ವಿಶ್ವರತ್ನ, ಸಂವಿಧಾನ ಪಿತಾಮಹ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ರಾಜ್ಯಸಭೆ ಭಾಷಣದಲ್ಲಿ ಅಪಮಾನಿಸಿರುವ ಅಮಿತ್ ಶಾ ಅವರನ್ನು ಕೂಡಲೇ ಮಂತ್ರಿಗಿರಿಗಿಯಿಂದ ಕೆಳಗಿಳಿಸಬೇಕು ಹಾಗೂ ಅವರನ್ನ ಈ ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಹೇಳನಕಾರಿ ಪದ ಬಳಸಿರುವ ಸಿಟಿ ರವಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಿತು.
ಅಂಬೇಡ್ಕರ್ ಅವರನ್ನು ಅಪಮಾನಿಸಿರುವ ಅಮಿತ್ ಶಾ ವಿರುದ್ಧ ಆಕ್ರೋಶ ಹೊರಹಾಕಿದ ದಸಂಸ ಕಾರ್ಯಕರ್ತರು, ‘ಅಮಿತ್ ಶಾ ಕೇಡಿ – ಹಾಕ್ರಿ ಅವನಿಗೆ ಬೇಡಿ’ ಎಂಬಿತ್ಯಾದಿ ಘೋಷಣೆ ಕೂಗಿದರು. ಚಪ್ಪಲಿ ಬಿಡುವ ಜಾಗದಲ್ಲಿ ಅಮಿತ್ ಶಾ ಮತ್ತು ಸಿಟಿ ರವಿ ಫೋಟೋಗಳನ್ನು ಇಟ್ಟು ಪ್ರತಿರೋಧ ತೋರಿದರು. ಅಮಿತ್ ಶಾ ಅವರ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವ ಸ್ಥಾನದಿಂದ ಅಮಿತಾ ಶಾ ಅವರನ್ನ ಕೂಡಲೇ ವಜಾಗೊಳಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಬೆಂಗಳೂರು ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, “ಬುದ್ಧ, ಬಸವ, ಅಂಬೇಡ್ಕರ್ ಕಟ್ಟಿಕೊಟ್ಟ ಸಮಾನತೆಯ ಹೋರಾಟವನ್ನು ಮುಂದುವರೆಸಬೇಕಾದರೆ ನಾವು ಹೆಚ್ಚಿನ ಬೌದ್ಧಿಕ ಶಕ್ತಿ ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ವೈಚಾರಿಕ ಕ್ರಾಂತಿ ಬರದೇ ಇದ್ದರೆ ಹೋರಾಟ ಅಸಾಧ್ಯ. ನಾವು ಅಂಬೇಡ್ಕರ್ ಪೂಜೆ ಮಾಡಿದರೆ ಪ್ರಯೋಜನವಿಲ್ಲ. ಇತ್ತೀಚಿನ ದಿನಗಳಲ್ಲಿ ಹಬ್ಬ-ಜಾತ್ರೆಗಳಲ್ಲಿ ಅಂಬೇಡ್ಕರ್ ಮುಂದೆ ಡಿಜೆ ಹಾಕಿ ಕುಣಿಯುತ್ತಾರೆ; ಈ ಕುಡಿತ ಮತ್ತು ಕಣಿತ ನಮ್ಮಲ್ಲಿ ಸಾಮಾನ್ಯವಾದರೆ, ಸಮಾನತೆ ಹೋರಾಟ ಸಾಧ್ಯವಿಲ್ಲ” ಎಂದು ಎಚ್ಚರಿಕೆ ನೀಡಿದರು.
