ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಚಂದ್ರಶೇಖರ ಕಂಬಾರ ಅವರ ‘ಸಾಂಬಶಿವ ಪ್ರಹಸನ’ ನಾಟಕವನ್ನು ತಿರುಚಿ, ಸಿದ್ದರಾಮಯ್ಯನವರ ಅವರನ್ನು ಅವಹೇಳನ ಮಾಡುವ ರೀತಿ ಮೈಸೂರು ರಂಗಾಯಣದಲ್ಲಿ ನಾಟಕ ಪ್ರದರ್ಶಿಸಿದ ಬೆನ್ನಲ್ಲೇ ಕಂಬಾರರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
“ಈ ರೀತಿ ನಾಟಕವನ್ನು ತಿರುಚಿದವರು ಮತ್ತು ನಾಟಕ ಪ್ರದರ್ಶಿಸಲು ಅವಕಾಶ ನೀಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು” ಎಂದು ಮೈಸೂರು ಪೊಲೀಸ್ ಕಮಿಷನರ್‌ಗೆ ಅವರು ಪತ್ರ ಬರೆದಿದ್ದಾರೆ.
“ಮೈಸೂರಿನ ರಂಗಾಯಣದಲ್ಲಿ ನನ್ನ ನಾಟಕ, ಸಾಂಬಶಿವ ಪ್ರಹಸನವನ್ನು ಅಸಹ್ಯವಾಗಿ ತಿರುಚಿ ಪ್ರದರ್ಶಿಸಿರುವ ಬಗ್ಗೆ ನನಗೆ ತುಂಬ ವಿಷಾದವಾಗಿದೆ” ಎಂದಿರುವ ಕಂಬಾರರು, “ಮೊದಲನೆಯದಾಗಿ ನನ್ನ ನಾಟಕ ಪ್ರದರ್ಶಿಸುವುದಕ್ಕೆ ನನ್ನ ಅನುಮತಿ ಕೇಳಲೇ ಬೇಕಾಗಿತ್ತು. ಆದರೆ ಇವರು ಕೇಳಿಲ್ಲ. ರಂಗಾಯಣವಾದರೂ ನನ್ನ ಅನುಮತಿ ಇಲ್ಲದ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಟ್ಟಿರುವುದು ವಿಷಾದಕರ” ಎಂದು ಟೀಕಿಸಿದ್ದಾರೆ.
“ಎರಡನೆಯದಾಗಿ, ನನ್ನ ಯಾವುದೇ ನಾಟಕಗಳಲ್ಲಿ ವ್ಯಕ್ತಿಗಳ ನಿಂದನೆ ಇರುವುದು ಸಾಧ್ಯವಿಲ್ಲ. ಅನುಮತಿ ಇಲ್ಲದೇ ನಾಟಕವನ್ನು ಪ್ರದರ್ಶಿಸಿದ್ದಕ್ಕೆ, ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟವರಿಗೂ ಮತ್ತು ಇಲ್ಲದ ಸಾಹಿತ್ಯವನ್ನು ಸೇರಿಸಿದ್ದಕ್ಕೆ ನಿರ್ದೇಶಕರ ಮೇಲೂ ಈ ಅಹಿತಕರ ವಾತಾವರಣಕ್ಕೆ ಕಾರಣರಾದ, ಸಂಬಂಧಪಟ್ಟ ಎಲ್ಲರ ಮೇಲೂ, ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅವರು ಕೋರಿದ್ದಾರೆ.

ಏನಿದು ವಿವಾದ?
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ನಾಟಕವನ್ನು ಕಾರ್ತಿಕ್ ಉಪಮನ್ಯು ನಿರ್ದೇಶನದಲ್ಲಿ ‘ನಾಗರತ್ನಮ್ಮ’ ರಂಗ ಕಾರ್ಯಾಗಾರದ ಶಿಬಿರಾರ್ಥಿಗಳು ಶನಿವಾರ ಪ್ರದರ್ಶಿಸುತ್ತಿದ್ದರು. ಈ ನಾಟಕದಲ್ಲಿ ಕೆಲವು ಅಂಶಗಳನ್ನು ತಿರುಚಿ ಸಿದ್ದರಾಮಯ್ಯನವರನ್ನು ಹೀಯಾಳಿಸಲಾಗಿದೆ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನೂ ಗೇಲಿ ಮಾಡಲಾಗಿದೆ ಎಂದು ಇಲ್ಲಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಂಗಾಯಣದ ರಂಗ ಕಾರ್ಯಾಗಾರದ ಶಿಬಿರಾರ್ಥಿಗಳ ವಿರುದ್ಧ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯ ಅವರು ದೂರು ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ನಾಟಕದೊಳಗೆ ತುರುಕಿರುವ ಅಂಶಗಳನ್ನು ಪ್ರೇಕ್ಷಕರು ಪ್ರಶ್ನಿಸುವ ಘಟನೆಯೂ ನಡೆದಿದೆ.
