ಕನಕ ಜಯಂತಿ ಪ್ರಯುಕ್ತ ಸೋಮವಾರ (ನ.18) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಗ್ರ ‘ತತ್ವಪದ ಯೋಜನೆಯ 18 ಸಂಪುಟಗಳ ಬಿಡುಗಡೆ’ ಸಮಾರಂಭದಲ್ಲಿ ದಲಿತ ಸಾಹಿತಿ ಗಂಗಪ್ಪ ತಳವಾರ ಅವರನ್ನು ಅವಮಾನಿಸಿರುವ ಆರೋಪ ಕೇಳಿ ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ದಲಿತ ಸಾಹಿತಿ ಗಂಗಪ್ಪ ತಳವಾರ ಅವರು ಭಾವಾನುವಾದ ಮಾಡಿರುವ ಗುಟ್ಟಹಳ್ಳಿ ಆಂಜನಪ್ಪ ಅವರ “ಸುಜ್ಞಾನ ಭೋಧ ತತ್ವಗಳು ಸಂಪುಟ”ವನ್ನು ಬಿಡುಗಡೆಗೊಳಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಸಾಹಿತಿಗಳು ಸೇರಿದಂತೆ ಹಲವಾರು ಗಣ್ಯರನ್ನು ಆಮಂತ್ರಿಸಿ, ಗೌರವ ಸೂಚಿಸಲಾಗಿದೆ. ಆದರೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಂಗಪ್ಪ ತಳವಾರ ಅವರನ್ನು ಸೌಜನ್ಯಕ್ಕೂ ಹೆಸರು ಕರೆಯದೆ ಅವಮಾನಿಸಲಾಗಿದೆ ಎಂಬ ಆರೋಪ ‘ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ’ದ ಮುಖ್ಯಸ್ಥರಾದ ಕಾ.ತಾ. ಚಿಕ್ಕಣ್ಣ ಅವರ ಮೇಲೆ ಕೇಳಿಬಂದಿದೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಗಂಗಪ್ಪ ಅವರು, “ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಕರೆ ಮಾಡಿ ಆಹ್ವಾನಿಸಿದ್ದ ಕಾರಣಕ್ಕೆ ನಾನು ಕಾರ್ಯಕ್ರಮಕ್ಕೆ ಹೋಗಿದ್ದೆ. ಇದಕ್ಕಾಗಿ ಸುಮಾರು 4 ಸಾವಿರ ರೂಪಾಯಿ ಖರ್ಚು ಮಾಡಿದ್ದೆ. ‘ಸುಜ್ಞಾನ ಭೋಧ ತತ್ವಗಳು’ ಸಂಪುಟಕ್ಕಾಗಿ ಕೆಲಸ ಮಾಡಿದ್ದ 18 ಮಂದಿ ಸಾಹಿತಿಗಳಲ್ಲಿ 6-7 ಜನರು ಬಂದಿದ್ದರು. ಅವರೆಲ್ಲರ ಹೆಸರು ಕರೆದು ಗೌರವಿಸಲಾಗಿದೆ. ಆದರೆ, ನನ್ನನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ಬಹಳಷ್ಟು ನೋವಾಗಿದೆ. ನಾನು ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿ ಎದುರು ಧಿಕ್ಕಾರ ಕೂಗಬೇಕೆಂದಿದ್ದೆ. ನಮ್ಮದೇ ಕಾರ್ಯಕ್ರಮ ಬೇಡ ಎಂದು ಸುಮ್ಮನಾದೆ. ಕೊನೆಗೆ ನಾನೇ ಬರೆದ ಪುಸ್ತಕ ಕೇಳಿದರೆ, 106 ರೂಪಾಯಿ ಹಣ ಪಡೆದು ಕೊಟ್ಟಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಕನಕದಾಸ ಅಧ್ಯಯನ ಕೇಂದ್ರದ ಅಧಿಕಾರಿಗಳು ಪತ್ರಿಕಾ ಹೇಳಿಕೆ ಮೂಲಕ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ, ಧರಣಿ ಕೂರುತ್ತೇನೆ” ಎಂದು ಗಂಗಪ್ಪ ಅವರು ಎಚ್ಚರಿಸಿದ್ದಾರೆ.
ಈ ಕುರಿತು ನಾನುಗೌರಿ.ಕಾಂಗೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಾ.ತಾ. ಚಿಕ್ಕಣ್ಣ, “ನಮ್ಮ ನಿರೂಪಕರು ಎಲ್ಲಾ ಸಾಹಿತಿಗಳ ಹೆಸರು ಕರೆದಿದ್ದಾರೆ. ಆದರೆ, ಕೆಲವರು ಗಂಗಪ್ಪ ಅವರ ಹೆಸರು ಕರೆದಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಹೆಸರು ಕರೆಯಲಾಗಿದೆ ಅವರು ಗಮನಿಸಿಲ್ಲ ಎನ್ನುತ್ತಿದ್ದಾರೆ. ಒಂದು ವೇಳೆ ಹೆಸರು ಕರೆದಿರದಿದ್ದರೆ ಅದು ನಮ್ಮ ತಪ್ಪು, ಒಪ್ಪಿಕೊಳ್ಳುತ್ತೇನೆ. ಈ ಬಗ್ಗೆ ನಾನು ಗಂಗಪ್ಪ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಅವರು ಬೇಸರಗೊಂಡಿದ್ದಾರೆ. ನಾವು ಈ ಬಗ್ಗೆ ಪರಿಶೀಲನೆ ಮಾಡಿ ಎಲ್ಲಿ ತಪ್ಪಾಗಿದೆ ಎಂದು ನೋಡುತ್ತೇವೆ” ಎಂದರು.
ಇದನ್ನೂ ಓದಿ : ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದ ಸರ್ಕಾರಿ ಸಿಬ್ಬಂದಿ ವಿರುದ್ಧ ಕ್ರಮ: ಜಿ.ಪರಮೇಶ್ವರ