“ಬಿಜೆಪಿ-ಆರ್‌ಎಸ್‌ಎಸ್ ಸಾಮಾನತೆಯ ವಿರೋಧಿಗಳು. ಅವರಿಗೆ ಸಮಾನತೆ ಕಂಡರೆ ಆಗುವುದಿಲ್ಲ. ಆದ್ದರಿಂದ, ಅಂಬೇಡ್ಕರ್ ಅವರ ಹೋರಾಟವನ್ನು ನಾವು ಅರ್ಥ ಮಾಡಿಕೊಳ್ಳಬೇಕು” ಎಂದರು.
ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಅಮಿತ್ ಶಾನಂತಹ ಅಯೋಗ್ಯರು ಹೀಗೆ ಮಾತನಾಡುವ ಮೂಲಕ ಆಗಾಗ ತಮ್ಮ ವಿಕೃತಿ ಪ್ರದರ್ಶಿಸುತ್ತಾರೆ. ಹೊಸ ಪಾರ್ಲಿಮೆಂಟ್ ಉದ್ಘಾಟನೆಗೆ ಪ್ರಧಾನಿ ಸೆಂಗೋಲ್ ಹಿಡಿದು ಬಂದರು. ಕಂಚಿ ಸ್ವಾಮಿ ಅದನ್ನು ರಾಜದಂಡ ಎಂದು ಹೇಳಿದ್ದಾರೆ. ಆದರೆ, ಅದು ಪುರೋಹಿತರ ಶ್ರೇಷ್ಠ ದಂಡ. ಅದನ್ನು ತಂದು ಪಾರ್ಲಿಮೆಂಟ್‌ನಲ್ಲಿ ಇಟ್ಟಿದ್ದಾರೆ. ಸಂವಿಧಾನದ ಜಾಗದಲ್ಲಿ ಸೆಂಗೋಲ್ ಇದೆ, ಇದರ ಅರ್ಥ ಏನು? ನಮ್ಮ ಹಿರಿಯರ ಪ್ರತಿಭಟನೆ, ತ್ಯಾಗ ಏನಾಯಿತು” ಎಂದು ಆಕ್ರೋಶ ಹೊರಹಾಕಿದರು.

“ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೊಳಕು ಮನಸ್ಥಿತಿಯವರು. ವಿಪಕ್ಷಗಳ ಸದಸ್ಯರು ಮಾತನಾಡುವಾಗ ಮುಖ ಕಿವುಚಿದಂತೆ ಇರುತ್ತೆ; ಬಿಜೆಪಿಯವರು ಮಾತನಾಡುವಾಗ ನಗುತ್ತಾನೆ. ಬಿಜೆಪಿಯವರು ಬರೀ ದ್ವೇಷ ಮಾತನಾಡುತ್ತಾರೆ, ಸುಳ್ಳು ಹೆಳುತ್ತಲೇ ಅದನ್ನು ಜನರ ಮನಸ್ಸಿನಲ್ಲೂ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ” ಎಂದರು.
“ನಾವು ಎಲ್ಲಿ ಇರುತ್ತೇವೆಯೋ ಅಲ್ಲೆಲ್ಲಾ ಅಂಬೇಡ್ಕರ್, ಬುದ್ದ, ಪೆರಿಯಾರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ, ಮುಂದೆ ಸಂಘರ್ಷ ಇನ್ನೂ ತೀವ್ರವಾಗುತ್ತದೆ. ಅವರು (ಬಿಜೆಪಿ-ಸಂಘಪರಿವಾರ) ಆಗಾಗ ನಮಗೆ ಟೆಸ್ಟ್ ಡೋಸ್‌ಗಳನ್ನು ಕೊಟ್ಟು ಪರೀಕ್ಷಿಸುತ್ತಿದ್ದಾರೆ. ಅದನ್ನು ಎದುರಿಸಲು ನಾವು ಸಿದ್ಧರಾಗಬೇಕು” ಎಂದರು.