ದೂರು ನೀಡಿರುವ ಸುಬ್ರಹ್ಮಣ್ಯ ಅವರು, “ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಡಿ.31ರ ಸಂಜೆ 6.30ಕ್ಕೆ ‘ಸಾಂಬಶಿವನ ಪ್ರಹಸನ’ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರರು ರಚಿಸಿರುವ, ಕಾರ್ತಿಕ್ ಉಪಮನ್ಯು ಎಸ್. ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ತಮ್ಮ ಆಡಳಿತಾವಧಿಯಲ್ಲಿ ರಾಜ್ಯದ ಜನತೆಗೆ ನೀಡಿದ ಹಲವು ಭಾಗ್ಯಗಳನ್ನು ವ್ಯಂಗ್ಯ ಮಾಡಿ, ಕಾಲ್ಪನಿಕವಾಗಿ ರಾಜನ ಪಾತ್ರವನ್ನು ಸೃಷ್ಟಿಸಿ ಆತನನ್ನು ಸಿದ್ರಾಮಯ್ಯನವರಿಗೆ ಹೋಲಿಸಿ ಅವಹೇಳನ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.
“‘ಅನ್ನಭಾಗ್ಯ’, ‘ಕ್ಷೀರಭಾಗ್ಯ’, ‘ಶಾದಿ ಭಾಗ್ಯ’ಗಳನ್ನು ಕೊಟ್ಟು ಜನರನ್ನು ಅವರು ಸೋಂಬೇರಿಗಳನ್ನಾಗಿ ಮಾಡಿದರು. ಅದೇ ರೀತಿ ‘ಕಳ್ಳತನ ಭಾಗ್ಯ’ವನ್ನು ನೀಡಬೇಕಾಗಿತ್ತು ಎನ್ನುವ ಸಂಭಾಷಣೆಯನ್ನು ರಂಗದ ಮೇಲೆ ಪ್ರಸ್ತುತಪಡಿಸಲಾಗಿತ್ತು. ಕಾರ್ಯಕ್ರಮಗಳಲ್ಲಿ ನಿದ್ರೆ ಹೊಡೆಯುವುದು, ಗೊರಕೆ ಹೊಡೆದು ಅವರಿಂದ ರಾಜ್ಯವೇ ಹಾಳಾಗಿದೆ. ನಿಮಗೆ ಈ ಭಾರಿ ಬಾದಾಮಿಯೂ ಕೂಡ ಸಿಗುವುದಿಲ್ಲ ಎಂದು ಸೇವಕನ ಪಾತ್ರಧಾರಿಯಿಂದ ನಾಟಕದಲ್ಲಿ ಹೇಳಿಸಲಾಗಿದೆ” ಎಂದು ದೂರಿದ್ದಾರೆ.
“ಇದು ನೇರವಾಗಿ ಸಿದ್ದರಾಮಯ್ಯನವರಿಗೆ ಹೋಲಿಕೆ ಮಾಡಲಾಗಿದೆ. ಹಾಗೂ ಕೇಡಿ ಆಂಕಲ್ ಎಂದು ಮಂತ್ರಿಯ ಪಾತ್ರವನ್ನು ಸೃಷ್ಟಿಸಿ ಅದರಲ್ಲಿ ಕಳ್ಳತನ ಮಾಡಿ ಕೊಳ್ಳೆ ಹೊಡೆಯುತ್ತಿದ್ದಾನೆ ಎಂದು ಹೇಳಿಸಲಾಗಿದೆ. ಇದೂ ಕೂಡ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನೇ ಹೋಲುವಂತೆ ಪಾತ್ರ ಸೃಷ್ಟಿಸಲಾಗಿದೆ ಎಂದು ನಾಟಕ ವೀಕ್ಷಿಸಲು ಹೋಗಿದ್ದ ಪ್ರೇಕ್ಷಕರು ನನ್ನ ಗಮನಕ್ಕೆ ತಂದರು. ಅಷ್ಟೊತ್ತಿಗಾಗಲೇ ಸಾಮಾಜಿಕ ಜಾಲತಾಣ ಮತ್ತು ಸುದ್ದಿಮಾಧ್ಯಮಗಳಲ್ಲಿಯೂ ಈ ವಿಚಾರ ಪ್ರಸಾರವಾಗಿತ್ತು” ಎಂದು ಮಾಹಿತಿ ನೀಡಿದ್ದಾರೆ.
