌ಎಸ್‌ಎಸ್‌ನ ಧೋರಣೆ, ನಿಲುವು ಬದಲಾಗಲಿಲ್ಲ. ಆರಂಭದಿಂದಲೂ ಆರ್‌ಎಸ್‌ಎಸ್ ಸಂಘಟನೆಯು ’ಭಗವಾಧ್ವಜ’ವನ್ನು ತನ್ನ ಅಧಿಕೃತ ಧ್ವಜವನ್ನಾಗಿ ಆರಿಸಿಕೊಂಡಿದೆ. ಸಾವರ್ಕರ್ ’ಓಂ, ಸ್ವಸ್ತಿಕ್, ಖಡ್ಗದ ಚಿತ್ರವಿರುವ ಕೇಸರಿ ಧ್ವಜವೇ ಹಿಂದೂ ರಾಷ್ಟ್ರದ ಧ್ವಜವಾಗಲಿದೆ. ಅದು ವೇದ ಕಾಲಗಳ ಸನಾತನ ಧರ್ಮವನ್ನು ಪ್ರತಿನಿಧಿಸುತ್ತದೆ’ ಎಂದು ಸ್ಪಷ್ಟವಾಗಿ ಹೇಳಿದ್ದರು. ಸ್ವಾತಂತ್ರ್ಯಾನಂತರದಲ್ಲಿ ಕಾಂಗ್ರೆಸ್ ಪಕ್ಷವು ಕೇಸರಿ, ಬಿಳಿ, ಹಸಿರಿನ ಧ್ವಜವನ್ನು ರಾಷ್ಟ್ರ ಧ್ವಜವನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತ್ತು. ಆದರೆ ಆರ್‌ಎಸ್‌ಎಸ್ ಇದನ್ನು ಮಾನ್ಯ ಮಾಡಲಿಲ್ಲ. ತಮ್ಮ ’ಬಂಚ್ ಆಫ್ ಥಾಟ್ಸ್’ ಪುಸ್ತಕದಲ್ಲಿ ಗೋಳ್ವಲ್ಕರ್ ಅವರು ’ನಮ್ಮ ನಾಯಕರು ನಮಗಾಗಿ ಹೊಸ ಧ್ವಜವನ್ನು ಆರಿಸಿದ್ದಾರೆ. ಯಾಕೆ ಹೀಗೆ ಮಾಡಿದರು?… ನಮ್ಮದು ವೈಭವವಾದ ಪರಂಪರೆಯಿರುವ ಪುರಾತನ ದೇಶ, ನಮಗೆ ನಮ್ಮದೇ ಆದ ಒಂದು ಧ್ವಜ ಇಲ್ಲವೇ? ನಮಗೆ ಈ ಸಾವಿರಾರು ವರ್ಷಗಳಲ್ಲಿ ನಮ್ಮದೇ ಆದ ರಾಷ್ಟ್ರ ಚಿಹ್ನೆ ಇರಲಿಲ್ಲವೇ? ಅನುಮಾನವೇ ಬೇಡ, ಇತ್ತು’ ಎಂದು ಬರೆಯುತ್ತಾರೆ. ಸ್ವಾತಂತ್ರ್ಯ ಬಂದ ಒಂದು ದಿನದ ಮುಂಚೆ 14, ಆಗಸ್ಟ್ 1947ರಂದು ತಮ್ಮ ಮುಖವಾಣಿ ಪತ್ರಿಕೆ ಆರ್ಗನೈಸರ್‌ನಲ್ಲಿ ಬಂದ ಲೇಖನವೊಂದರಲ್ಲಿ ಸಾಲುಗಳು ’ಅದೃಷ್ಟದ ದೆಸೆಯಿಂದ ಅಧಿಕಾರಕ್ಕೆ ಬಂದ ಕೆಲ ಜನ ನಮ್ಮ ಕೈಗೆ ಈ ಕೇಸರಿ, ಬಿಳಿ, ಹಸುರಿನ ಧ್ವಜವನ್ನು ಕೊಟ್ಟಿದ್ದಾರೆ. ಆದರೆ ಹಿಂದೂಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಗೌರವಿಸುವುದಿಲ್ಲ. ಮೂರು ಭಿನ್ನ ಬಣ್ಣಗಳುಳ್ಳ ಈಗಿನ ಧ್ವಜವು ನಮ್ಮಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಹುಟ್ಟು ಹಾಕುತ್ತದೆ ಮತ್ತು ಇದು ದೇಶಕ್ಕೆ ಹಾನಿಕಾರಕ’ ಎಂದು ಬರೆಯಲಾಗಿತ್ತು

ಇಂದಿಗೂ ಆರ್‌ಎಸ್‌ಎಸ್ ತನ್ನ ನಾಯಕರ ಮಾತುಗಳನ್ನು ಅಲ್ಲಗಳೆದಿಲ್ಲ. ಇದು ಆರ್‌ಎಸ್‌ಎಸ್ ನ 1925-1947ರವರೆಗಿನ ಸಂಕ್ಷಿಪ್ತ ಇತಿಹಾಸ.

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...