“ಸುಳ್ಳು ಹೇಳುವ ಸಂಘಪರಿವಾರ ಮತ್ತು ಬಿಜೆಪಿ ಬಗ್ಗೆ ನಾವು ಹೆಚ್ಚೆಚ್ಚು ಎಚ್ಚರವಾಗಿರಬೇಕು. ನಮ್ಮಲ್ಲೂ ಕೆಲವರು ಬಿಜೆಪಿ ಜೊತೆ ಸೇರಿಕೊಂಡು ಅಧಿಕಾರಕ್ಕಾಗಿ ಗುಲಾಮಗಿರಿ ಮಾಡುತ್ತಿದ್ದಾರೆ. ‘ಚಪ್ಪಲಿ ಹೊಲೆಯುತ್ತಿದ್ದವರು ಪಾರ್ಲಿಮೆಂಟಿಗೆ ಬಂದು ನಮ್ಮ ಪಕ್ಕದಲ್ಲಿ ಕೂರತುತ್ತಿದ್ದಾರೆ’ ಎಂದು ನಾಯಕಿಯೊಬ್ಬರು ಹೇಳಿದ್ದಾರೆ. ಆದರೂ, ನಮ್ಮವರು ಅವರ ಪಕ್ಕದಲ್ಲೇ ಹೋಗಿ ಕೂರುತ್ತಿದ್ದಾರೆ” ಎಂದು ಅಸಮಾಧಾನ ಹೊರಹಾಕಿದರು.
“ಈಗ ಅವರು ಬರೀ ಮಸೀದಿಗಳನ್ನು ಹುಡುಕಿ ಹೊಡೆಯುತ್ತಿದ್ದಾರೆ. ನಮ್ಮ ಪ್ರಧಾನಿ ನೀರಿನ ಒಳಗೆ ಹೋಗಿ ನವಿಲುಗರಿ ಹಿಡಿದು ಕುಳಿತಿದ್ದರು. ಇಂತವರು ನಮ್ಮ ಜನನಾಯಕರು; ತಲೆಯಲ್ಲಿ ಮೆದುಳು ಇಲ್ಲವರು ನಮ್ಮ ಜನನಾಯಕರಾಗಿದ್ದಾರೆ” ಎಂದು ಲೇವಡಿ ಮಾಡಿದರು.
ದಸಂಸ ಮುಖಂಡರಾದ ಚಂದ್ರಿಕಾ ಮಾತನಾಡಿ, “ಹಿಂದುಳಿದ ವರ್ಗದವರಿಗೆ ಯಾವ ನ್ಯಾಯ ಕೊಡುತ್ತಿದ್ದಾರೆ ಸಂವಿಧಾನ ಜಾರಿಗೆ ತಂದವರಿಗೆ ಈಗ ಬೆಲೆ ಕೊಡುತ್ತಿಲ್ಲಾ.. ಇನ್ನು ನಮ್ಮ ಹೆಣ್ಣು ಮಕ್ಕಳಿಗೂ ಬೆಲೆ ಇಲ್ಲ. ಕೆಂದ್ರದ ಗೃಹ ಮಂತ್ರಿಯಾಗಿ ಈ ರೀತಿ ಮಾತನಾಡುವುದು ಎಷ್ಟು ಸರಿ. ನಾವು ಅವರಿಗೆ ಮತ ಹಾಕಿರುವುದು ನಮ್ಮನ್ನ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಮಾನಗೆಟ್ಟ ಅಮಿತ್ ಶಾಗೆ ಮಾನಮರ್ಯಾದೆ ಇದ್ದರೆ ಈ ಕೂಡಲೇ ರಾಜಿನಾಮೆ ನೀಡಬೇಕು” ಎಂದು ಹೇಳಿದರು.