“ಆ ನಂತರ ನಾನು ಸ್ಥಳಕ್ಕೆ ಹೋಗಿ ಸತ್ಯಾಸತ್ಯತೆ ಬಗ್ಗೆ ರಂಗಾಯಣ ಉಪನಿರ್ದೇಶಕರಾದ ನಿರ್ಮಲ ಮಠಪತಿ ಅವರನ್ನು ಪ್ರಶ್ನಿಸಿದೆ. ಅವರು ಅದಕ್ಕೆ, ‘ಈ ವಿಚಾರ ನನ್ನ ಗಮನಕ್ಕೂ ಬಂದಿದೆ. ಈ ನಾಟಕ ನಿರ್ದೇಶಕರು ವಿಷಾದ ವ್ಯಕ್ತಪಡಿಸಿದ್ದಾರೆ’ ಎಂದು ಜವಾಬು ನೀಡಿದರು. ಹಿಂದುಳಿದ ನಾಯಕರೂ ಹಾಗೂ ನಾಡಿನ ಅಭಿವೃದ್ಧಿಯ ಹರಿಕಾರರು ಆದ ಸಿದ್ದರಾಮಯ್ಯ ಅವರನ್ನು ಹೀಯಾಳಿಸಿರುವುದು ನಮ್ಮ ಸಮಾಜಕ್ಕೆ ನೋವು ತಂದಿದೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನು ಕೇಡಿ ಆಂಕಲ್ ಎಂದು ಸಂಬೋಧಿಸಿರುವುದು ಅದು ಕೂಡ ಬೇಸರದ ಸಂಗತಿಯಾಗಿದೆ” ಎಂದು ಹೇಳಿದ್ದಾರೆ.
“ಜಾತಿ ಜಾತಿಗಳ ನಡುವೆ ಮತ್ತು ಧರ್ಮಗಳ ನಡುವೆ ದ್ವೇಷ ಹುಟ್ಟುವಂತೆ ಮಾಡಿ ಸಮಾಜದಲ್ಲಿನ ಅಶಾಂತಿ ಸೃಷ್ಟಿಸಿ ಗಲಾಟೆ ಉಂಟು ಮಾಡುವ ರೀತಿಯಲ್ಲಿ ಪ್ರದರ್ಶನ ಮಾಡಿ ಸಮಾಜದಲ್ಲಿ ಗಲಾಟೆ ಮತ್ತು ಅಶಾಂತಿ ಉಂಟು ಮಾಡುವಂತೆ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ಇಷ್ಟೆಲ್ಲಾ ಪ್ರಮಾದ ಉಂಟು ಮಾಡಿರುವ ಇಡೀ ನಾಟಕ ತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಮ್ಮಲ್ಲಿ ಮನವಿ ಮಾಡುತ್ತೇನೆ” ಎಂದಿದ್ದಾರೆ.
“ನನ್ನ ಗಮನಕ್ಕೆ ಬಂದಂತಹ ವಿಷಯಗಳನ್ನು ತಿಳಿಸಿದ್ದೇನೆ. ಆನಂತರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಚಾರಿತ್ರ್ಯವಧೆಗೆ ಸಂಬಂಧಿಸಿದಂತೆ ಇನ್ನಿತರ ರೀತಿಗಳಲ್ಲಿ ನಡೆದುಕೊಂಡಿರುವ ಬಗ್ಗೆ ಮತ್ತಷ್ಟು ವಿಚಾರಗಳನ್ನು ನಾಟಕದಲ್ಲಿ ನಿರೂಪಿಸಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಾಟಕದ ವೇಳೆಯೇ ಪ್ರತಿಭಟನೆ
ನಾಟಕ ಪ್ರದರ್ಶನವಾಗುತ್ತಿದ್ದ ಸಂದರ್ಭದಲ್ಲಿಯೇ ಪ್ರೇಕ್ಷಕರಿಂದ ಆಕ್ಷೇಪ ವ್ಯಕ್ತವಾಗಿದೆ. ಮೋಹನ್ ಎನ್ನುವವರು ಪ್ರದರ್ಶನದ ವೇಳೆಯೇ ಎದ್ದು ನಿಂತು, “ಭಾಗ್ಯಗಳನ್ನು ನೀಡಿ ಸೋಮಾರಿ ಮಾಡುತ್ತಿದ್ದೀರಿ, ಬರೀ ನಿದ್ದೆ ಮಾಡುತ್ತಿದ್ದೀರಿ ಎಂದೆಲ್ಲ ಹೇಳಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ವ್ಯಂಗ್ಯ ಮಾಡುತ್ತಿದ್ದೀರಿ. ಮೂಲ ನಾಟಕದಲ್ಲಿ ಹೀಗಿದೆಯೇ? ದುರುದ್ದೇಶಪೂರ್ವಕವಾಗಿ ನಾಟಕ ರೂಪಿಸಿದ್ದೀರಿ” ಎಂದು ವೇದಿಕೆಗೇರಿ ಕಿಡಿಕಾರಿದ್ದರು. “ಐವತ್ತು ರೂಪಾಯಿ ಕೊಟ್ಟು ಬಂದಿರುವ ಕಲಾಭಿಮಾನಿ ನಾನು. ನನ್ನ ಪ್ರಶ್ನೆಗೆ ಉತ್ತರಿಸಬೇಕು” ಎಂದು ಒತ್ತಾಯಿಸಿದ್ದರು.