ದಸಂಸ ಮಹಿಳಾ ಘಟಕದ ರಾಜ್ಯ ಪ್ರಧಾನ ಸಂಚಾಲಕಿ ನಿರ್ಮಲಾ ಮಾತನಾಡಿ, “ನಮ್ಮ ಸಂವಿಧಾನ ಕತೃ ಅಂಬೇಡ್ಕರ್ ಅವರಿಗೆ ಅಪಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಈ ಕೂಡಲೇ ಮಂತ್ರಿಗಿಯಿಂದ ವಜಾಗೊಳಿಸಬೇಕು. ದೇಶದ ಉನ್ನತ ಸ್ಥಾನದಲ್ಲಿರುವ ಅಮಿತ್ ಶಾ ಅಂಬೇಡ್ಕರ್ ಅವರ ಸಂಸತ್ ಕಲಾಪದ ಸಮಯದಲ್ಲಿ ಈ ರೀತಿ ಮಾತಾಡಿರುವುದು ನಿಜಕ್ಕೂ ಖಂಡನೀಯ. ಅಮಿತ್ ಶಾಗೆ ತಲೆಲಿ ಕೂದಲು ಇಲ್ಲ ಅಂತ ಗೊತ್ತಿತ್ತು. ಆದರೆ, ಆತನ ತಲೆಯಲ್ಲಿ ಮೆದುಳು ಕೂಡ ಇಲ್ಲ. ಬುದ್ದಿ ಇಲ್ಲದ ಅಮಿತ್ ಶಾ” ಎಂದರು.
“ಅಂಬೇಡ್ಕರ್ ಅನ್ನೋದು ಒಂದು ಪ್ಯಾಶನ್ ಅಂತ ಮುಟ್ಟಾಳ ಅಮಿತ್ ಶಾ ಹೇಳುತ್ತಾನೆ. ಆತನಿಗೆ ಏನು ಗೋತ್ತು. ಅಮಿತ್ ಶಾಗೆ ನಿಜಕ್ಕೂ ಮಾನ ಮರ್ಯಾದೆ ಇದ್ದರೆ, ದಲಿತರ ಮಲ ಮೂತ್ರದಿಂದ ತನ್ನ ನಾಲಿಗೆಯನ್ನ ಶುದ್ದ ಮಾಡಿಕೊಳ್ಳಲಿ. ಗೋ ಮೂತ್ರದಿಂದ ಅವರ ನಾಲಿಗೆ ಶುಚಿ ಹೋಗುವುದಿಲ್ಲ. ಕಲಾಪದಲ್ಲಿ ಒಂದು ಹೆಣ್ಣಿನ ಬಗ್ಗೆ (ಸಿಟಿ ರವಿ ಪ್ರಕರಣ) ನೀಚವಾಗಿ ಮಾತಾಡುತ್ತಾರೆ. ಇಡೀ ಪ್ರಪಂಚ ಈ ವಿಚಾರವಾಗಿ ರೊಚ್ಚಿಗೇಳಬೇಕು. ಇನ್ನೊಂದು ಬಾರಿ ಸಂವಿಧಾನದ ಬಗ್ಗೆ, ಅಂಬೇಡ್ಕರ್ ಅವರ ಬಗ್ಗೆ ಮಾತಾಡಿದ್ರೆ ಅವರಿಗೆ ಚಪ್ಪಲಿ ಹಾರ ಹಾಕುತ್ತೇವೆ. ಅಮಿತ್ ಶಾ ಅವರನ್ನ ಮಂತ್ರಿಗಿರಿಯಿಂದ ವಜಾ ಮಾಡೋದು ಅಷ್ಟೇ ಅಲ್ಲ; ಅವರನ್ನ ಗಲ್ಲಿಗೇರಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ; ‘ದ್ರಾವಿಡ ಚಳವಳಿ ಪಿತಾಮಹ ಪೆರಿಯಾರ್ ಮತ್ತು ವೈಕಂ ಸತ್ಯಾಗ್ರಹ..’; ಅಸ್ಪೃಶ್ಯತೆ ವಿರುದ್ಧದ ಅವಿಸ್ಮರಣೀಯ ಹೋರಾಟಕ್ಕೆ ನೂರು ವರ್ಷ


